ಭಾರತದ ಮೊದಲ ಹ್ಯೂಮನ್ ರೇಟೆಡ್ ರಾಕೆಟ್: ಸುರಕ್ಷತೆಯೇ ಆದ್ಯತೆ
ಗಗನಯಾನ ಯೋಜನೆಗೆ ಭಾರತ ತನ್ನ ಅತ್ಯಂತ ನಂಬಿಕಾರ್ಹವಾದ ಎಲ್‌ವಿಎಂ-3 ರಾಕೆಟ್ ಅನ್ನು ಆರಿಸಿದೆ. ಇಸ್ರೋ ರಾಕೆಟ್‌ಗೆ ಹೆಚ್ಚುವರಿ ಬ್ಯಾಕಪ್ ವ್ಯವಸ್ಥೆಗಳು, ಇಂಜಿನ್ ನಂಬಿಕಾರ್ಹತೆ ಸುಧಾರಣೆ ಮತ್ತು ಕ್ಷಿಪ್ರ ಕ್ರ್ಯೂ ಎಸ್ಕೇಪ್ ಸಿಸ್ಟಮ್‌ಗಳನ್ನು ಅಳವಡಿಸಿ, ಅದನ್ನು ಇನ್ನಷ್ಟು ಬಲಪಡಿಸಿದೆ. ಒಂದು ಬಾರಿ ಪ್ರಮಾಣೀಕೃತವಾದ ಬಳಿಕ, ರಾಕೆಟ್ ಎಚ್‌ಎಲ್‌ವಿಎಂ-3 ಎಂದು ಮರುನಾಮಕರಣ ಹೊಂದಲಿದೆ.
ಭಾರತ ಗಗನಯಾನ ಯೋಜನೆಯಡಿ ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಈ ಯೋಜನೆಯಲ್ಲಿ ಇಟ್ಟಿರುವ ಒಂದು ವೌನವಾದ, ಆದರೆ ಪ್ರಮುಖವಾದ ಹೆಜ್ಜೆಯೆಂದರೆ, ರಾಕೆಟ್‌ಗೆ ಹ್ಯೂಮನ್ ರೇಟಿಂಗ್ ಪಡೆಯುವುದು, ಅಂದರೆ ಮಾನವ ಸಹಿತ ಹಾರಾಟಕ್ಕೆ ರಾಕೆಟ್ ಅನ್ನು ಸೂಕ್ತವಾಗಿಸುವುದು. ಎಲ್‌ವಿಎಂ-3ರಂತಹ ರಾಕೆಟ್‌ಗಳು ಈಗಾಗಲೇ ತಾವು ಉಪಗ್ರಹಗಳನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಒಯ್ಯಬಲ್ಲೆವು ಎಂದು ಸಾಬೀತುಪಡಿಸಿದ್ದರೂ, ಮಾನವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವುದು ಒಂದು ಸಂಪೂರ್ಣ ಭಿನ್ನವಾದ ಸವಾಲು. ಮಾನವ ಜೀವಗಳನ್ನು ಒಳಗೊಂಡ ಯೋಜನೆಯಲ್ಲಿ ಒಂದು ಸಣ್ಣ ತಪ್ಪೂ ಆಗುವಂತಿಲ್ಲ. ಇಲ್ಲಿ ಎದುರಾಗುವ ವೈಫಲ್ಯವನ್ನು ಕೇವಲ ತಾಂತ್ರಿಕ ಸಮಸ್ಯೆ ಎನ್ನಲಾಗದು. ಅದು ಮಾನವ ದುರಂತವಾಗಿಬಿಡಬಹುದು. ಆದ್ದರಿಂದಲೇ ರಾಕೆಟ್ ಹ್ಯೂಮನ್ ರೇಟಿಂಗ್ ಹೊಂದುವುದು ಅತಿ ಮುಖ್ಯವಾಗಿದೆ.
ಹ್ಯೂಮನ್ ರೇಟಿಂಗ್ ಎಂದರೆ, ಪ್ರತಿಯೊಂದು ಬಾಹ್ಯಾಕಾಶ ವ್ಯವಸ್ಥೆಯ ವಿನ್ಯಾಸ, ಪರೀಕ್ಷೆ ಮತ್ತು ಅನುಮೋದನೆ ಎಲ್ಲವೂ ಬಾಹ್ಯಾಕಾಶ ವ್ಯವಸ್ಥೆ ಮಾನವರಿಗೆ ಸುರಕ್ಷಿತ ಎಂದು ಖಾತರಿ ಪಡಿಸುವುದಾಗಿದೆ. ಇದು ರಾಕೆಟ್, ಸಿಬ್ಬಂದಿ ಕ್ಯಾಪ್ಸೂಲ್ ಮತ್ತು ಗಗನಯಾತ್ರಿಗಳನ್ನು ಸುರಕ್ಷಿತವಾಗಿಡುವ ಎಲ್ಲ ವ್ಯವಸ್ಥೆಗಳನ್ನೂ ಒಳಗೊಂಡಿದೆ. ಮಾನವರು ಬಾಹ್ಯಾಕಾಶ ನೌಕೆಯಲ್ಲಿರುವಾಗ, ಅದಕ್ಕೆ ಎದುರಾಗಬಹುದಾದ ಅಪಾಯ ಅತ್ಯಂತ ಕನಿಷ್ಠ ಮಟ್ಟದಲ್ಲಿ ಇರುತ್ತದೆ ಎಂದು ಖಾತ್ರಿಪಡಿಸುವ ಪ್ರಕ್ರಿಯೆ ಇದಾಗಿದೆ. ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್‌ನ ಸ್ಥಾಪಕ ನಿರ್ದೇಶಕ ಉನ್ನಿಕೃಷ್ಣನ್ ನಾಯರ್ ಅವರು ಈ ಪ್ರಕ್ರಿಯೆಯ ಉದ್ದೇಶ ಅಪಾಯವನ್ನು ಸಂಪೂರ್ಣವಾಗಿ ತೆಗೆದುಹಾಕುವುದಲ್ಲ ಎಂದಿದ್ದಾರೆ. ಅಪಾಯ ಇಲ್ಲವೇ ಇಲ್ಲ ಎನ್ನುವಂತೆ ಮಾಡಲು ಸಾಧ್ಯವೇ ಇಲ್ಲ. ಆದರೆ, ಅಪಾಯದ ಮಟ್ಟವನ್ನು ಅತ್ಯಂತ ಸುರಕ್ಷಿತ ಎನ್ನಲಾದ ಮಿತಿಯೊಳಗೆ ಇರುವಂತೆ ನೋಡಿಕೊಳ್ಳುವುದು ಇದರ ಗುರಿ ಎಂದು ಅವರು ವಿವರಿಸಿದ್ದಾರೆ. ನಾಸಾದ ಸುರಕ್ಷತಾ ಮಟ್ಟಗಳ ಪ್ರಕಾರ, ಬಾಹ್ಯಾಕಾಶ ಯಾನದ ಅತ್ಯಂತ ಅಪಾಯಕರ ಹಂತಗಳಾದ ಉಡಾವಣೆ ಮತ್ತು ಭೂಮಿಗೆ ಪುನರಾಗಮನದ ಸಂದರ್ಭದಲ್ಲಿ, ಗಗನಯಾತ್ರಿಗಳ ಜೀವಕ್ಕೆ ಅಪಾಯ ಉಂಟುಮಾಡಬಲ್ಲ ಅಪಘಾತದ ಸಾಧ್ಯತೆ ಕೇವಲ ಶೇ. 0.2 ಒಳಗಿರಬೇಕು.
