Photo Credit : x@sanchezcastejon

ಸೆವಿಲ್ಲಾ: ಸ್ಪೇನ್ ಅನ್ನು ಆಳುವುದು ಸ್ಪೇನ್ ನವರೇ ಹೊರತು ವಾಷಿಂಗ್ಟನ್, ಮಾಸ್ಕೋ, ಬ್ಯೂನಸ್ ಐರಿಸ್ ಅಥವಾ ಟೆಲ್ ಅವಿವ್ ಅಲ್ಲ ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಹೇಳಿದ್ದಾರೆ. ಆ ಮೂಲಕ ದೇಶದ ಸಾರ್ವಭೌಮತ್ವ ಮತ್ತು ಫೆಲೆಸ್ತೀನ್ ಪರ ನಿಲುವಿನಲ್ಲಿ ರಾಜಿಯಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.

ನ. 12ರಂದು ಸೆವಿಲ್ಲಾದಲ್ಲಿ ನಡೆದ ಸಮಾಜವಾದಿ ಪಕ್ಷ PSOEಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಅಂತಾರಾಷ್ಟ್ರೀಯ ಬಲಪಂಥೀಯ ಶಕ್ತಿಗಳ ಹಿತ್ತಲಾಗಿ ಸ್ಪೇನ್ ಬದಲಾಗಲು ಅವಕಾಶ ನೀಡುವುದಿಲ್ಲ. ನ. 29ರ ಚುನಾವಣೆಯ ನಂತರವೂ ದೇಶ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲಿದೆ ಎಂದು ಹೇಳಿದರು.

ಫೆಲೆಸ್ತೀನ್ ವಿಚಾರವಾಗಿ ಮಾತನಾಡಿದ ಸ್ಯಾಂಚೆಝ್, ಜಗತ್ತಿನಲ್ಲಿ ಶಾಂತಿಯನ್ನು ಕಾಪಾಡಲು, ನರಮೇಧವನ್ನು ಕೊನೆಗೊಳಿಸಲು ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಲು ಉಕ್ರೇನಿಯನ್ ಅಥವಾ ಫೆಲೆಸ್ತೀನಿಯನ್ ಆಗಿರಬೇಕಾದ ಅಗತ್ಯವಿಲ್ಲ. ಇದಕ್ಕೆ ಮಾನವೀಯ ಸಹಾನುಭೂತಿ ಮತ್ತು ಒಗ್ಗಟ್ಟು ಸಾಕು ಎಂದು ಪ್ರತಿಪಾದಿಸಿದರು.

ಕಳೆದ ಎಂಟು ವರ್ಷಗಳಲ್ಲಿ ತಮ್ಮ ಸರಕಾರ ಉಕ್ರೇನ್ ಮತ್ತು ಫೆಲೆಸ್ತೀನ್ ನಲ್ಲಿ ಶಾಂತಿಗಾಗಿ ಧ್ವನಿ ಎತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶೇ. 5ರಷ್ಟು ರಕ್ಷಣಾ ವೆಚ್ಚದ ಬೇಡಿಕೆಗೂ ಒಪ್ಪಿಗೆ ನೀಡಿಲ್ಲ ಎಂದು ನೆನಪಿಸಿದರು.

ಟೆಲ್ ಅವಿವ್ ಮತ್ತು ವಾಷಿಂಗ್ಟನ್ ಗಳನ್ನು ನೇರವಾಗಿ ಉಲ್ಲೇಖಿಸಿರುವುದು ಸ್ಯಾಂಚೆಝ್ ಅವರ ಸ್ವತಂತ್ರ ವಿದೇಶಾಂಗ ನೀತಿಯ ನಿಲುವನ್ನು ಪ್ರತಿಬಿಂಬಿಸಿದೆ. ಫೆಲೆಸ್ತೀನ್ ನಲ್ಲಿನ ನರಮೇಧದ ವಿರುದ್ಧದ ನಿಲುವನ್ನು ಮಾನವೀಯತೆ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಆಧಾರದಲ್ಲಿ ಸಮರ್ಥಿಸಿಕೊಂಡಿದ್ದಾರೆ.

► ವಿಶ್ವಸಂಸ್ಥೆಯಿಂದ ಕ್ರೀಡಾಂಗಣದವರೆಗೆ ಫೆಲೆಸ್ತೀನ್ ಪರ ನಿಲುವು

ಸೆಪ್ಟೆಂಬರ್ 2026ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಸ್ಯಾಂಚೆಝ್, ಗಾಝಾದಲ್ಲಿ ನಡೆಯುತ್ತಿರುವ ನರಮೇಧವನ್ನು ಖಂಡಿಸಿದ್ದರು. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನಂತಹ ಸಂಸ್ಥೆಗಳನ್ನು ಬಲಪಡಿಸುವಂತೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಂದ ಇಸ್ರೇಲ್ ಅನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು.

ಇಸ್ರೇಲ್ ನೊಂದಿಗಿನ 700 ಮಿಲಿಯನ್ ಯೂರೋ ಮೌಲ್ಯದ ರಕ್ಷಣಾ ಒಪ್ಪಂದವನ್ನೂ ಸ್ಪೇನ್ ರದ್ದುಗೊಳಿಸಿತ್ತು.

ಕ್ರೀಡಾ ವಲಯದಲ್ಲೂ ಫೆಲೆಸ್ತೀನ್ ಪರ ಬೆಂಬಲ ವ್ಯಕ್ತವಾಗಿದೆ. ಸ್ಪೇನ್ ನ ಯುವ ಫುಟ್ಬಾಲ್ ತಾರೆ ಲಮಿನ್ ಯಮಾಲ್ ಫೆಲೆಸ್ತೀನ್ ಧ್ವಜ ಹಾರಿಸುವ ಮೂಲಕ ಜಾಗತಿಕ ಗಮನ ಸೆಳೆದಿದ್ದರು. ಇದಕ್ಕೆ ಇಸ್ರೇಲ್ ಸರಕಾರ ಟೀಕೆ ವ್ಯಕ್ತಪಡಿಸಿದಾಗ ಸ್ಯಾಂಚೆಝ್ ಯಮಾಲ್ ಬೆಂಬಲಕ್ಕೆ ನಿಂತಿದ್ದರು. ಅಥ್ಲೆಟಿಕ್ ಕ್ಲಬ್ ಬಿಲ್ಬಾವೊ ತಂಡವು ಪಂದ್ಯಕ್ಕೂ ಮುನ್ನ ಫೆಲೆಸ್ತೀನ್ ನಿರಾಶ್ರಿತರನ್ನು ಗೌರವಿಸಿ, ನರಮೇಧ ನಿಲ್ಲಿಸುವಂತೆ ಕರೆ ನೀಡಿತ್ತು.

ಇನ್ನು ವುಲ್ಟಾ ಎ ಎಸ್ಪಾನಾ ಸೈಕಲ್ ರೇಸ್ ವೇಳೆ ನಡೆದ ಫೆಲೆಸ್ತೀನ್ ಪರ ಪ್ರತಿಭಟನೆಗಳನ್ನು ಸ್ಯಾಂಚೆಝ್ ಶ್ಲಾಘಿಸಿದ್ದರು. ದೇಶದ ವಿವಿಧ ನಗರಗಳಲ್ಲಿ ಲಕ್ಷಾಂತರ ಜನರು ಇದೇ ವಿಚಾರವಾಗಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಸೆವಿಲ್ಲಾ ರ್ಯಾ ಲಿಯಲ್ಲಿ ಸ್ಯಾಂಚೆಝ್ ನೀಡಿರುವ ಹೇಳಿಕೆ, ಸ್ಪೇನ್ ನ ವಿದೇಶಾಂಗ ನೀತಿ, ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಫೆಲೆಸ್ತೀನ್ ಕುರಿತ ರಾಜತಾಂತ್ರಿಕ ನಿಲುವಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor