×
Ad

ಭಾರತದಲ್ಲಿ 40 ಕೆಲಸ ತೊರೆಯುವ ವಯಸ್ಸಾಗುತ್ತಿದೆಯೆ?

40ರ ವಯಸ್ಸಿನ ನಂತರ ನಿಧಾನವಾಗುವ ವೃತ್ತಿಜೀವನ

Update: 2026-01-22 18:11 IST

ಸಾಂದರ್ಭಿಕ ಚಿತ್ರ | Photo Credit : freepik

40ರ ವಯಸ್ಸಿನಲ್ಲಿ ಕ್ಷೇತ್ರದಲ್ಲಿ ಪರಿಣತಿ, ಪ್ರಭಾವದ ಜೊತೆಗೆ ವೃತ್ತಿಜೀವನದ ಶಿಖರದಲ್ಲಿ ನಿಲ್ಲಬೇಕು ಮತ್ತು ನಾಯಕತ್ವವಹಿಸುವ ವಿಶ್ವಾಸ ಹೊಂದಿರಬೇಕು. ಪ್ರಾವೀಣ್ಯತೆಯನ್ನು ಗುರುತಿಸಿ ಉದ್ಯೋಗ ನೀಡಬೇಕಾದ ವಯಸ್ಸಾಗಿರುತ್ತದೆ. ಆದರೆ ಬಹುತೇಕ ಭಾರತೀಯರಿಗೆ 40 ವರ್ಷಗಳು ಶಿಖರವಾಗಿಲ್ಲ, ದೋಷದ ರೇಖೆಯಾಗುತ್ತಿದೆ. ಅನುಭವ ಬಾಗಿಲು ತೆಗೆಯುತ್ತಿಲ್ಲ!

40ರ ವಯಸ್ಸೆಂದರೆ ಅನುಭವ ಮತ್ತು ಸಾಮರ್ಥ್ಯ ತುತ್ತತುದಿಯಲ್ಲಿರುವ ವಯಸ್ಸು. ಹೀಗಾಗಿ ಅನುಭವ ದೊಡ್ಡ ಶಕ್ತಿಯಾಗಬೇಕು. ಹಾಗಿದ್ದರೂ ಕಾರ್ಪೋರೇಟ್ ಜಗತ್ತಿನಲ್ಲಿ 40ರ ವಯಸ್ಸು ದೊಡ್ಡ ಬಾಧ್ಯತೆಯಾಗಿ ಪರಿಣಮಿಸಿದೆ. ಯುವಜನತೆ ಮತ್ತು ಕಡಿಮೆ ವೆಚ್ಚದ ಸ್ಪರ್ಧೆಯಲ್ಲಿ ಕಂಪನಿಗಳು ಮಧ್ಯವಯಸ್ಕ ವೃತ್ತಿಪರರನ್ನು ಪಕ್ಕಕ್ಕೆ ತಳ್ಳುತ್ತಿವೆ. 40ರ ವಯಸ್ಸು ಹೊಣೆಗಾರಿಕೆಯ ವಯಸ್ಸಿನ ಬದಲಾಗಿ ಹೊರೆಯಾಗಿ ಹೋಗಿರುವುದು ಹೇಗೆ?

ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ಹೇಳುವ ಪ್ರಕಾರ, 40ರ ವಯಸ್ಸಿನಲ್ಲಿ ಕೆಲಸದಿಂದ ತಗೆದು ಹಾಕುತ್ತಾರೆ ಎನ್ನುವುದು ಸಂಪೂರ್ಣ ಸರಿಯಲ್ಲ. “ನಾನೀಗ ಕೆಲಸ ಮಾಡುತ್ತಿಲ್ಲವೆ?” ಎಂದು ಅವರು ಪ್ರಶ್ನಿಸಿದರು. “ಆದರೆ, ಆಧುನಿಕ ಕಾಲದಲ್ಲಿ 40 ಹೊಸ ನಿವೃತ್ತಿ ವಯಸ್ಸು ಆಗಿರುವುದಂತೂ ನಿಜ. ಹಾಗಿದ್ದರೂ ಅದು ವಿಭಿನ್ನ ಉದ್ಯಮಗಳ ಅಗತ್ಯಗಳನ್ನು ಅನುಸರಿಸಿದೆ” ಎಂದು ಅವರು ಅಭಿಪ್ರಾಯಪಟ್ಟರು.

40ರ ವಯಸ್ಸಿನ ನಂತರ ನಿಧಾನವಾಗುವ ವೃತ್ತಿಜೀವನ

40ರ ವಯಸ್ಸಿನಲ್ಲಿ ಕ್ಷೇತ್ರದಲ್ಲಿ ಪರಿಣತಿ, ಪ್ರಭಾವದ ಜೊತೆಗೆ ವೃತ್ತಿಜೀವನದ ಶಿಖರದಲ್ಲಿ ನಿಲ್ಲಬೇಕು ಮತ್ತು ನಾಯಕತ್ವವಹಿಸುವ ವಿಶ್ವಾಸ ಹೊಂದಿರಬೇಕು. ಪ್ರಾವೀಣ್ಯತೆಯನ್ನು ಗುರುತಿಸಿ ಉದ್ಯೋಗ ನೀಡಬೇಕಾದ ವಯಸ್ಸಾಗಿರುತ್ತದೆ. ಆದರೆ ಬಹುತೇಕ ಭಾರತೀಯರಿಗೆ 40 ವರ್ಷಗಳು ಶಿಖರವಾಗಿಲ್ಲ, ದೋಷದ ರೇಖೆಯಾಗುತ್ತಿದೆ. ಅನುಭವ ಬಾಗಿಲು ತೆಗೆಯುತ್ತಿಲ್ಲ!

ಬೆಂಗಳೂರಿನಲ್ಲಿ HR ಆಗಿ ಕೆಲಸ ಮಾಡುತ್ತಿರುವ ಸುನೀತಾ ಇದು ನಿಜ ಎಂದು ಹೇಳುತ್ತಿದ್ದಾರೆ. ಅವರ ಪ್ರಕಾರ, “ನೇಮಕಾತಿ ಮಾಡುವವರು 40ರ ವಯಸ್ಸಿನ ನಂತರ ಕರೆ ಮಾಡುವುದನ್ನು ನಿಲ್ಲಿಸುತ್ತಾರೆ. ಬಡ್ತಿಗಳು ನಿಧಾನವಾಗಿರುತ್ತವೆ. ಕಿರಿಯ ಸಹೋದ್ಯೋಗಿಗಳಿಗೆ “ಹೆಚ್ಚಿನ ಸಾಮರ್ಥ್ಯ” ಹೊಂದಿದವರು ಎಂದು ಗಮನಿಸಲಾಗುತ್ತದೆ. ಅನುಭವದ ಬದಲಾಗಿ ‘ದುಬಾರಿ’, ‘ಕಟ್ಟುನಿಟ್ಟಿನ’ ಅಥವಾ ‘ಸಾಂಸ್ಕೃತಿಕವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ’ ಮೊದಲಾದ ಕಾರಣಗಳನ್ನು ನೀಡಿ ಬದಿಗೆ ತಳ್ಳಲಾಗುತ್ತಿದೆ. ವೇಗ, ನವೀನತೆ ಮತ್ತು ಯುವಜನತೆಗೆ ಹೆಚ್ಚು ಮಣೆ ಹಾಕುತ್ತಿರುವ ವಾಣಿಜ್ಯ ಸಂಸ್ಥೆಗಳು 40ರ ಅನುಭವವನ್ನು ಬದಿಗೆ ಸರಿಸುತ್ತಿದೆ.”

ವಯಸ್ಸಿಗಿಂತ ದೃಷ್ಟಿಕೋನ ಮುಖ್ಯ

‘ಒನ್ ಇಂಡಿಯಾ’ ಕನ್ನಡ ಜಾಲತಾಣದ ಸಂಪಾದಕರಾಗಿರುವ ಡಿ.ಎಂ. ಘನಶ್ಯಾಮ ಪ್ರಕಾರ, “ವಯಸ್ಸು ಎನ್ನುವುದು ಒಂದು ಸಂಖ್ಯೆ ಅಷ್ಟೆ. ನಾವು ಗಮನಿಸಬೇಕಾಗಿರುವುದು ದೃಷ್ಟಿಕೋನ. ಬದುಕನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದು ಮುಖ್ಯವಾಗಿ ಗಮನಿಸಬೇಕು. ಕೆಲವರದ್ದು ಅಕಾಲ ವೃದ್ಧಾಪ್ಯ ಎಂದು ಕರೆಯುತ್ತೇವೆ. ವಯಸ್ಸು ಬಹಳ ಚಿಕ್ಕದಿರುತ್ತದೆ. ಆದರೆ ಯಾವುದರಲ್ಲೂ ಉತ್ಸಾಹ ಇರುವುದಿಲ್ಲ. ತುಂಬಾ ಕಂಫರ್ಟ್ ವಲಯ ಇಷ್ಟಪಡುತ್ತಾರೆ. ಮಾಧ್ಯಮದ ವಿಚಾರದಲ್ಲಿ ಹೇಳುವುದಾದಲ್ಲಿ, ಹೊರಗಡೆ ಹೋಗಿ ವರದಿ ಮಾಡಲು ಸಿದ್ಧರಿರುವುದಿಲ್ಲ. ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು. ಇನ್ನು ಕೆಲವರು ಕಚೇರಿಗೆ ಬರಲೂ ಸಿದ್ಧರಿರಲ್ಲ. ಮನೆಯಿಂದಲೇ ಕೆಲಸ ಮಾಡಲು ಬಯಸುತ್ತಾರೆ. 40 ದೊಡ್ಡ ವಯಸ್ಸಲ್ಲ. ಕೆಲವೊಮ್ಮೆ 50 ವರ್ಷದ ಸಮೀಪವಿದ್ದವರೂ ಫೀಲ್ಡ್ ವರ್ಕ್ ಇಷ್ಟಪಡುತ್ತಾರೆ. ಪ್ರತಿದಿನ ಕಚೇರಿಗೆ ಬರಲು ತಯಾರಿರುತ್ತಾರೆ. ವಯಸ್ಸಿಗಿಂತ ದೃಷ್ಟಿಕೋನ ಬಹಳ ಮುಖ್ಯ. ಇದು ಒಂದು ಮುಖ.”

“ಇನ್ನೊಂದು ಮುಖ ಏನೆಂದರೆ ಹೊಸ ತಲೆಮಾರಿಗೆ ಹೊಂದಿಕೊಳ್ಳುವುದು. ಹೊಸ ತಲೆಮಾರಿನ ಜೊತೆಗೆ ಹೇಗೆ ಹೊಂದಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮನೆಯಲ್ಲಿಯೇ ಮಕ್ಕಳು ಹೆತ್ತವರ ಮಾತು ಕೇಳದೆ ಇರುವುದು ಇದೆ. ನಾಯಕತ್ವ ಬೇರೆ, ಬಾಸಿಸಂ ಬೇರೆ. 40 ವರ್ಷ ಆಗಿದೆ ಎನ್ನುವ ಕಾರಣಕ್ಕೇ ಅಥವಾ ವಯಸ್ಸಾಗಿದೆ ಎನ್ನುವ ಕಾರಣಕ್ಕೇ ಗೌರವ ಸಿಗಬೇಕು ಎಂದು ಅಪೇಕ್ಷೆ ಪಡೋದು ಇದೆಯಲ್ಲ. ಆ ಕಾಲ ಮುಗಿದು ಹೋಗಿದೆ. ಈಗ ಗೌರವವನ್ನು ಸಂಪಾದಿಸಬೇಕು. ನಾವು ತಪ್ಪು ಕಂಡುಹಿಡಿಯೋದಕ್ಕೇ ಇರುವವರು ಎನ್ನುವ ರೀತಿಯಲ್ಲಿ ವರ್ತಿಸಿದರೆ ಸಂಸ್ಥೆಗೂ ಹೊರೆಯಾಗುತ್ತೇವೆ ಮತ್ತು ಸಮಾಜಕ್ಕೂ ಹೊರೆಯಾಗುತ್ತೇವೆ. ನಾವು ಸರಿಪಡಿಸಲು ಇದ್ದೇವೆ ಎನ್ನುವ ದೃಷ್ಟಿಕೋನ ಬಿಟ್ಟು ಸರಿ-ತಪ್ಪು ಅರ್ಥವಾಗುವ ರೀತಿ ಹೇಳಬೇಕು. ಒಂದೇ ಅಳತೆ ಬಟ್ಟೆ ಎಲ್ಲರಿಗೂ ಆಗುವುದಿಲ್ಲ. ಅದು ಅರ್ಥ ಆದರೆ ಹಿರಿತನಕ್ಕೆ ಒಂದು ಬೆಲೆ ಇರುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಲಿಕೆಗೆ ಮುಕ್ತವಾಗಿದ್ದರೆ ಸಮಸ್ಯೆಯಾಗದು

