Photo Credit : X/@SpaceX

ಭಾರತದಲ್ಲಿ ಗುರುವಾರ ಮಧ್ಯರಾತ್ರಿ ನಂತರದ ಕೆಲವೇ ನಿಮಿಷಗಳಲ್ಲಿ, ಕ್ಯಾಲಿಫೋರ್ನಿಯಾದ ವ್ಯಾಂಡೆನ್‌ಬರ್ಗ್ ಬಾಹ್ಯಾಕಾಶ ಸೇನಾ ನೆಲೆಯ ಸ್ಪೇಸ್ ಲಾಂಚ್ ಕಾಪ್ಲೆಕ್ಸ್ 4E ನಿಂದ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆಯ ಭಾಗಶಃ ಮರುಬಳಕೆ ಮಾಡಬಹುದಾದ ಫಾಲ್ಕನ್ 9 ರಾಕೆಟ್ ನಭಕ್ಕೆ ಚಿಮ್ಮಿತು. ಅಕ್ಟೋಬರ್ 1ರಂದು ಕೇವಲ 13 ಗಂಟೆಗಳ ಅವಧಿಯಲ್ಲಿ ಸ್ಪೇಸ್‌ಎಕ್ಸ್ ಪೂರ್ಣಗೊಳಿಸಿದ ಮೂರು ಬಾಹ್ಯಾಕಾಶ ಉಡಾವಣೆಗಳಲ್ಲಿ ಇದು ಎರಡನೆಯದಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಕಂಪನಿಯು ಈ ರೀತಿ ಒಂದೇ ದಿನದಲ್ಲಿ ಮೂರು ಉಡಾವಣೆಗಳನ್ನು ನಡೆಸಿರುವುದು ಇದು ಮೂರನೇ ಬಾರಿಯಾಗಿದೆ.

ಗುರುವಾರದ ಮೊದಲ ಉಡಾವಣೆಯು ನಾಸಾದ ಕ್ರೂ-13 ರೊಟೇಷನಲ್ ಮಿಷನ್ ಅಡಿಯಲ್ಲಿ ಇಬ್ಬರು ಅಮೆರಿಕನ್, ಒಬ್ಬ ಕೆನಡಿಯನ್ ಮತ್ತು ಒಬ್ಬ ರಷ್ಯನ್ ಗಗನಯಾನಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ದಿತು. ಇನ್ನು ಎರಡನೆಯದಾದ ‘ಟ್ರಾನ್ಸ್‌ಪೋರ್ಟರ್-18’ ಒಂದು ಸಣ್ಣ ಉಪಗ್ರಹಗಳ ಹಂಚಿಕೆಯ ಯಾನವಾಗಿದ್ದು, ಇದು ಭಾರತ ಮತ್ತು ಗುಜರಾತ್‌ ನ ಹೆಮ್ಮೆಯನ್ನು ಭೂಮಿಗೆ ಸನಿಹದ ಕಕ್ಷೆಗೆ (LEO) ತಲುಪಿಸಿದೆ.

ಈ ಹಾರಾಟದಲ್ಲಿದ್ದ 130 ಪೇಲೋಡ್‌ ಗಳ ಪೈಕಿ ಭಾರತದ ಮೊದಲ ವಾಣಿಜ್ಯ ಮತ್ತು ಖಾಸಗಿ ಥರ್ಮಲ್-ಇಮೇಜಿಂಗ್ ಪೇಲೋಡ್ ಆದ ‘TAPAS-1’ ಕೂಡ ಸೇರಿದೆ. ಇದನ್ನು ಅಹಮದಾಬಾದ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್ ‘ಸಟ್ಲಿಯೋ ಲ್ಯಾಬ್ಸ್’ ಅಭಿವೃದ್ಧಿಪಡಿಸಿದೆ.

ಭೂಮಿಗೆ ಸನಿಹದ ಕಕ್ಷೆಗಳು ಭೂಮಿಯ ಮೇಲ್ಮೈಯಿಂದ 160 ಕಿ.ಮೀ.ನಿಂದ 2,000 ಕಿ.ಮೀ. ಎತ್ತರದಲ್ಲಿರಬಹುದು. ‘ತಪಸ್-1’ ಉಪಗ್ರಹವನ್ನು 500 ಕಿ.ಮೀ. ಎತ್ತರದ ಕಕ್ಷೆಗೆ ಸೇರಿಸಲಾಗಿದ್ದು, ಅಲ್ಲಿಂದ ಇದು ಜಗತ್ತಿನಾದ್ಯಂತ ವಿವಿಧ ಸ್ಥಳಗಳ ಶಾಖ ಮತ್ತು ತಾಪಮಾನ ವ್ಯತ್ಯಾಸಗಳ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯಲಿದೆ.

