×
Ad

ಒಂದು ಶಾಪದ ಕಥೆ!

Update: 2025-12-27 09:17 IST

ಚಿತ್ರ: ವೃಷಭ

ನಿರ್ದೇಶನ: ನಂದ ಕಿಶೋರ್

ನಿರ್ಮಾಣ: ಕನೆಕ್ಟ್ ಮೀಡಿಯಾ, ಬಾಲಾಜಿ ಮೋಶನ್ ಪಿಕ್ಚರ್ಸ್ ಮತ್ತು ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೊ

ತಾರಾಗಣ: ಮೋಹನ್ ಲಾಲ್, ಸಮರ್ ಜಿತ್ ಲಂಕೇಶ್, ರಾಗಿಣಿ ಮುಂತಾದವರು.

ಶತಮಾನಗಳ ಹಿಂದಿನ ಕಥೆಯೊಂದಿಗೆ ಚಿತ್ರ ಆರಂಭವಾಗುತ್ತದೆ.

ಅದೊಂದು ಶಿವಭಕ್ತ ರಾಜ ವಂಶ. ಆ ವಂಶದ ಹೆಸರೇ ವೃಷಭ. ದೇವನಗರಿ ಎನ್ನುವ ಅವರ ಊರಿನಲ್ಲಿರುವ ಸ್ಫಟಿಕ ಲಿಂಗ ತುಂಬ ಅಪರೂಪದ ಶಕ್ತಿಯನ್ನು ಹೊಂದಿದೆ. ಅದರ ರಕ್ಷಣೆಯಲ್ಲಿ ನಿರತನಾದವನು ವೃಷಭ ವಂಶದ ರಾಜ ವಿಜಯೇಂದ್ರ. ಆದರೆ ಒಮ್ಮೆ ಸ್ಫಟಿಕ ಲಿಂಗ ದೋಚಲು ಬಂದವರತ್ತ ಬಿಟ್ಟ ಬಾಣ ಮುನಿಪತ್ನಿಯ ಮಗುವನ್ನು ಬಲಿ ಪಡೆಯುತ್ತದೆ. ಪುಟ್ಟ ಕಂದನ ಸಾವಿನಿಂದ ನೊಂದು, ಬೆಂದ ಆ ತಾಯಿ ವಿಜಯೇಂದ್ರ ರಾಜನಿಗೆ ಶಾಪ ನೀಡುತ್ತಾಳೆ. ಅದರ ಪ್ರಕಾರ ರಾಜನಿಗೆ ಆತನಿಗೆ ಹುಟ್ಟುವ ಪುತ್ರನ ಕೈಗಳಿಂದಲೇ ಸಾವು ಸಂಭವಿಸಬೇಕಿರುತ್ತದೆ. ರಾಜನಿಗೆ ಹುಟ್ಟಿದ ಗಂಡು ಮಗು ಏನಾಗುತ್ತದೆ? ರಾಜ ಮತ್ತೆ ಆಧುನಿಕ ಜಗತ್ತಿಗೆ ಮರುಜನ್ಮ ಎತ್ತಿ ಬರುವುದೇಕೆ? ಮೊದಲಾದ ಪ್ರಶ್ನೆಗಳಿಗೆ ಸಿನೆಮಾ ನೋಡಿ ಉತ್ತರ ಪಡೆಯಬಹುದಾಗಿದೆ.

ರಾಜ ವಿಜಯೇಂದ್ರನಾಗಿ ಮಲಯಾಳಂನ ದಿಗ್ಗಜ ನಟ ಮೋಹನ್ ಲಾಲ್ ಅಭಿನಯಿಸಿದ್ದಾರೆ. ವಿಜಯೇಂದ್ರನಿಗೆ ಎರಡು ಜನ್ಮಗಳು. ಆ ಎರಡೂ ಸಂದರ್ಭಗಳಲ್ಲಿ ತಂದೆಗೆ ತಕ್ಕ ಮಗನಾಗಿ ಕನ್ನಡದ ಯುವ ನಟ ಸಮರ್ ಜಿತ್ ಲಂಕೇಶ್ ನಟಿಸಿದ್ದಾರೆ. ಮೋಹನ್ ಲಾಲ್‌ರಂಥ ಅಭಿನಯ ಪ್ರತಿಭೆಯ ಮುಂದೆ ಪ್ರತಿಭೆ ಇದ್ದರಷ್ಟೇ ಮತ್ತೋರ್ವ ಕಲಾವಿದ ಕಾಣಿಸಿಕೊಳ್ಳಲು ಸಾಧ್ಯ. ಆದರೆ ಇವರಿಬ್ಬರು ಜತೆಯಾಗಿರುವ ದೃಶ್ಯಗಳಲ್ಲಿ ಉತ್ತಮ ಕೆಮಿಸ್ಟ್ರಿ ಕಾಣಿಸಿದೆ. ನಿಜ ಹೇಳಬೇಕೆಂದರೆ ಮೋಹನ್ ಲಾಲ್‌ಗಿಂತಲೂ ತುಸು ಹೆಚ್ಚೇ ನಟನಾ ಪ್ರಾಧಾನ್ಯತೆ ಇದೆ. ತಂದೆಯ ಮೇಲಿನ ಪ್ರೀತಿ, ದ್ವೇಷ, ಸ್ನೇಹಿತೆಯೊಂದಿಗಿನ ಅಕ್ಕರೆ ಎಲ್ಲವನ್ನೂ ಹದವಾಗಿ ತೋರಿಸಿದ್ದಾರೆ. ನೃತ್ಯ ಮತ್ತು ಸಾಹಸ ದೃಶ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಕಥೆಯ ವಿಚಾರಕ್ಕೆ ಬಂದರೆ ಇದೊಂದು ಚಂದಮಾಮ ಕಥೆಯ ಹಾಗಿದೆ. ಆದರೆ ಇಂಥ ಕಥೆಯನ್ನೇ ರಾಜಮೌಳಿ ಇಂಡಸ್ಟ್ರಿ ಹಿಟ್ ‘ಬಾಹುಬಲಿ’ಯನ್ನಾಗಿಸಿದ್ದರು. ನಿರ್ದೇಶಕ ನಂದ ಕಿಶೋರ್ ಕೂಡ ಅಂಥದ್ದೇ ಪ್ರಯತ್ನ ಮಾಡಿದ್ದಾರೆ. ಆದರೆ ಮಧ್ಯಂತರದ ಸಮಯದಲ್ಲೊಂದು ತಿರುವು ಬಿಟ್ಟರೆ ಇಡೀ ಚಿತ್ರದಲ್ಲಿ ಊಹೆಗೆ ಮೀರಿದ ಏನೂ ನಡೆಯುವುದಿಲ್ಲ. ರಾಮಾಯಣದಲ್ಲಿ ದಶರಥ ಪಡೆದ ಶಾಪದ ಕಥೆಗಿಂತ ಇದೇನೂ ವಿಭಿನ್ನವಲ್ಲ. ಹೀಗಾಗಿಯೇ ಕಥೆಯಲ್ಲಿ ಹೊಸತನ ಕಾಣುವುದಿಲ್ಲ. ಇನ್ನು ಮೇಕಿಂಗ್ ವಿಚಾರಕ್ಕೆ ಬಂದರೆ ಎಐ ಬಳಕೆ ಮಾಡಿರುವುದು, ವಿಎಫ್‌ಎಕ್ಸ್‌ನಲ್ಲಿನ ಕುಂದು ಚಿತ್ರದ ಗುಣಮಟ್ಟಕ್ಕೆ ಕುಂದು ಉಂಟುಮಾಡಿದೆ.

ವೃಷಭ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಚಿತ್ರ. ಹೀಗಾಗಿಯೇ ತೆಲುಗು ಅದ್ದೂರಿತನ ಮತ್ತು ಮಲಯಾಳಂನ ಕಥಾ ಸಾಮರ್ಥ್ಯ ಎರಡರ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಈ ಎರಡು ನಿರೀಕ್ಷೆಗಳೇ ಪ್ರೇಕ್ಷಕರಿಗೆ ನಿರಾಶೆ ನೀಡಲು ಮೊದಲ ಕಾರಣವಾಗಿದೆ.

ಚಿತ್ರದಲ್ಲಿ ಮೋಹನ್ ಲಾಲ್ ನಂಥ ಅದ್ಭುತ ಕಲಾವಿದ ಪ್ರಧಾನ ಪಾತ್ರದಲ್ಲಿರುವ ಕಾರಣ ಪಾತ್ರದ ಕುರಿತಾದ ನಿರೀಕ್ಷೆಗಳು ಹೆಚ್ಚುವುದು ಸಹಜ. ಆದರೆ ಯುದ್ಧಕ್ಕೆಂದು ಎಂಟ್ರಿಯಾಗುವ ಮೊದಲ ದೃಶ್ಯವೇ ಪರಿಣಾಮಕಾರಿಯಾಗಿಲ್ಲ. ಕುದುರೆ ಸವಾರಿಯ ದೃಶ್ಯಗಳು ತೀರ ಡಮ್ಮಿಯಾಗಿ ಕಾಣಿಸಿವೆ.

ಇಷ್ಟೆಲ್ಲ ಕೊರತೆಗಳ ನಡುವೆಯೂ ಹೆಚ್ಚು ಕನ್ನಡದ ಕಲಾವಿದರನ್ನು ಬಳಸುವ ಮೂಲಕ ನಂದಕಿಶೋರ್ ಉತ್ತಮ ಪ್ರಯತ್ನ ನಡೆಸಿದ್ದಾರೆ. ಮೋಹನ್ ಲಾಲ್ ಜೋಡಿಯಾಗಿ ರಾಗಿಣಿ ದ್ವಿವೇದಿ ಅಭಿನಯಿಸಿದ್ದಾರೆ. ಖಳನಾಗಿ ಗರುಡ ರಾಮ್, ಮನಶಾಸ್ತ್ರಜ್ಞನಾಗಿ ಕಿಶೋರ್, ಮುನಿಪತ್ನಿಯಾಗಿ ಪಾವನಾ ಗೌಡ.. ಹೀಗೆ ಕನ್ನಡದ ಕಲಾವಿದರಿದ್ದಾರೆ. ಸಮರಜಿತ್‌ಗೆ ಜೋಡಿಯಾಗಿ ಮರಾಠಿ ನಟಿ ನಯನ್ ಸಾರಿಕಾ ಇದ್ದಾರೆ. ಟಾಲಿವುಡ್ ನಟ ಅಲಿ ಕೂಡ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಇದ್ದು ಏನೋ ಕೊರತೆ ಎನ್ನುವ ಶಾಪ ಚಿತ್ರಕ್ಕೆ ಕಾಡಿರುವುದು ಸುಳ್ಳಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ಶಶಿಕರ ಪಾತೂರು

contributor

Similar News