Photo Credit : indianexpress.com

ಅಮೆರಿಕದ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ ಜಾಗತಿಕವಾಗಿ ಸುಮಾರು 60,000 ಉದ್ಯೋಗಿಗಳನ್ನು ಒಳಗೊಳ್ಳುವ ಯೋಜನೆಯನ್ನು ಭಾರತಕ್ಕೂ ವಿಸ್ತರಿಸಿದ್ದು, ಇದರ ಅಡಿಯಲ್ಲಿ ಭಾರತದಲ್ಲಿ ಸಂಸ್ಥೆಯು ಹೊಂದಿರುವ 23,000 ನೌಕರರಲ್ಲಿ ಒಂದು ಭಾಗದ ಸಿಬ್ಬಂದಿಗೆ 'ಸ್ವಯಂ ನಿವೃತ್ತಿಯ ಪ್ರಸ್ತಾಪ' (Voluntary Exit Offer) ಸಿಗುವ ಸಾಧ್ಯತೆಯಿದೆ. ಭಾರತದಲ್ಲಿ ಕೋಪೈಲಟ್, AI ಎಕ್ಸ್ಪೀರಿಯನ್ಸ್, ವಿಂಡೋಸ್ ಮತ್ತು ಡಿವೈಸಸ್, ಎಕ್ಸ್ಬಾಕ್ಸ್, ಹಣಕಾಸು ಹಾಗೂ ಮಾನವ ಸಂಪನ್ಮೂಲ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು ಈ ಕ್ರಮಕ್ಕೆ ಒಳಪಡಬಹುದು.

ಸೋಮವಾರ (ಅ.26) 'ಸ್ವಯಂ ನಿವೃತ್ತಿಯ ಪ್ರಸ್ತಾಪ' (Voluntary Exit Offer - VEO) ಯೋಜನೆಯನ್ನು ಪ್ರಕಟಿಸಿದ ಮೈಕ್ರೋಸಾಫ್ಟ್, ಭಾರತ, ಅಮೆರಿಕ, ಬ್ರಿಟನ್ ಮತ್ತು ಕೆನಡಾ ದೇಶಗಳಲ್ಲಿ ಪಾಲ್ಗೊಳ್ಳುವ ತಂಡಗಳ ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಹಂತದ ಅರ್ಹ ಉದ್ಯೋಗಿಗಳಿಗೆ ಇದು ಲಭ್ಯವಿರುತ್ತದೆ ಎಂದು ತಿಳಿಸಿದೆ. ಲೆವೆಲ್ 70 ಎಂಬುದು ಮೈಕ್ರೋಸಾಫ್ಟ್ ನ ಆಂತರಿಕ ಶ್ರೇಣಿಯ ಹಂತವಾಗಿದ್ದು, ಇದು ವೈಸ್ ಪ್ರೆಸಿಡೆಂಟ್ ಹುದ್ದೆಯಲ್ಲಿರುವ ಉದ್ಯೋಗಿಗಳನ್ನೂ ಒಳಗೊಳ್ಳಬಹುದು. ಭಾರತ ಮೂಲದ ಎಷ್ಟು ಉದ್ಯೋಗಿಗಳು ಈ ಯೋಜನೆಗೆ ಅರ್ಹರಾಗಿದ್ದಾರೆ ಎಂಬುದನ್ನು ಕಂಪೆನಿ ಬಹಿರಂಗಪಡಿಸಿಲ್ಲವಾದರೂ, ಸಾಫ್ಟ್ವೇರ್ ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ಕೃತಕ ಬುದ್ಧಿಮತ್ತೆ (AI), ಕ್ಲೌಡ್ ಮೂಲಸೌಕರ್ಯ, ಮಾರಾಟ, ಗ್ರಾಹಕ ಬೆಂಬಲ ಹಾಗೂ ಕಾರ್ಪೊರೇಟ್ ವಿಭಾಗಗಳಲ್ಲಿ ಭಾರತೀಯರನ್ನು ನೇಮಿಸಿಕೊಂಡಿದೆ.

"ಇದು ಸಮಯ-ನಿಗದಿತ ಸ್ವಯಂಪ್ರೇರಿತ ಯೋಜನೆಯಾಗಿದ್ದು, ಅರ್ಹರಿಗೆ ಆರ್ಥಿಕ ಬೆಂಬಲ ಮತ್ತು ವೃತ್ತಿ ಯೋಜನೆಗೆ ಸಂಬಂಧಿಸಿದ ಸಂಪನ್ಮೂಲಗಳೊಂದಿಗೆ ಮೈಕ್ರೋಸಾಫ್ಟ್ ತೊರೆಯುವ ಅವಕಾಶವನ್ನು ನೀಡುತ್ತದೆ. ಕೆಲವು ವಿಭಾಗಗಳು ಈ ಸ್ವಯಂ ನಿವೃತ್ತಿಯ ಪ್ರಸ್ತಾಪವನ್ನು ನೀಡುತ್ತಿದ್ದರೆ, ಇನ್ನು ಕೆಲವು ನೀಡುತ್ತಿಲ್ಲ. ಪ್ರತಿಯೊಂದು ವಿಭಾಗದ ಆದ್ಯತೆಗಳು, ಗ್ರಾಹಕರ ಬದ್ಧತೆಗಳು ಮತ್ತು ಕಾರ್ಯಪಡೆಯ ಅಗತ್ಯಗಳನ್ನು ಆಧರಿಸಿ ಭಾಗವಹಿಸುವಿಕೆ ಬದಲಾಗುತ್ತದೆ" ಎಂದು ಮೈಕ್ರೋಸಾಫ್ಟ್ ನ ಕಾರ್ಯನಿರ್ವಾಹಕ ವೈಸ್ ಪ್ರೆಸಿಡೆಂಟ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಅಮಿ ಕೋಲ್ಮನ್ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವ ಉದ್ಯೋಗಿಗಳು ಮಾಡುತ್ತಿದ್ದ ಕೆಲಸಗಳನ್ನು ಸ್ವಯಂಚಾಲಿತಗೊಳಿಸಲು ಕಂಪೆನಿಗಳು AI ಉಪಕರಣಗಳನ್ನು ಬಳಸುತ್ತಿದ್ದು, AI-ಚಾಲಿತ ಉದ್ಯೋಗ ನಷ್ಟದ ಆತಂಕ ಹೆಚ್ಚಾಗುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಇತ್ತೀಚಿನ ತಿಂಗಳುಗಳಲ್ಲಿ ಉದ್ಯೋಗ ಕಡಿತ, ನೇಮಕಾತಿ ಮಂದಗೊಳಿಸುವಿಕೆ ಮತ್ತು ಸಾಂಸ್ಥಿಕ ಪುನರ್ರಚನೆಯನ್ನು ಘೋಷಿಸಿವೆ. ಇವುಗಳಲ್ಲಿ ಕೆಲವು ಸಂಸ್ಥೆಗಳು AI ತಂತ್ರಜ್ಞಾನದಿಂದ ಉಂಟಾದ ಉತ್ಪಾದಕತೆಯ ಹೆಚ್ಚಳವನ್ನು ನೇರವಾಗಿ ಉಲ್ಲೇಖಿಸಿವೆ. ಈ ತಂತ್ರಜ್ಞಾನವು ಹೊಸ ಕೌಶಲ್ಯಗಳು ಮತ್ತು ವಿಶೇಷ ಪಾತ್ರಗಳಿಗೆ ಬೇಡಿಕೆಯನ್ನು ಸೃಷ್ಟಿಸುತ್ತಿದೆಯಾದರೂ, ಸಾಂಪ್ರದಾಯಿಕ ಸಾಫ್ಟ್ವೇರ್ ಅಭಿವೃದ್ಧಿ, ಗ್ರಾಹಕ ಬೆಂಬಲ ಹಾಗೂ ಇತರ ಕಚೇರಿ ಉದ್ಯೋಗಗಳ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ. ಮೈಕ್ರೋಸಾಫ್ಟ್ ತನ್ನ ಇತ್ತೀಚಿನ ಸ್ವಯಂ ನಿವೃತ್ತಿಯ ಪ್ರಸ್ತಾಪ ಕಾರ್ಯಕ್ರಮಕ್ಕೆ AI ಮಾನವ ಉದ್ಯೋಗಿಗಳ ಸ್ಥಾನವನ್ನು ತುಂಬುತ್ತಿರುವುದೇ ಕಾರಣ ಎಂದು ನೇರವಾಗಿ ಹೇಳಿಲ್ಲ.

►ಮೈಕ್ರೋಸಾಫ್ಟ್‌ ನಿಂದ ಭಾರತೀಯ ಉದ್ಯೋಗಿಗಳ ಮೇಲಾಗುವ ಪರಿಣಾಮ

ಜಾಗತಿಕವಾಗಿ ಸುಮಾರು 60,000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಪ್ಯಾಕೇಜ್ ನೀಡಲು ಮೈಕ್ರೋಸಾಫ್ಟ್ ನಿರ್ಧರಿಸಿದ್ದು, ಇದು ಭಾರತದಲ್ಲಿರುವ ಸಿಬ್ಬಂದಿಯ ಮೇಲೆಯೂ ಪರಿಣಾಮ ಬೀರಲಿದೆ. ಕಂಪೆನಿಯು ಭಾರತದಲ್ಲಿ ಸುಮಾರು 23,000 ಜನರನ್ನು ನೇಮಿಸಿಕೊಂಡಿದೆ. ಎಲ್ಲಾ ಹುದ್ದೆಗಳ ಮೇಲೆಯೂ ಇದರ ಪ್ರಭಾವ ಇರುವುದಿಲ್ಲ. ಈ ಯೋಜನೆಗೆ ಅರ್ಹರಾಗಿರುವ ಉದ್ಯೋಗಿಗಳಿಗೆ ಕಂಪೆನಿಯಿಂದ ಇಮೇಲ್ ಬರಲಿದ್ದು, ಭಾಗವಹಿಸುವ ಬಗ್ಗೆ ನಿರ್ಧರಿಸಲು ಡಿಸೆಂಬರ್ 1ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಉದ್ಯಮ ಕ್ಷೇತ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಯೋಜನೆಯು ಆಯ್ದ ವಿಭಾಗಗಳಲ್ಲಿ ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಹಂತದ ಉದ್ಯೋಗಿಗಳನ್ನು ಒಳಗೊಳ್ಳಲಿದ್ದು, ಇದರಲ್ಲಿ ಕೆಲವು ಹಿರಿಯ ಅಧಿಕಾರಿಗಳೂ ಸೇರಿದ್ದಾರೆ. ಕೋಪೈಲಟ್, AI ಎಕ್ಸ್ಪೀರಿಯನ್ಸ್, ವಿಂಡೋಸ್ ಮತ್ತು ಡಿವೈಸಸ್, ಎಕ್ಸ್ಬಾಕ್ಸ್, ಹಣಕಾಸು ಹಾಗೂ ಮಾನವ ಸಂಪನ್ಮೂಲ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಈ ಯೋಜನೆಗೆ ಅರ್ಹರಾಗಿದ್ದಾರೆ. ಅಂದರೆ, ಭಾರತದಲ್ಲಿರುವ ಮೈಕ್ರೋಸಾಫ್ಟ್ ನ ಎಲ್ಲಾ ಉದ್ಯೋಗಿಗಳಿಗೆ ಈ ಆಫರ್ ಸಿಗುವುದಿಲ್ಲ. ಅವರು ಕೆಲಸ ಮಾಡುವ ವಿಭಾಗವನ್ನು ಆಧರಿಸಿ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ.

ಅಮೆರಿಕದ ರೆಡ್ಮಂಡ್ ನಲ್ಲಿರುವ ಪ್ರಧಾನ ಕಚೇರಿಯನ್ನು ಹೊರತುಪಡಿಸಿದರೆ, ಮೈಕ್ರೋಸಾಫ್ಟ್ ನ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ ಒಂದಾದ 'ಇಂಡಿಯಾ ಡೆವಲಪ್ಮೆಂಟ್ ಸೆಂಟರ್' (IDC) ಭಾರತದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೈದರಾಬಾದ್, ಬೆಂಗಳೂರು ಮತ್ತು ದಿಲ್ಲಿ ಎನ್ಸಿಆರ್ ಪ್ರದೇಶಗಳಲ್ಲಿ ಹರಡಿರುವ ಈ ಕೇಂದ್ರವು ವಿಂಡೋಸ್, ಅಝೂರ್, ಮೈಕ್ರೋಸಾಫ್ಟ್ 365 ಮತ್ತು AI ಉತ್ಪನ್ನಗಳು ಸೇರಿದಂತೆ ಕಂಪೆನಿಯ ಜಾಗತಿಕ ವ್ಯವಹಾರಗಳಿಗೆ ಅಗತ್ಯವಾದ ತಂತ್ರಜ್ಞಾನವನ್ನು ರೂಪಿಸುತ್ತದೆ. ಇಲ್ಲಿನ ಭಾರತೀಯ ತಂಡಗಳು ಕೋಪೈಲಟ್ ಸ್ಟುಡಿಯೋ, ಅಝೂರ್ AI ಸರ್ಚ್, AI ಏಜೆಂಟ್ ಗಳು, ಸ್ಪೀಚ್, ಟ್ರಾನ್ಸ್ಲೇಶನ್ ತಂತ್ರಜ್ಞಾನ ಹಾಗೂ ಮೆಷಿನ್ ಲರ್ನಿಂಗ್ ಪ್ಲಾಟ್ಫಾರ್ಮ್ ಗಳಿಗೆ ಕೊಡುಗೆ ನೀಡುತ್ತಿವೆ.

ಭಾರತೀಯ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಸ್ವಯಂಪ್ರೇರಿತ ನಿರ್ಗಮನ ಪ್ಯಾಕೇಜ್ ಸಂಸ್ಥೆಯ ಸಾಮಾನ್ಯ ಸೆವರೆನ್ಸ್ ಪ್ಯಾಕೇಜ್ ಗೆ ಸಮನಾಗಿರುತ್ತದೆ. ಪೂರ್ಣಗೊಳಿಸಿದ ಪ್ರತಿ ವರ್ಷದ ಸೇವೆಗೆ ಒಂದು ತಿಂಗಳ ಮೂಲ ವೇತನ, ಆರೋಗ್ಯ ವಿಮೆ ಹಾಗೂ ವೃತ್ತಿ ಪರಿವರ್ತನೆಗೆ ನೆರವು ಸಿಗಲಿದೆ. ಆಫರ್ ಸ್ವೀಕರಿಸಲು ಅರ್ಹ ಉದ್ಯೋಗಿಗಳಿಗೆ ಡಿಸೆಂಬರ್ 1ರವರೆಗೆ ಸಮಯವಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ನಿರ್ಗಮನ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಭಾರತದಲ್ಲಿ ಎಷ್ಟು ಜನ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಕಂಪೆನಿ ಸ್ಪಷ್ಟಪಡಿಸಿಲ್ಲ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತಿರುವ ಮೈಕ್ರೋಸಾಫ್ಟ್, ತನ್ನ ಕಾರ್ಯಪಡೆಯನ್ನು ಪುನರ್ರಚಿಸಲು ಈ ಕ್ರಮ ಕೈಗೊಂಡಿದೆ. ಭಾರತಕ್ಕೆ ಸಂಬಂಧಿಸಿದ ತನ್ನ ಯೋಜನೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಂಸ್ಥೆ ತಿಳಿಸಿದೆ.

"ಮೈಕ್ರೋಸಾಫ್ಟ್ ಭಾರತದ ಪ್ರತಿಭೆ ಮತ್ತು ತಂತ್ರಜ್ಞಾನ ವಲಯದಲ್ಲಿ ಹೂಡಿಕೆಯನ್ನು ಮುಂದುವರಿಸಲಿದೆ. 2025ರಿಂದ 2029ರ ನಡುವೆ ಕ್ಲೌಡ್, AI ಮೂಲಸೌಕರ್ಯ, ಕೌಶಲ್ಯ ಅಭಿವೃದ್ಧಿ ಹಾಗೂ ಕಾರ್ಯಾಚರಣೆಗಳಿಗಾಗಿ 20.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ. 2030ರ ವೇಳೆಗೆ ಭಾರತದಲ್ಲಿ 2 ಕೋಟಿ ಜನರಿಗೆ AI ಕೌಶಲ್ಯ ತರಬೇತಿ ನೀಡುವ ಗುರಿಯತ್ತ ನಾವು ಸಾಗುತ್ತಿದ್ದೇವೆ" ಎಂದು ಮೈಕ್ರೋಸಾಫ್ಟ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೈಕ್ರೋಸಾಫ್ಟ್ ಉದ್ಯೋಗಿಗಳ ಮೇಲೆ, ವಿಶೇಷವಾಗಿ H-1B ವೀಸಾದಲ್ಲಿರುವವರ ಮೇಲೆಯೂ ಪರಿಣಾಮ ಬೀರಬಹುದು. ತಾತ್ಕಾಲಿಕ ವೀಸಾದಲ್ಲಿರುವ ವಿದೇಶಿ ಉದ್ಯೋಗಿಗಳಿಗೆ ಈ ಯೋಜನೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ಕಂಪೆನಿ ಸ್ಪಷ್ಟಪಡಿಸಿಲ್ಲ. ಬೇರೆ ಕೆಲಸ ಕಂಡುಕೊಳ್ಳದೆ ನಿರ್ಗಮನ ಆಯ್ಕೆ ಮಾಡಿಕೊಳ್ಳುವ ಉದ್ಯೋಗಿಗಳು ವಲಸೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಮೆರಿಕದ ಪೌರತ್ವ ಇಲ್ಲದ H-1B ವೀಸಾ ಹೊಂದಿರುವವರು ಕೆಲಸ ಕಳೆದುಕೊಂಡ 60 ದಿನಗಳ ಒಳಗೆ ಮತ್ತೊಂದು ಸಂಸ್ಥೆಯ ಪ್ರಾಯೋಜಕತ್ವ (ಸ್ಪಾನ್ಸರ್ಶಿಪ್) ಪಡೆಯಬೇಕು, ವೀಸಾ ಸ್ಥಿತಿಯನ್ನು ಬದಲಾಯಿಸಬೇಕು ಅಥವಾ ದೇಶ ತೊರೆಯಬೇಕಾಗುತ್ತದೆ. ಅಮೆರಿಕದಲ್ಲಿ ವಲಸೆ ನಿಯಮಗಳು ಕಠಿಣಗೊಳ್ಳುತ್ತಿರುವ ಮತ್ತು ಉದ್ಯೋಗ ಆಧಾರಿತ ವೀಸಾ ಹಾಗೂ ಖಾಯಂ ನಿವಾಸ (ಪರ್ಮನೆಂಟ್ ರೆಸಿಡೆನ್ಸಿ) ಕಾರ್ಯಕ್ರಮಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಆತಂಕಗಳು ಎದುರಾಗಿವೆ.

►AI ಬಳಕೆಯಿಂದ ಉದ್ಯೋಗಗಳ ಮೇಲೆ ಪರಿಣಾಮ

ತಂತ್ರಜ್ಞಾನ ಕ್ಷೇತ್ರದಲ್ಲಿ ನೌಕರರು ಮಾಡುತ್ತಿದ್ದ ಕೆಲಸಗಳನ್ನು AI ಉಪಕರಣಗಳು ನಿರ್ವಹಿಸಲು ಪ್ರಾರಂಭಿಸಿವೆ. ಇದರಿಂದಾಗಿ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಹಲವು ಕಂಪೆನಿಗಳು ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ ಅಥವಾ ಹೊಸ ನೇಮಕಾತಿಯನ್ನು ಮಂದಗೊಳಿಸುತ್ತಿವೆ. ಮೈಕ್ರೋಸಾಫ್ಟ್ ಕೈಗೊಂಡಿರುವ ಈ ನಿರ್ಧಾರವೂ ಈ ಬೃಹತ್ ಪುನರ್ರಚನೆಯ ಭಾಗವಾಗಿಯೇ ಕಂಡುಬರುತ್ತಿದೆ. ಕೆಲವು ಸಂಸ್ಥೆಗಳು AI ತಂತ್ರಜ್ಞಾನದಿಂದ ಉತ್ಪಾದಕತೆ ಹೆಚ್ಚಿರುವುದನ್ನೇ ಉದ್ಯೋಗ ಕಡಿತಕ್ಕೆ ನೇರ ಕಾರಣ ಎಂದು ಹೇಳಿದ್ದರೆ, ಇನ್ನು ಕೆಲವು ಸಂಸ್ಥೆಗಳು AI ವಲಯದಲ್ಲಿ ಹೂಡಿಕೆ ಹೆಚ್ಚಿಸಲು ಹಾಗೂ ಕಾರ್ಯಾಚರಣೆಯನ್ನು ಮರುಸಂಘಟಿಸಲು ಈ ಕ್ರಮ ಅಗತ್ಯ ಎಂದು ತಿಳಿಸಿವೆ.

ಈ ಬದಲಾವಣೆಗೆ ಪ್ರಮುಖ ಉದಾಹರಣೆ 2026ರ ಫೆಬ್ರವರಿಯಲ್ಲಿ ಕಂಡುಬಂದಿತು. ಟ್ವಿಟರ್ ಸಹಸಂಸ್ಥಾಪಕ ಜಾಕ್ ಡೋರ್ಸಿ ಅವರ ಫಿನ್ಟೆಕ್ ಕಂಪೆನಿ 'ಬ್ಲಾಕ್' (Block), ತನ್ನ ಒಟ್ಟು ಕಾರ್ಯಪಡೆಯ ಅರ್ಧದಷ್ಟು ಅಂದರೆ 4,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತು. AI ತಂತ್ರಜ್ಞಾನದ ಸುಧಾರಣೆಯಿಂದಾಗಿ ಸಣ್ಣ ತಂಡಗಳೇ ಹೆಚ್ಚಿನ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿದೆ ಎಂದು ಡೋರ್ಸಿ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. 2025ರ ಸೆಪ್ಟೆಂಬರ್ನಲ್ಲಿ ಸಾಫ್ಟ್ವೇರ್ ಸಂಸ್ಥೆ 'ಸೇಲ್ಸ್ಫೋರ್ಸ್', ತನ್ನ ಗ್ರಾಹಕ ಬೆಂಬಲ ವಿಭಾಗದ ಉದ್ಯೋಗಿಗಳ ಸಂಖ್ಯೆಯನ್ನು 9,000ದಿಂದ 5,000ಕ್ಕೆ ಇಳಿಸಿತು. ಗ್ರಾಹಕರ ಪ್ರಶ್ನೆಗಳನ್ನು AI ಏಜೆಂಟ್ಗಳು ನಿರ್ವಹಿಸುತ್ತಿರುವುದರಿಂದ ಈ ವಿಭಾಗಕ್ಕೆ ಕಡಿಮೆ ಸಿಬ್ಬಂದಿ ಸಾಕು ಎಂದು ಕಂಪೆನಿಯ ಸಿಇಒ ಮಾರ್ಕ್ ಬೆನಿಯೋಫ್ ಹೇಳಿದ್ದರು.

ಭಾರತದಲ್ಲೂ ಇದರ ಪ್ರಭಾವ ಕಂಡುಬಂದಿದೆ. 2026ರ ಫೆಬ್ರವರಿಯಲ್ಲಿ ಗೃಹ ಒಳಾಂಗಣ ವಿನ್ಯಾಸದ ವೇದಿಕೆ 'ಲಿವ್ಸ್ಪೇಸ್', AI ಆಧಾರಿತ ಕಾರ್ಯವಿಧಾನಕ್ಕೆ ಬದಲಾಗುವ ಭಾಗವಾಗಿ ತನ್ನ 1,000 ಉದ್ಯೋಗಿಗಳನ್ನು (ಶೇ. 12ರಷ್ಟು ಸಿಬ್ಬಂದಿ) ಕೆಲಸದಿಂದ ತೆಗೆದುಹಾಕಿತು. ಬೆಂಗಳೂರು ಮೂಲದ ಈ ಕಂಪೆನಿಯ ವಿನ್ಯಾಸ, ಮಾರಾಟ, ಕಾರ್ಯಾಚರಣೆ ಹಾಗೂ ಮಾರುಕಟ್ಟೆ ವಿಭಾಗಗಳ ಮೇಲೆ ಈ ಪರಿಣಾಮ ಬಿತ್ತು. ಈ ವಿಭಾಗಗಳಲ್ಲಿ AI ಏಜೆಂಟ್ ಗಳು ಮತ್ತು ಸ್ವಯಂಚಾಲಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರಿಂದ ಮಾನವ ಉದ್ಯೋಗಿಗಳ ಅಗತ್ಯ ಕಡಿಮೆಯಾಗಿದೆ ಎಂದು ಲಿವ್ಸ್ಪೇಸ್ ತಿಳಿಸಿತ್ತು. ಇದಕ್ಕೂ ಮುನ್ನ 2023ರಲ್ಲಿ ಭಾರತೀಯ ಇ-ಕಾಮರ್ಸ್ ಸ್ಟಾರ್ಟ್ಅಪ್ 'ದುಕಾನ್' ತನ್ನ ಗ್ರಾಹಕ ಸೇವಾ ತಂಡದ ಶೇ. 90ರಷ್ಟು ಸಿಬ್ಬಂದಿಯನ್ನು AI ಚಾಟ್ಬಾಟ್ನಿಂದ ಬದಲಾಯಿಸಿರುವುದಾಗಿ ಘೋಷಿಸಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಭಾರತದ ಬೃಹತ್ ಐಟಿ ಸೇವಾ ವಲಯವೂ ತನ್ನ ಸಾಂಪ್ರದಾಯಿಕ ಕಾರ್ಯವಿಧಾನವನ್ನು ಬದಲಾಯಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿದೆ. 2025ರ ಜುಲೈನಲ್ಲಿ ದೇಶದ ಅತಿದೊಡ್ಡ ಐಟಿ ಸಂಸ್ಥೆ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' (TCS), ಮಧ್ಯಮ ಮತ್ತು ಹಿರಿಯ ನಿರ್ವಹಣಾ ಹಂತದ ಸುಮಾರು 12,000 ಉದ್ಯೋಗಿಗಳನ್ನು ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿತು. ಕೌಶಲ್ಯದ ಕೊರತೆ ಮತ್ತು ವ್ಯವಹಾರದ ಅಗತ್ಯತೆಗಳು ಬದಲಾಗಿರುವುದೇ ಇದಕ್ಕೆ ಕಾರಣ ಎಂದು ಕಂಪೆನಿ ಹೇಳಿದೆಯಾದರೂ, ಸಾಫ್ಟ್ವೇರ್ ಅಭಿವೃದ್ಧಿ, ಟೆಸ್ಟಿಂಗ್ ಮತ್ತು ನಿರ್ವಹಣೆಯಲ್ಲಿ ಜೆನೆರೇಟಿವ್ AI ಬಳಕೆ ಹೆಚ್ಚುತ್ತಿರುವ ನಡುವೆಯೇ ಈ ನಿರ್ಧಾರ ಬಂದಿತ್ತು. ಟಿಸಿಎಸ್ ಈ ಉದ್ಯೋಗ ಕಡಿತಕ್ಕೆ AI ತಂತ್ರಜ್ಞಾನವೇ ನೇರ ಕಾರಣ ಎಂದು ಎಲ್ಲೂ ಹೇಳಿಲ್ಲ.

ಮತ್ತೊಂದೆಡೆ, ಉದ್ಯೋಗಗಳಿಗಾಗಿ ಸಂಪೂರ್ಣವಾಗಿ AI ಮೇಲೆಯೇ ಅವಲಂಬಿತವಾಗುವುದರಿಂದ ಹಿಂದೆ ಸರಿದ ಉದಾಹರಣೆಗಳೂ ಇವೆ. ಸ್ವೀಡನ್ನ ಫಿನ್ಟೆಕ್ ಕಂಪೆನಿ 'ಕ್ಲಾರ್ನಾ' (Klarna), ತನ್ನ AI ಅಸಿಸ್ಟೆಂಟ್ 700 ಗ್ರಾಹಕ ಸೇವಾ ಸಿಬ್ಬಂದಿ ಮಾಡುವಷ್ಟೇ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಆರಂಭದಲ್ಲಿ ಹೇಳಿತ್ತು. ಆದರೆ, ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಹಕರಿಗೆ ಮಾನವ ಸಿಬ್ಬಂದಿಯ ನೆರವು ಇಂದಿಗೂ ಅಗತ್ಯ ಎಂಬುದನ್ನು ಮನಗಂಡ ಸಂಸ್ಥೆಯು, ಬಳಿಕ ಮತ್ತೆ ಮಾನವ ನೌಕರರನ್ನು ನೇಮಕ ಮಾಡಿಕೊಳ್ಳಲು ಮುಂದಾಯಿತು.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor