ಸಾಂದರ್ಭಿಕ ಚಿತ್ರ  (Photo: AI Generated)

ಚಿಲ್ಲರೆ ವ್ಯಾಪಾರಿಗಳಿಗೆ ತಲುಪುವ ಔಷಧಗಳ ಬೆಲೆ ಹಾಗೂ ಪ್ಯಾಕ್ ಮೇಲೆ ಮುದ್ರಿಸಲಾದ (MRP) ಬೆಲೆ ನಡುವಿನ ವ್ಯತ್ಯಾಸವನ್ನು 'ಕಗ್ಗೊಲೆ' ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಈ ವ್ಯತ್ಯಾಸವು "ರೋಗಿಗಳ ಮೇಲಿನ ಹಗಲು ದರೋಡೆ"ಯಂತೆ ಎಂದು ಮಂಗಳವಾರ (ಸೆಪ್ಟೆಂಬರ್ 29) ಅಭಿಪ್ರಾಯಪಟ್ಟಿದೆ.

ಔಷಧ ಬೆಲೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, 2013ರ ಔಷಧ (ಬೆಲೆ ನಿಯಂತ್ರಣ) ಆದೇಶದ (DPCO) ಅಡಿಯಲ್ಲಿ ಚಿಲ್ಲರೆ ವ್ಯಾಪಾರಿಗೆ ಸಿಗುವ ಶೇಕಡಾ 16ರಷ್ಟು ಲಾಭಾಂಶವು ಎಲ್ಲ ಅಗತ್ಯ ಔಷಧಗಳಿಗೂ ಯಾಕೆ ಅನ್ವಯಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.

ಕ್ಯಾನ್ಸರ್‌ಗೆ ಬಳಸುವ ಪ್ರಮುಖ ಔಷಧವೊಂದರ ಉದಾಹರಣೆಯನ್ನು ಪೀಠವು ಈ ಸಂದರ್ಭದಲ್ಲಿ ಪ್ರಸ್ತಾಪಿಸಿತು. ಚಿಲ್ಲರೆ ವ್ಯಾಪಾರಿಗಳಿಗೆ 2,700 ರೂ.ಗಳಿಗೆ ಪೂರೈಸಲಾಗುತ್ತಿರುವ ಈ ಔಷಧದ ಗರಿಷ್ಠ ಚಿಲ್ಲರೆ ಬೆಲೆ ಸುಮಾರು 27,000 ರೂ. ಇದೆ. ಈ ಭಾರೀ ವ್ಯತ್ಯಾಸವನ್ನು ಪ್ರಶ್ನಿಸಿದ ಪೀಠ, "ಚಿಲ್ಲರೆ ವ್ಯಾಪಾರಿಗೆ ನೀಡುವ ದರಕ್ಕಿಂತ ಎಂಆರ್‌ಪಿ 10 ಪಟ್ಟು ಹೆಚ್ಚಿದೆ. ಇದು ಸುಲಿಗೆ ಅಲ್ಲದೆ ಮತ್ತೇನು?... ಇದು ಸಂಪೂರ್ಣ ದಬ್ಬಾಳಿಕೆ, ಕಗ್ಗೊಲೆ, ಹಗಲು ದರೋಡೆ... ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ಅಧಿಕಾರಿಗಳು ಸಂಪೂರ್ಣ ಮೌನ ವಹಿಸಿರುವುದು ಅಚ್ಚರಿ ತಂದಿದೆ. ಅದಕ್ಕೆ ಕಾರಣವೇನು ಎಂದು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ" ಎಂದಿತು.

ಔಷಧಗಳ ಬೆಲೆ ನಿಯಂತ್ರಣ, ಜೆನೆರಿಕ್ ಔಷಧಗಳ ಪ್ರಿಸ್ಕ್ರಿಪ್ಷನ್ ಮತ್ತು ವೈದ್ಯಕೀಯ ಉಪಕರಣಗಳ ನಿಯಂತ್ರಣ ಕೋರಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅಲ್ಲದೆ, ಔಷಧ ಪೂರೈಕೆ ಸರಪಳಿಯಲ್ಲಿ ಅತಿಯಾದ ಲಾಭ ಗಳಿಸುವುದನ್ನು ತಡೆಯಲು ಡಿಪಿಒಸಿ ಅಡಿಯಲ್ಲಿ ಬೆಲೆ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ಕೋರಲಾಗಿದೆ. ಹಾಗಾದರೆ ಔಷಧಗಳ ಬೆಲೆಗಳನ್ನು ಹೇಗೆ ನಿಗದಿಪಡಿಸಲಾಗುತ್ತದೆ ಮತ್ತು ಕೆಲವು ಔಷಧಗಳು ಬೆಲೆ ನಿಯಂತ್ರಣದ ವ್ಯಾಪ್ತಿಯಿಂದ ಯಾಕೆ ಹೊರಗುಳಿಯುತ್ತವೆ? ವಿವರ ಇಲ್ಲಿದೆ.

ಔಷಧ ಬೆಲೆಗಳ ಕಾನೂನು ಚೌಕಟ್ಟು:

ಅಗತ್ಯ ವಸ್ತುಗಳ ಕಾಯ್ದೆ-1955, ಕೇಂದ್ರ ಸರ್ಕಾರಕ್ಕೆ ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರ ನೀಡುತ್ತದೆ.

ವಿಭಾಗ 3(1) ರ ಪ್ರಕಾರ, "ಯಾವುದೇ ಅಗತ್ಯ ವಸ್ತುವಿನ ಪೂರೈಕೆಯನ್ನು ಕಾಯ್ದುಕೊಳ್ಳಲು ಅಥವಾ ಹೆಚ್ಚಿಸಲು, ಇಲ್ಲವೇ ಅವುಗಳ ಸಮಾನ ಪೂರೈಕೆ ಹಾಗೂ ನ್ಯಾಯಯುತ ಬೆಲೆಯಲ್ಲಿ ಲಭ್ಯತೆಯನ್ನು ಖಚಿತಪಡಿಸಲು" ಉತ್ಪಾದನೆ, ಪೂರೈಕೆ ಮತ್ತು ಹಂಚಿಕೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಅವಕಾಶವಿದೆ. ಹಾಗೆಯೇ, ವಿಭಾಗ 3(2)(c) ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವ ಆದೇಶಗಳನ್ನು ಹೊರಡಿಸಲು ಅಧಿಕಾರ ನೀಡುತ್ತದೆ.

ಡಿಪಿಒಸಿ ಅಂಥದ್ದೇ ಒಂದು ಆದೇಶವಾಗಿದೆ. ಇದು ಭಾರತದಲ್ಲಿ ಔಷಧಗಳ ಬೆಲೆಗಳನ್ನು ನಿಯಂತ್ರಿಸುವ ಪ್ರಮುಖ ಚೌಕಟ್ಟು ಆಗಿದೆ. ಔಷಧ ಇಲಾಖೆಯ ಅಡಿಯಲ್ಲಿ 1997ರಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರಕ್ಕೆ (NPPA) ಇದು ಅಧಿಕಾರ ನೀಡುತ್ತದೆ. ನಿಗದಿತ ಔಷಧಗಳ ಗರಿಷ್ಠ ಬೆಲೆಯನ್ನು ನಿಗದಿಪಡಿಸುವುದು ಮತ್ತು ಪರಿಷ್ಕರಿಸುವುದು, ಹೊಸ ಔಷಧಗಳಿಗೆ ಚಿಲ್ಲರೆ ಬೆಲೆಗಳನ್ನು ಸ್ಥಾಪಿಸುವುದು, ಹೆಚ್ಚು ಹಣ ಪಡೆಯುವುದನ್ನು ಮೇಲ್ವಿಚಾರಣೆ ಮಾಡುವುದು ಹಾಗೂ ಡಿಪಿಒಸಿಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಇದು ಹೊಂದಿದೆ.

