×
Ad

ಸಿದ್ದಿ, ಮುಸ್ಲಿಮರು ಮತ್ತು ಅರಬಿ ಸಮುದ್ರ

Update: 2025-12-27 08:56 IST

ಅರಬಿ ಸಮುದ್ರದ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಆಗ್ರಹಿಸಿದ್ದಾರೆ. ಸಿದ್ದಿ ಸಮುದಾಯದಂತಹ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯವೊಂದರ ಅಭಿವೃದ್ಧಿಗೆ ಇನ್ನೂ ಐವತ್ತು ವರ್ಷಗಳ ರಾಜಕೀಯ ಅವಕಾಶ ಸಿಕ್ಕಿದರೂ ಸಾಲದು ಎಂಬ ಪರಿಸ್ಥಿತಿ ಇದೆ. ಹಾಗಾಗಿ ಸಿಕ್ಕಿದ ರಾಜಕೀಯ ಅವಕಾಶವನ್ನು ಬಳಸಿಕೊಂಡು ಸಮುದಾಯ ಅಭಿವೃದ್ಧಿ ಮಾಡುವ ಬದಲು ಕೆಲಸಕ್ಕೆ ಬಾರದ ‘ಕೋಮು ಅಜೆಂಡಾ’ ಜಾರಿಗಾಗಿ ಸಮುದ್ರದ ಹೆಸರು ಬದಲಾವಣೆಯ ಪ್ರಸ್ತಾಪವನ್ನು ಶಾಂತರಾಮ ಸಿದ್ದಿ ಮಾಡಿದ್ದಾರೆ.

ಇಷ್ಟಕ್ಕೂ ಸಮುದ್ರಗಳ ಹೆಸರನ್ನು ಬದಲಾವಣೆ ಮಾಡುವ ಅಧಿಕಾರ ಯಾವುದೇ ದೇಶಗಳಿಗೆ ಇಲ್ಲ ಎಂಬುದನ್ನು ಚಿಂತಕರ ಚಾವಡಿ ಎಂದು ಜನರು ಅಂದುಕೊಂಡಿರುವ ವಿಧಾನಪರಿಷತ್ ಸದಸ್ಯರೊಬ್ಬರಿಗೆ ಕನಿಷ್ಠ ಜ್ಞಾನ ಇರಬೇಕು. ಉದಾಹರಣೆಗೆ ಸರಳವಾಗಿ ಹೇಳುವುದಾದರೆ; ಒಂದು ವೇಳೆ ಶಾಂತರಾಮ ಸಿದ್ದಿಯವರ ಬೇಡಿಕೆಗೆ ಒಪ್ಪಿ ಪ್ರಧಾನಿ ನರೇಂದ್ರ ಮೋದಿಯವರು ಅರಬಿ ಸಮುದ್ರದ ಹೆಸರನ್ನು ಶಾಂತರಾಮ ಸಿದ್ದಿ ಸಾಗರ ಎಂದು ಬದಲಿಸಿದರೂ ದಾಖಲೆಗಳಲ್ಲಿ ಅದನ್ನು ಬದಲಿಸಲು ಸಾಧ್ಯವಿಲ್ಲ. ಅಂತರ್‌ರಾಷ್ಟ್ರೀಯ ದಾಖಲೆಗಳಲ್ಲಿ ಮತ್ತು ನಕಾಶೆಗಳಲ್ಲಿ ಅರಬಿ ಸಮುದ್ರ ಎಂಬ ಹೆಸರು ಬದಲಿಸಲು ಸಾಧ್ಯವಿಲ್ಲ. ಅರಬ್ ರಾಷ್ಟ್ರಗಳು ಅಂತರ್‌ರಾಷ್ಟ್ರೀಯ ವ್ಯವಹಾರಕ್ಕೆ ಕರ್ನಾಟಕದ ಕರಾವಳಿ ಸಮುದ್ರವನ್ನು ಬಳಸಿದ್ದರಿಂದ ಅರಬಿ ಸಮುದ್ರ ಎಂಬ ಹೆಸರು ಬಂತೇ ವಿನಹ ಅದು ಧರ್ಮಸೂಚಕವಲ್ಲ.

ಈಗ ಸಿದ್ದಿಗಳಿಗೂ ಅರಬಿ ಸಮುದ್ರಕ್ಕೂ, ಮುಸ್ಲಿಮರಿಗೂ ಇರುವ ಸಂಬಂಧವನ್ನು ನೋಡೋಣ. ಸಿದ್ದಿಗಳು ಕರ್ನಾಟಕದ ಮೂಲನಿವಾಸಿ ಬುಡಕಟ್ಟುಗಳಲ್ಲ. ಪೋರ್ಚುಗೀಸರು ಮತ್ತು ಅರಬರು ಆಫ್ರಿಕಾದ ಸಿದ್ದಿಗಳನ್ನು ಕರ್ನಾಟಕ, ಗೋವಾ ಸೇರಿದಂತೆ ಹಲವೆಡೆ ಕರೆ ತಂದರು ಎಂದು ಇತಿಹಾಸ ಹೇಳುತ್ತದೆ.

ಈ ಸಮುದಾಯಕ್ಕೆ ಸಿದ್ದಿ ಎಂಬ ಹೆಸರು ಹೇಗೆ ಬಂತು ಎಂದರೆ, ಅರಬ್ ಮೂಲದ ಸಿದ್ಧೀಕಿ, ಸಯ್ಯಿದಿ ಮೂಲದಿಂದ ಸಿದ್ದಿ ಎಂಬ ಹೆಸರು ಬಂತು. ಅರಬಿ ಸಮುದ್ರದ ಹೆಸರಿನಲ್ಲಿ ‘ಅರಬ್’ ಪದ ಇರುವುದಕ್ಕಾಗಿ ಹೆಸರು ಬದಲು ಮಾಡಬೇಕು ಎಂದು ಹೇಳುವ ಬಿಜೆಪಿ ಪರಿಷತ್ ಸದಸ್ಯ ಶಾಂತರಾಮ ಸಿದ್ದಿಯವರು ತಮ್ಮ ಹೆಸರಿನಲ್ಲಿರುವ ಅರಬ್ ಮೂಲದ ಸಿದ್ದಿ ಹೆಸರನ್ನು ಬದಲಿಸಲು ಸಾಧ್ಯವಾಗುತ್ತದೆಯೇ?

ಸಿದ್ದಿಗಳು ಜನಾಂಗೀಯ ಇತಿಹಾಸದ ಪ್ರಕಾರ ಹಿಂದೂ ಧರ್ಮಕ್ಕೆ ಸೇರಿದವರಲ್ಲ. ಸಿದ್ದಿಗಳ ಮಾನವ ಅಭಿವೃದ್ಧಿಯ ಕಾರಣಕ್ಕಾಗಿ ಭಾರತ ಸರಕಾರವು ಅವರನ್ನು ಬುಡಕಟ್ಟುಗಳು ಎಂದು ಗುರುತಿಸಿದೆ. ವಾಸ್ತವವಾಗಿ ಸಿದ್ದಿಗಳು ಇಂತಹದ್ದೇ ಧರ್ಮಕ್ಕೆ ಸೇರಿದವರು ಎಂಬ ಸ್ಪಷ್ಟತೆಗೆ ಬರಲು ಸಾಧ್ಯವಿಲ್ಲ. ಸಿದ್ದಿಗಳಲ್ಲಿ ಕ್ರಿಶ್ಚಿಯನ್, ಹಿಂದೂ, ಮುಸ್ಲಿಮ್ ಧರ್ಮಕ್ಕೆ ಸೇರಿದವರೂ ಇದ್ದಾರೆ. ಧರ್ಮವೇ ಇಲ್ಲದ ಆಫ್ರಿಕಾ ಬುಡಕಟ್ಟುಗಳನ್ನು ಯಾರು ಯಾವಾಗ ಭಾರತಕ್ಕೆ ಕರೆತಂದರು? ಅವರನ್ನು ಹೇಗೆ ನಡೆಸಿಕೊಂಡರು ಎಂಬ ಆಧಾರದ ಮೇಲೆ ಅವರು ಆಯಾ ಧರ್ಮವನ್ನು ಅನುಸರಿಸಿರುವ ಸಾಧ್ಯತೆ ಇದೆ.

