ವಿಷಕಾರಿ ಪ್ರಭೇದವಾಗಿ ಪತ್ತೆಯಾದ ವರ್ಷಗಳಿಂದ ಜೆಲ್ಲಿ ಮೀನು ಎಂದುಕೊಂಡಿದ್ದ ಜೀವಿ
ಸಾಂದರ್ಭಿಕ ಚಿತ್ರ | Photo Credit : Ai generated image
ಎರಡು ಪ್ರಭೇದಗಳು ಗಮನಾರ್ಹವಾಗಿ ಹೋಲುತ್ತವೆ. ಹೀಗಾಗಿ ಎರಡನ್ನೂ ಒಂದೇ ಎಂದುಕೊಂಡಿರುವುದರಲ್ಲಿ ತಪ್ಪೇನಿಲ್ಲ. ಆದರೆ ಸಮೀಪದಿಂದ ಅಧ್ಯಯನ ಮಾಡಿದಾಗ ಸಂಶೋಧಕರು ಒಂದು ಪ್ರಮುಖ ಭೌತಿಕ ವ್ಯತ್ಯಾಸವನ್ನು ಕಂಡುಕೊಂಡಿದ್ದಾರೆ.
ಸಾಗರದ ಹೊಸ ಪ್ರಭೇದಗಳು ಯಾವಾಗಲೂ ಯಾವುದೋ ಅನ್ವೇಷಿಸದ ಮೂಲೆಯಿಂದಲೇ ಪತ್ತೆಯಾಗುವುದಿಲ್ಲ. ಕೆಲವೊಮ್ಮೆ ಅವು ವಿಜ್ಞಾನಿಗಳ ಮುಂದೆಯೇ ಇದ್ದು, ಪರಿಚಿತ ಹೆಸರಿನ ಹಿಂದೆ ಅಡಗಿಕೊಂಡಿರುತ್ತವೆ. ಸಿಂಗಾಪುರದ ಬಳಿ ಬಾಕ್ಸ್ ಜೆಲ್ಲಿ ಮೀನುಗಳನ್ನು ಅಧ್ಯಯನ ಮಾಡುತ್ತಿದ್ದಾಗ ಸಂಶೋಧಕರು ಹೊಸ ಪ್ರಭೇದವೊಂದನ್ನು ಕಂಡುಹಿಡಿದಿದ್ದಾರೆ. ಅದನ್ನು ಮತ್ತೊಂದು ಜೆಲ್ಲಿ ಮೀನು ಎಂದು ತಪ್ಪಾಗಿ ಭಾವಿಸಲಾಗಿತ್ತು. ಆದರೆ ಅದು ಅತ್ಯಂತ ವಿಷಕಾರಿ ಪ್ರಭೇದವಾಗಿದೆ.
ಹೊಸದಾಗಿ ವಿವರಿಸಲಾದ ಪ್ರಭೇದವಾದ ಚಿರೋನೆಕ್ಸ್ ಬ್ಲಾಕಾಂಗ್ಮಟಿಯನ್ನು 2020 ಮತ್ತು 2021ರಲ್ಲಿ ಸಿಂಗಾಪುರದ ಕಡಲತೀರಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ಗುರುತಿಸಲಾಗಿದೆ. ವಿಜ್ಞಾನಿಗಳು ಆರಂಭದಲ್ಲಿ ಈ ಮೀನುಗಳನ್ನು ಚಿರೋನೆಕ್ಸ್ ಯಮಗುಚಿ ಎಂದು ಗುರುತಿಸಿದ್ದರು. ಯಮಗುಚಿ ಜಪಾನ್‌ನ ಒಕಿನಾವಾದಲ್ಲಿ ಮೊದಲು ಪತ್ತೆಯಾದ ಬಾಕ್ಸ್ ಜೆಲ್ಲಿ ಮೀನು. ಆದರೆ ಸಮೀಪದಿಂದ ಅಧ್ಯಯನ ಮಾಡಿದಾಗ ಸಿಂಗಾಪುರದ ಜೆಲ್ಲಿ ಮೀನು ವಾಸ್ತವದಲ್ಲಿ ಹೊಸ ಪ್ರಭೇದ ಎಂಬುದು ತಿಳಿದುಬಂದಿದೆ.
ಈ ಎರಡು ಪ್ರಭೇದಗಳು ಗಮನಾರ್ಹವಾಗಿ ಹೋಲುತ್ತವೆ. ಹೀಗಾಗಿ ಎರಡನ್ನೂ ಒಂದೇ ಎಂದುಕೊಂಡಿರುವುದರಲ್ಲಿ ತಪ್ಪೇನಿಲ್ಲ. ಆದರೆ ಸಮೀಪದಿಂದ ಅಧ್ಯಯನ ಮಾಡಿದಾಗ ಸಂಶೋಧಕರು ಒಂದು ಪ್ರಮುಖ ಭೌತಿಕ ವ್ಯತ್ಯಾಸವನ್ನು ಕಂಡುಕೊಂಡಿದ್ದಾರೆ. ಚಿರೋನೆಕ್ಸ್ ಬ್ಲಾಕಾಂಗ್ಮಟಿಯಲ್ಲಿ, ಸಿ. ಯಮಗುಚಿ ಮತ್ತು ಇತರ ತಿಳಿದಿರುವ ಚಿರೋನೆಕ್ಸ್ ಪ್ರಭೇದಗಳಲ್ಲಿ ಕಂಡುಬರುವ, ಅದರ ಗಂಟೆಯಾಕಾರದ ದೇಹದ ಕೆಳಭಾಗದಲ್ಲಿರುವ ಕೆಲವು ಕವಲೊಡೆದ ಕಾಲುವೆಯಂತಹ ರಚನೆಗಳು ಇಲ್ಲ. ಈ ರಚನೆಗಳು ಪೆರಾಡಿಯಲ್ ಲ್ಯಾಪೆಟ್‌ಗಳು ಎಂದು ಕರೆಯಲಾಗುವ ಜೆಲ್ಲಿ ಮೀನುಗಳ ಭಾಗಗಳಲ್ಲಿವೆ. ಇವು ಈಜುವಲ್ಲಿ ತೊಡಗಿರುವ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಈ ಪ್ರಾಣಿಗಳ ನಡುವಿನ ಅನುವಂಶಿಕ ವ್ಯತ್ಯಾಸಗಳು ಸಿಂಗಾಪುರದ ಮಾದರಿಗಳು ಪ್ರತ್ಯೇಕ ಪ್ರಭೇದಕ್ಕೆ ಸೇರಿವೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳನ್ನು ಒದಗಿಸಿವೆ.
ಹೊಸ ಪ್ರಭೇದವು ಚಿರೋನೆಕ್ಸ್ ಕುಲಕ್ಕೆ ಸೇರಿದ್ದರೂ, ಈ ಕುಲದ ಸದಸ್ಯರು ತಮ್ಮ ಪ್ರಬಲ ವಿಷಕ್ಕೆ ಹೆಸರುವಾಸಿಯಾಗಿದ್ದಾರೆ. ಅವುಗಳ ಗ್ರಹಣಾಂಗಗಳಲ್ಲಿ ನೆಮಟೊಸಿಸ್ಟ್ ಗಳು ಎಂಬ ವಿಶೇಷ ಕುಟುಕುವ ಕೋಶಗಳಿರುತ್ತವೆ. ಬೇಟೆ ಅಥವಾ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಇವು ವಿಷವನ್ನು ಚುಚ್ಚಬಹುದು. ಕೆಲವು ಚಿರೋನೆಕ್ಸ್ ಪ್ರಭೇದಗಳು ಮನುಷ್ಯರ ಸಾವಿಗೆ ಕಾರಣವಾಗುವಷ್ಟು ತೀವ್ರವಾಗಿ ಕುಟುಕುವ ಸಾಮರ್ಥ್ಯ ಹೊಂದಿವೆ.
ಮಾತ್ರವಲ್ಲದೆ, ಬಾಕ್ಸ್ ಜೆಲ್ಲಿ ಮೀನುಗಳು ಸಾಮಾನ್ಯ ಜೆಲ್ಲಿ ಮೀನುಗಳಿಗಿಂತ ಹೆಚ್ಚು ಸಕ್ರಿಯವಾಗಿ ಈಜುತ್ತವೆ. ಇವು ಬಲವಾದ ಸ್ನಾಯುಗಳು ಮತ್ತು ಸಂಕೀರ್ಣ ಕಣ್ಣುಗಳನ್ನು ಹೊಂದಿದ್ದು, ನೀರಿನಲ್ಲಿ ಸಕ್ರಿಯವಾಗಿ ಸಂಚರಿಸಲು ಹಾಗೂ ಬೇಟೆಯನ್ನು ಹಿಂಬಾಲಿಸಲು ಅನುವು ಮಾಡಿಕೊಡುತ್ತವೆ.
ವಿಜ್ಞಾನಿಗಳು ಸಿಂಗಾಪುರದ ಬಾಕ್ಸ್ ಜೆಲ್ಲಿ ಮೀನುಗಳನ್ನು ಪರೀಕ್ಷಿಸುವಾಗ ಮತ್ತೊಂದು ಆಶ್ಚರ್ಯಕರ ಆವಿಷ್ಕಾರ ಮಾಡಿದ್ದಾರೆ. ಸಾಮಾನ್ಯವಾಗಿ ಥಾಯ್ ಸಮುದ್ರ ಕಣಜ ಎಂದು ಕರೆಯಲಾಗುವ ಚಿರೋನೆಕ್ಸ್ ಇಂದ್ರಸಾಕ್ಸಜಿಯೆಯನ್ನು ಸಿಂಗಾಪುರದ ನೀರಿನಲ್ಲಿ ಪತ್ತೆಮಾಡಿದ್ದಾರೆ. ಈ ಪ್ರಭೇದವು ಈ ಹಿಂದೆ ಥಾಯ್ಲೆಂಡ್‌ನ ಸುತ್ತಮುತ್ತಲಿನ ನೀರಿನಲ್ಲಿಯೂ ಕಂಡುಬಂದಿತ್ತು.
ಬಾಕ್ಸ್ ಜೆಲ್ಲಿ ಮೀನುಗಳ ಕುಟುಕಿನಿಂದಾಗಿ ಜಾಗತಿಕವಾಗಿ ಪ್ರತಿ ವರ್ಷ ಸುಮಾರು 40 ಸಾವುಗಳು ಸಂಭವಿಸುತ್ತವೆ ಎಂದು ಅಂದಾಜಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದು ಎಂದು ಸಂಶೋಧಕರು ಶಂಕಿಸಿದ್ದಾರೆ. ಹೀಗಾಗಿ, ಪರಿಚಿತ ಜೆಲ್ಲಿ ಮೀನು ಎಂದುಕೊಂಡು ಸಮೀಪಿಸಿದರೆ ಅಪಾಯಕಾರಿಯೂ ಆಸಕ್ತಿದಾಯಕವೂ ಆದ ಬಾಕ್ಸ್ ಜೆಲ್ಲಿ ಮೀನು ಎದುರಾಗುವ ಸಾಧ್ಯತೆಯಿದೆ!