ಪ್ರಾದೇಶಿಕ ವಿಮಾನಯಾನ ಸೇವೆ ನೀಡಲಿರುವ ಕೇರಳದ 'ಅಲ್ ಹಿಂದ್ ಏರ್'ನ ಪ್ರವರ್ತಕ ಮುಹಮ್ಮದ್ ಹ್ಯಾರಿಸ್ ಟಿ ಯಾರು?
ಮುಹಮ್ಮದ್ ಹ್ಯಾರಿಸ್ | Photo Credit : alhindair.com
ಅಲ್ ಹಿಂದ್ ಏರ್ ಪ್ರಾದೇಶಿಕ ದೇಶೀಯ ವಿಮಾನಯಾನ ಸಂಸ್ಥೆಯಾಗಿ ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ವರ್ಷದ ಅಂತ್ಯದೊಳಗೆ ಹಾರಾಟ ಆರಂಭಿಸುವ ಉದ್ದೇಶ ಹೊಂದಿರುವ ಸಂಸ್ಥೆ, ಆರಂಭಿಕ ಹಂತದಲ್ಲಿ ATR 72-600 ಮಾದರಿಯ ವಿಮಾನಗಳನ್ನು ಬಳಸಿ ದೇಶೀಯ ಮಾರ್ಗಗಳಲ್ಲಿ ಸೇವೆ ನೀಡಲು ಸಜ್ಜಾಗಿದೆ.
ತಿರುವನಂತಪುರಂ: ಮೂರು ದಶಕಗಳ ಹಿಂದೆ ಕೇರಳದ ಕೋಝಿಕ್ಕೋಡ್ ನಲ್ಲಿ ಪ್ರವಾಸೋದ್ಯಮ ಸೇವೆಗಳೊಂದಿಗೆ ಆರಂಭವಾದ ಸಂಸ್ಥೆ ಅಲ್‌ಹಿಂದ್ ಇದೀಗ ಭಾರತದ ಆಕಾಶದಲ್ಲಿ ಹಾರಾಟ ನಡೆಸಲು ಸಜ್ಜಾಗಿದೆ. ಅಲ್‌ಹಿಂದ್ ಏರ್ ಎಂಬ ಹೊಸ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಲಭಿಸಿದ್ದು, ಶೀಘ್ರದಲ್ಲೇ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ಇದೇ ವೇಳೆ ಫ್ಲೈಎಕ್ಸ್‌ಪ್ರೆಸ್ ಎಂಬ ಮತ್ತೊಂದು ಸಂಸ್ಥೆಗೂ NOC ದೊರೆತಿದೆ.
ಕೇರಳ ಮೂಲದ ಅಲ್ ಹಿಂದ್ ಗ್ರೂಪ್ ಆಫ್ ಕಂಪೆನೀಸ್ ಅಲ್ ಹಿಂದ್ ಏರ್ ನ ಪ್ರವರ್ತಕ ಸಂಸ್ಥೆ. ಟೂರ್, ಹಜ್ ಮತ್ತು ಉಮ್ರಾ ಸೇವೆ ನೀಡುತ್ತಿರುವ ಈ ಸಂಸ್ಥೆಗೆ ವಿಮಾನಯಾನ ಕ್ಷೇತ್ರದ ಪ್ರವೇಶವು ಹೊಸ ಅಧ್ಯಾಯವಾಗಲಿದೆ.
ಯಾರು ಮುಹಮ್ಮದ್ ಹ್ಯಾರಿಸ್ ಟಿ?
ಅಲ್‌ಹಿಂದ್ ಗ್ರೂಪ್ ನ ಪ್ರವರ್ತಕ ಮುಹಮ್ಮದ್ ಹ್ಯಾರಿಸ್ ಟಿ, ಟ್ರಾವೆಲ್ಸ್ ಮತ್ತು ಪ್ರವಾಸೋದ್ಯಮ ವಲಯದಲ್ಲಿ ದೀರ್ಘ ಅನುಭವ ಹೊಂದಿರುವ ಉದ್ಯಮಿ. ಕೋಝಿಕ್ಕೋಡ್ ನಲ್ಲಿ ಜನಿಸಿದ ಅವರು ಇತಿಹಾಸ ಮತ್ತು ಅರ್ಥಶಾಸ್ತ್ರ BA ಪದವಿ ಪಡೆದಿದ್ದಾರೆ. ಅವರು ಫಾರ್ಮಕಾಲಜಿ ಪದವೀಧರರೂ ಹೌದು. ಪ್ರವಾಸೋದ್ಯಮದ ಜೊತೆಗೆ ಹಜ್ ಉಮ್ರಾ ಪ್ರವಾಸಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು ಭಾರತೀಯ ಹಜ್ ಉಮ್ರಾ ಅಸೋಸಿಯೇಷನ್‌ನ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಜಾಗತಿಕ ಹೆಜ್ಜೆಗುರುತು
ಅಲ್ ಹಿಂದ್ ಗ್ರೂಪ್ ಟೂರ್ ಸಂಬಂಧಿತ ಸೇವೆಗಳ ಸಂಪೂರ್ಣ ಪ್ಯಾಕೇಜ್ ಒದಗಿಸುವ ಸಂಸ್ಥೆಯಾಗಿ ಬೆಳೆದಿದೆ. ಯುಎಇ, ಸೌದಿ ಅರೇಬಿಯಾ, ಖತಾರ್, ಒಮಾನ್, ಬಾಂಗ್ಲಾದೇಶ ಮತ್ತು ಕುವೈತ್ ಸೇರಿದಂತೆ ಹಲವು ದೇಶಗಳಲ್ಲಿ ಕಚೇರಿಗಳು ಹಾಗೂ ಪಾಲುದಾರಿಕೆಗಳನ್ನು ಹೊಂದಿರುವ ಈ ಕಂಪೆನಿ ಅಂತರರಾಷ್ಟ್ರೀಯ ಗ್ರಾಹಕರಲ್ಲಿ ವಿಶ್ವಾಸಾರ್ಹ ಸೇವೆಗಾಗಿ ಹೆಗ್ಗುರುತು ಮೂಡಿಸಿದೆ.
ಅಲ್‌ಹಿಂದ್ ಏರ್ ಪ್ರಾದೇಶಿಕ ದೇಶೀಯ ವಿಮಾನಯಾನ ಸಂಸ್ಥೆಯಾಗಿ ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ವರ್ಷದ ಅಂತ್ಯದೊಳಗೆ ಹಾರಾಟ ಆರಂಭಿಸುವ ಉದ್ದೇಶ ಹೊಂದಿರುವ ಈ ಸಂಸ್ಥೆ, ಆರಂಭಿಕ ಹಂತದಲ್ಲಿ ATR 72-600 ಮಾದರಿಯ ವಿಮಾನಗಳನ್ನು ಬಳಸಿ ದೇಶೀಯ ಮಾರ್ಗಗಳಲ್ಲಿ ಸೇವೆ ನೀಡಲು ಸಜ್ಜಾಗಿದೆ. ದಕ್ಷ, ವಿಶ್ವಾಸಾರ್ಹ ಹಾಗೂ ಕೈಗೆಟುಕುವ ವಿಮಾನ ಪ್ರಯಾಣವನ್ನು ಒದಗಿಸುವುದು ಸಂಸ್ಥೆಯ ಗುರಿಯಾಗಿದೆ.
1990ರಲ್ಲಿ ಸ್ಥಾಪಿತವಾದ ಅಲ್ ಹಿಂದ್ ಗ್ರೂಪ್, ಏಷ್ಯಾದಲ್ಲಿ ಪ್ರವಾಸ ಮತ್ತು ಪ್ರವಾಸ ನಿರ್ವಹಣಾ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿದೆ. ಇದೀಗ ಆ ಅನುಭವದ ಬೆನ್ನೇರಿಕೊಂಡು ವಿಮಾನಯಾನ ಕ್ಷೇತ್ರಕ್ಕೂ ಕಾಲಿಡುವ ಮೂಲಕ, ‘ಪ್ರವಾಸದಿಂದ ಆಕಾಶದವರೆಗೆ’ ತನ್ನ ಪಯಣವನ್ನು ವಿಸ್ತರಿಸುತ್ತಿದೆ.