7 ಲಕ್ಷ ಕೋಟಿ ರೂ. ವಿಚ್ಛೇದನದ ಸುಳಿಯಲ್ಲಿ NVIDIA ದೈತ್ಯ ಜೆನ್ಸನ್ ಹುವಾಂಗ್!
ಪತ್ನಿ ಲೋರಿ ಜೊತೆ ವಿಚ್ಛೇದನವಾದರೆ ಭಾರಿ ಮೊತ್ತದ ಆಸ್ತಿ ಹಂಚಿಕೆ ಸಾಧ್ಯತೆ; ಕಂಪೆನಿಯ ಆಡಳಿತ, ಷೇರು ಮೌಲ್ಯಕ್ಕೂ ಸಂಕಷ್ಟ
Photo Credit | AP
ತಂತ್ರಜ್ಞಾನ ಜಗತ್ತಿನಲ್ಲಿ ಚಿಪ್ ಗಳ ಮೂಲಕ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ NVIDIA ಸಿಇಒ ಜೆನ್ಸನ್ ಹುವಾಂಗ್ ಈಗ ತಮ್ಮ ವೈಯಕ್ತಿಕ ಬದುಕಿನ ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿರುವ ಅವರ ಬದುಕು ಇದೀಗ ವೈಯಕ್ತಿಕ ಸಂಬಂಧಗಳು, ವಿಚ್ಛೇದನದ ಸಾಧ್ಯತೆ ಮತ್ತು ಕಂಪೆನಿಯ ಆಡಳಿತಕ್ಕೆ ಸಂಬಂಧಿಸಿದ ಆರೋಪಗಳಿಂದಾಗಿ ಚರ್ಚೆಯ ಕೇಂದ್ರವಾಗಿದೆ.
ಜೆನ್ಸನ್ ಅವರ ವೈಯಕ್ತಿಕ ಬದುಕಿನ ಸುತ್ತ ಹರಿದಾಡುತ್ತಿರುವ ಮೀಮ್ ಗಳೂ ಇಂಟರ್ನೆಟ್ನಲ್ಲಿ ಗಮನ ಸೆಳೆಯುತ್ತಿವೆ. ಅವರ ದಶಕಗಳ ಪರಿಶ್ರಮದಿಂದ ನಿರ್ಮಾಣವಾದ ಸಾಮ್ರಾಜ್ಯದ ಭವಿಷ್ಯವೇ ಪತ್ನಿ ಲೋರಿ ಹುವಾಂಗ್ ಅವರ ನಿರ್ಧಾರದ ಮೇಲೆ ನಿಂತಿದೆ ಎಂಬರ್ಥದ ವ್ಯಂಗ್ಯಚಿತ್ರಗಳು ಹರಿದಾಡುತ್ತಿವೆ.
ನ. 8ರಂದು ಚೀನಾದ ಮಹಿಳೆಯೊಬ್ಬರೊಂದಿಗೆ ಸಂಬಂಧ ಹೊಂದಿದ್ದುದನ್ನು ಜೆನ್ಸನ್ ಒಪ್ಪಿಕೊಂಡಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ. ಇದರ ಬೆನ್ನಲ್ಲೇ ಅವರು NVIDIA ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯೂ ಹರಿದಾಡಿದೆ. ಈ ಬೆಳವಣಿಗೆಗಳ ನಡುವೆಯೇ ಜೆನ್ಸನ್ ಮತ್ತು ಲೋರಿ ವಿಚ್ಛೇದನ ಪಡೆದರೆ ಅದು ಜಗತ್ತಿನ ಅತ್ಯಂತ ದುಬಾರಿ ವಿಚ್ಛೇದನಗಳಲ್ಲಿ ಒಂದಾಗಬಹುದು ಎಂಬ ಚರ್ಚೆ ಆರಂಭವಾಗಿದೆ.
ಒಂದು ವೇಳೆ ದಂಪತಿ ಬೇರೆಯಾದರೆ ಲೋರಿ ಅವರಿಗೆ ಸುಮಾರು 80 ಬಿಲಿಯನ್ ಡಾಲರ್ (7 ಲಕ್ಷ ಕೋಟಿ ರೂ.ಗೂ ಅಧಿಕ) ಆಸ್ತಿ ದೊರೆಯಬಹುದು ಎಂಬ ಅಂದಾಜಿದೆ. ಹೀಗಾದಲ್ಲಿ ಅವರು ಜಗತ್ತಿನ ನಾಲ್ಕನೇ ಅತ್ಯಂತ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ.
► ವಿದ್ಯಾರ್ಥಿ ಜೀವನದಲ್ಲಿ ಅರಳಿದ ಪ್ರೀತಿ
ಜೆನ್ಸನ್ ಮತ್ತು ಲೋರಿ ಅವರ ಪರಿಚಯವಾಗಿದ್ದು ಅಮೆರಿಕದ ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ. ಇಬ್ಬರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾಗಲೇ ಪ್ರೀತಿಯಲ್ಲಿ ಬಿದ್ದಿದ್ದರು. 1985ರಲ್ಲಿ ವಿವಾಹವಾದ ಈ ದಂಪತಿ, NVIDIA ಕಂಪೆನಿ ಸ್ಥಾಪನೆಯಾಗುವುದಕ್ಕೂ ಸುಮಾರು ಎಂಟು ವರ್ಷಗಳ ಮೊದಲೇ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದರು.
ಮ್ಯಾಡಿಸನ್ ಮತ್ತು ಸ್ಪೆನ್ಸರ್ ಎಂಬ ಇಬ್ಬರು ಮಕ್ಕಳಿರುವ ಈ ದಂಪತಿಯ ಕುಟುಂಬದ ಇಬ್ಬರು ಸದಸ್ಯರೂ NVIDIA ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದಾರೆ.
ಫೋರ್ಬ್ಸ್ ವರದಿಯ ಪ್ರಕಾರ, ಜೆನ್ಸನ್ ಅವರ ವೈಯಕ್ತಿಕ ಸಂಪತ್ತು 145ರಿಂದ 151 ಬಿಲಿಯನ್ ಡಾಲರ್ ಗಳಷ್ಟಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು 14 ಲಕ್ಷ ಕೋಟಿ ರೂ. ಷೇರು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಈ ಮೊತ್ತ ಬದಲಾಗುತ್ತಿರುತ್ತದೆ.
► ಲೋರಿ ಪಾಲಿಗೆ 7 ಲಕ್ಷ ಕೋಟಿ ರೂ. ಆಸ್ತಿ?
ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಕಾನೂನಿನ ಪ್ರಕಾರ, ವಿವಾಹದ ನಂತರ ಗಳಿಸಿದ ಆಸ್ತಿಯನ್ನು ವಿಚ್ಛೇದನದ ಸಂದರ್ಭದಲ್ಲಿ ಗಂಡ ಮತ್ತು ಹೆಂಡತಿ ಸಮಾನವಾಗಿ ಹಂಚಿಕೊಳ್ಳಬೇಕು. ಈ ನಿಯಮದ ಆಧಾರದಲ್ಲಿ ಲೆಕ್ಕ ಹಾಕಿದರೆ ಲೋರಿ ಅವರಿಗೆ 73ರಿಂದ 76 ಬಿಲಿಯನ್ ಡಾಲರ್ (ಸುಮಾರು 7 ಲಕ್ಷ ಕೋಟಿ ರೂ.) ದೊರೆಯಬಹುದು ಎಂಬ ಅಂದಾಜಿದೆ.
ಆದರೆ, ಈ ಲೆಕ್ಕಾಚಾರವೇ ಅಂತಿಮವಲ್ಲ. ಹುವಾಂಗ್ ಕುಟುಂಬದ ಬಹುಪಾಲು ಷೇರುಗಳು ವಿವಿಧ ಫ್ಯಾಮಿಲಿ ಟ್ರಸ್ಟ್ ಗಳು ಮತ್ತು ಸಂಸ್ಥೆಗಳ ಹೆಸರಿನಲ್ಲಿವೆ. ಅಲ್ಲದೆ, ವಿವಾಹಕ್ಕೂ ಮುನ್ನ ಮಾಡಿಕೊಳ್ಳುವ ಪ್ರೀನಪ್ ಅಥವಾ ವಿವಾಹದ ನಂತರ ಮಾಡಿಕೊಳ್ಳುವ ಪೋಸ್ಟ್ನಪ್ ಒಪ್ಪಂದಗಳನ್ನು ಜೆನ್ಸನ್ ಮತ್ತು ಲೋರಿ ಮಾಡಿಕೊಂಡಿದ್ದಾರೆಯೇ ಎಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಇಂತಹ ಒಪ್ಪಂದಗಳನ್ನು ಮಾಡಿಕೊಳ್ಳುವುದು ಕಡ್ಡಾಯವೂ ಅಲ್ಲ.
ಹೀಗಾಗಿ ವಿಚ್ಛೇದನದ ಸಂದರ್ಭದಲ್ಲಿ ಆಸ್ತಿ ಹಂಚಿಕೆ ಹೇಗಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಖ್ಯವಾಗಿ, ದಂಪತಿ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.
► ಶ್ರೀಮಂತರ ವಿಚ್ಛೇದನದ ದಾಖಲೆಗಳು
ಶ್ರೀಮಂತರ ವಿಚ್ಛೇದನಗಳು ಭಾರಿ ಮೊತ್ತದ ಆಸ್ತಿ ಹಂಚಿಕೆಯಿಂದಾಗಿ ಹಲವು ಬಾರಿ ಜಾಗತಿಕ ಸುದ್ದಿಯಾಗಿವೆ.
2021ರಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ 27 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಆಗ ಮೆಲಿಂಡಾ ಅವರಿಗೆ ಸುಮಾರು 76 ಬಿಲಿಯನ್ ಡಾಲರ್ (7 ಲಕ್ಷ ಕೋಟಿ ರೂ.) ದೊರೆತಿದೆ ಎಂದು ವರದಿಗಳು ಹೇಳಿದ್ದವು.
2019ರಲ್ಲಿ ಅಮೆಝಾನ್ ಸಂಸ್ಥಾಪಕ ಜೆಫ್ ಬೆಝೋಸ್ ಮತ್ತು ಮೆಕೆಂಜಿ ವಿಚ್ಛೇದನ ಪಡೆದಾಗ, ಮೆಕೆಂಜಿ ಅವರಿಗೆ 38.3 ಬಿಲಿಯನ್ ಡಾಲರ್ ಮೌಲ್ಯದ ಅಮೆಝಾನ್ ಷೇರುಗಳು ದೊರೆತಿದ್ದವು. ಇದರ ಭಾರತೀಯ ರೂಪಾಯಿ ಮೌಲ್ಯ ಸುಮಾರು 3.5 ಲಕ್ಷ ಕೋಟಿ ರೂ. ಆಗಿತ್ತು.
1999ರಲ್ಲಿ ಮಾಧ್ಯಮ ದೊರೆ ರೂಪರ್ಟ್ ಮರ್ಡೋಕ್ ಮತ್ತು ಅನ್ನಾ ಅವರ ವಿಚ್ಛೇದನ 1.7 ಬಿಲಿಯನ್ ಡಾಲರ್ ಗೆ ಇತ್ಯರ್ಥವಾಗಿತ್ತು ಎನ್ನಲಾಗಿದೆ. 2017ರಲ್ಲಿ ಹೂಡಿಕೆದಾರ ಬಿಲ್ ಗ್ರಾಸ್ ತಮ್ಮ ಪತ್ನಿ ಸೂ ಗ್ರಾಸ್ ಅವರಿಗೆ 1.3 ಬಿಲಿಯನ್ ಡಾಲರ್ ನೀಡಿದ್ದರು. ಹಾಲಿವುಡ್ ನಟ ಜಾನಿ ಡೆಪ್ ಮತ್ತು ಆಂಬರ್ ಹರ್ಡ್ ಅವರ ವಿಚ್ಛೇದನ 7 ಮಿಲಿಯನ್ ಡಾಲರ್ ಗೆ (ಇಂದಿನ ಲೆಕ್ಕದಲ್ಲಿ ಸುಮಾರು 65 ಕೋಟಿ ರೂ.) ಇತ್ಯರ್ಥವಾಗಿತ್ತು.
► ಕಂಪೆನಿಯ ಮೇಲೂ ಆರೋಪಗಳ ಸರಮಾಲೆ
ಜೆನ್ಸನ್ ಅವರ ವೈಯಕ್ತಿಕ ಬದುಕಿನ ವಿವಾದಗಳ ನಡುವೆಯೇ NVIDIA ಕಂಪೆನಿಯೂ ಕಾನೂನು ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿದೆ. ಕಂಪೆನಿಯ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದಾದ ಪ್ರಮುಖ ಮಾಹಿತಿಯನ್ನು ಹೂಡಿಕೆದಾರರಿಂದ ಮುಚ್ಚಿಡಲಾಗಿದೆ ಎಂದು ಆರೋಪಿಸಿ ಷೇರುದಾರರು NVIDIA ಮತ್ತು ಜೆನ್ಸನ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ನ. 11ರಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿಯು ವಿವಾದಕ್ಕೆ ಮತ್ತೊಂದು ಆಯಾಮ ನೀಡಿದೆ. NVIDIAದ ಹೆಲ್ತ್ಕೇರ್ ವಿಭಾಗದ ಹಿರಿಯ ಅಧಿಕಾರಿ ಕಿಂಬರ್ಲಿ ಪಾವೆಲ್ ಅವರೊಂದಿಗೂ ಜೆನ್ಸನ್ ಸಂಬಂಧ ಹೊಂದಿದ್ದರು ಎಂದು ವರದಿ ಹೇಳಿದೆ. ಕಿಂಬರ್ಲಿ ಅವರು ನೇರವಾಗಿ ಜೆನ್ಸನ್ ಅವರಿಗೆ ವರದಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ವರದಿ ಪ್ರಕಟವಾದ ಬೆನ್ನಲ್ಲೇ NVIDIA ಆಡಳಿತ ಮಂಡಳಿಯು ಜೆನ್ಸನ್ ಅವರನ್ನು ಸಿಇಒ ಹುದ್ದೆಯಿಂದ ಕೆಳಗಿಳಿಸುವ ಕುರಿತು ಗಂಭೀರ ಚಿಂತನೆ ನಡೆಸಿ, ರಾಜೀನಾಮೆ ನೀಡುವಂತೆ ಒತ್ತಡ ಹೇರಿತು ಎಂಬ ವರದಿಗಳೂ ಹೊರಬಿದ್ದಿವೆ.
► ಷೇರು ಮೌಲ್ಯದಲ್ಲಿ 45 ಲಕ್ಷ ಕೋಟಿ ರೂ. ನಷ್ಟ?
ವಿವಾದಗಳ ಪರಿಣಾಮವಾಗಿ ನ. 6ರಿಂದ NVIDIAದ ಮಾರುಕಟ್ಟೆ ಮೌಲ್ಯದಲ್ಲಿ 450ರಿಂದ 500 ಬಿಲಿಯನ್ ಡಾಲರ್ಗೂ ಅಧಿಕ ನಷ್ಟವಾಗಿದೆ ಎಂದು ವರದಿಯಾಗಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು 45 ಲಕ್ಷ ಕೋಟಿ ರೂ. ಈ ಕುಸಿತದಿಂದಾಗಿ ಜೆನ್ಸನ್ ಜಗತ್ತಿನ ಅಗ್ರ 10 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ ಎನ್ನಲಾಗಿದೆ.
ಇದರ ಜತೆಗೆ ರಾಷ್ಟ್ರೀಯ ಭದ್ರತೆ ಮತ್ತು ನಿರ್ಬಂಧಿತ ಚಿಪ್ ಗಳ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಸಂಸದರೂ ಜೆನ್ಸನ್ ಅವರಿಂದ ಸ್ಪಷ್ಟನೆ ಬಯಸುತ್ತಿದ್ದಾರೆ. ಒಂದೆಡೆ ಕಂಪೆನಿಯ ಆಡಳಿತ ಮಂಡಳಿಯ ತನಿಖೆ, ಮತ್ತೊಂದೆಡೆ ಹೂಡಿಕೆದಾರರ ಮೊಕದ್ದಮೆ, ಇನ್ನೊಂದೆಡೆ ವೈಯಕ್ತಿಕ ಬದುಕಿನ ವಿವಾದಗಳು ಅವರನ್ನು ಸುತ್ತುವರಿದಿವೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಜಗತ್ತಿನ ತಂತ್ರಜ್ಞಾನ ದಿಕ್ಕನ್ನೇ ಬದಲಿಸಿದ ಉದ್ಯಮಿಯ ಬದುಕು ಈಗ ಹಲವು ಪ್ರಶ್ನೆಗಳನ್ನು ಎದುರಿಸುತ್ತಿದೆ. ಚಿಪ್ ಗಳ ಲೆಕ್ಕಾಚಾರದಲ್ಲಿ ಜಗತ್ತನ್ನೇ ಬೆರಗುಗೊಳಿಸಿದ ಜೆನ್ಸನ್ ಹುವಾಂಗ್ ಅವರಿಗೆ ತಮ್ಮ ವೈಯಕ್ತಿಕ ಬದುಕು ಮತ್ತು ಕಂಪೆನಿಯ ಸವಾಲುಗಳನ್ನು ನಿಭಾಯಿಸುವುದೇ ಈಗ ದೊಡ್ಡ ಪರೀಕ್ಷೆಯಾಗಿದೆ.