ಖತೀಜಾ ಎಂಬ ಮಹಾತಾಯಿ
- ಪ್ರಮೀಳಾ ಕೃಷ್ಣನ್
ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ದಾದಿಯರು ಮತ್ತು ಶುಶ್ರೂಷಕಿಯರ ಪಾತ್ರ ದೊಡ್ಡದು. ಆದರೆ ಇಂದು ಅವರ ಸಂಖ್ಯೆ ಅಗತ್ಯಕ್ಕಿಂತ ತುಂಬ ಕಡಿಮೆಯಿದೆ. 10000ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ ಹೆಗ್ಗಳಿಕೆಗಾಗಿ ಪ್ರಶಸ್ತಿಗೆ ಪಾತ್ರರಾಗಿರುವ ನರ್ಸ್ ಖತೀಜಾ ಬೀಬಿ 33 ವರ್ಷಗಳ ಸುದೀರ್ಘ ವೃತ್ತಿಜೀವನದ ಅನುಭವದಲ್ಲಿ ಕಂಡಂತೆ ಮಹಿಳಾ ಆರೋಗ್ಯ ಕ್ಷೇತ್ರ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ನಿವೃತ್ತರಾಗಿರುವ ಅವರು ಅದನ್ನೆಲ್ಲ ನೆನಪಿಸಿಕೊಂಡಿದ್ದಾರೆ.
‘‘ನಾನು ಹೆರಿಗೆ ಮಾಡಿದ 10,000 ಶಿಶುಗಳಲ್ಲಿ ಒಂದು ಮಗುವೂ ನನ್ನ ಆರೈಕೆಯಲ್ಲಿ ಸಾಯಲಿಲ್ಲ ಎಂಬುದರ ಬಗ್ಗೆ ನನಗೆ ಹೆಮ್ಮೆಯಿದೆ’’ ಎನ್ನುವ ಖತೀಜಾ ಬೀಬಿ, ಇದನ್ನು ತಮ್ಮ ವೃತ್ತಿಜೀವನದ ಪ್ರಮುಖ ಅಂಶವೆಂದು ಪರಿಗಣಿಸುತ್ತಾರೆ. ಇದೇ ಕಾರಣಕ್ಕಾಗಿಯೇ ಅವರಿಗೆ ತಮಿಳುನಾಡು ಸರಕಾರ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಅವರಿಗೆ ಈಗ 60 ವರ್ಷ.
ತಮಿಳುನಾಡಿನ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಮೂರು ದಶಕಗಳ ಸೇವೆ ಅವರದು. ಹೆಚ್ಚಿನ ತಾಯಂದಿರ ಮರಣ ವನ್ನು ಕಾಣುತ್ತಿದ್ದ ದೇಶ ಇಂದು ಸಾಕಷ್ಟು ಸುಧಾರಿಸಿದೆ. ಹೆಣ್ಣುಮಕ್ಕಳು ಹುಟ್ಟುವುದರ ವಿಚಾರದಲ್ಲಿನ ಜನರ ದೃಷ್ಟಿಕೋನದಲ್ಲೂ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗಿವೆ ಎಂಬುದು ಇಷ್ಟು ವರ್ಷಗಳಲ್ಲಿ ಖತೀಜಾ ಕಂಡುಕೊಂಡಿರುವ ಸತ್ಯ.
1990ರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಖತೀಜಾ ಸ್ವತಃ ಗರ್ಭಿಣಿಯಾಗಿದ್ದರು. ನಾನು ಏಳು ತಿಂಗಳ ಗರ್ಭಿಣಿಯಾ ಗಿದ್ದೆ. ಆದರೂ ಇತರ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದೆ. ಎರಡು ತಿಂಗಳ ಸಣ್ಣ ಹೆರಿಗೆ ವಿರಾಮದ ನಂತರ ನಾನು ಮತ್ತೆ ಕೆಲಸಕ್ಕೆ ಹಾಜರಾದೆ ಎಂದು ನೆನಪು ಮಾಡಿಕೊಳ್ಳತ್ತಾರೆ ಖತೀಜಾ. ಮಹಿಳೆಯರು ಹೆರಿಗೆ ಸಮಯದಲ್ಲಿ ತುಂಬ ಆತಂಕಕ್ಕೆ ಒಳಗಾಗುತ್ತಾರೆ ಎಂಬುದನ್ನು ತಿಳಿದಿದ್ದ ಅವರು, ಅಂಥ ಆತಂಕದಿಂದ ಮಹಿಳೆ ಹೊರಬರುವಂತೆ ಮಾಡಿ ಆತ್ಮವಿಶ್ವಾಸ ತುಂಬುವುದಕ್ಕೆ ಮೊದಲ ಗಮನ ಕೊಡುತ್ತಿದ್ದರು.
ಜೂನ್ನಲ್ಲಿ ನಿವೃತ್ತರಾದ ಖತೀಜಾ ಕೆಲಸ ಮಾಡಿದ್ದು ಗ್ರಾಮೀಣ ಪ್ರದೇಶದಲ್ಲಿ. ಚೆನ್ನೈನಿಂದ 150 ಕಿ.ಮೀ. ದೂರವಿರುವ ವಿಲ್ಲುಪುರಂ. ಸಿಸೇರಿಯನ್ ಮಾಡುವ ವ್ಯವಸ್ಥೆಯಿರಲಿಲ್ಲ. ಹಾಗಾಗಿ ಹೆರಿಗೆಗೆ ತೊಡಕೇನಾದರೂ ಇದೆಯೆನ್ನಿಸಿದರೆ ತಡಮಾಡದೆ ಜಿಲ್ಲಾ ಆಸ್ಪತ್ರೆಗೆ ಕಳಿಸುತ್ತಿದ್ದರು.
ಖತೀಜಾ ಅವರಿಗೆ ತಾಯಿ ಝುಲೇಕಾ ಅವರೇ ಸ್ಫೂರ್ತಿ. ಅವರು ಹಳ್ಳಿಯಲ್ಲಿ ದಾದಿಯಾಗಿದ್ದರು. ಹಾಗಾಗಿ ಬಾಲ್ಯದಲ್ಲಿ ಖತೀಜಾ ಸಿರಿಂಜ್ಗಳೊಂದಿಗೆ ಆಟವಾಡುತ್ತಿದ್ದರಂತೆ. ಆಸ್ಪತ್ರೆಯ ವಾಸನೆಗೂ ಅವರು ಆಗಲೇ ಒಗ್ಗಿಕೊಂಡುಬಿಟ್ಟಿದ್ದರು.
ಬಡ ಮತ್ತು ಅರೆಬರೆ ಕಲಿತ ಗ್ರಾಮೀಣ ಮಹಿಳೆಯರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ತನ್ನ ತಾಯಿ ಮಾಡುತ್ತಿರುವ ಕೆಲಸ ಎಷ್ಟು ದೊಡ್ಡದೆಂಬುದು ಚಿಕ್ಕಂದಿನಲ್ಲಿಯೇ ಖತೀಜಾ ಅವರಿಗೆ ಅರ್ಥವಾಗಿತ್ತು. ಆ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಕಡಿಮೆಯಿದ್ದವು. ಬಡವರು ಶ್ರೀಮಂತರೆನ್ನದೆ ಎಲ್ಲಾ ಹಿನ್ನೆಲೆಯ ಮಹಿಳೆಯರೂ ‘ಪ್ರಾಥಮಿಕ ಆರೋಗ್ಯ ಕೇಂದ್ರ’ ಎಂದು ಈಗ ಕರೆಯಲಾಗುವ ಸರಕಾರದ ಹೆರಿಗೆ ಮನೆಗೇ ಬರಬೇಕಿತ್ತು.
ಖತೀಜಾ ಕೆಲಸ ಮಾಡುತ್ತಿದ್ದಲ್ಲಿ ಆಗ ಇದ್ದವರು ಒಬ್ಬ ವೈದ್ಯರು, ಏಳು ಮಂದಿ ಸಹಾಯಕರು ಮತ್ತು ಇಬ್ಬರು ನರ್ಸ್ ಗಳು. ಮೊದಲ ಕೆಲ ವರ್ಷಗಳು ತುಂಬಾ ಕೆಲಸವಿರುತ್ತಿತ್ತು. ಆಗ ಸ್ವತಃ ತನ್ನ ಮಕ್ಕಳನ್ನು ನೋಡಿಕೊಳ್ಳುವುದೇ ಖತೀಜಾ ಅವರಿಗೆ ಸಾಧ್ಯವಾಗದಂಥ ಸ್ಥಿತಿ. ಆಸ್ಪತ್ರೆಯ ಕರ್ತವ್ಯಕ್ಕಾಗಿ ಅವರು ಕುಟುಂಬದ ಕೆಲಸಗಳನ್ನು ಕೊಂಚ ಮರೆಯಬೇಕಾಗಿತ್ತು. ಆದರೆ ಆ ದಿನಗಳು ಬಹಳ ಅಮೂಲ್ಯವಾದ ಕಲಿಕೆಯ ಅನುಭವವನ್ನು ಕೊಟ್ಟವು ಎಂದು ನೆನೆಯುತ್ತಾರೆ ಖತೀಜಾ.
1990ರ ಅಂಕಿಅಂಶದ ಪ್ರಕಾರ, ಭಾರತದ ತಾಯಂದಿರ ಮರಣ ಪ್ರಮಾಣ 1,00,000 ಜೀವಂತ ಶಿಶು ಜನನಗಳಿಗೆ 556 ಇತ್ತು. ಅದೇ ವರ್ಷ ಪ್ರತೀ 1,000 ಜನನಗಳಿಗೆ 88 ಶಿಶುಮರಣಗಳು ಸಂಭವಿಸಿದ್ದವು. ಇತ್ತೀಚಿನ ಸರಕಾರಿ ಅಂಕಿಅಂಶಗಳ ಪ್ರಕಾರ ತಾಯಂದಿರ ಮರಣ ಪ್ರಮಾಣ ಪ್ರತೀ 1,00,000 ಜೀವಂತ ಶಿಶು ಜನನಗಳಿಗೆ 97ರಷ್ಟಿದೆ ಮತ್ತು ಶಿಶು ಮರಣ ಪ್ರಮಾಣ 1,000 ಜೀವಂತ ಜನನಗಳಿಗೆ 27ರಷ್ಟು. ಇದು ಬಹಳ ದೊಡ್ಡ ಬದಲಾವಣೆ.
ಗ್ರಾಮೀಣ ಆರೋಗ್ಯ ರಕ್ಷಣೆಗೆ ಸರಕಾರ ಹೆಚ್ಚು ಆದ್ಯತೆ ಕೊಡುತ್ತಿರುವುದು ಮತ್ತು ಹೆಚ್ಚುತ್ತಿರುವ ಮಹಿಳಾ ಸಾಕ್ಷರತೆ ಪ್ರಮಾಣ ಈ ಪ್ರಗತಿಗೆ ಕಾರಣವೆಂದು ಖತೀಜಾ ಹೇಳುತ್ತಾರೆ.
ಸಾಮಾನ್ಯ ದಿನಗಳಲ್ಲಾದರೆ ಖತೀಜಾ ಕೇವಲ ಒಂದು ಅಥವಾ ಎರಡು ಹೆರಿಗೆಗಳನ್ನು ನಿಭಾಯಿಸುತ್ತಿದ್ದರಂತೆ. ಆದರೆ ಅತ್ಯಂತ ಒತ್ತಡದಲ್ಲಿ ಬಿಡುವಿಲ್ಲದೆ ದುಡಿಯಬೇಕಾದ ದಿನಗಳನ್ನೂ ಕಂಡಿದ್ದಾರೆ ಅವರು. ‘‘ಮಾರ್ಚ್ 8, 2000 ನನ್ನ ಜೀವನದಲ್ಲಿ ಅತ್ಯಂತ ತುಂಬ ಕೆಲಸದ ದಿನವಾಗಿತ್ತು’’ ಎನ್ನುತ್ತಾರೆ. ಅದು ಅಂತರ್ರಾಷ್ಟ್ರೀಯ ಮಹಿಳಾ ದಿನ. ಕ್ಲಿನಿಕ್ಗೆ ಕಾಲಿಡುತ್ತಿದ್ದಂತೆ ಜನರು ಅವರಿಗೆ ಶುಭಾಶಯ ಹೇಳತೊಡಗಿದ್ದರು. ಹೆರಿಗೆ ಕೋಣೆಯಲ್ಲಿ ತನಗಾಗಿ ಇಬ್ಬರು ಮಹಿಳೆಯರು ಕಾಯುತ್ತಿದ್ದುದು ಅವರ ಗಮನಕ್ಕೆ ಬರುತ್ತದೆ. ಅವರಿಗೆ ಹೆರಿಗೆ ಮಾಡಿಸುತ್ತಾರೆ. ಅದಾದ ಬಳಿಕ ಮತ್ತೆ ಆರು ಮಹಿಳೆಯರು ಆಸ್ಪತ್ರೆಗೆ ಬರುತ್ತಾರೆ.
ಖತೀಜಾ ಅವರಿಗೆ ಸಹಾಯ ಮಾಡಲು ಒಬ್ಬ ಸಹಾಯಕಿ ಮಾತ್ರ ಇದ್ದಳು. ಆದರೂ ಕೆಲಸದ ಒತ್ತಡವನ್ನು ಅವರು ಬಹುಬೇಗ ಮರೆತುಬಿಟ್ಟಿದ್ದರು. ಅಂದು ಸಂಜೆ ಮನೆಗೆ ಹೊರಡುವ ವೇಳೆಯಲ್ಲಿ ಕಿವಿತುಂಬ ಹಸುಗೂಸುಗಳ ಅಳುವಿನದೇ ಸದ್ದು. ‘‘ಅದು ತುಂಬ ಸಂತೋಷದ ಭಾವನೆ’’ ಎನ್ನುತ್ತಾರೆ ಖತೀಜಾ.
ತಮ್ಮ ವೃತ್ತಿಬದುಕಿನಲ್ಲಿ ಮಾಡಿಸಿದ ಹೆರಿಗೆಗಳಲ್ಲಿ 50 ಜೋಡಿ ಅವಳಿಗಳು ಮತ್ತು ಒಮ್ಮೆ ತ್ರಿವಳಿ ಮಕ್ಕಳನ್ನು ಕೂಡ ಕಂಡ ಅದ್ಭುತ ಅನುಭವ ಅವರದು.
ಈಗ ಶ್ರೀಮಂತ ಕುಟುಂಬದ ಮಹಿಳೆಯರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಹೆಚ್ಚು. ಮಾತ್ರವಲ್ಲದೆ, ಸಿಸೇರಿಯನ್ ಹೆರಿಗೆಗಳೂ ಹೆಚ್ಚಿವೆ ಎಂಬುದನ್ನು ಗಮನಿಸಿದ್ದಾರೆ ಖತೀಜಾ. ನನ್ನ ತಾಯಿ ಹೆರಿಗೆಯ ಸಮಯದಲ್ಲಿ ಅನೇಕ ಸಾವುಗಳನ್ನು ನೋಡಿದ್ದಾರೆ. ಸಿಸೇರಿಯನ್ ಎಷ್ಟೋ ಜೀವಗಳನ್ನು ಉಳಿಸಿದೆ ಎಂದು ಖತೀಜಾ ಹೇಳುತ್ತಾರೆ. ಮೊದಮೊದಲು ಮಹಿಳೆಯರು ಶಸ್ತ್ರಚಿಕಿತ್ಸೆಗೆ ಹೆದರುತ್ತಿದ್ದರು. ಆದರೆ ಈಗ ಅನೇಕ ಹೆಣ್ಣುಮಕ್ಕಳು ಸಹಜ ಹೆರಿಗೆಗೆ ಹೆದರುತ್ತಾರೆ ಮತ್ತು ಸಿಸೇರಿಯನನ್ನೇ ಒಪ್ಪುತ್ತಾರೆ ಎಂಬುದೂ ಖತೀಜಾರ ಅನುಭವದ ಮಾತು.
ಕಳೆದ ಮೂರು ದಶಕಗಳಲ್ಲಿ ಗ್ರಾಮೀಣ ಕುಟುಂಬಗಳ ಆದಾಯ ಸುಧಾರಿಸಿದಂತೆ ಹೊಸ ಸವಾಲುಗಳೂ ಎದುರಾಗಿವೆ. ಅದರಲ್ಲೊಂದು ಗರ್ಭಿಣಿಯಾಗಿರುವವರನ್ನು ಸಕ್ಕರೆ ಕಾಯಿಲೆ ಕಾಡುವುದು. ಈಗಂತೂ ಅದು ತುಂಬಾ ಸಾಮಾನ್ಯವಾಗಿಬಿಟ್ಟಿದೆ ಎನ್ನು ತ್ತಾರೆ ಅವರು.
ಈಚಿನ ವರ್ಷಗಳಲ್ಲಿ ಗಂಡಂದಿರು ತಮ್ಮ ಪತ್ನಿಯ ಹೆರಿಗೆ ವೇಳೆ ಹತ್ತಿರದಲ್ಲಿರಲು ಬಯಸುತ್ತಾರೆ. ಇವೆಲ್ಲವೂ ನಾವೀಗ ಕಾಣುತ್ತಿರುವ ಮಹತ್ವದ ಸಾಮಾಜಿಕ ಬದಲಾವಣೆ ಎಂಬುದು ಖತೀಜಾರ ಅಭಿಪ್ರಾಯ.
ನಾನು ಕೆಟ್ಟ ಸಮಯ ಮತ್ತು ಒಳ್ಳೆಯ ಸಮಯಗಳೆರಡನ್ನೂ ನೋಡಿದ್ದೇನೆ. ಕೆಲವು ಗಂಡಂದಿರು ತಮ್ಮ ಹೆಂಡತಿ ಹೆಣ್ಣು ಮಗುವನ್ನು ಹೆತ್ತರೆ ಅವಳ ಹತ್ತಿರವೇ ಹೋಗುವುದಿಲ್ಲ. ಕೆಲವು ಮಹಿಳೆಯರು ಎರಡನೇ ಅಥವಾ ಮೂರನೇ ಸಲವೂ ಹೆಣ್ಣು ಮಗುವೇ ಆದರೆ ತಾವೇ ಅಳುವುದುಂಟು ಎನ್ನುತ್ತಾರೆ ಖತೀಜಾ.
90ರ ದಶಕದಲ್ಲಿ ಲಿಂಗಾಧಾರಿತ ಗರ್ಭಪಾತ ಗಳು ಮತ್ತು ಶಿಶುಹತ್ಯೆಯ ಪ್ರಕರಣಗಳು ಎಷ್ಟು ದೊಡ್ಡ ಮಟ್ಟದಲ್ಲಿ ವರದಿಯಾದವು ಎಂದರೆ, ಮಗುವಿನ ಲಿಂಗದ ಬಗ್ಗೆ ಪೋಷಕರಿಗೆ ವೈದ್ಯರು ಬಹಿರಂಗಪಡಿಸುವುದನ್ನು ಸರಕಾರ ನಿಷೇಧಿಸಿತು. ತಮಿಳುನಾಡು ಸರಕಾರ ಬೇಡದ ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ‘ತೊಟ್ಟಿಲು ಯೋಜನೆ’ ಪ್ರಾರಂಭಿಸಿತ್ತು. ಆದರೆ ಈಗ ಸನ್ನಿವೇಶ ಬದಲಾಗಿದೆ ಅನೇಕ ದಂಪತಿಗಳು ಲಿಂಗವನ್ನು ಲೆಕ್ಕಿಸದೆ, ಹೆಣ್ಣಗಂಡುಗಳೆರಡನ್ನೂ ಸಮಾನವಾಗಿ ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ಖತೀಜಾ.
ಖತೀಜಾ ಅವರಿಗೆ ನಿವೃತ್ತಿಯ ನಂತರ ಏನೆಂಬುದು ಗೊತ್ತಿಲ್ಲ. ಜೀವನಕ್ಕಾಗಿ ಯಾವುದೇ ನಿಶ್ಚಿತ ಯೋಜನೆಗಳೇನೂ ಅವರ ಕಣ್ಣೆದುರು ಇಲ್ಲ. ಆದರೆ ತಾನು ಯಾವುದನ್ನು ತುಂಬ ನೆನಪು ಮಾಡಿಕೊಳ್ಳುತ್ತೇನೆ ಎಂಬುದು ಅವರಿಗೆ ಗೊತ್ತು. ಆಗಷ್ಟೇ ಹುಟ್ಟಿದ ಕೂಸಿನ ಮೊದಲ ಅಳು ಮತ್ತು ಆ ಸ್ಪರ್ಶಕ್ಕಾಗಿ ನಾನು ಯಾವಾಗಲೂ ಕಾಯು ತ್ತೇನೆ ಎಂಬುದು ಅವರ ಮನದಾಳದ ಬಯಕೆ.
ಹೆರಿಗೆಯ ನೋವಿಗೆ ಎಲ್ಲ ಹೆಂಗಸರೂ ಕಂಗೆಟ್ಟುಹೋಗುತ್ತಾರೆ. ಆದರೆ ಅವರು ಎಲ್ಲವನ್ನೂ ಮರೆತು ನಗುವುದು ತಮ್ಮ ಮಗುವಿನ ಅಳುವಿನ ಸದ್ದು ಕೇಳಿದಾಗ. ಆ ಅದ್ಭುತವನ್ನು ನೋಡುವುದೇ ನನಗೆ ತುಂಬಾ ಸಂತಸದ ಅನುಭವವಾಗಿತ್ತು. ಇದು ನನಗೆ ಇಷ್ಟು ವರ್ಷಗಳ ಕಾಲದ ಒಂದು ಆತ್ಮೀಯ ಯಾನವಾಗಿತ್ತು ಎಂದು ನೆನೆಯುವ ಖತೀಜಾ ಅವರ ಮನಸ್ಸು ಒಬ್ಬ ಮಹಾತಾಯಿಯ ಮಡಿಲಲ್ಲದೆ ಮತ್ತೇನೂ ಅಲ್ಲ.
(ಕೃಪೆ: ಬಿಬಿಸಿ)