ಎರಡನೇ ದಿನಕ್ಕೆ ಕಾಲಿಟ್ಟ ಮೈಕ್ರೋಸಾಫ್ಟ್ ಔಟ್ಲುಕ್, ಟೀಮ್ಸ್ ಸ್ಥಗಿತ; ಸೇವೆ ಸ್ಥಿರಪಡಿಸಲು ಪ್ರಯತ್ನಿಸುತ್ತಿರುವ ಟೆಕ್ ದೈತ್ಯ
Photo: x.com/Forbes
ಮೈಕ್ರೋಸಾಫ್ಟ್ ತನ್ನ ಕೃತಕ ಬುದ್ಧಿಮತ್ತೆಗಾಗಿ (AI) ಸಾವಿರಾರು ಇಂಜಿನಿಯರ್ ಗಳನ್ನು ಉದ್ಯೋಗದಿಂದ ತೆಗೆದುಹಾಕುವ ಯೋಜನೆ ರೂಪಿಸಿರುವ ಸಂದರ್ಭದಲ್ಲಿ, ಮೈಕ್ರೋಸಾಫ್ಟ್ ನಲ್ಲಿ AI ನಿಂದಾಗುತ್ತಿರುವ ಸಮಸ್ಯೆಗಳನ್ನು ಕಂಡುಹಿಡಿಯಲು ಮಾನವ ಇಂಜಿನಿಯರ್ ಗಳು ಒದ್ದಾಡುತ್ತಿದ್ದಾರೆ ಎನ್ನುವಂತಹ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಔಟ್ಲುಕ್ ಸೇರಿದಂತೆ ಮೈಕ್ರೋಸಾಫ್ಟ್ ಪ್ಲಾಟ್ಫಾರ್ಮ್ಗಳಲ್ಲಿ ಗುರುವಾರ ವ್ಯಾಪಕವಾದ ಸ್ಥಗಿತ ಕಂಡುಬಂದಿದ್ದು, ಅನೇಕ ಬಳಕೆದಾರರು ತಮ್ಮ ಇಮೇಲ್ ಖಾತೆಗಳನ್ನು ಬಳಸುವಲ್ಲಿ ವಿಫಲರಾಗಿದ್ದಾರೆ. ಶುಕ್ರವಾರವೂ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಇತ್ತೀಚಿನ ವಿವರದಲ್ಲಿ ಮೈಕ್ರೋಸಾಫ್ಟ್ “ಮರುಸ್ಥಾಪಿಸುವ ಆರಂಭಿಕ ಲಕ್ಷಣಗಳನ್ನು” ಕಾಣುತ್ತಿದೆ ಎಂದು ಹೇಳಿದೆ.
ಆದರೆ, ಒಂದೇ ಬಾರಿಗೆ ಬಳಕೆದಾರರ ಒತ್ತಡವನ್ನು ಸರ್ವರ್ ಗಳ ಮೇಲೆ ಹಾಕಿದರೆ ಮತ್ತೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ, ಕಂಪೆನಿಯು ಹಂತ ಹಂತವಾಗಿ ಸೇವೆಯನ್ನು ಮರುಸ್ಥಾಪಿಸುತ್ತಿದೆ. ಈ ಪ್ರಕ್ರಿಯೆ ನಡೆಯುತ್ತಿರುವ ಕಾರಣದಿಂದ ಕೆಲವರಿಗೆ ಸೇವೆ ಸರಿಯಾಗಿ ದೊರೆಯಬಹುದು, ಇನ್ನು ಕೆಲವರಿಗೆ ಸಮಸ್ಯೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಕಂಪೆನಿ ಹೇಳಿದೆ.
ಈ ಸಂದರ್ಭದಲ್ಲಿ ಟ್ವಿಟರ್ ನಲ್ಲಿ ಮೈಕ್ರೋಸಾಫ್ಟ್ ತನ್ನ ಕೃತಕ ಬುದ್ಧಿಮತ್ತೆಗಾಗಿ (AI) ಸಾವಿರಾರು ಇಂಜಿನಿಯರ್ ಗಳನ್ನು ಉದ್ಯೋಗದಿಂದ ತೆಗೆದುಹಾಕುವ ಯೋಜನೆ ರೂಪಿಸಿರುವ ಸಂದರ್ಭದಲ್ಲಿ, ಮೈಕ್ರೋಸಾಫ್ಟ್ ನಲ್ಲಿ AI ನಿಂದಾಗುತ್ತಿರುವ ಸಮಸ್ಯೆಗಳನ್ನು ಕಂಡುಹಿಡಿಯಲು ಮಾನವ ಇಂಜಿನಿಯರ್ ಗಳು ಒದ್ದಾಡುತ್ತಿದ್ದಾರೆ ಎನ್ನುವಂತಹ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
“ಮೈಕ್ರೋಸಾಫ್ಟ್ ಸಾವಿರಾರು ಜನರನ್ನು ಕೆಲಸದಿಂದ ತೆಗೆದು ಹಾಕಿದೆ ಮತ್ತು AI ಗೆ ಶತಕೋಟಿ ಹಣವನ್ನು ಸುರಿಯುತ್ತಿದೆ. ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿರುವ ‘ಔಟ್ಲುಕ್’ ಅನ್ನು ಮರಳಿ ತರಲು 10 ಗಂಟೆಗಳಿಗೂ ಮೀರಿ ಮಾನವ ಇಂಜಿನಿಯರ್ಗಳು ಪ್ರಯತ್ನಿಸುತ್ತಿದ್ದಾರೆ. ಈಗ ಆ ಇಂಜಿನಿಯರ್ಗಳು ಲಕ್ಷಾಂತರ AI ರಚಿತ ಕೋಡ್ ಸಾಲುಗಳನ್ನು ಹುಡುಕುವುದನ್ನು ಊಹಿಸಿ” ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
►ಏನಿದು ಔಟ್ಲುಕ್ ಸ್ಥಗಿತ?
ಸ್ಥಳೀಯ ಸಮಯ ಮಧ್ಯಾಹ್ನ 1 ಗಂಟೆಯ ನಂತರ ಔಟ್ಲುಕ್ ಪ್ರವೇಶಿಸುವಲ್ಲಿ ವಿಫಲವಾಗಿರುವುದಾಗಿ ಸುಮಾರು 1,30,000 ಬಳಕೆದಾರರು ಔಟೇಜ್ ಟ್ರ್ಯಾಕರ್ ಡೌನ್ಡಿಟೆಕ್ಟರ್ ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಅನೇಕರಿಗೆ ಇಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಲಿಲ್ಲ ಅಥವಾ ತಮ್ಮ ಇನ್ಬಾಕ್ಸ್ಗಳನ್ನು ಸಂಪೂರ್ಣವಾಗಿ ಲೋಡ್ ಮಾಡಲು ಸಮಸ್ಯೆ ಎದುರಿಸಿದ್ದಾರೆ.
ಮೈಕ್ರೋಸಾಫ್ಟ್ನ ವರ್ಕ್ಪ್ಲೇಸ್ ಸಂದೇಶ ಅಪ್ಲಿಕೇಶನ್ ಆಗಿರುವ ಟೀಮ್ಸ್, AI ಅಸಿಸ್ಟೆಂಟ್ ಕೋಪೈಲಟ್ ಮತ್ತು ವಿಶಾಲವಾದ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿಯೂ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ.
►ಏನಿದು ಸಮಸ್ಯೆ?
ಮೈಕ್ರೋಸಾಫ್ಟ್ 365 ಸೇವೆಯನ್ನು ಸುಗಮವಾಗಿ ನಡೆಸಲು ಜವಾಬ್ದಾರರಾಗಿರುವ ಸರ್ವರ್ ಗಳಿಗೆ ಅನ್ವಯಿಸಲಾದ ಸೆಟ್ಟಿಂಗ್ಗಳ ದೋಷಗಳಿಂದಾಗಿ ಸೇವಾ ವ್ಯತ್ಯಯ ಉಂಟಾಗಿರಬಹುದು. ಇದು ಸೈಬರ್ ದಾಳಿಯ ಪರಿಣಾಮವಲ್ಲ ಎಂದು ಮೈಕ್ರೋಸಾಫ್ಟ್ ಹೇಳಿರುವುದಾಗಿ ದಿ ಗಾರ್ಡಿಯನ್ ವರದಿ ಮಾಡಿದೆ.
“ಮೂಲ ಸೌಕರ್ಯದ ಒಂದು ಭಾಗವು ಬಹು ಪ್ರದೇಶಗಳಲ್ಲಿ ಹೆಚ್ಚಿನ ಹೊರೆ ಎದುರಿಸುತ್ತಿದೆ ಮತ್ತು ಸಂಪರ್ಕ ದೋಷಗಳಿಗೆ ಕಾರಣವಾಗಬಹುದು” ಎಂದು ನವೆಂಬರ್ 13ರಂದು ಮೈಕ್ರೋಸಾಫ್ಟ್ ಎಕ್ಸ್ನಲ್ಲಿ ಹಂಚಿಕೊಂಡಿತ್ತು. ಸೇವೆಗಳನ್ನು ಪುನಃಸ್ಥಾಪಿಸಲು ಮತ್ತು ಇಮೇಲ್ ಬ್ಯಾಕ್ಲಾಗ್ ಅನ್ನು ಪರಿಹರಿಸಲು ಕೆಲಸ ಮಾಡುವಾಗ ವಿಳಂಬವಾದ ಸಂದೇಶಗಳನ್ನು ಮರುಪಡೆಯಲು 48 ಗಂಟೆಗಳವರೆಗೆ ಸಮಯ ವಿಸ್ತರಣೆಯಾಗಬಹುದು ಎಂದು ಮೈಕ್ರೋಸಾಫ್ಟ್ ಹೇಳಿರುವುದಾಗಿ ವರದಿಯಾಗಿದೆ. ಈ ಅಂದಾಜು ಸಮಯದ ನವೀಕರಣವನ್ನು ಇನ್ನೂ ಒದಗಿಸಿಲ್ಲ.
ಸಮಸ್ಯೆಯನ್ನು ಸರಿಪಡಿಸುವ ಪ್ರಕ್ರಿಯೆಯು ‘ನಿರೀಕ್ಷಿಸಿದಂತೆ ನಡೆಯುತ್ತಿಲ್ಲ” ಎಂದು ಕಂಪೆನಿ ಒಪ್ಪಿಕೊಂಡಾಗ ಸಮಸ್ಯೆ ಎಷ್ಟು ಗಂಭೀರವಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಈ ಸೇವಾ ವ್ಯತ್ಯಯವು ಆಸ್ಟ್ರೇಲಿಯ, ಜಪಾನ್ ಮತ್ತು ಅಮೆರಿಕದ ಸರ್ಕಾರಿ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ. ಜೊತೆಗೆ OpenAI ಮತ್ತು Anthropic ನಂತಹ ಬೃಹತ್ AI ಕಂಪೆನಿಗಳು ಸೇರಿದಂತೆ ಅನೇಕ ಖಾಸಗಿ ಸಂಸ್ಥೆಗಳ ಮೇಲೂ ಪರಿಣಾಮವಾಗಿದೆ.
ಮೈಕ್ರೋಸಾಫ್ಟ್ನ ಇತ್ತೀಚಿನ ಮಾಹಿತಿಯ ಪ್ರಕಾರ, ಸಾಫ್ಟ್ವೇರ್ ಪ್ಯಾಚ್ ಅಳವಡಿಸಿದ ನಂತರ ಸರ್ವರ್ ಸ್ಥಿರತೆಯಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತಿವೆ. ಹಾಗಿದ್ದರೂ “Microsoft 365 (Business ಅಥವಾ Enterprise ಆವೃತ್ತಿಗಳು) ಮತ್ತು ಮೈಕ್ರೋಸಾಫ್ಟ್ನ ಗ್ರಾಹಕ ಉತ್ಪನ್ನಗಳ ಸೇವೆಯಲ್ಲಿ ಇನ್ನೂ ವ್ಯತ್ಯಯಗಳು (service degradation) ಕಂಡುಬರುತ್ತಿವೆ” ಎಂದು ಕಂಪೆನಿ ವರದಿ ಮಾಡಿದೆ.