ಡಿಪಿಒಸಿ ವ್ಯಾಪ್ತಿಗೆ ಬರುವ ಔಷಧಗಳಿಗೆ ಎನ್‌‌ಪಿಪಿಎ ಗರಿಷ್ಠ ಬೆಲೆಯನ್ನು ನಿಗದಿಪಡಿಸುತ್ತದೆ, ಕಂಪನಿಗಳು ಈ ಮೀರಿದ ಬೆಲೆಗೆ ಮಾರಾಟ ಮಾಡುವಂತಿಲ್ಲ. ಅಲ್ಲದೆ, ಕಂಪನಿಗಳು ಬೆಲೆ ನಿಯಂತ್ರಣ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಇದು ಮೇಲ್ವಿಚಾರಣೆ ಮಾಡುತ್ತದೆ. ರೋಗಿಗಳಿಂದ ಅಧಿಕ ಹಣ ವಸೂಲಿ ಮಾಡಿದ್ದರೆ ಆ ಹಣವನ್ನು ಮರುಪಡೆಯಲು ಆದೇಶಿಸಬಹುದು. ಕೆಲವು ಸಂದರ್ಭಗಳಲ್ಲಿ, ಸಾಮಾನ್ಯ ಬೆಲೆ ನಿಯಂತ್ರಣದ ಹೊರಗಿರುವ ಔಷಧಗಳು ಅಥವಾ ವೈದ್ಯಕೀಯ ಉಪಕರಣಗಳ ಬೆಲೆಗಳಿಗೂ ಇದು ಮಿತಿ ವಿಧಿಸಬಲ್ಲದು.

ಪಟ್ಟಿ ಮಾಡಿದ ಮತ್ತು ಪಟ್ಟಿ ಮಾಡದ ಔಷಧಗಳು

ಡಿಪಿಒಸಿಯು ಔಷಧಗಳನ್ನು ಎರಡು ಪ್ರಮುಖ ವಿಭಾಗಗಳಾಗಿ ವಿಂಗಡಿಸುತ್ತದೆ - ಪಟ್ಟಿ ಮಾಡಿದ (scheduled) ಮತ್ತು ಪಟ್ಟಿ ಮಾಡದ ಔಷಧಗಳು (non-scheduled) ಔಷಧಗಳು. ಒಂದು ನಿರ್ದಿಷ್ಟ ಸಾಮರ್ಥ್ಯ ಮತ್ತು ಪ್ರಮಾಣದಲ್ಲಿರುವ ಔಷಧವನ್ನು 'ಫಾರ್ಮುಲೇಶನ್' ಎಂದು ಕರೆಯಲಾಗುತ್ತದೆ.

ನಿಗದಿತ ಔಷಧಗಳು ಡಿಪಿಒಸಿಯ ಅನುಬಂಧ-1 (Schedule I) ರಲ್ಲಿ ಸೇರಿಸಲಾದ ಔಷಧಗಳಾಗಿವೆ. ಅನುಬಂಧ-1, ದೇಶದ ಆರೋಗ್ಯ ಸೇವೆಯ ಅಗತ್ಯಗಳನ್ನು ಪೂರೈಸಲು ಅತ್ಯಗತ್ಯವೆಂದು ಪರಿಗಣಿಸಲಾದ ಔಷಧಗಳನ್ನು ಗುರುತಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಿದ್ಧಪಡಿಸಿದ 'ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ'ಯನ್ನು (NLEM) ಆಧರಿಸಿದೆ. ಪಟ್ಟಿಮಾಡದ ಔಷಧಗಳು ಅಂದರೆ ಈ ಪಟ್ಟಿಯಲ್ಲಿ ಸೇರಿಸದಿರುವ ಔಷಧಗಳಾಗಿವೆ.

ಪ್ರಸ್ತುತ ಪಟ್ಟಿಯಲ್ಲಿ 384 ಔಷಧಗಳಿದ್ದು, ಇದು ಒಟ್ಟು ಔಷಧ ಮಾರುಕಟ್ಟೆ ವಹಿವಾಟಿನ ಶೇಕಡಾ 20ರಷ್ಟು ಮಾತ್ರ ಭಾಗವಾಗಿದೆ. ಅನುಬಂಧ-1ರ ಅಡಿಯಲ್ಲಿ ಬರುವ ಔಷಧಗಳು ಸರ್ಕಾರದ ಬೆಲೆ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ.