ಲಿಂಕ್ಡ್ಇನ್ ಪ್ರಕಾರ ಶೇ 60ಕ್ಕೂ ಹೆಚ್ಚು ವೃತ್ತಿಪರರರು ಅರ್ಥಪೂರ್ಣ ಕೆಲಸ ಮತ್ತು ಹೊಂದಾಣಿಕೆಯ ಪ್ರಯತ್ನದಲ್ಲಿ ಉದ್ಯಮಗಳು ಅಥವಾ ತಮ್ಮ ಉದ್ಯೋಗವನ್ನು ಬದಲಿಸಿದ್ದಾರೆ. ಹೀಗಾಗಿ, ವೃತ್ತಿಪರವಾಗಿ ಮರುಹುಟ್ಟುಪಡೆದುಕೊಳ್ಳುವುದು ಇದೀಗ ಕೆಲವರಿಗೆ ಸೀಮಿತವಾಗಿಲ್ಲ. ಎಲ್ಲರಿಗೂ ಅನ್ವಯಿಸುತ್ತಿದೆ.

ಕೆಲವೊಮ್ಮೆ ಬೆಳವಣಿಗೆ ತಟಸ್ಥವಾಗಿರುವ ಕಾರಣದಿಂದ ವೃತ್ತಿಯನ್ನು ಬದಲಿಸುತ್ತಾರೆ. ಇನ್ನು ಕೆಲವೊಮ್ಮೆ ಕಂಪನಿಯ ಮಾಲಕತ್ವ ಬದಲಾದಾಗ ಅಥವಾ ಸಂಪೂರ್ಣ ತಂಡವೇ ಬದಲಾದಾಗ ಉದ್ಯೋಗಿಗಳನ್ನು ಬದಲಿಸಲಾಗುತ್ತದೆ. ಐಟಿ ಮೊದಲಾದ ಕಂಪನಿಗಳಲ್ಲಿ ಕೆಲವರು ಉತ್ತಮ ಸ್ಥಾನದಲ್ಲಿರುತ್ತಾರೆ. ಲೀಡ್, ಮ್ಯಾನೇಜರ್ ಅಥವಾ ಉಪಾಧ್ಯಕ್ಷರಂತಹ ಹುದ್ದೆಗಳಲ್ಲಿ ಇರುತ್ತಾರೆ. ಕೆಲವೊಮ್ಮೆ ಕಂಪನಿ ಮೇಲೆ ಅಥವಾ ಉದ್ಯೋಗಿಗಳ ಆಸಕ್ತಿ ಮೇಲೆ ನಿರ್ಧರಿಸಿರುತ್ತದೆ.ಕೆಲವರು ಷೇರು ವ್ಯವಹಾರದಲ್ಲಿ ಹೆಚ್ಚು ಆಸಕ್ತಿವಹಿಸಿದರೆ, ಇನ್ನು ಕೆಲವರು ವ್ಯವಸಾಯ ಅಥವಾ ಉದ್ಯಮದ ಹಾದಿ ಹಿಡಿಯುತ್ತಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ವೀರೇಶ್ ಹೊಗೆಸೊಪ್ಪಿನವರ್ ಹೇಳುವ ಪ್ರಕಾರ, “ಒಂದು ವರ್ಗದ ಜನರಿಗೆ ಯಾವುದೇ ಹೆಚ್ಚುವರಿ ಆದಾಯ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಮುಂದುವರಿದಾಗ ಕೆಲವೊಮ್ಮೆ ಗುರಿಗಳು ಮತ್ತು ಜವಾಬ್ದಾರಿಗಳು ಹೆಚ್ಚಾಗಿರುತ್ತವೆ. ಅದನ್ನು ಪೂರೈಸುವ ಹೊಣೆಗಾರಿಕೆ ಇರುತ್ತದೆ. ಸೀನಿಯರ್ ರೋಲ್‌ನಲ್ಲಿ ಮ್ಯಾನೇಜ್‌ಮೆಂಟ್ ಬದಲಾದಾಗ, ಅಥವಾ ತಂಡವೇ ಬದಲಾದಾಗ ಕಡಿಮೆ ವೇತನದ ಕಡಿಮೆ ಅನುಭವದ ಉದ್ಯೋಗಿಗಳಿಗೆ ಆದ್ಯತೆ ನೀಡುತ್ತಾರೆ. ತುಂಬಾ ವರ್ಷಗಳಿಂದ ವೃತ್ತಿಯಲ್ಲಿರುವ ಹೆಚ್ಚು ವೇತನ ಇರುವವರ ಅಗತ್ಯ ಎಷ್ಟಿರುತ್ತದೆ ಎನ್ನುವುದರ ಮೇಲೆ ನಿರ್ಣಯವಾಗುತ್ತದೆ” ಎನ್ನುತ್ತಾರೆ ವೀರೇಶ್.

ಸಂಸ್ಥೆಯ ಕೋರ್ಟೀಮ್ನಲ್ಲಿ ಅನುಭವ ಅಗತ್ಯ

ಆದರೆ 40ರ ವಯಸ್ಸು ನಿವೃತ್ತಿಯ ವಯಸ್ಸಲ್ಲ ನೇತೃತ್ವದ ವಯಸ್ಸು ಎನ್ನುವ ಅಭಿಪ್ರಾಯವೂ ಕೇಳಿಬಂತು. ಹೆಸರಾಂತ ಪತ್ರಕರ್ತರು ಮತ್ತು ಲೇಖಕರಾಗಿರುವ ರವಿ ಅಜ್ಜೀಪುರ ಪ್ರಕಾರ, “ಕಾರ್ಪೋರೇಟ್ ಕ್ಷೇತ್ರದಲ್ಲಿ 40 ಆದವರಿಗೆ ಸ್ಥಾನವಿಲ್ಲ, ಏಕೆಂದರೆ ಹೆಚ್ಚು ವೇತನ ಕೊಡಬೇಕಾಗುತ್ತದೆ. ಮ್ಯಾನೇಜ್ಮೆಂಟ್ ಮಾತು ಕೇಳುವುದಿಲ್ಲ. ಅವರನ್ನು ನಿರ್ವಹಿಸುವುದು ಕಷ್ಟ ಎನ್ನುವ ಅಭಿಪ್ರಾಯ ಇರುತ್ತದೆ. ಇನ್ನೊಂದು ಮುಖವೆಂದರೆ ಒಬ್ಬ ಹಿರಿಯ ಉದ್ಯೋಗಿಯನ್ನು ನೇಮಿಸಿಕೊಳ್ಳಲು 1 ಲಕ್ಷ ಕೊಡುವುದಾದರೆ, ಕಿರಿಯ ಉದ್ಯೋಗಿಗೆ 35,000 ಕೊಟ್ಟರೆ ಸಾಕಾಗುತ್ತದೆ. ಆದರೆ ಎರಡು ಪಾಯಿಂಟ್ ಇಟ್ಕೊಂಡು ಯೋಚನೆ ಮಾಡಿದರೆ, ಯುವಜನರಿಗೆ ಜ್ಞಾನ ಕಡಿಮೆ, ತಕ್ಷಣ ಯಶಸ್ಸು ಬೇಕು ಮತ್ತು ಸಹನೆ ಕಡಿಮೆ. ಹೀಗಾಗಿ ಉತ್ಪಾದಕತೆ ಕಡಿಮೆಯಾಗುತ್ತಿದೆ.”

“ಇನ್ನೊಂದು ದೃಷ್ಟಿಕೋನದಲ್ಲಿ ನೋಡಿದರೆ, ತುಂಬಾ ಕಂಪನಿಗಳಿಗೆ ಅನುಭವಿ ಕೈಗಳೂ ಇಲ್ಲದಿರುವುದರಿಂದ ಉತ್ಪಾದಕತೆ ಕಡಿಮೆಯಾಗಿರುವುದರಿಂದ ಹೊಡೆತ ಬಿದ್ದಿದೆ. ಮಾಧ್ಯಮದಲ್ಲೇ ಗಮನಿಸಿದಲ್ಲಿ, ಹೊಸ ತಂಡ ಬಂದಾಗ ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಾರೆ. ಕಿರಿಯರನ್ನು ನೇಮಿಸಿಕೊಳ್ಳುತ್ತಾರೆ. ಆದರೆ ಒಂದು ಚಾನೆಲ್ ನಡೆಸಬೇಕಾದರೆ ಕೋರ್ ಟೀಮ್ ಮುಖ್ಯವಾಗುತ್ತದೆ. ಅದರಲ್ಲಿ ಹಿರಿಯರು ಇರಬೇಕಾಗುತ್ತದೆ. ಆ ಕೋರ್ ಟೀಮ್ ಇಲ್ಲ ಎಂದಾದಲ್ಲಿ ಕಿರಿಯರಿಂದ ಕೆಲಸ ತೆಗೆಸಲು ಸಾಧ್ಯವಿಲ್ಲ. ಅಲ್ಪ ಅನುಭವ ಇರುವವರಿಗೆ ಒಂದು ಗಂಟೆಯ ಎಪಿಸೋಡ್ ಮಾಡು ಎಂದು ಕೊಡುವ ಹಾಗಿಲ್ಲ. ಯಾವುದೇ ಕ್ಷೇತ್ರದಲ್ಲೂ ತಗೆದುಕೊಳ್ಳಿ, ಕಿರಿಯರು ಒಂದು ಗಂಟೆಯ ಕೆಲಸಕ್ಕೆ 4-5 ಗಂಟೆ ಅಥವಾ ಹೆಚ್ಚೇ ತಗೋತಾರೆ. ಅದು ಅವರ ಕಲಿಕಾ ಹಂತ” ಎನ್ನುತ್ತಾರೆ ಅಜ್ಜೀಪುರ.

40ರ ವಯಸ್ಸಿನಲ್ಲಿ ಹೊಂದಾಣಿಕೆಯ ಕೊರತೆ

ಆದರೆ 40ರ ವಯಸ್ಸಿನವರು ಮತ್ತು 28ರ ವಯಸ್ಸಿನವರ ನಡುವೆ ಹೊಂದಾಣಿಕೆಯ ಕೊರತೆ ಇರುವ ಕಾರಣ ಕಂಪನಿಗಳು ಹೆಚ್ಚು ಯುವಜನರಿಗೆ ಆದ್ಯತೆ ಕೊಡುತ್ತವೆ. ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಘನಶ್ಯಾಮ, “ನಾಯಕತ್ವ ಸ್ಥಾನದಲ್ಲಿರುವವರಿಗೆ ವಯಸ್ಸಾದ ನಂತರ ಕಲಿಕೆಯ ವೇಗ ಕಡಿಮೆಯಾಗುತ್ತದೆ ಎನ್ನುವ ಭಾವನೆ ಇರುತ್ತದೆ. ಆದರೆ ಅದನ್ನು ಸುಳ್ಳು ಎಂದು ಸಾಬೀತು ಮಾಡಿದವರು ಬೇಕಾದಷ್ಟು ಜನ ಇದ್ದಾರೆ. ಆದರೆ, ಈಗಿನ ಯುವಜನತೆ ಬಿಟ್ಟಿ ಉಪದೇಶ ಕೇಳಲು ಸಿದ್ಧರಿರುವುದಿಲ್ಲ. ನಮ್ಮ ದೃಷ್ಟಿಕೋನ ಧನಾತ್ಮಕವಾಗಿರಬೇಕು. ನಿವೃತ್ತಿ ವಯಸ್ಸಿನಲ್ಲಿರುವ ನನ್ನ ಕಾಪಿಯಲ್ಲಿ ನಿನಗೇನು ಕಂಡುಹಿಡಿಯಲು ಸಾಧ್ಯ ಎನ್ನುವ ಮನೋಭಾವನೆ ಇರಬಾರದು. ಹೊರೆ ಎನ್ನುವ ಕಲ್ಪನೆಯೇ ವಿಚಿತ್ರ. ಒಂದು ಸಂಸ್ಥೆಗೆ ಹೊರೆಯಾಗದೆ ಇರುವ ಹಾಗೆ ಇರುವುದು ಹೇಗೆ ಎನ್ನುವುದನ್ನು ಗಮನಿಸಬೇಕು. ಒಳ್ಳೇ ಸಹೋದ್ಯೋಗಿ ಆಗದೆ ಇದ್ದರೂ, ಒಳ್ಳೆ ನಾಯಕತ್ವ ವಹಿಸಬಹುದು. ನಾವು ಹೊಸ ತಲೆಮಾರಿನಿಂದ ಕಲಿಯಲು ಮುಕ್ತರಾಗಿರಬೇಕು. ನಾವು ಮುಕ್ತರಾಗಿರದೆ ಇದ್ದರೆ ಸಂಸ್ಥೆಗೆ ಹೊರೆಯಾಗಿ ಬಿಡುತ್ತೇವೆ. ನಮ್ಮ ಪ್ರಸ್ತುತತೆ ಏನು ಎಂದು ಸದಾ ನಾವು ಪ್ರಶ್ನೆ ಮಾಡಿಕೊಳ್ಳಬೇಕು. ಈ ಸಂಸ್ಥೆಗೆ, ಮನೆಗೆ ನನ್ನ ಪ್ರಸ್ತುತತೆ ಏನು? ಈ ಪ್ರಜ್ಞೆ ಬಂದರೆ ಮುಂದಕ್ಕೆ ಬದುಕು ಸುಲಭವಾಗುತ್ತದೆ. 40ರ ವಯಸ್ಸಿನವರ ಒಳನೋಟಗಳು ಹೇಗಿರುತ್ತವೆ ಎನ್ನುವುದರ ಮೇಲೆ ಅವರು ಸಂಸ್ಥೆಗೆ ಉಪಯುಕ್ತವೇ ಅಥವಾ ಹೊರೆಯೇ ಎನ್ನುವುದು ತಿಳಿದುಬರುತ್ತದೆ” ಎಂದು ಘನಶ್ಯಾಮ್ ಅಭಿಪ್ರಾಯಪಡುತ್ತಾರೆ.

ಅನುಭವದ ಕೊರತೆಯಿಂದ ಉತ್ಪಾದಕತೆ ಮೇಲೆ ಪರಿಣಾಮ

ಘನಶ್ಯಾಮ್ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿರುವ ರವಿ ಅಜ್ಜೀಪುರ ಅವರು, “ಹೌದು ಇದು ಇಂದಿನ ನೇಮಕಾತಿ ನೀತಿ. ಆದರೆ ಇದರಿಂದ ಕಂಪನಿಗೆ ಹೊಡೆತ ಬೀಳುತ್ತಿದೆ” ಎನ್ನುತ್ತಾರೆ. “28 ವರ್ಷ ವಯಸ್ಸಿವನರಿಗೆ 2-3 ವರ್ಷ ಅನುಭವಿದೆ. ಆದರೆ ಆತನಿಗೆ ವೃತ್ತಿಪರವಾಗಿ ಒಂದು ಪ್ರೊಫೈಲ್ ನಿರ್ಮಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಅಷ್ಟು ಅವಕಾಶ ಕೊಟ್ಟ ಮೇಲೆ ತನ್ನ ಪ್ರೊಫೈಲ್ ರೂಪಿಸಿಕೊಂಡು ಕೆಲಸ ಬಿಟ್ಟು ಹೋಗುತ್ತಾನೆ. ಹೀಗಾಗಿ ಉತ್ಪಾದಕತೆ ಕಡಿಮೆಯಾಗುತ್ತದೆ. ಎರಡನೆಯದಾಗಿ ಅನನುಭವಿ ಕೆಲಸ ಮಾಡಿಕೊಡುತ್ತಾರೆ. ಎರಡು ವರ್ಷ ಕೆಲಸ ಮಾಡಿ ಆತ ಹೊರಗೆ ಹೋದ ನಂತರ ಮತ್ತೆ ಎಚ್ಆರ್ ಪ್ರೊಸೆಸ್ನಲ್ಲಿ ಹೊಸ ಅನನುಭವಿ ಸಂಸ್ಥೆಗೆ ಬರುತ್ತಾರೆ. ಹೀಗೆ ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಜಾಗಕ್ಕೆ ಸರಿಯಾದ ವ್ಯಕ್ತಿಯನ್ನು ಕೂರಿಸದೆ ಇದ್ದರೆ, ಕಂಪನಿಯಲ್ಲಿ ಯಾವ ಕೆಲಸವೂ ಸರಿಯಾಗಿ ಆಗುವುದಿಲ್ಲ. ಹೀಗಾಗಿ ಕೋರ್ ಟೀಮ್ನಲ್ಲಿ ಅನುಭವಿ ತಂಡ ಇರಲೇಬೇಕು” ಎನ್ನುತ್ತಾರೆ ರವಿ ಅಜ್ಜೀಪುರ.

ಗುರಿ ಇಲ್ಲದ ಯುವಜನತೆ?

ಯುವಕರಿಗೆ ಮುನ್ನುಗ್ಗುವ ಸಾಮರ್ಥ್ಯ ಇರುತ್ತದೆ. ಆದರೆ ಒಂದು ಸನ್ನಿವೇಶವನ್ನು ನಿರ್ವಹಿಸುವ ಅನುಭವ ಇರುವುದಿಲ್ಲ ಎನ್ನುತ್ತಾರೆ ರವಿ ಅಜ್ಜೀಪುರ. ವೀರೇಶ್ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಸೀನಿಯರ್ ಲೆವೆಲ್ನಲ್ಲಿರುವವರಿಗೆ ಮೊದಲಿನಿಂದಲೂ ಕೆಲಸದ ಟಚ್ ಇರುತ್ತದೆ ಮತ್ತು ಅನುಭವ ಇರುತ್ತದೆ. ಎಲ್ಲವನ್ನೂ ನೋಡ್ಕೊಂಡು ಬಂದಿರುತ್ತಾರೆ ಮತ್ತು ಅದರಿಂದ ಸಂಪೂರ್ಣ ತಂಡವನ್ನು ನೀಟಾಗಿ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ. ಹಿಂದೆ ನಾವು ಒಂದು ಗುರಿ ಇಟ್ಕೊಂಡು ಕೆಲಸ ಮಾಡುತ್ತಿದ್ದವು. ಇಷ್ಟು ವರ್ಷ ಆದ ಮೇಲೆ ಈ ಕಂಪನಿಯ ಸಿಇಒ ಆಗಬೇಕು ಎನ್ನುವ ಗುರಿ ಇರುತ್ತದೆ. ಆದರೆ ನನ್ನ ಅನುಭವದಲ್ಲಿ ಈಗಿನ ಜೆನ್ ಜೀ ಬಗ್ಗೆ ಹೇಳುವುದಾದರೆ, ಮನೆಯಲ್ಲಿ ಹಣಕಾಸು ಸ್ಥಿರತೆ ಇರುತ್ತದೆ. ಅವರು ಇಂದಿನ ದಿನಕ್ಕೆ ಊಟಕ್ಕೆ ಸಂಪಾದಿಸಬೇಕು ಎನ್ನುವ ಸ್ಥಿತಿ ಇರುವುದಿಲ್ಲ. ನಾವು ಅಂದಿನ ದಿನದ ಊಟಕ್ಕೆ ದುಡೀತಿದ್ದೆವು. ಈಗಿನ ಜೆನ್ ಝೀಗೆ ಅಂತಹ ಒತ್ತಡ ಇಲ್ಲ. ಕೆಲಸದಲ್ಲಿ ಸ್ವಲ್ಪ ಸಮಯ ಕಳೆಯುತ್ತಾ ಫ್ರೀಲ್ಯಾನ್ಸ್ ಮಾಡ್ಕೊಂಡು ಇರಲು ಬಯಸುತ್ತಾರೆ. ಅಗತ್ಯ ಬಿದ್ದಾಗ ಕೆಲಸಕ್ಕೆ ಸೇರೋಣ ಎಂದುಕೊಂಡಿರುತ್ತಾರೆ. ಅವರಿಗೆ ಉದ್ಯೋಗ ಎನ್ನುವುದು ಆ ಸಂದರ್ಭದಲ್ಲಿ ಬೇಕಾಗಿರುವ ಸಮಯ ಕಳೆಯುವ ಸಾಧನವಾಗಿರುತ್ತದೆ. ನಮ್ಮ ತಲೆಮಾರಿನಲ್ಲಿ ಉದ್ಯೋಗ ಜೀವನೋಪಾಯಕ್ಕೆ ಆಗಿತ್ತು” ಎನ್ನುತ್ತಾರೆ ವೀರೇಶ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

Similar News