► ತಪಸ್-1 ಮತ್ತು ಸಟ್ಲಿಯೋ ಎಂದರೇನು?

ಅನಾಲಿಟಿಕ್ಸ್ ಅಂಡ್ ಸೊಲ್ಯೂಷನ್ಸ್‌ಗಾಗಿ ಥರ್ಮಲ್ ಆಕ್ಸೆಸ್ ಪ್ಲಾಟ್‌ಫಾರ್ಮ್ (TAPAS) ಎಂಬುದು ಥರ್ಮಲ್ ಇನ್ಫ್ರಾರೆಡ್ ಕ್ಯಾಮೆರಾ ಆಗಿದೆ. ಇದನ್ನು ಅಹಮದಾಬಾದ್‌ ನಲ್ಲಿ 2023ರಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಉದ್ಯಮಿ ಶ್ರವಣ್ ಸಿಂಗ್ ಭಾಟಿ, ನಿವೃತ್ತ ಇಸ್ರೋ ವಿಜ್ಞಾನಿ ಡಾ. ರಣೇಂದು ಘೋಷ್ ಮತ್ತು ಮಾರಾಟ ಹಾಗೂ ವ್ಯಾಪಾರ ಅಭಿವೃದ್ಧಿ ತಜ್ಞ ಉರ್ಮಿಲ್ ಬಖೈ ಸ್ಥಾಪಿಸಿರುವ ‘ಸಟ್ಲಿಯೋ’ ಕಂಪೆನಿಯು ಸುಮಾರು 12 ತಿಂಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಿದೆ.

ತಪಸ್-1 ಕ್ಯೂಬ್‌ಸ್ಯಾಟ್ ವರ್ಗದ ಪೇಲೋಡ್ ಆಗಿದೆ. ಇವು ಘನಾಕೃತಿಯ ನ್ಯಾನೊ ಉಪಗ್ರಹಗಳಾಗಿದ್ದು, ಸಾಮಾನ್ಯವಾಗಿ 10 ಸೆಂ.ಮೀ. × 10 ಸೆಂ.ಮೀ. × 10 ಸೆಂ.ಮೀ. ಅಳತೆಯನ್ನು ಹೊಂದಿರುತ್ತವೆ (ಇದು ಸರಿಸುಮಾರು ರೂಬಿಕ್ಸ್ ಕ್ಯೂಬ್ ಗಾತ್ರದಷ್ಟಿರುತ್ತದೆ). ಇವುಗಳನ್ನು ಮಾದರಿ ಘಟಕಗಳು ಮತ್ತು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ವಾಣಿಜ್ಯ ಉಪಕರಣಗಳನ್ನು ಬಳಸಿ ನಿರ್ಮಿಸಲಾಗುತ್ತದೆ.

ಕ್ಯೂಬ್‌ ಸ್ಯಾಟ್‌ ಗಳು ಸಾಮಾನ್ಯವಾಗಿ ಪ್ರತಿ ಯುನಿಟ್‌ಗೆ 1.3 ಕೆ.ಜಿ.ಯಿಂದ 2 ಕೆ.ಜಿ. ತೂಕ ಹೊಂದಿರುತ್ತವೆ. ತಪಸ್-1ರ ತೂಕ 1.5 ಕೆ.ಜಿ. ಇದೆ. ಸ್ಪೇಸ್‌ಎಕ್ಸ್ ಸಂಸ್ಥೆಯ ಪ್ರಕಾರ, ಟ್ರಾನ್ಸ್‌ಪೋರ್ಟರ್-18 ರೈಡ್‌ಶೇರ್ ಯಾನದಲ್ಲಿದ್ದ 130 ಪೇಲೋಡ್‌ ಗಳಲ್ಲಿ ಕ್ಯೂಬ್‌ಸ್ಯಾಟ್‌ ಗಳು, ಮೈಕ್ರೊಸ್ಯಾಟ್‌ ಗಳು (ಸಾಮಾನ್ಯವಾಗಿ 10 ಕೆ.ಜಿ.ಯಿಂದ 100 ಕೆ.ಜಿ. ತೂಕವಿರುವ ಸಣ್ಣ ಉಪಗ್ರಹಗಳು) ಮತ್ತು ಹೋಸ್ಟೆಡ್ ಪೇಲೋಡ್‌ಗಳು ಸೇರಿವೆ.

ಭೂಮಿಯ ಮೇಲ್ಮೈಯಿಂದ ಬಿಡುಗಡೆಯಾಗುವ ಶಾಖದ ಬದಲಾವಣೆಗಳನ್ನು ಚಿತ್ರಗಳ ರೂಪದಲ್ಲಿ ಸೆರೆಹಿಡಿಯಲು ತಪಸ್-1 ಅನ್ನು ವಿನ್ಯಾಸಗೊಳಿಸಲಾಗಿದೆ. ಈ ದತ್ತಾಂಶವನ್ನು ಕೃತಕ ಬುದ್ಧಿಮತ್ತೆ ಬಳಸಿ ವಿಶ್ಲೇಷಿಸಬಹುದು ಎಂದು ಸಟ್ಲಿಯೋ ಸಂಸ್ಥೆಯ ಸಿಇಒ ಭಾಟಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.

► ತಪಸ್-1 ಸೆರೆಹಿಡಿಯುವ ಥರ್ಮಲ್ ಇಂಟೆಲಿಜೆನ್ಸ್ ದತ್ತಾಂಶದಿಂದ ಏನು ಪ್ರಯೋಜನ?

ಇದರ ಬಳಕೆಯ ಕ್ಷೇತ್ರಗಳು ಬಹಳಷ್ಟಿವೆ. ಕೃಷಿ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಕೀರ್ಣ ಸಮಸ್ಯೆಗಳ ನಿರ್ವಹಣೆಯಲ್ಲಿ ನಿರ್ಣಾಯಕ ಒಳನೋಟಗಳನ್ನು ಪಡೆದುಕೊಳ್ಳಲು, ಹಾಗೆಯೇ ನಗರಗಳ ಉಷ್ಣಾಂಶ ನಿರ್ವಹಣೆ, ಕೃಷಿ ಹಾಗೂ ನೀರಿನ ಒತ್ತಡದ ಮೇಲ್ವಿಚಾರಣೆ ಮತ್ತು ಕಾಳ್ಗಿಚ್ಚಿನಂತಹ ವಿಪತ್ತುಗಳನ್ನು ಪತ್ತೆಹಚ್ಚಿ ಗಮನಿಸಲು ಕಂಪೆನಿಗಳು ಹಾಗೂ ಸಂಸ್ಥೆಗಳು ತಪಸ್-1ರ ಥರ್ಮಲ್ ಇಮೇಜಿಂಗ್ ದತ್ತಾಂಶವನ್ನು ಬಳಸಬಹುದು.

"ನಗರದ ವಿವಿಧ ಭಾಗಗಳಲ್ಲಿನ ತಾಪಮಾನ ವ್ಯತ್ಯಾಸಗಳನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಬಹುದು. ನಗರದ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಉಷ್ಣಾಂಶವಿರುತ್ತದೆ. ಉಷ್ಣತೆಯ ಒತ್ತಡವನ್ನು ಎದುರಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ಇದು ನಗರ ಪಾಲಿಕೆಗಳಿಗೆ ನೆರವಾಗುತ್ತದೆ" ಎಂದು ಭಾಟಿ ಹೇಳಿದ್ದಾರೆ.

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೂಡಿ ನಗರದ ವಿವಿಧ ಪ್ರದೇಶಗಳಲ್ಲಿ ತಾಪಮಾನವನ್ನು ಮ್ಯಾಪ್ ಮಾಡುವ ಪ್ರಾಯೋಗಿಕ ಯೋಜನೆಯಲ್ಲಿ ಸಟ್ಲಿಯೋ ಲ್ಯಾಬ್ಸ್ ಈಗಾಗಲೇ ಕೆಲಸ ಮಾಡಿದೆ. ಈ ಥರ್ಮಲ್ ಇಮೇಜಿಂಗ್ ತಂತ್ರಜ್ಞಾನವು "ಭೂಮಿಯ ಥರ್ಮಾಮೀಟರ್"ನಂತೆ ಕಾರ್ಯನಿರ್ವಹಿಸಬಲ್ಲುದು ಎಂದು ಕಂಪೆನಿಯ ಮುಖ್ಯ ಕಾರ್ಯತಂತ್ರ ಅಧಿಕಾರಿ (ಸಿಎಸ್ಒ) ಬಖೈ ತಿಳಿಸಿದ್ದಾರೆ.

"ಇದು ಕೃಷಿ ಕ್ಷೇತ್ರಕ್ಕೆ ಅತ್ಯಂತ ಪ್ರಮುಖ ದತ್ತಾಂಶವನ್ನು ಒದಗಿಸಬಲ್ಲುದು. ಇದರ ಮೂಲಕ ಬೆಳೆಗಳಿಗೆ ಅಗತ್ಯವಿರುವ ಯೋಜನೆಗಳನ್ನು ಹೆಚ್ಚು ಆಧುನಿಕ ಮತ್ತು ನಿಖರವಾದ ರೀತಿಯಲ್ಲಿ ಕೈಗೊಳ್ಳಬಹುದು. ಇದು ನಗರ ಯೋಜನೆಗೂ ಉಪಯುಕ್ತವಾಗಬಹುದು" ಎಂದು ಅವರು ಹೇಳಿದರು.

ಕೃಷಿ, ವಿಪತ್ತು ನಿರ್ವಹಣೆ ಮತ್ತು ನಗರ ಯೋಜನೆ ಹೊರತುಪಡಿಸಿ, ಪುರಾತತ್ವಶಾಸ್ತ್ರ ಮತ್ತು ಭೂವಿಜ್ಞಾನದಲ್ಲೂ ತಮ್ಮ ಥರ್ಮಲ್ ಇಮೇಜಿಂಗ್ ಪರಿಹಾರಗಳ ಬಳಕೆಯಿದೆ ಎಂದು ಸಟ್ಲಿಯೋ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ. ಇದು ಭೂಗತ ಅವಶೇಷಗಳು ಹಾಗೂ ಖನಿಜ ನಿಕ್ಷೇಪಗಳನ್ನು ಪತ್ತೆಹಚ್ಚಲು, ಭೂಮಿ ಹಾಗೂ ಸಾಗರ ಮೇಲ್ಮೈಯ ತಾಪಮಾನ ಮತ್ತು ಅವುಗಳಲ್ಲಿನ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ಹವಾಮಾನ ಮಾದರಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಹವಾಮಾನ ಮುನ್ಸೂಚನೆ, ಬಿರುಗಾಳಿಯ ಮುನ್ಸೂಚನೆ, ವಿಪರೀತ ಹವಾಮಾನ ಎಚ್ಚರಿಕೆಗಳು ಮತ್ತು ಹವಾಮಾನ ವೈಪರೀತ್ಯಗಳ ವಿಶ್ಲೇಷಣೆಗೂ ಇದು ಉಪಯುಕ್ತವಾಗಿದೆ.

► ಸಟ್ಲಿಯೋ ತಂತ್ರಜ್ಞಾನಕ್ಕೆ ಸದ್ಯಕ್ಕೆ ಗಿರಾಕಿಗಳಿದ್ದಾರೆಯೇ?

ತಪಸ್-1 ಮುಂದಿನ ಮೂರು ವರ್ಷಗಳ ಕಾಲ ಕಕ್ಷೆಯಲ್ಲಿರಲಿದ್ದು, ಭಾಟಿ ಅವರ ಪ್ರಕಾರ ಕಂಪೆನಿಯು ಇಲ್ಲಿಯವರೆಗೆ ಸುಮಾರು 52 ಮಿಲಿಯನ್ ಡಾಲರ್ ಮೌಲ್ಯದ ಆಸಕ್ತಿ ಪತ್ರಗಳನ್ನು (LOI) ಪಡೆದುಕೊಂಡಿದೆ. ಇದರಲ್ಲಿ ಶೇ 60ರಷ್ಟು ಭಾರತದ ಹೊರಗಿನ ಕಂಪೆನಿಗಳಿಂದ ಬಂದಿವೆ.

ಉಪಗ್ರಹ ದತ್ತಾಂಶವನ್ನು ಪ್ರಾಯೋಗಿಕ ಬಳಕೆಗೆ ತರಲು ಯಾವುದೇ ದೊಡ್ಡ ಮಟ್ಟದ ಹೆಚ್ಚುವರಿ ಮೂಲಸೌಕರ್ಯವನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂಬುದು ಅತ್ಯಂತ ಮುಖ್ಯವಾದ ಸಂಗತಿಯಾಗಿದೆ. ಈ ದತ್ತಾಂಶ ನೇರವಾಗಿ ಉಪಗ್ರಹದಿಂದಲೇ ಲಭ್ಯವಾಗಲಿದೆ" ಎಂದು ಬಖೈ ಹೇಳಿದರು.