ಔಷಧಗಳ ಗರಿಷ್ಠ ಬೆಲೆಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ?

ತೆರಿಗೆಗಳನ್ನು ಹೊರತುಪಡಿಸಿ, ನಿಗದಿತ ಔಷಧವನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾದ ಅತ್ಯುನ್ನತ ಬೆಲೆಯೇ ಗರಿಷ್ಠ ಬೆರೆಯಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಬೆಲೆಗಳ ಆಧಾರದ ಮೇಲೆ ಎನ್‌ಪಿಪಿಎ (NPPA) ಇದನ್ನು ಲೆಕ್ಕಹಾಕುತ್ತದೆ.

ದೇಹದಲ್ಲಿ ನಿರ್ದಿಷ್ಟ ಪರಿಣಾಮ ಬೀರಲು ಕಾರಣವಾಗುವ ಒಂದೇ ರೀತಿಯ ಸಕ್ರಿಯ ಘಟಕಾಂಶವನ್ನು (active ingredient) ಹೊಂದಿರುವ ಔಷಧದ ಪ್ರತಿಯೊಂದು ಆವೃತ್ತಿಯನ್ನು ಎನ್‌ಪಿಪಿಎ ಮೊದಲು ಪರಿಶೀಲಿಸುತ್ತದೆ. ಕಂಪನಿಯ ವ್ಯಾಪಾರ ಹೆಸರಿನಡಿ ಮಾರಾಟವಾಗುವ ಔಷಧವನ್ನು ಬ್ರಾಂಡ್ ಎನ್ನಲಾಗುತ್ತದೆ. 'ಜೆನೆರಿಕ್ ಆವೃತ್ತಿ'ಯು ಅದೇ ಸಕ್ರಿಯ ಘಟಕಾಂಶವನ್ನು ಹೊಂದಿರುತ್ತದೆ, ಆದರೆ ಅದನ್ನು ಆ ಘಟಕಾಂಶದ ಹೆಸರಿನಲ್ಲಿ ಅಥವಾ ಮೂಲ ಬ್ರಾಂಡ್ ಇಲ್ಲದೆ ಕಂಪನಿಯ ಸ್ವಂತ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ನಂತರ ಎನ್‌ಪಿಪಿಎ, ಒಟ್ಟು ದೇಶೀಯ ಮಾರುಕಟ್ಟೆ ಮಾರಾಟದ ಶೇಕಡಾ 1ಕ್ಕಿಂತ ಕಡಿಮೆ ಪಾಲು ಹೊಂದಿರುವ ಬ್ರಾಂಡ್‌ಗಳು ಅಥವಾ ಜೆನೆರಿಕ್ ಔಷಧಗಳನ್ನು ಲೆಕ್ಕಾಚಾರದಿಂದ ಹೊರಗಿಡುತ್ತದೆ. ಮಾರುಕಟ್ಟೆ ಪಾಲನ್ನು 'ಮೂವಿಂಗ್ ಆನ್ಯುಯಲ್ ಟರ್ನ್‌ಓವರ್' (MAT) ಮೂಲಕ ಅಳೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಇದು ಕಳೆದ ವರ್ಷದಲ್ಲಿ ಆ ಉತ್ಪನ್ನದ ಒಟ್ಟು ಮಾರಾಟದ ಜನಪ್ರಿಯತೆಯಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆಗಳು ಬ್ರಾಂಡ್‌ವಾರು ದಾಖಲಿಸುವ ಔಷಧ ಮಾರಾಟದ ಡೇಟಾವನ್ನು ಇದಕ್ಕಾಗಿ ಬಳಸಲಾಗುತ್ತದೆ.

ಪ್ರತಿ ಆವೃತ್ತಿಗೂ, ಎನ್‌ಪಿಪಿಎ ಚಿಲ್ಲರೆ ವ್ಯಾಪಾರಿಗೆ ವಿಧಿಸುವ ಬೆಲೆಯನ್ನು (PTR) ಪರಿಗಣಿಸುತ್ತದೆ. ಅಂದರೆ ತಯಾರಕರು ಅಥವಾ ವಿತರಕರು ಕೆಮಿಸ್ಟ್‌ಗಳು ಅಥವಾ ಆಸ್ಪತ್ರೆ ಔಷಧಾಲಯಗಳಿಂದ ಪಡೆಯುವ ಮೊತ್ತ. ಎನ್‌ಪಿಪಿಎ ಈ ಪಿಟಿಆರ್‌ಗಳ ಸರಾಸರಿಯನ್ನು ತೆಗೆದುಕೊಂಡು ಶೇಕಡಾ 16ರಷ್ಟು ಚಿಲ್ಲರೆ ವ್ಯಾಪಾರಿಯ ಲಾಭಾಂಶವನ್ನು ಸೇರಿಸುತ್ತದೆ. ಇದರ ಫಲಿತಾಂಶವೇ ಗರಿಷ್ಠ ಬೆಲೆಯಾಗಿದೆ.

ಉದಾಹರಣೆಗೆ, ಒಂದೇ ಸಾಮರ್ಥ್ಯ ಮತ್ತು ಪ್ರಮಾಣವನ್ನು ಹೊಂದಿರುವ ಮತ್ತು ಕನಿಷ್ಠ ಶೇಕಡಾ 1ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ನಿಗದಿತ ಔಷಧದ ಮೂರು ಆವೃತ್ತಿಗಳ ಪಿಟಿಆರ್ ಅನುಕ್ರಮವಾಗಿ 8 ರೂ., 10 ರೂ. ಮತ್ತು 12 ರೂ. ಇದ್ದರೆ, ಎನ್‌ಪಿಪಿಎ ಇವುಗಳ ಸರಾಸರಿಯನ್ನು (10 ರೂ.) ತೆಗೆದುಕೊಂಡು, ಶೇಕಡಾ 16ರಷ್ಟು ಅನುಮತಿಸಲಾದ ಚಿಲ್ಲರೆ ವ್ಯಾಪಾರಿಯ ಲಾಭಾಂಶವನ್ನು ಸೇರಿಸುತ್ತದೆ. ಇದರಿಂದ ಗರಿಷ್ಠ ಬೆಲೆಯು 11.60 ರೂ. ಆಗುತ್ತದೆ. ಸ್ಥಳೀಯ ತೆರಿಗೆಗಳು ಅಥವಾ ಜಿಎಸ್‌ಟಿ (GST) ಹೊರತುಪಡಿಸಿ, ಪ್ಯಾಕ್ ಮೇಲೆ ಮುದ್ರಿಸಲಾದ ಎಂಆರ್‌ಪಿ ಈ ಮೊತ್ತಕ್ಕಿಂತ ಹೆಚ್ಚಿರಬಾರದು.

ಪ್ರತಿವರ್ಷ ಏಪ್ರಿಲ್ 1ರಂದು ಗರಿಷ್ಠ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಸಗಟು ಬೆಲೆಗಳಲ್ಲಿನ ಸರಾಸರಿ ಬದಲಾವಣೆಯನ್ನು ಅಳೆಯುವ ಸಗಟು ಬೆಲೆ ಸೂಚ್ಯಂಕದ (WPI) ಆಧಾರದ ಮೇಲೆ ಈ ಪರಿಷ್ಕರಣೆ ನಡೆಯುತ್ತದೆ. ತಯಾರಕರು ಹಿಂದಿನ ಕ್ಯಾಲೆಂಡರ್ ವರ್ಷದ ಡಬ್ಲ್ಯುಪಿಐ ಬದಲಾವಣೆಯವರೆಗೆ ಬೆಲೆಗಳನ್ನು ಯಾವುದೇ ಅನುಮೋದನೆಯಿಲ್ಲದೆ ಹೆಚ್ಚಿಸಬಹುದು. ಒಂದು ವೇಳೆ ಡಬ್ಲ್ಯುಪಿಐ ಕುಸಿದರೆ, ಅವರು 45 ದಿನಗಳ ಒಳಗೆ ಬೆಲೆಗಳನ್ನು ಇಳಿಕೆ ಮಾಡಬೇಕು.

ಬೆಲೆ ನಿಯಂತ್ರಣದ ಹೊರಗಿರುವ ಔಷಧಗಳು ಮತ್ತು ಅರ್ಜಿಗಳಲ್ಲಿ ಏನೆಲ್ಲಾ ಹೇಳಲಾಗಿದೆ?

ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯಲ್ಲಿ (NLEM) ಇಲ್ಲದ ಔಷಧಗಳನ್ನು ಸಾಮಾನ್ಯವಾಗಿ ಪಟ್ಟಿಮಾಡದ ಔಷಧಗಳೆಂದು ಪರಿಗಣಿಸಲಾಗುತ್ತದೆ ಮತ್ತು ಇವುಗಳಿಗೆ ಯಾವುದೇ ಗರಿಷ್ಠ ಬೆಲೆಯ ಮಿತಿ ಇರುವುದಿಲ್ಲ. ಡಿಪಿಒಸಿ ನಿಯಮದ ಪ್ರಕಾರ, ತಯಾರಕರು ಪಟ್ಟಿಮಾಡದ ಔಷಧದ ಆರಂಭಿಕ ಎಂಆರ್‌ಪಿಯನ್ನು ತಾವೇ ಸ್ವತಂತ್ರವಾಗಿ ನಿಗದಿಪಡಿಸಬಹುದು. ಆದರೆ, 12 ತಿಂಗಳುಗಳಲ್ಲಿ ಎಂಆರ್‌ಪಿಯನ್ನು ಶೇಕಡಾ 10ಕ್ಕಿಂತ ಹೆಚ್ಚು ಹೆಚ್ಚಿಸುವಂತಿಲ್ಲ ಎಂಬ ಒಂದೇ ಒಂದು ನಿರ್ಬಂಧವಿದೆ.

ಈಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆಗೆ ಒಳಗಾಗಿರುವುದು ಇದೇ ಚೌಕಟ್ಟು. ಡಿಪಿಒಸಿಯು ಆರಂಭಿಕ ಬಿಡುಗಡೆ ಬೆಲೆಯನ್ನು ನಿಯಂತ್ರಿಸುವುದಿಲ್ಲವಾದ್ದರಿಂದ, ತಯಾರಕರು ಮೊದಲ ದಿನವೇ ವಿಪರೀತ ಬೆಲೆಯನ್ನು ನಿಗದಿಪಡಿಸಬಹುದು. ಇದರಿಂದಾಗಿ ಬೆಲೆ ಏರಿಕೆಯ ಮೇಲಿನ ಮಿತಿಯು ನಿರುಪಯುಕ್ತವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಜೀವಿಸುವ ಹಕ್ಕಿನ ಅಡಿಯಲ್ಲಿ ಖಾತರಿಪಡಿಸಲಾದ ಆರೋಗ್ಯದ ಹಕ್ಕನ್ನು (ಆರ್ಟಿಕಲ್ 21) ಉಲ್ಲೇಖಿಸಿ, ಬಿಡುಗಡೆ ಬೆಲೆಯ ಮೇಲೆ ಯಾವುದೇ ನಿಯಂತ್ರಣವಿಲ್ಲದಿರುವುದನ್ನು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಪ್ರಶ್ನಿಸಿವೆ. "ಔಷಧದ ನಿಜವಾದ ಉತ್ಪಾದನಾ ವೆಚ್ಚ ಏನೇ ಇರಲಿ, ಆರಂಭಿಕ ಎಂಆರ್‌ಪಿಯನ್ನು ಮನಬಂದಂತೆ ನಿಗದಿಪಡಿಸಲು ಇದು ತಯಾರಕರಿಗೆ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ" ಎಂದು ಒಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಔಷಧ ಪೂರೈಕೆ ಸರಪಳಿ ಮತ್ತು ಚಿಲ್ಲರೆ ವ್ಯಾಪಾರಿಗಳು ಹಾಗೂ ಆಸ್ಪತ್ರೆಗಳು ವಿಧಿಸುವ ಅತಿಯಾದ ಲಾಭಾಂಶದ ಬಗ್ಗೆಯೂ ಒಂದು ಅರ್ಜಿ ಗಮನ ಸೆಳೆದಿದೆ. ಅನುಮತಿಸಲಾದ ಶೇಕಡಾ 16ರ ಲಾಭಾಂಶಕ್ಕಿಂತ ಚಿಲ್ಲರೆ ವ್ಯಾಪಾರಿಗಳು "ಹತ್ತರಿಂದ ಹದಿನೈದು ಪಟ್ಟು ಹೆಚ್ಚು ಲಾಭ" ಪಡೆಯುತ್ತಿದ್ದಾರೆ ಎಂದು ಅದು ಹೇಳುತ್ತದೆ. 5,635 ರೂ. ಎಂಆರ್‌ಪಿ ಹೊಂದಿರುವ 'ಟೈಗೆಬ್ಯಾಕ್ಸ್ 50 ಮಿಲ್ಲಿಗ್ರಾಂ' (Tigebax 50mg) ಎಂಬ ಆ್ಯಂಟಿಬಯೋಟಿಕ್ ಔಷಧವನ್ನು ದೊಡ್ಡ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಪೂರ್ಣ ಎಂಆರ್‌ಪಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಅದೇ ಔಷಧವು ಆಸ್ಪತ್ರೆಯ ಹೊರಗಿನ ಮುಕ್ತ ಮಾರುಕಟ್ಟೆಯಲ್ಲಿ ಕೇವಲ 350 ರೂ.ಗೆ ಸಿಗುತ್ತಿದೆ ಎಂದು ಅದು ತಿಳಿಸಿದೆ.

ಔಷಧಗಳ ಬೆಲೆಗಳನ್ನು ನಿರ್ಧರಿಸುವಲ್ಲಿ ಆಸ್ಪತ್ರೆಗಳ ಔಷಧಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಇದು ಹೇಳುತ್ತದೆ, ಅಲ್ಲದೆ "ಕಂಪನಿಗಳು ನಿಗದಿಪಡಿಸುವ ಔಷಧಗಳ ಚಿಲ್ಲರೆ ಬೆಲೆ ಅಥವಾ ಎಂಆರ್‌ಪಿಯು ಕಾರ್ಪೊರೇಟ್ ಆಸ್ಪತ್ರೆಗಳ ಸಲಹೆ ಮೇರೆಗೆ ನಿರ್ಧಾರವಾಗುತ್ತದೆ" ಎಂದು ಆರೋಪಿಸಲಾಗಿದೆ. ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಯ ಬಿಲ್‌ನಲ್ಲಿ ಶೇಕಡಾ 30ರಿಂದ 40ರಷ್ಟು ಭಾಗ ಔಷಧ ವೆಚ್ಚಗಳೇ ಆಗಿರುತ್ತವೆ ಎಂದು ಇದು ಹೇಳುತ್ತದೆ.

ಬ್ರಾಂಡೆಡ್ ಔಷಧಗಳು ಮತ್ತು ಪ್ರಿಸ್ಕ್ರಿಪ್ಷನ್ ಪದ್ಧತಿಗಳ ಬಗ್ಗೆಯೂ ಈ ಅರ್ಜಿ ಕಳವಳ ವ್ಯಕ್ತಪಡಿಸಿದೆ. ಲೋಕಸಭೆಯಲ್ಲಿ ನೀಡಲಾದ ಹೇಳಿಕೆಗಳನ್ನು ಉಲ್ಲೇಖಿಸಿ, ಔಷಧಗಳ ಅಂದರೆ ಅವುಗಳ ರಾಸಾಯನಿಕ ಸಂಯೋಜನೆಯ ಹೆಸರಿನಲ್ಲಿ ಮಾರಾಟವಾಗುವ ಜೆನೆರಿಕ್ ಔಷಧಗಳು ತಮ್ಮ ಬ್ರಾಂಡೆಡ್ ಪ್ರತಿಸ್ಪರ್ಧಿಗಳಿಗಿಂತ "ಶೇಕಡಾ 50ರಿಂದ 90ರಷ್ಟು ಅಗ್ಗವಾಗಿರುತ್ತವೆ" ಎಂದು ಅದು ತಿಳಿಸಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor