×
Ad

ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಮಾನವ ಹಕ್ಕುಗಳ ಹೋರಾಟಗಾರ್ತಿ ಗ್ರಾಸಾ ಮಾಶೆಲ್ ಆಯ್ಕೆ; ಯಾರು ಇವರು? ಅವರ ಸಾಧನೆಗಳೇನು?

Update: 2026-01-22 19:25 IST

 ಗ್ರಾಸಾ ಮಾಶೆಲ್ |  Photo Credit : PTI  

2025ನೇ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿಗೆ ಮೊಜಾಂಬಿಕ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ ಗ್ರಾಸಾ ಮಾಶೆಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಶಿಕ್ಷಣ, ಆರೋಗ್ಯ ಹಾಗೂ ಪೋಷಣೆ, ಆರ್ಥಿಕ ಸಬಲೀಕರಣ ಮತ್ತು ಸಂಕಷ್ಟಕರ ಸಂದರ್ಭಗಳಲ್ಲಿ ನಡೆಸಿದ ಮಹತ್ವದ ಮಾನವೀಯ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ತಿಳಿಸಿದೆ. ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರ ಅಧ್ಯಕ್ಷತೆಯಲ್ಲಿ ನಡೆದ ತೀರ್ಪುಗಾರರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಶಸ್ತಿಯು 1 ಕೋಟಿ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ಒಳಗೊಂಡಿದೆ.

ಗ್ರಾಸಾ ಮಾಶೆಲ್ ಆಫ್ರಿಕಾದ ಪ್ರಮುಖ ಮಹಿಳಾ ನಾಯಕಿ. ರಾಜಕಾರಣಿ ಮತ್ತು ಮಾನವತಾವಾದಿಯಾಗಿರುವ ಅವರು, ಜೀವನಪೂರ್ತಿ ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಿದ್ದಾರೆ. ಎಲ್ಲರಿಗೂ ಸಮಾನ ನ್ಯಾಯ ಹಾಗೂ ಸಮಾನ ಸಮಾಜ ನಿರ್ಮಾಣದ ಮೂಲಕ ದುರ್ಬಲ ಸಮುದಾಯಗಳ ಜೀವನ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಟ್ರಸ್ಟ್ ಹೇಳಿದೆ.

ಮಾಶೆಲ್ ಅವರ ಮೊದಲ ಪತಿ ಮೊಜಾಂಬಿಕ್‌ನ ಪ್ರಥಮ ಅಧ್ಯಕ್ಷರಾಗಿದ್ದ ಸಮೋರಾ ಮೊಯಿಸೆಸ್ ಮಾಶೆಲ್. ಅವರು 1986ರಲ್ಲಿ ನಿಧನರಾದರು. ಬಳಿಕ ಮಾಶೆಲ್ ಅವರು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ವಿವಾಹವಾದರು.

1945 ಅಕ್ಟೋಬರ್ 17ರಂದು ಗ್ರಾಮೀಣ ಮೊಜಾಂಬಿಕ್‌ನಲ್ಲಿ ಜನಿಸಿದ ಗ್ರಾಸಾ ಸಿಂಬಿನ್ (ಗ್ರಾಸಾ ಮಾಶೆಲ್) ಮೆಥಡಿಸ್ಟ್ ಮಿಷನ್ ಶಾಲೆಗಳಲ್ಲಿ ಶಿಕ್ಷಣ ಪಡೆದರು. ನಂತರ ಲಿಸ್ಬನ್ ವಿಶ್ವವಿದ್ಯಾಲಯದಲ್ಲಿ ಜರ್ಮನ್ ಭಾಷೆ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನ ಪಡೆದರು. ಅಲ್ಲಿಯೇ ಅವರಿಗೆ ಸ್ವಾತಂತ್ರ್ಯ ಮತ್ತು ರಾಜಕೀಯ ಪ್ರಜ್ಞೆ ಬೆಳೆದಿತು ಎಂದು ಟ್ರಸ್ಟ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

1973ರಲ್ಲಿ ಮೊಜಾಂಬಿಕ್‌ಗೆ ಮರಳಿದ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಶಿಕ್ಷಕಿಯಾಗಿ ಮೊಜಾಂಬಿಕ್ ಲಿಬರೇಶನ್ ಫ್ರಂಟ್ (FRELIMO)ಗೆ ಸೇರ್ಪಡೆಯಾದರು. 1975ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಮೊಜಾಂಬಿಕ್‌ ನ ಮೊದಲ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರಾಗಿ ನೇಮಕಗೊಂಡರು.

ಅವರ ಅಧಿಕಾರಾವಧಿಯಲ್ಲಿ ಶಾಲಾ ದಾಖಲಾತಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿತು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಹುಡುಗರ ಪಾಲ್ಗೊಳ್ಳುವಿಕೆ ಶೇ.40ರಿಂದ ಶೇ.90ಕ್ಕೆ ಏರಿಕೆಯಾದರೆ, ಹುಡುಗಿಯರ ಪಾಲ್ಗೊಳ್ಳುವಿಕೆ ಶೇ.75ಕ್ಕಿಂತ ಹೆಚ್ಚಾಯಿತು ಎಂದು ತಿಳಿಸಲಾಗಿದೆ.

1990ರ ದಶಕದಲ್ಲಿ ಮಕ್ಕಳ ಮೇಲೆ ಸಶಸ್ತ್ರ ಸಂಘರ್ಷಗಳ ಪರಿಣಾಮ ಕುರಿತು ಸಮಗ್ರ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆ ಅವರಿಗೆ ನೀಡಿತು. 1996ರಲ್ಲಿ ಅವರು ಸಿದ್ಧಪಡಿಸಿದ “ಮಕ್ಕಳ ಮೇಲೆ ಸಶಸ್ತ್ರ ಸಂಘರ್ಷದ ಪರಿಣಾಮ” ಎಂಬ ವರದಿ, ಯುದ್ಧ ವಲಯಗಳಲ್ಲಿ ವಿಶ್ವಸಂಸ್ಥೆ ಮತ್ತು ಸದಸ್ಯ ರಾಷ್ಟ್ರಗಳ ಕಾರ್ಯವಿಧಾನಗಳ ಮೇಲೆ ಆಳವಾದ ಪ್ರಭಾವ ಬೀರಿತು.

ಈ ದಣಿವರಿಯದ ಕಾರ್ಯಕ್ಕಾಗಿ ಅವರಿಗೆ ವಿಶ್ವಸಂಸ್ಥೆಯ ನ್ಯಾನ್ಸೆನ್ ನಿರಾಶ್ರಿತರ ಪ್ರಶಸ್ತಿ ನೀಡಲಾಯಿತು. 1997ರಲ್ಲಿ ಬ್ರಿಟನ್ ಸರ್ಕಾರವು ಡೇಮ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (DBE) ಗೌರವವನ್ನು ಪ್ರದಾನ ಮಾಡಿತು.

1993ರ ಡಿಸೆಂಬರ್‌ನಲ್ಲಿ ಮಕ್ಕಳ ಹಕ್ಕುಗಳ ಸಮಿತಿಯ ಶಿಫಾರಸಿನ ಮೇರೆಗೆ, ಯುದ್ಧಗಳಿಂದ ಮಕ್ಕಳು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಸಮಗ್ರ ಅಧ್ಯಯನ ನಡೆಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಲಾಯಿತು. ಈ ಮಹತ್ವದ ಅಧ್ಯಯನದ ನೇತೃತ್ವ ವಹಿಸಲು ಗ್ರಾಸಾ ಮಾಶೆಲ್ ಅವರನ್ನು ನೇಮಕ ಮಾಡಲಾಯಿತು.

ಎರಡು ವರ್ಷಗಳ ಅವಧಿಯಲ್ಲಿ ಅವರು ಸಂಘರ್ಷದಿಂದ ಪ್ರಭಾವಿತ ಹಲವಾರು ದೇಶಗಳಿಗೆ ಭೇಟಿ ನೀಡಿ ಮಕ್ಕಳು, ಕುಟುಂಬಗಳು, ಕಾರ್ಯಕರ್ತರು ಮತ್ತು ಅಧಿಕಾರಿಗಳ ಅನುಭವಗಳನ್ನು ದಾಖಲಿಸಿದರು. 1996ರಲ್ಲಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಈ ವರದಿ, ಯುದ್ಧದಲ್ಲಿ ಸಿಲುಕಿದ ಲಕ್ಷಾಂತರ ಮಕ್ಕಳ ಮೇಲಿನ ಕ್ರೌರ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿತು.

ಈ ವರದಿಗೆ ಮೊದಲು ಮಕ್ಕಳನ್ನು ಯುದ್ಧದ “ಆಕಸ್ಮಿಕ ಸಂತ್ರಸ್ತರು” ಎಂದು ಮಾತ್ರ ನೋಡಲಾಗುತ್ತಿತ್ತು. ಆದರೆ ಮಕ್ಕಳ ನೋವು ನೇರ ಬಿಕ್ಕಟ್ಟಾಗಿದ್ದು, ಅವರಿಗೆ ವಿಶೇಷ ರಕ್ಷಣೆಯ ಅಗತ್ಯವಿದೆ ಎಂಬ ಅರಿವನ್ನು ಮಾಶೆಲ್ ಜಾಗತಿಕ ಮಟ್ಟದಲ್ಲಿ ಮೂಡಿಸಿದರು.

“ಪ್ರತಿಯೊಂದು ಸಂಸ್ಕೃತಿಯೂ ತನ್ನ ಮಕ್ಕಳ ಮೂಲಭೂತ ಅಗತ್ಯಗಳ ಮೇಲೆ ಕಾಳಜಿ ವಹಿಸುವುದೇ, ಯುದ್ಧವನ್ನು ಮೀರಿ ಶಾಂತಿಯತ್ತ ಸಾಗುವ ಅತ್ಯುತ್ತಮ ಮಾರ್ಗ” ಎಂದು ಗ್ರಾಸಾ ಮಾಶೆಲ್ ಹೇಳಿದ್ದಾರೆ.

ಅವರು ದಿ ಎಲ್ಡರ್ಸ್ ಸಂಸ್ಥೆಯ ಸ್ಥಾಪಕ ಸದಸ್ಯೆಯಾಗಿದ್ದು, ಗರ್ಲ್ಸ್ ನಾಟ್ ಬ್ರೈಡ್ಸ್ ಎಂಬ ಎನ್‌ಜಿಒ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಸುಸ್ಥಿರ ಅಭಿವೃದ್ಧಿ ಗುರಿಗಳ ವಕಾಲತ್ತು ಗುಂಪಿನ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

2010ರಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ, ಆಹಾರ ಭದ್ರತೆ ಮತ್ತು ಉತ್ತಮ ಆಡಳಿತ ಉತ್ತೇಜನಕ್ಕಾಗಿ ಗ್ರಾಸಾ ಮಾಶೆಲ್ ಟ್ರಸ್ಟ್ ಸ್ಥಾಪಿಸಿದರು. ಜಿಜಿಲೆ ಇನ್‌ಸ್ಟಿಟ್ಯೂಟ್ ಫಾರ್ ಚೈಲ್ಡ್ ಡೆವಲಪ್ಮೆಂಟ್ ಸ್ಥಾಪನೆಯಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ.

2018ರಲ್ಲಿ ಮಹಿಳೆಯರು ಮತ್ತು ಹದಿಹರೆಯದವರ ಯೋಗಕ್ಷೇಮಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಅತ್ಯುನ್ನತ ಗೌರವವಾದ WHO ಚಿನ್ನದ ಪದಕ ನೀಡಿ ಅವರನ್ನು ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News