ಸಿದ್ದಿ ಜನಾಂಗ ಎನ್ನುವುದು ಅತ್ಯದ್ಭುತವಾದ ಸಮುದಾಯ. ಅದಾಗಲೇ ಹೇಳಿದಂತೆ ಸಿದ್ದಿಗಳಲ್ಲಿ ಹಿಂದೂ-ಕ್ರಿಶ್ಚಿಯನ್-ಮುಸ್ಲಿಮ್ ಧರ್ಮೀಯರಿದ್ದಾರೆ. ಆದರೆ ಸಹಬಾಳ್ವೆಗೆ ಈ ಧರ್ಮಗಳ ಆಯ್ಕೆಗಳು ಯಾವತ್ತೂ ಅಡ್ಡಿಯಾಗಿದ್ದಿಲ್ಲ. ಸಿದ್ದಿ ಸಮುದಾಯದೊಳಗಿನ ವಿವಾಹ ಸಂಬಂಧಗಳಿಗೆ ಹಿಂದೂ ಸಿದ್ದಿ, ಕ್ರಿಶ್ಚಿಯನ್ ಸಿದ್ದಿ, ಮುಸ್ಲಿಮ್ ಸಿದ್ದಿ ಎಂಬ ತಾರತಮ್ಯದ ಸಂಘರ್ಷ ಎದುರಾಗುವುದಿಲ್ಲ. ಇಂತಹ ಸಾಮರಸ್ಯ, ವೈವಿಧ್ಯತೆಯ ಸಮುದಾಯಗಳನ್ನೇ ಆರೆಸ್ಸೆಸ್ ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡುತ್ತದೆ. ವನವಾಸಿ ಕಲ್ಯಾಣದ ಮೂಲಕ ಆದಿವಾಸಿ-ಬುಡಕಟ್ಟು ಸಮುದಾಯವನ್ನು ‘ಹಿಂದುತ್ವ’ವಾದಿಗಳನ್ನಾಗಿಸುತ್ತದೆ. ಆರೆಸ್ಸೆಸ್‌ನ ವನವಾಸಿ ಕಲ್ಯಾಣದ ಗುರಿ ಬುಡಕಟ್ಟುಗಳನ್ನು ಕೋಮುವಾದದ ಕಾಲಾಳುಗಳನ್ನಾಗಿಸುವುದೇ ವಿನಹ ಅವರ ಅಭಿವೃದ್ಧಿಯಲ್ಲ. ಹಾಗಾಗಿ ಶಾಂತರಾಮ ಸಿದ್ದಿಯವರಂತಹ ಸಿದ್ದಿಗಳನ್ನು ಆರೆಸ್ಸೆಸ್/ಬಿಜೆಪಿ ಪರಿಷತ್ ಶಾಸಕತ್ವಕ್ಕೆ ಆಯ್ಕೆ ಮಾಡಿದರೂ, ಅವರಿಂದ ಮತೀಯ ಸಂಬಂಧಿ ಕೆಲಸಗಳನ್ನೇ ಮಾಡಿಸುತ್ತದೆ.

ಶಾಂತರಾಮ ಸಿದ್ದಿಯವರು ಅರಬಿ ಸಮುದ್ರದ ಅಲೆಗಳನ್ನೊಮ್ಮೆ ಮೌನವಾಗಿ ಆಲಿಸಬೇಕು. ಆ ಅಲೆಗಳು ಸಿದ್ದಿಗಳ ದುರಂತ ಕತೆಗಳನ್ನೂ, ಬದುಕು ಕಟ್ಟಿಕೊಂಡ ಸಾಹಸದ ಕತೆಗಳನ್ನೂ ಹೇಳುತ್ತವೆ. ಅದೇ ಅಲೆಗಳ ನಡುವಿನಿಂದ ಶಾಂತರಾಮ ಸಿದ್ದಿಯವರ ಪೂರ್ವಜರನ್ನು ಹೊತ್ತುಕೊಂಡ ಹಡಗುಗಳು ಕರ್ನಾಟಕದ ಕರಾವಳಿ ತೀರಕ್ಕೆ ಬಂದಿದ್ದವು. ಪೋರ್ಚುಗೀಸರು ಸಿದ್ದಿಗಳನ್ನು ಹಡಗಿನಲ್ಲಿ ಕರೆತರುವಾಗ ತೀರಾ ಅಮಾನವೀಯವಾಗಿ ನಡೆಸಿಕೊಂಡಿದ್ದರಂತೆ. ಅರಬರು ಸಿದ್ದಿಗಳನ್ನು ಭಾರತಕ್ಕೆ ಕರೆತರುವಾಗ ಮಾನವೀಯವಾಗಿ ನಡೆಸಿಕೊಂಡಿದ್ದರಂತೆ. ಹಾಗಾಗಿಯೇ ಭಾರತದ ಅನೇಕ ಧರ್ಮವೇ ಇಲ್ಲದ ಸಿದ್ದಿಗಳು ಇಸ್ಲಾಮ್ ಧರ್ಮ ಅನುಸರಿಸಿದ್ದು ಮಾತ್ರವಲ್ಲದೆ, ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಂಡರಂತೆ. ಈ ರೀತಿ ‘ಸಿದ್ದಿಗಳ ಭಾರತ ಚರಿತ್ರೆ’ ಆರಂಭವಾಗುವುದೇ ಅರಬರು ಮತ್ತು ಅರಬಿ ಸಮುದ್ರದ ಮೂಲಕ!

ಶಾಂತರಾಮ ಸಿದ್ದಿಯವರು ಹೇಳಿದ ತಕ್ಷಣ ಅರಬ್ಬಿ ಸಮುದ್ರದ ಹೆಸರು ಬದಲಾಗುವುದಿಲ್ಲ. ಬದಲಾದರೂ ಅದು ಕರಾವಳಿ, ಕರ್ನಾಟಕ, ದೇಶದ ಮೇಲೋ, ಮುಸ್ಲಿಮರ ಮೇಲೋ ಯಾವ ಪರಿಣಾಮವೂ ಬೀರುವುದಿಲ್ಲ. ಆದರೆ ಶಾಂತರಾಮ ಸಿದ್ದಿಯವರ ಮನಸ್ಥಿತಿ ಯಾವ ತೆರನಾದುದು? ಹಾಗಾಗಿ ಅರಬರನ್ನೂ, ಅರಬಿ ಸಮುದ್ರವನ್ನು ಆರೆಸ್ಸೆಸ್‌ನ ಮುಸ್ಲಿಮ್ ದ್ವೇಷದ ಅಜೆಂಡಾದ ಕಾರಣಕ್ಕಾಗಿ ಶಾಂತರಾಮ ಸಿದ್ದಿಯವರು ವಿರೋಧಿಸುವುದು ಸಿದ್ದಿ ಸಮುದಾಯದ ಇತಿಹಾಸಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಸಿದ್ದಿ ಸಮುದಾಯ ಅರಿತುಕೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನವೀನ್ ಸೂರಿಂಜೆ

contributor

Similar News