ಕಂಪೆನಿಯು 40ಕ್ಕೂ ಹೆಚ್ಚು ವೃತ್ತಿಪರರ ತಂಡವನ್ನು ಹೊಂದಿದ್ದು, 2029ರ ವೇಳೆಗೆ ಇದೇ ರೀತಿಯ ಇನ್ನೂ ಎಂಟು ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜನೆ ರೂಪಿಸಿದೆ. ಈ ಯೋಜಿತ ವಿಸ್ತರಣೆಗಾಗಿ 60 ಕೋಟಿ ರೂ.ಗಳ ನಿಧಿಯನ್ನು ಸಂಗ್ರಹಿಸಲಾಗಿದೆ ಎಂದು ಸಂಸ್ಥಾಪಕರು ತಿಳಿಸಿದ್ದಾರೆ. "ನಾವು ಮುಂದಿನ ವರ್ಷದ ಎಪ್ರಿಲ್–ಮೇ ವೇಳೆಗೆ ‘ತಪಸ್-2’ ಅನ್ನು ಉಡಾವಣೆ ಮಾಡಲು ಯೋಜಿಸಿದ್ದೇವೆ. ಇದರ ಬಳಿಕ ಇನ್ನಷ್ಟು ಸುಧಾರಿತ ಪೇಲೋಡ್ ಆದ ‘PYRO’ (ಸಟ್ಲಿಯೋ ಸಂಸ್ಥೆಯ 10–15 ಮೈಕ್ರೊಸ್ಯಾಟ್‌ಗಳ ಪ್ರಸ್ತಾವಿತ ಉಪಗ್ರಹ ಸಮೂಹ) ಅನ್ನು ಉಡಾವಣೆ ಮಾಡಲಾಗುವುದು" ಎಂದು ಬಖೈ ತಿಳಿಸಿದರು.

► ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪೆನಿಗಳ ಅಧಿಕೃತ ದೃಷ್ಟಿಕೋನವೇನು?

2020ರಲ್ಲಿ ಭಾರತ ಸರಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಗಳ ಸಮಗ್ರ ಚಟುವಟಿಕೆಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮುಕ್ತ ಅವಕಾಶ ಕಲ್ಪಿಸಿತು. ಈ ಸುಧಾರಣೆಗಳ ಮುಂದುವರಿದ ಭಾಗವಾಗಿ, ಖಾಸಗಿ ಹೂಡಿಕೆದಾರರಿಗೆ ನಿಯಂತ್ರಣಾತ್ಮಕ ಖಚಿತತೆ ಮತ್ತು ಸಮಾನ ಅವಕಾಶಗಳನ್ನು ಒದಗಿಸಲು ಪ್ರಯತ್ನಗಳನ್ನು ನಡೆಸಿತು. ಈ ಸುಧಾರಣೆಯ ದೃಷ್ಟಿಕೋನವನ್ನು ಅನುಷ್ಠಾನಗೊಳಿಸಲು ‘ಭಾರತೀಯ ಬಾಹ್ಯಾಕಾಶ ನೀತಿ-2023’ (Indian Space Policy-2023) ಅನ್ನು ರೂಪಿಸಲಾಯಿತು.

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮತ್ತು ರಾಜ್ಯವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ಉತ್ಪಾದನೆ ಹಾಗೂ ಹೊಸ ಆವಿಷ್ಕಾರಗಳ ಕೇಂದ್ರವಾಗಿ ಸ್ಥಾಪಿಸಲು, ಗುಜರಾತ್ ಸರಕಾರವು ಕಳೆದ ವರ್ಷ ‘ಗುಜರಾತ್ ಬಾಹ್ಯಾಕಾಶ ತಂತ್ರಜ್ಞಾನ ನೀತಿ (2025-30)’ಯನ್ನು ಅಧಿಸೂಚಿಸಿತು. ಈ ಮೂಲಕ ಈ ಕ್ಷೇತ್ರಕ್ಕೆಂದೇ ಪ್ರತ್ಯೇಕ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ಗಳು ಮತ್ತು ಖಾಸಗಿ ಹೂಡಿಕೆದಾರರನ್ನು ಉತ್ತೇಜಿಸಲು ರಾಜ್ಯ ಸರಕಾರವು ಉಡಾವಣಾ ವೆಚ್ಚಗಳಿಗೆ ಸಹಾಯ, ಬೌದ್ಧಿಕ ಆಸ್ತಿ ಹಕ್ಕುಗಳಿಗೆ (IPR) ಬೆಂಬಲ ಮತ್ತು ಪರೀಕ್ಷಾ ಸೌಲಭ್ಯಗಳಿಗೆ ಸಬ್ಸಿಡಿಗಳಂತಹ ವಿವಿಧ ಪ್ರೋತ್ಸಾಹಕಗಳನ್ನು ಘೋಷಿಸಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor