ಗಿಳಿಗಳು ಮಾತು ಕಲಿಯುವುದು ಮಾತ್ರವಲ್ಲ, ಒಗಟುಗಳನ್ನೂ ಬಿಡಿಸುತ್ತವೆ; ಗಿಳಿಗಳ ಜ್ಞಾನದ ಹಿಂದಿನ ವಿಜ್ಞಾನವೇನು?
ಸಾಂದರ್ಭಿಕ ಚಿತ್ರ (Photo: AI Generated)
ಗಿಳಿಗಳು ತಮ್ಮ ಬುದ್ಧಿಮತ್ತೆಯ ಸಂಪೂರ್ಣ ಸಾಮರ್ಥ್ಯವನ್ನು ಪ್ರಕಟಿಸಬೇಕಾದರೆ, ಅವುಗಳ ವಿಶೇಷ ಮೆದುಳಿನ ರಚನೆಗಳಿಗೆ ಪೂರಕವಾಗಿ ಬಲವಾದ ಸಾಮಾಜಿಕ ಬಂಧಗಳು ಮತ್ತು ಸುತ್ತಮುತ್ತಲಿನ ಪರಿಸರದಿಂದ ಕಲಿಯುವ ಸಾಮರ್ಥ್ಯದ ಸಂಯೋಜನೆ ಅಗತ್ಯ.
ಗಿಳಿಗಳು ಮಾನವನ ಮಾತನ್ನು ಅನುಕರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಆದರೆ ಅವುಗಳ ಬುದ್ಧಿವಂತಿಕೆಯು ನಾವು ಊಹಿಸಿದ್ದಕ್ಕಿಂತ ಹೆಚ್ಚಿದೆ. ಪರಿಚಿತ ಜನರನ್ನು ಗುರುತಿಸುವುದರಿಂದ ಹಿಡಿದು ಒಗಟುಗಳನ್ನು ಬಿಡಿಸುವ ಮತ್ತು ವೀಕ್ಷಣೆಯ ಮೂಲಕ ಕಲಿಯುವವರೆಗೆ, ಈ ಪಕ್ಷಿಗಳು ಪ್ರಭಾವಶಾಲಿ ಅರಿವಿನ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ. ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು, ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದು ಮತ್ತು ಸಾಮಾಜಿಕ ಸೂಚನೆಗಳಿಗೆ ಪ್ರತಿಕ್ರಿಯಿಸುವ ಅವುಗಳ ಸಾಮರ್ಥ್ಯವು ಅವುಗಳನ್ನು ಪ್ರಾಣಿಗಳ ಬುದ್ಧಿಮತ್ತೆಯ ಕುರಿತಾದ ವೈಜ್ಞಾನಿಕ ಸಂಶೋಧನೆಯ ವಿಷಯವನ್ನಾಗಿ ಮಾಡಿದೆ.
ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಗುರುಗ್ರಾಮ್ನ ಡಿಸಿಸಿ ಪ್ರಾಣಿ ಆಸ್ಪತ್ರೆಯ ಪಶುವೈದ್ಯಕೀಯ ಸೇವೆಗಳ ಮುಖ್ಯಸ್ಥ ಮತ್ತು ನಿರ್ದೇಶಕ ಡಾ. ವಿನೋದ್ ಶರ್ಮಾ ಅವರ ಪ್ರಕಾರ, ಗಿಳಿಗಳು ತಮ್ಮ ಬುದ್ಧಿಮತ್ತೆಯ ಸಂಪೂರ್ಣ ಸಾಮರ್ಥ್ಯವನ್ನು ಪ್ರಕಟಿಸಬೇಕಾದರೆ, ಅವುಗಳ ವಿಶೇಷ ಮೆದುಳಿನ ರಚನೆಗಳಿಗೆ ಪೂರಕವಾಗಿ ಬಲವಾದ ಸಾಮಾಜಿಕ ಬಂಧಗಳು ಮತ್ತು ಸುತ್ತಮುತ್ತಲಿನ ಪರಿಸರದಿಂದ ಕಲಿಯುವ ಸಾಮರ್ಥ್ಯದ ಸಂಯೋಜನೆ ಅಗತ್ಯ. ಅವುಗಳ ದೀರ್ಘ ಜೀವಿತಾವಧಿ ಮತ್ತು ಸಂಕೀರ್ಣ ಸಾಮಾಜಿಕ ಜೀವನವು ಕಲಿಕೆ, ಸ್ಮರಣೆ ಮತ್ತು ಸಮಸ್ಯೆ ಪರಿಹಾರಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ.
► ಗಿಳಿಗಳು ಇತರ ಪಕ್ಷಿಗಳಿಗಿಂತ ಹೆಚ್ಚು ಬುದ್ಧಿವಂತಿಕೆ ಹೊಂದಿರುವುದೇಕೆ?
ಮುಖ್ಯ ಕಾರಣವೆಂದರೆ ಅವುಗಳ ಮೆದುಳಿನ ಸಂಘಟನೆ. ಗಿಳಿಗಳ ಮೆದುಳು ಇತರ ಪಕ್ಷಿಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದರೂ, ಮುಮ್ಮಿದುಳಿನಲ್ಲಿ ಅಥವಾ ಟೆಲೆನ್ಸ್ಫಾಲನ್ ನಲ್ಲಿ ಹೆಚ್ಚಿನ ಸಂಖ್ಯೆಯ ನರಕೋಶಗಳನ್ನು ಹೊಂದಿರುತ್ತದೆ. ಮುಮ್ಮಿದುಳು ಕಲಿಕೆ, ನಿರ್ಧಾರ ಕೈಗೊಳ್ಳುವುದು ಮತ್ತು ಹೊಂದಿಕೊಳ್ಳುವ ನಡವಳಿಕೆಗೆ ಸಂಬಂಧಿಸಿದ ಪ್ರದೇಶವಾಗಿದೆ. ಒಟ್ಟು ಮೆದುಳಿನ ಗಾತ್ರದಲ್ಲಿನ ವ್ಯತ್ಯಾಸಗಳ ಹೊರತಾಗಿಯೂ, ಗಿಳಿಗಳು ಮತ್ತು ಕಾಗೆಗಳು ಹಾಗೂ ಡೊಂಬ ಕಾಗೆಗಳಂತಹ ಕಾರ್ವಿಡ್ಗಳ ಈ ಪ್ರದೇಶದಲ್ಲಿನ ನರಕೋಶಗಳ ಸಂಖ್ಯೆಯು ಕೆಲವು ಪ್ರೈಮೇಟ್ ಗಳಲ್ಲಿರುವಷ್ಟೇ ಇರಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಪ್ರೈಮೇಟ್ ಗಳು ಸಸ್ತನಿಗಳ ಒಂದು ಗುಂಪು.
ಗಿಳಿಗಳು ಹೆಚ್ಚಿನ ಅರಿವಿನ ಕಾರ್ಯಗಳಿಗೆ ನೆರವಾಗುವ ವಿಶೇಷ ನರಜಾಲವನ್ನೂ ಹೊಂದಿವೆ. ಒಂದು ಪ್ರಮುಖ ರಚನೆಯೆಂದರೆ ಮಧ್ಯದ ಸ್ಪಿರಿಫಾರ್ಮ್ ನ್ಯೂಕ್ಲಿಯಸ್. ಇದು ಚಲನೆ ಮತ್ತು ಅರಿವಿನಲ್ಲಿ ತೊಡಗಿರುವ ಮೆದುಳಿನ ಪ್ರದೇಶಗಳ ನಡುವೆ ಮಾಹಿತಿಯನ್ನು ಪ್ರಸಾರ ಮಾಡಲು ಸಹಾಯ ಮಾಡುತ್ತದೆ. ಅನೇಕ ಇತರ ಪಕ್ಷಿ ಗುಂಪುಗಳಿಗೆ ಹೋಲಿಸಿದರೆ ಗಿಳಿಗಳಲ್ಲಿ ಈ ರಚನೆಯು ವಿಶೇಷವಾಗಿ ವಿಸ್ತಾರಗೊಂಡಿದೆ ಎಂದು ಸಂಶೋಧನೆ ಕಂಡುಹಿಡಿದಿದೆ.
ಈ ವಿಶೇಷ ಮೆದುಳಿನ ರಚನೆಗಳು ಗಿಳಿಗಳಿಗೆ ಮಾಹಿತಿಗೆ ಪ್ರತಿಕ್ರಿಯಿಸಲು, ಅನುಭವದಿಂದ ಕಲಿಯಲು ಮತ್ತು ವಿಭಿನ್ನ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತವೆ. ಅವುಗಳ ನೈಸರ್ಗಿಕ ಪರಿಸರವೂ ಒಂದು ಪಾತ್ರವನ್ನು ವಹಿಸುತ್ತದೆ. ಗಿಳಿಗಳು ಹೆಚ್ಚಾಗಿ ಬದಲಾಗುವ ಆಹಾರ ಮೂಲಗಳನ್ನು ಪತ್ತೆಹಚ್ಚಬೇಕು. ಸಂಪನ್ಮೂಲಗಳು ಎಲ್ಲಿ ಲಭ್ಯವಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಮತ್ತು ಹಿಂಡುಗಳೊಳಗಿನ ಸಂಕೀರ್ಣ ಸಂಬಂಧಗಳನ್ನು ನಿಭಾಯಿಸಬೇಕು. ಅವುಗಳ ದೀರ್ಘ ಜೀವಿತಾವಧಿಯು ಕಾಲಾನಂತರದಲ್ಲಿ ಮಾಹಿತಿ ಪಡೆಯಲು ಮತ್ತು ಉಳಿಸಿಕೊಳ್ಳಲು ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ.
► ಮಾನವ ಭಾಷೆಯನ್ನು ಅನುಕರಿಸುವುದು ಹೇಗೆ?
ಬಹುತೇಕ ಪಕ್ಷಿಗಳಿಗಿಂತ ಭಿನ್ನವಾಗಿ, ಗಿಳಿಗಳು ಧ್ವನಿಯನ್ನು ಕಲಿಯುವ ಸಾಮರ್ಥ್ಯ ಹೊಂದಿವೆ. ಅವು ಶಬ್ದಗಳನ್ನು ಕೇಳಿ, ನೆನಪಿಟ್ಟುಕೊಂಡು, ತಮ್ಮ ಧ್ವನಿಯ ಅಂಗಗಳನ್ನು ಸಂಯೋಜಿಸುವ ಮೂಲಕ ಅವುಗಳನ್ನು ಪುನರುತ್ಪಾದಿಸಬಲ್ಲವು. ಕಾಡಿನಲ್ಲಿ, ಹಿಂಡಿನ ಇತರ ಸದಸ್ಯರ ಕರೆಗಳನ್ನು ಅನುಕರಿಸುವ ಮೂಲಕ ಈ ಧ್ವನಿಗಳನ್ನು ಕಲಿಯುತ್ತವೆ. ಇದು ಸಾಮಾಜಿಕ ಸಂಪರ್ಕಗಳನ್ನು ಕಾಪಾಡಿಕೊಳ್ಳಲು ಮತ್ತು ಪರಿಚಿತ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
ಯಾರಾದರೂ ಕೋಣೆಗೆ ಪ್ರವೇಶಿಸಿದಾಗ ಗಿಳಿಯು ಪರಿಚಿತ ಪದವನ್ನು ಹೇಳಬಹುದು. ಏಕೆಂದರೆ ಅದು ಧ್ವನಿಯನ್ನು ಗಮನ ಮತ್ತು ಸಂವಹನದೊಂದಿಗೆ ಸಂಯೋಜಿಸಲು ಕಲಿತಿರುತ್ತದೆ. ಪುನರಾವರ್ತನೆ ಮತ್ತು ಸಕಾರಾತ್ಮಕ ಬಲವರ್ಧನೆಯು ಅಂತಹ ಸಂಬಂಧಗಳನ್ನು ಬಲಪಡಿಸಬಹುದು. ಮಾತನ್ನು ಅನುಕರಿಸುವುದರಿಂದ ಗಿಳಿಯು ಮನುಷ್ಯರು ಮಾಡುವ ರೀತಿಯಲ್ಲಿ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ತೀರ್ಮಾನಕ್ಕೆ ಬರಲಾಗದು. ಕೆಲವು ಪಕ್ಷಿಗಳು ಮುಖ್ಯವಾಗಿ ಸಹವಾಸದ ಮೂಲಕ ಪದಗಳನ್ನು ಕಲಿಯುತ್ತವೆ. ಆದರೆ ಇತರವು ಹೆಚ್ಚು ಸಂಕೀರ್ಣವಾದ ತಿಳುವಳಿಕೆಯನ್ನು ಪ್ರದರ್ಶಿಸುತ್ತವೆ.
ಪ್ರಾಣಿ ಅರಿವಿನ ಸಂಶೋಧಕಿ ಐರೀನ್ ಪೆಪ್ಪರ್ಬರ್ಗ್ ಅಧ್ಯಯನ ಮಾಡಿದ ಆಫ್ರಿಕನ್ ಬೂದು ಗಿಳಿ ಅಲೆಕ್ಸ್ ನ ವಿಚಾರದಲ್ಲಿ ಈ ಸಾಮರ್ಥ್ಯಗಳಿಗೆ ಹಲವು ಪುರಾವೆಗಳು ದೊರೆತಿವೆ. ಅಲೆಕ್ಸ್ 100ಕ್ಕೂ ಹೆಚ್ಚು ವಸ್ತುಗಳಿಗೆ ಹೆಸರುಗಳನ್ನು ಕಲಿತಿತ್ತು. ಬಣ್ಣ, ಆಕಾರ, ವಸ್ತು, ಎಣಿಕೆ ಮತ್ತು ವಿಭಿನ್ನ ಪರಿಕಲ್ಪನೆಗಳಿಗೆ ಸಂಬಂಧಿಸಿದ ಕೌಶಲಗಳನ್ನು ಪ್ರದರ್ಶಿಸಿತ್ತು.
► ಪರಿಸರವು ಗಿಳಿಗಳ ಬುದ್ಧಿವಂತಿಕೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
ಗಿಳಿಗಳು ನೈಸರ್ಗಿಕ ಅರಿವಿನ ಸಾಮರ್ಥ್ಯ ಹೊಂದಿದ್ದರೂ, ಅವುಗಳ ಪರಿಸರವು ಆ ಸಾಮರ್ಥ್ಯಗಳನ್ನು ಬಳಸಲು ಮತ್ತು ಅಭಿವೃದ್ಧಿಪಡಿಸಲು ಎಷ್ಟು ಅವಕಾಶಗಳಿವೆ ಎಂಬುದನ್ನು ನಿರ್ಧರಿಸುತ್ತದೆ.
ಡಾ. ವಿನೋದ್ ಶರ್ಮಾ ಅವರು ಗಿಳಿಗಳ ಆರೈಕೆಯಲ್ಲಿ ಈ ಕೆಳಗಿನ ಅಂಶಗಳಿಗೆ ಗಮನ ನೀಡುವಂತೆ ಶಿಫಾರಸು ಮಾಡುತ್ತಾರೆ.
• ಸಾಮಾಜಿಕ ಸಂವಹನ: ಗಿಳಿಗಳು ಸಾಮಾಜಿಕ ಪ್ರಾಣಿಗಳು. ಅವುಗಳಿಗೆ ನಿಯಮಿತವಾಗಿ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವ ಅವಕಾಶಗಳು ಅಗತ್ಯ. ಅವುಗಳೊಂದಿಗೆ ಮಾತನಾಡುವುದು, ಸರಳ ಸೂಚನೆಗಳನ್ನು ಕಲಿಸುವುದು ಮತ್ತು ಒಟ್ಟಿಗೆ ಸಮಯ ಕಳೆಯುವುದು ಮಾನಸಿಕ ಪ್ರಚೋದನೆಯನ್ನು ಒದಗಿಸುತ್ತದೆ.
• ಆಹಾರ ಹುಡುಕುವ ಚಟುವಟಿಕೆಗಳು: ಆಹಾರದ ಒಗಟುಗಳು ಮತ್ತು ಆಹಾರ ಹುಡುಕುವ ಆಟಿಕೆಗಳು ಗಿಳಿಗಳು ತಮ್ಮ ಆಹಾರಕ್ಕಾಗಿ ಪ್ರಯತ್ನಿಸುವಂತೆ ಪ್ರೋತ್ಸಾಹಿಸುತ್ತವೆ. ಇದು ಕಾಡಿನಲ್ಲಿ ಅವು ಎದುರಿಸುವ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ.
• ವಿವಿಧ ಆಟಿಕೆಗಳು ಮತ್ತು ಚಟುವಟಿಕೆಗಳು: ಸುರಕ್ಷಿತವಾಗಿ ಅಗಿಯಬಹುದಾದ ಆಟಿಕೆಗಳು, ಒಗಟುಗಳು ಮತ್ತು ಏರಲು ಅನುಕೂಲವಾಗುವ ರಚನೆಗಳನ್ನು ಬದಲಾಯಿಸುತ್ತಿರುವುದು ಬೇಸರವನ್ನು ತಡೆಯಲು ಮತ್ತು ಪರಿಶೋಧನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
• ಪ್ರತಿಫಲ ಆಧಾರಿತ ತರಬೇತಿ: ಅಪೇಕ್ಷಿತ ನಡವಳಿಕೆಗಳಿಗೆ ಪ್ರತಿಫಲ ನೀಡುವ ಸಣ್ಣ, ನಿಯಮಿತ ತರಬೇತಿ ಅವಧಿಗಳು ಗಿಳಿಗಳು ಹೊಸ ಸೂಚನೆಗಳನ್ನು ಕಲಿಯಲು, ವಸ್ತುಗಳನ್ನು ಗುರುತಿಸಲು ಮತ್ತು ಸಮಸ್ಯೆ ಪರಿಹರಿಸುವ ಕೌಶಲವನ್ನು ಅಭ್ಯಾಸ ಮಾಡಲು ಸಹಾಯ ಮಾಡುತ್ತವೆ.
• ಸ್ಥಳ ಮತ್ತು ದೈಹಿಕ ಚಟುವಟಿಕೆ: ಪಕ್ಷಿಗಳಿಗೆ ಚಲಿಸಲು, ಏರಲು ಮತ್ತು ತಮ್ಮ ರೆಕ್ಕೆಗಳನ್ನು ಸಂಪೂರ್ಣವಾಗಿ ವಿಸ್ತರಿಸಲು ಸಾಕಷ್ಟು ಸ್ಥಳಾವಕಾಶ ಬೇಕು. ಸುರಕ್ಷಿತ, ಮೇಲ್ವಿಚಾರಣೆಯ ಹಾರಾಟ ಅಥವಾ ವ್ಯಾಯಾಮದ ಅವಕಾಶಗಳು ಅವುಗಳ ಒಟ್ಟಾರೆ ಯೋಗಕ್ಷೇಮಕ್ಕೆ ಪೂರಕವಾಗುತ್ತವೆ.
• ನಿದ್ರೆ, ಪೋಷಣೆ ಮತ್ತು ಪಶುವೈದ್ಯಕೀಯ ಆರೈಕೆ: ಊಹಿಸಬಹುದಾದ ದಿನಚರಿ, ಸಮತೋಲಿತ ಆಹಾರ, ಸಾಕಷ್ಟು ನಿದ್ರೆ ಮತ್ತು ಸೂಕ್ತ ಪಶುವೈದ್ಯಕೀಯ ಆರೈಕೆಯು ದೈಹಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಇದು ಅವುಗಳ ಚಟುವಟಿಕೆ ಮತ್ತು ಕಲಿಕೆಯ ಮೇಲೂ ಪ್ರಭಾವ ಬೀರುತ್ತದೆ.
ಗಿಳಿಗಳಿಗೆ ಆಹಾರ ಮತ್ತು ಪಂಜರಕ್ಕಿಂತ ಹೆಚ್ಚಿನದು ಬೇಕು. ಅವುಗಳಿಗೆ ಸಂವಹನ ನಡೆಸಲು, ಅನ್ವೇಷಿಸಲು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ನೈಸರ್ಗಿಕ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳು ಬೇಕಾಗುತ್ತವೆ.