ಕ್ರೀಡಾ ಪ್ರಾಧಿಕಾರಗಳಿಗೆ ಇಂಟರ್ನ್ ಗಳ ನೇಮಕ; ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆ ಹೇಗಿರುತ್ತದೆ?
Image: AI generated
ಯುವಜನ ಮತ್ತು ಕ್ರೀಡಾ ಸಚಿವಾಲಯ ಮತ್ತು ಅದರ ಸ್ವಾಯತ್ತ ಸಂಸ್ಥೆಗಳಿಗೆ ಸಮಗ್ರ ತರಬೇತಿ ನೀತಿ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಯೋಜನೆಯು ಕ್ರೀಡೆಯ ವಿವಿಧ ಕ್ಷೇತ್ರಗಳಿಂದ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಆಡಳಿತಾತ್ಮಕ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ
ಕ್ರೀಡಾ ಸಚಿವಾಲಯವು ವಾರ್ಷಿಕ 5.30 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದೆ. ತರಬೇತಿ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಎರಡು ಬಾರಿ ನೇಮಕಾತಿ ಆಗಲಿದೆ. ನೇಮಕಗೊಂಡವರು ಕ್ಷೇತ್ರದ ತಜ್ಞರಿಂದ ರಚನಾತ್ಮಕ ತರಬೇತಿ ಪಡೆಯುತ್ತಾರೆ.
ಯುವಜನ ಮತ್ತು ಕ್ರೀಡಾ ಸಚಿವಾಲಯ ಕೆಲವು ಪ್ರಮುಖ ಕ್ರೀಡಾ ಸಂಸ್ಥೆಗಳಿಗೆ ಸಮಗ್ರ ತರಬೇತಿ ನೀತಿಯನ್ನು ಜಾರಿಗೆ ತಂದಿದೆ. ಕ್ರೀಡಾ ಆಡಳಿತ, ಕ್ರೀಡಾ ವಿಜ್ಞಾನ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಯುವ ವೃತ್ತಿಪರರನ್ನು ನೇಮಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರತಿ ವರ್ಷ 452 ತರಬೇತಿ ಸ್ಥಾನಗಳನ್ನು ತುಂಬಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ ರೂ 20,000 ಸ್ಟೈಪಂಡ್ ಪಡೆಯಲಿದ್ದಾರೆ. ಈ ಯೋಜನೆಯ ಒಟ್ಟು ಬಜೆಟ್ 5.30 ಕೋಟಿ ರೂ!
“ಕ್ರೀಡೆಯ ಮೂಲಕ ರಾಷ್ಟ್ರನಿರ್ಮಾಣದ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ, ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಮುಖವಾಗಿ ಈ ಯೋಜನೆಯ ಲಾಭ ಪಡೆಯಲಿದ್ದಾರೆ. ರಾಷ್ಟ್ರೀಯ ಕ್ರೀಡಾ ನೀತಿ ಮತ್ತು ಖೇಲೋ ಭಾರತ್ ನೀತಿ 2025ರ ಅಡಿಯಲ್ಲಿ ಈ ಯೋಜನೆ ಜಾರಿಗೆ ಬರಲಿದೆ” ಎಂದು ಯುವಜನ ಮತ್ತು ಕ್ರೀಡಾ ಸಚಿವರಾದ ಡಾ ಮನ್ಸುಕ್ ಮಾಂಡವೀಯ ಹೇಳಿದ್ದಾರೆ.
►ಏನಿದು ಕ್ರೀಡಾ ಸಚಿವಾಲಯದ ತರಬೇತಿ ಕಾರ್ಯಕ್ರಮ?
ಯುವಜನ ಮತ್ತು ಕ್ರೀಡಾ ಸಚಿವಾಲಯ (MYAS) ಮತ್ತು ಅದರ ಸ್ವಾಯತ್ತ ಸಂಸ್ಥೆಗಳಿಗೆ ಸಮಗ್ರ ತರಬೇತಿ ನೀತಿ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಯೋಜನೆಯು ಕ್ರೀಡೆಯ ವಿವಿಧ ಕ್ಷೇತ್ರಗಳಿಂದ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ರಚನಾತ್ಮಕ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ.
ಸಚಿವಾಲಯ ಹೇಳಿರುವ ಪ್ರಕಾರ, ಕ್ರೀಡಾ ಆಡಳಿತ, ಕ್ರೀಡಾ ವಿಜ್ಞಾನ, ಆ್ಯಂಟಿ-ಡೋಪಿಂಗ್ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶವಿದೆ. ಪಂದ್ಯಾವಳಿ ಆಯೋಜಿಸುವುದು ಮತ್ತು ಅಥ್ಲೀಟ್ಗಳಿಗೆ ಬೆಂಬಲಿಸುವ ಸೇವೆಗಳನ್ನು ನಿರ್ವಹಿಸಲಿದ್ದಾರೆ. ತರಬೇತಿ ಪಡೆಯುವವರು ನೀತಿ ನಿರೂಪಣೆಯ ಕೆಲಸ ಮತ್ತು ಮೈದಾನದಲ್ಲಿ ಅದನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯು ಸಾಂಸ್ಥಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಒಳನೋಟವನ್ನು ಅವರು ಪಡೆದುಕೊಳ್ಳಲಿದ್ದಾರೆ ಮತ್ತು ಜಾರಿಗೆ ತರಲಿದ್ದಾರೆ.
►ತರಬೇತಿ ಪಡೆಯುವವರು ಎಲ್ಲಿ ನೇಮಕಗೊಳ್ಳಲಿದ್ದಾರೆ?
ತರಬೇತಿ ಪಡೆಯುವವರು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ಅದರ ಸ್ವಾಯತ್ತ ಮಂಡಳಿಗಳಲ್ಲಿ ಕೆಲಸ ಮಾಡಲಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ), ರಾಷ್ಟ್ರೀಯ ಆ್ಯಂಟಿ-ಡೋಪಿಂಗ್ ಏಜೆನ್ಸಿ (ಎನ್ಎಡಿಎ), ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿ (ಎನ್ಡಿಟಿಎಲ್) ಮೊದಲಾದೆಡೆ ತರಬೇತಿ ಪಡೆದವರು ಕೆಲಸ ಮಾಡಲಿದ್ದಾರೆ. ಕ್ರೀಡಾ ವ್ಯವಸ್ಥಾಪನೆ, ಕ್ರೀಡಾ ವಿಜ್ಞಾನ, ಪಂದ್ಯಾವಳಿ ಆಯೋಜನೆ, ಮಾಧ್ಯಮ ಮತ್ತು ಸಂವಹನ, ಕಾನೂನು ವ್ಯವಹಾರಗಳು, ಅಂತಾರಾಷ್ಟ್ರೀಯ ಕ್ರೀಡಾ ಆಡಳಿತ ಮತ್ತು ಆ್ಯಂಟಿ-ಡೋಪಿಂಗ್ ಮೊದಲಾದ 20 ಕಾರ್ಯಕಾರಿ ಕ್ಷೇತ್ರಗಳಲ್ಲಿ ತರಬೇತಿ ಪಡೆಯುವವರು ಕಾರ್ಯನಿರ್ವಹಿಸಲಿದ್ದಾರೆ.
ಸಚಿವಾಲಯ ಹೇಳಿರುವ ಪ್ರಕಾರ ತರಬೇತಿ ಪಡೆಯುವವರು ನೇರವಾಗಿ ಖೇಲೋ ಇಂಡಿಯಾ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (ಟಿಒಪಿಎಸ್), ಮತ್ತು ಟಾರ್ಗೆಟ್ ಏಷ್ಯನ್ ಗೇಮ್ಸ್ ಗ್ರೂಪ್ (ಟಿಎಜಿಜಿ)ಗಳಲ್ಲಿ ಕೆಲಸ ಮಾಡಲಿದ್ದಾರೆ. ಕ್ಷೇತ್ರವಾರು ಅನುಭವದಲ್ಲಿ ಎಸ್ಎಐ, ಪ್ರಾದೇಶಿಕ ಕೇಂದ್ರಗಳು ಹಾಗೂ ರಾಷ್ಟ್ರೀಯ ಸೆಂಟರ್ ಆಫ್ ಎಕ್ಸ್ಲೆನ್ಸ್ನಲ್ಲಿ ಕೆಲಸ ಮಾಡುವುದು ಸೇರಿದೆ.
ಕ್ರೀಡಾ ವಿಜ್ಞಾನ ಮತ್ತು ಸ್ವಚ್ಛ ಕ್ರೀಡೆಗೆ ವಿಶೇಷವಾಗಿ ಒತ್ತು ನೀಡಲಾಗಿದೆ. ನಾಡಾದಲ್ಲಿ ತರಬೇತಿ ಪಡೆಯುವವರು ಆ್ಯಂಟಿ-ಡೋಪಿಂಗ್ ಜಾಗೃತಿ ಮೂಡಿಸುವಲ್ಲಿ ಸಹಕರಿಸಲಿದ್ದಾರೆ. ಕಾನೂನು ಅನುಸರಣೆ, ಪ್ರಕರಣಗಳನ್ನು ನಿರ್ವಹಿಸುವುದು, ನೀತಿಗೆ ಬೆಂಬಲಿಸುವುದು ಮೊದಲಾದ ಜವಾಬ್ದಾರಿ ಹೊರಲಿದ್ದಾರೆ. ಎನ್ಡಿಟಿಎಲ್ನಲ್ಲಿ ತರಬೇತಿ ಪಡೆಯುವವರು ಅತ್ಯಾಧುನಿಕ ಪ್ರಯೋಗಾಲಯದ ಆಧಾರಿತ ಆ್ಯಂಟಿ-ಡೋಪಿಂಗ್ ಪ್ರಕ್ರಿಯೆಗಳ ಜ್ಞಾನ ಗಳಿಸಲಿದ್ದಾರೆ. ಮಾದರಿ ವಿಶ್ಲೇಷಣೆ ಮತ್ತು ಸಂಶೋಧನೆಯಲ್ಲಿ ಕೆಲಸ ಮಾಡಲಿದ್ದಾರೆ.
ಬಜೆಟ್ ಹಂಚಿಕೆ: 5.30 ಕೋಟಿ ರೂ. ಆಯವ್ಯಯ
ಅಧಿಕೃತ ಬಜೆಟ್ ಬ್ರೇಕಪ್ ಪ್ರಕಾರ ಸರ್ಕಾರವು ಈ ಯೋಜನೆಗೆ ವಾರ್ಷಿಕವಾಗಿ 5.30 ರೂ. ಕೋಟಿಯನ್ನು ಮೀಸಲಿಡಲಿದೆ. ಇದರಲ್ಲಿ ತರಬೇತಿ ಪಡೆಯುವ 452 ಸಿಬ್ಬಂದಿಗಳಿಗೆ (ಇಂಟರ್ನ್) ಸ್ಟೈಪಂಡ್ ಕೂಡ ನೀಡಲಾಗುವುದು.ಯುವಜನ ಮತ್ತು ಕ್ರೀಡಾ ಸಚಿವಾಲಯಕ್ಕೆ 48 ಲಕ್ಷ ರೂ. ವೆಚ್ಚದಲ್ಲಿ 40 ಮಂದಿಯನ್ನು ನೇಮಿಸಿಕೊಳ್ಳಲಾಗುವುದು. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ 1.80 ಕೋಟಿ ರೂ. ವೆಚ್ಚದಲ್ಲಿ 160 ಮಂದಿ ತರಬೇತಿ ಪಡೆಯುವವರನ್ನು ನೇಮಿಸಲಾಗುವುದು. ಇದರಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಚಟುವಟಿಕೆ ನಿಭಾಯಿಸುವುದು, ಮಾಧ್ಯಮ ನಿರ್ವಹಣೆಯಂತಹ ಹೊಣೆಗಾರಿಕೆಯೂ ಸೇರಿದೆ.
ಎಸ್ಎಐನ ಕ್ರೀಡಾ ವಿಜ್ಞಾನ ವಿಭಾಗದಲ್ಲಿ 2.54 ಕೋಟಿ ರೂ. ವೆಚ್ಚದಲ್ಲಿ 212 ಇಂಟರ್ನ್ಗಳನ್ನು ನೇಮಿಸಿಕೊಳ್ಳಲಾಗುವುದು. ಎಸ್ಎಐ ಕೇಂದ್ರ ಕಚೇರಿ, ರಾಷ್ಟ್ರೀಯ ಎಕ್ಸ್ಲೆನ್ಸ್ ಕೇಂದ್ರಗಳು, ಪ್ರಾದೇಶಿಕ ಕೇಂದ್ರಗಳು ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳು, ಎನ್ಐಎಸ್ಎಸ್ ಪಟಿಯಾಲ ಮತ್ತು ಎಸ್ಎಐ ಎನ್ಎಸ್ಎಸ್ಸಿ ಬೆಂಗಳೂರು ಮೊದಲಾದೆಡೆ ನೇಮಿಸಿಕೊಳ್ಳಲಾಗುವುದು.
ರಾಷ್ಟ್ರೀಯ ಆ್ಯಂಟಿ-ಡೋಪಿಂಗ್ ಏಜೆನ್ಸಿ (ನಾಡಾ)ಯಲ್ಲಿ 24 ಲಕ್ಷ ರೂ.ನಲ್ಲಿ 20 ಇಂಟರ್ನ್ಗಳನ್ನು ನೇಮಿಸಿಕೊಳ್ಳಲಾಗುವುದು. ಪ್ರತಿ ವರ್ಷ ಆರು ತಿಂಗಳ ಅವಧಿಯ ಎರಡು ತಂಡಗಳನ್ನು ನೇಮಿಸಿಕೊಳ್ಳಲಾಗುವುದು.
ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿಗೆ (ಎನ್ಡಿಟಿಎಲ್) 20 ಲಕ್ಷ ರೂ.ಗೆ 20 ಇಂಟರ್ನ್ಗಳನ್ನು ನೇಮಿಸಿಕೊಳ್ಳಲಾಗುವುದು. ಪ್ರತಿ ವರ್ಷ ಆರು ತಿಂಗಳ ಅವಧಿಯ ಎರಡು ತಂಡಗಳನ್ನು ನೇಮಿಸಿಕೊಳ್ಳಲಾಗುವುದು.
►ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆ ಹೇಗೆ?
ಪ್ರತಿ ವರ್ಷ ಜನವರಿ ಮತ್ತು ಜೂನ್ನಲ್ಲಿ ಎರಡು ಬಾರಿ ನೇಮಕಾತಿ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಇಂಟರ್ನ್ಗಳು ರಚನಾತ್ಮಕ ಆನ್ಬೋರ್ಡಿಂಗ್ ತರಬೇತಿ, ಕ್ಷೇತ್ರದ ತಜ್ಞರಿಂದ ತರಬೇತಿ ಪಡೆಯಲಿದ್ದಾರೆ. ನೀತಿ ನಿರೂಪಣೆ ಮತ್ತು ಅನುಷ್ಟಾನಕ್ಕೆ ಸಂಬಂಧಿಸಿ ತರಬೇತಿ ಪಡೆಯಲಿದ್ದಾರೆ. ಸಕ್ರಿಯವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.