ಈ ಮಟ್ಟವನ್ನು ಸಾಧಿಸುವ ಸಲುವಾಗಿ, ಇಂಜಿನಿಯರ್‌ಗಳು ಹಲವಾರು ಪದರಗಳ ಸುರಕ್ಷತೆಯನ್ನು ಅಳವಡಿಸುತ್ತಾರೆ. ಉದಾಹರಣೆಗೆ, ಒಂದು ಹಾರಾಟ ಕಂಪ್ಯೂಟರ್ ಬದಲಿಗೆ, ಹ್ಯೂಮನ್ ರೇಟೆಡ್ ರಾಕೆಟ್ ಮೂರು ಅಥವಾ ನಾಲ್ಕು ಕಂಪ್ಯೂಟರ್‌ಗಳನ್ನು ಹೊಂದಿರುತ್ತದೆ. ಆದ್ದರಿಂದ ಒಂದು ಕಂಪ್ಯೂಟರ್ ಏನಾದರೂ ವಿಫಲವಾದರೆ, ತಕ್ಷಣವೇ ಇತರ ಕಂಪ್ಯೂಟರ್‌ಗಳು ಜವಾಬ್ದಾರಿ ತೆಗೆದುಕೊಳ್ಳುತ್ತವೆ. ರಾಕೆಟ್ ಅತ್ಯಂತ ಸಮರ್ಥ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಹೊಂದಿದ್ದು, ಉಡಾವಣೆಯ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಉಂಟಾದರೆ, ಇದು ತಕ್ಷಣವೇ ಗಗನಯಾತ್ರಿಗಳನ್ನು ಹೊರಗೆ ಎಳೆಯುತ್ತದೆ. ಕ್ಯಾಪ್ಸೂಲ್ ಒಳಗೆ ನಂಬಿಕಾರ್ಹ ಜೀವ ಬೆಂಬಲ ವ್ಯವಸ್ಥೆಯಿದ್ದು, ಇದು ಗಗನಯಾತ್ರಿಗಳಿಗೆ ಶುದ್ಧ ಗಾಳಿ, ಸರಿಯಾದ ಒತ್ತಡ ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸುತ್ತದೆ. ಇದರ ಪ್ರತಿಯೊಂದು ಭಾಗವನ್ನೂ ಮತ್ತೆ ಮತ್ತೆ, ಅತ್ಯಂತ ವಿಸ್ತೃತವಾಗಿ ಪರೀಕ್ಷಿಸಿ, ದಾಖಲಿಸಲಾಗಿದ್ದು, ಕೇವಲ ವಸ್ತುಗಳನ್ನಷ್ಟೇ ಸಾಗಿಸುವ ರಾಕೆಟ್‌ಳಿಗಿಂತ ಅತ್ಯಂತ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತದೆ.
ಹ್ಯೂಮನ್ ರೇಟಿಂಗ್ ಸಾಧಿಸುವುದು ಅತ್ಯಂತ ಕಷ್ಟಕರ ಪ್ರಕ್ರಿಯೆಯಾಗಿದ್ದು, ಬಾಹ್ಯಾಕಾಶವನ್ನು ತಲುಪುವುದೇ ಅತ್ಯಂತ ಕಷ್ಟದ ಮತ್ತು ತಪ್ಪಿಗೆ ಅವಕಾಶವೇ ಇಲ್ಲದ ಪ್ರಕ್ರಿಯೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಒಂದು ರಾಕೆಟ್ ಪ್ರತೀ ಗಂಟೆಗೆ 28,000 ಕಿಲೋಮೀಟರ್ ವೇಗದಲ್ಲಿ ಸಾಗುತ್ತಾ, ಕೇವಲ 8ರಿಂದ 10 ನಿಮಿಷಗಳಲ್ಲಿ ಭೂಮಿಯ ಗುರುತ್ವಾಕರ್ಷಣೆಯಿಂದ ಬಿಡಿಸಿಕೊಂಡು ಮುಂದೆ ಸಾಗಬೇಕು. ಈ ಸಣ್ಣ ಅವಧಿಯಲ್ಲಿ, ರಾಕೆಟ್ ಅತಿಯಾದ ಅದುರುವಿಕೆ, ಉಷ್ಣತೆ ಮತ್ತು ಅಪಾರವಾದ ಭೌತಿಕ ಒತ್ತಡಗಳಿಗೆ ತುತ್ತಾಗುತ್ತದೆ. ಅದರಲ್ಲೂ ಗಾಳಿಯ ಒತ್ತಡ ಮತ್ತು ವೇಗ ಜೊತೆಯಾಗಿ ರಾಕೆಟ್ ಮೇಲೆ ಗರಿಷ್ಠ ಒತ್ತಡ ಹೇರುತ್ತವೆ. ರಾಕೆಟ್ ಅನ್ನು ನಿಧಾನಗೊಳಿಸಲಾಗಲಿ, ಹಿಂದಕ್ಕೆ ತರಲಾಗಲಿ, ಸುರಕ್ಷಿತವಾಗಿ ಲ್ಯಾಂಡಿಂಗ್ ನಡೆಸಲಾಗಲಿ ಯಾವುದೇ ಅವಕಾಶವಿರುವುದಿಲ್ಲ.
ಇದು ನಾಗರಿಕ ವಿಮಾನಕ್ಕಿಂತ ಅತ್ಯಂತ ಭಿನ್ನವಾಗಿದೆ. ವಿಮಾನ ಸಾಮಾನ್ಯವಾಗಿ ಎರಡು ಇಂಜಿನ್‌ಗಳನ್ನು ಹೊಂದಿ, ಪ್ರತೀ ಗಂಟೆಗೆ 1,000 ಕಿಲೋಮೀಟರ್‌ಗಿಂತ ಕಡಿಮೆ ವೇಗದಲ್ಲಿ ಸುಗಮವಾಗಿ ಸಾಗುತ್ತಿರುತ್ತದೆ. ಇದರ ಸುರಕ್ಷತೆಯ ಪ್ರಮಾಣವೂ ಸಾಕಷ್ಟು ಹೆಚ್ಚಿರುತ್ತದೆ. ಒಂದು ಇಂಜಿನ್ ಏನಾದರೂ ವಿಫಲವಾದರೆ, ವಿಮಾನ ಇನ್ನೊಂದು ಇಂಜಿನ್‌ನ ಮೂಲಕ ಹಾರಾಟ ಮುಂದುವರಿಸಬಹುದು. ಒಂದು ವೇಳೆ ಅವಶ್ಯಕತೆ ಎದುರಾದರೆ, ಅದು ಸನಿಹದ ವಿಮಾನ ನಿಲ್ದಾಣದತ್ತ ಹಾರಬಹುದು. ಈ ವ್ಯತ್ಯಾಸದ ಕಾರಣದಿಂದ, ಅತ್ಯಂತ ನಂಬಿಕಾರ್ಹ ರಾಕೆಟ್‌ಗಳೂ ಸಹ ಕೇವಲ ಶೇ.98ರಿಂದ 99.5 ಯಶಸ್ಸಿನ ದರ ಹೊಂದಿರುತ್ತವೆ. ಆದರೆ, ವಾಣಿಜ್ಯಿಕ ವಿಮಾನಗಳು ಅತ್ಯಂತ ಹೆಚ್ಚು ಸುರಕ್ಷಿತವಾಗಿದ್ದು, 1-2 ಕೋಟಿ ಹಾರಾಟದಲ್ಲಿ ಎಲ್ಲೋ ಒಂದು ಗಂಭೀರ ಅಪಘಾತ ಉಂಟಾಗಬಹುದು.
ಆದ್ದರಿಂದಲೇ ಜಗತ್ತಿನಲ್ಲಿ ಅತ್ಯಂತ ಕಡಿಮೆ ರಾಕೆಟ್‌ಗಳಿಗೆ ಮಾನವರನ್ನು ಬಾಹ್ಯಾಕಾಶಕ್ಕೆ ಒಯ್ಯಲು ಸೂಕ್ತವೆಂಬ ಪ್ರಮಾಣಪತ್ರ ನೀಡಲಾಗಿದೆ. ಇಂದು ಕೇವಲ ಮೂರು ರಾಕೆಟ್‌ಗಳು ಮಾತ್ರ ನಿಯಮಿತವಾಗಿ ಗಗನಯಾತ್ರಿಗಳನ್ನು ಭೂಮಿಯ ಕಕ್ಷೆಗೆ ಒಯ್ಯುತ್ತಿವೆ. ಅವೆಂದರೆ, ರಶ್ಯದ ಸೊಯುಝ್, ಚೀನಾದ ಲಾಂಗ್ ಮಾರ್ಚ್-2ಎಫ್ ಹಾಗೂ ಸ್ಪೇಸ್‌ಎಕ್ಸ್ ಸಂಸ್ಥೆಯ ಫಾಲ್ಕನ್-9. ಅಮೆರಿಕದಲ್ಲಿ ಅಟ್ಲಾಸ್ ವಿ ಗಗನಯಾತ್ರಿಗಳನ್ನು ಬೋಯಿಂಗ್‌ನ ಸ್ಟಾರ್‌ಲೈನರ್ ಅನ್ನು ಬಳಸಿಕೊಂಡು ಪರೀಕ್ಷಾ ಹಾರಾಟದಲ್ಲಿ ಬಾಹ್ಯಾಕಾಶಕ್ಕೆ ತೆರಳಿತ್ತು. ಆದರೆ ಅದಕ್ಕೆ ತಾಂತ್ರಿಕ ಪರಿಶೀಲನೆಯ ಬಳಿಕ ಗಗನಯಾತ್ರಿಗಳನ್ನು ನಿಯಮಿತವಾಗಿ ಬಾಹ್ಯಾಕಾಶಕ್ಕೆ ಕರೆದೊಯ್ಯಲು ಇನ್ನೂ ಅಧಿಕೃತ ಅನುಮತಿ ದೊರೆಯಬೇಕಿದೆ. ನಾಸಾದ ಸ್ಪೇಸ್ ಲಾಂಚ್ ಸಿಸ್ಟಮ್‌ಗೂ (ಎಸ್‌ಎಲ್‌ಎಸ್) ಮಾನವ ಸುರಕ್ಷತಾ ಪ್ರಮಾಣೀಕರಿಸಲಾಗಿದ್ದರೂ, ಅದು ಇಲ್ಲಿಯ ತನಕ ಕೇವಲ ಮಾನವರಹಿತ ಯೋಜನೆಗಳಲ್ಲಷ್ಟೇ ಪಾಲ್ಗೊಂಡಿದೆ. ಈಗ ಮೊದಲ ಮಾನವ ಸಹಿತ ಹಾರಾಟಕ್ಕೆ ಸಜ್ಜಾಗುತ್ತಿದೆ.
ವಿವಿಧ ದೇಶಗಳು ಹ್ಯೂಮನ್ ರೇಟಿಂಗ್ ನೀಡಲು ವಿವಿಧ ವ್ಯವಸ್ಥೆ ಹೊಂದಿವೆ. ಅಮೆರಿಕದಲ್ಲಿ, ಗಗನಯಾತ್ರಿಗಳ ಸುರಕ್ಷತೆಗೆ ಕ್ಯೂ ಡ್ರ್ಯಾಗನ್ ಮತ್ತು ಸ್ಟಾರ್‌ಲೈನರ್‌ನಂತಹ ಖಾಸಗಿ ಯೋಜನೆಗಳಿಗೂ ನಾಸಾವೇ ಅಂತಿಮ ಅನುಮೋದನೆ ನೀಡುತ್ತದೆ. ಎಫ್‌ಎಎ ಕೇವಲ ಭೂಮಿಯಲ್ಲಿ ಮಾತ್ರವೇ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆಯೇ ಹೊರತು, ಗಗನಯಾತ್ರಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದಿಲ್ಲ. ಚೀನಾದಲ್ಲಿ, ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ (ಸಿಎಂಸಿಎ) ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಅನುಮತಿ ನೀಡಿದರೆ, ರಶ್ಯದಲ್ಲಿ ರಾಸ್‌ಕಾಸ್ಮೋಸ್ ಸೊಯುಝ್ ವ್ಯವಸ್ಥೆಗೆ ಅನುಮತಿ ನೀಡುತ್ತದೆ.
ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳು ಎಷ್ಟು ಕಷ್ಟಕರ ಮತ್ತು ದೋಷಕ್ಕೆ ಅವಕಾಶವೇ ಇಲ್ಲದವು ಎನ್ನುವುದನ್ನು ಇತಿಹಾಸವೇ ತೋರಿಸಿದೆ. 1967ರ ಬಳಿಕ ಸೊಯುಝ್ 150ಕ್ಕೂ ಹೆಚ್ಚು ಮಾನವ ಸಹಿತ ಹಾರಾಟ ನಡೆಸಿದ್ದು, ಶೇ. 98 ಯಶಸ್ಸು ಸಾಧಿಸಿದೆ. 1967 ಮತ್ತು 1971ರ ಆರಂಭಿಕ ದುರಂತಗಳ ಬಳಿಕ ಸುರಕ್ಷತೆ ಅಸಾಧಾರಣ ಹೆಚ್ಚಳ ಕಂಡಿತು. ಅಂದಿನಿಂದ ಸೊಯುಝ್ ಶೇ. 100 ಸಿಬ್ಬಂದಿ ರಕ್ಷಣಾ ದರವನ್ನು ಹೊಂದಿದೆ. ಇದರ ಎಸ್ಕೇಪ್ ವ್ಯವಸ್ಥೆ ಹಲವು ಬಾರಿ ಜೀವಗಳನ್ನುಳಿಸಿದೆ. ಅಮೆರಿಕದ ಸ್ಪೇಸ್ ಶಟಲ್ 135 ಯೋಜನೆಗಳಲ್ಲಿ ಹಾರಾಟ ನಡೆಸಿದ್ದು, ಎರಡು ಬಾರಿ ದುರಂತ ಕಂಡಿವೆ. ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ಇಲ್ಲಿಯ ತನಕ 20 ಮಾನವ ಸಹಿತ ಯೋಜನೆಗಳಲ್ಲಿ ಶೇ. 100 ಯಶಸ್ಸು ಸಾಧಿಸಿದೆ. ಇದರಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಪೈಲಟ್ ಆಗಿದ್ದ ಆಕ್ಸಿಯಮ್-4ನಂತಹ ಖಾಸಗಿ ಯೋಜನೆಗಳೂ ಸೇರಿವೆ. ಚೀನಾದ ಶೆನ್‌ಜೌ ಯೋಜನೆಯೂ ಪ್ರಬಲ ಸುರಕ್ಷತೆ ಪ್ರದರ್ಶಿಸಿದ್ದು, ಬಾಹ್ಯಾಕಾಶ ತ್ಯಾಜ್ಯದಂತಹ ಸವಾಲುಗಳನ್ನು ಎದುರಿಸಿದ ಬಳಿಕವೂ ಅದರ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿ ಮರಳಿದ್ದಾರೆ.
ಹೆಚ್ಚಿನ ರಾಕೆಟ್‌ಗಳು ಯಾಕೆ ಹ್ಯೂಮನ್ ರೇಟೆಡ್ ಅಲ್ಲ ಎನ್ನುವುದಕ್ಕೆ ಇರುವ ಕಾರಣ ಸರಳ. ಸುರಕ್ಷತೆಗೆ ಹೆಚ್ಚಿನ ಹಣ ಮತ್ತು ರಾಕೆಟ್ ಸಾಮರ್ಥ್ಯದ ವೆಚ್ಚ ತಗಲುತ್ತದೆ. ಹ್ಯೂಮನ್ ರೇಟಿಂಗ್ ಸಾಧಿಸುವುದರಿಂದ ರಾಕೆಟ್‌ಗಳು ಹೆಚ್ಚು ತೂಕ ಮತ್ತು ಸಂಕೀರ್ಣತೆ ಹೊಂದಿ, ಅಪಾರ ವೆಚ್ಚದಾಯಕವಾಗುತ್ತವೆ. ಹೆಚ್ಚುವರಿ ಸಿಸ್ಟಮ್‌ಗಳು ಪೇಲೋಡ್ ಸಾಮರ್ಥ್ಯ ಕಡಿಮೆಗೊಳಿಸಿ, ಉಡಾವಣಾ ವೆಚ್ಚಗಳನ್ನು ಹೆಚ್ಚಿಸುತ್ತವೆ. ಸರಕು ಸಾಗಣೆಯ ಯೋಜನೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಗರಿಷ್ಠ ಹೊರೆಯೇ ಆದ್ಯತೆಯಾಗಿರುತ್ತದೆ. ಆದರೆ, ಮಾನವ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸುವುದರಿಂದ ಉಡಾವಣೆ ಆರ್ಥಿಕವಾಗಿ ಲಾಭದಾಯಕವಾಗುವುದಿಲ್ಲ.
ಗಗನಯಾನ ಯೋಜನೆಗೆ ಭಾರತ ತನ್ನ ಅತ್ಯಂತ ನಂಬಿಕಾರ್ಹವಾದ ಎಲ್‌ವಿಎಂ-3 ರಾಕೆಟ್ ಅನ್ನು ಆರಿಸಿದೆ. ಇಸ್ರೋ ರಾಕೆಟ್‌ಗೆ ಹೆಚ್ಚುವರಿ ಬ್ಯಾಕಪ್ ವ್ಯವಸ್ಥೆಗಳು, ಇಂಜಿನ್ ನಂಬಿಕಾರ್ಹತೆ ಸುಧಾರಣೆ ಮತ್ತು ಕ್ಷಿಪ್ರ ಕ್ರ್ಯೂ ಎಸ್ಕೇಪ್ ಸಿಸ್ಟಮ್‌ಗಳನ್ನು ಅಳವಡಿಸಿ, ಅದನ್ನು ಇನ್ನಷ್ಟು ಬಲಪಡಿಸಿದೆ. ಒಂದು ಬಾರಿ ಪ್ರಮಾಣೀಕೃತವಾದ ಬಳಿಕ, ರಾಕೆಟ್ ಎಚ್‌ಎಲ್‌ವಿಎಂ-3 ಎಂದು ಮರುನಾಮಕರಣ ಹೊಂದಲಿದೆ. ಚಂದ್ರಯಾನ-3 ಸೇರಿದಂತೆ ಏಳು ಯಶಸ್ವಿ ಹಾರಾಟ ನಡೆಸಿರುವ, ವಿಕಾಸ್, ಸಿ25 ಕ್ರಯೋಜನಿಕ್ ಇಂಜಿನ್‌ನಂತಹ ಭಾರತೀಯ ಇಂಜಿನ್‌ಗಳು ಮತ್ತು ಎಸ್200 ಬೂಸ್ಟರ್‌ಗಳನ್ನು ಹೊಂದಿರುವ ರಾಕೆಟ್ ಆತ್ಮನಿರ್ಭರ ಭಾರತದತ್ತ ದೇಶದ ಹಾದಿಯನ್ನು ಸೂಚಿಸುತ್ತದೆ.
ಹ್ಯೂಮನ್ ರೇಟಿಂಗ್ ಸಾರ್ವಜನಿಕರಿಗೆ ಕಾಣುವಂತಹದ್ದಲ್ಲದಿರಬಹುದು. ಆದರೆ, ಇದು ನಮ್ಮ ಗಗನಯಾತ್ರಿಗಳನ್ನು ರಕ್ಷಿಸುವ ಅತ್ಯಂತ ಬಲಿಷ್ಠ ಗುರಾಣಿಯಂತಿದೆ. ಇದು ಮಹತ್ವಾಕಾಂಕ್ಷೆಯನ್ನು ಜವಾಬ್ದಾರಿಯಾಗಿ, ಕನಸುಗಳನ್ನು ಶಿಸ್ತಿನ ವಾಸ್ತವಗಳಾಗಿ ಪರಿವರ್ತಿಸುತ್ತಿದೆ.