×
Ad

ಏಷ್ಯಾದ ಮೊದಲ ‘ಎದೆ ಹಾಲಿನ ಬ್ಯಾಂಕ್‌’ ಸ್ಥಾಪಿಸಿದ ಡಾ. ಅರ್ಮಿಡಾ ಫೆರ್ನಾಂಡಿಸ್‌ಗೆ ಪದ್ಮಶ್ರೀ

ನವಜಾತ ಶಿಶು ತಜ್ಞೆಯ ಸಾಧನೆಯ ಹಾದಿ

Update: 2026-01-26 20:47 IST

 ಡಾ. ಅರ್ಮಿಡಾ ಫೆರ್ನಾಂಡಿಸ್ | Photo Credit : indianexpress.com

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದವರಲ್ಲಿ 83ರ ಹರೆಯದ ಡಾ. ಅರ್ಮಿಡಾ ಫೆರ್ನಾಂಡಿಸ್ ಕೂಡ ಒಬ್ಬರು. 1989ರಲ್ಲಿ ಏಷ್ಯಾದ ಮೊದಲ ಎದೆ ಹಾಲಿನ ಬ್ಯಾಂಕ್ ಅನ್ನು ಸ್ಥಾಪಿಸಿದ ನವಜಾತ ಶಿಶು ತಜ್ಞೆ ಇವರು. ಕರ್ನಾಟಕ ಮೂಲದವರಾದ ಡಾ. ಅರ್ಮಿಡಾ ಫೆರ್ನಾಂಡಿಸ್, ನಗರ ಆರೋಗ್ಯ ಸರ್ಕಾರೇತರ ಸಂಸ್ಥೆ ‘ಸೊಸೈಟಿ ಫಾರ್ ನ್ಯೂಟ್ರಿಷನ್, ಎಜುಕೇಶನ್ ಅಂಡ್ ಹೆಲ್ತ್ ಆಕ್ಷನ್’ (SNEHA) ದ ಸ್ಥಾಪಕ ಟ್ರಸ್ಟಿ.

ಮುಂಬೈನಲ್ಲಿ ಮಕ್ಕಳ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಎದೆಹಾಲಿನ ಬ್ಯಾಂಕ್ ಸ್ಥಾಪಿಸಿದರು. ‘ಭಾರತೀಯ ನವಜಾತ ಶಿಶುಶಾಸ್ತ್ರದ ತಾಯಿ’ ಎಂಬ ಕೀರ್ತಿಗೆ ಭಾಜನರಾದ ಇವರ ಕೆಲಸ ಕಾರ್ಯಗಳು ಮಕ್ಕಳ ಪೌಷ್ಠಿಕಾಂಶದ ಮೇಲೆ ಕೇಂದ್ರೀಕರಿಸಿದ್ದು, ಭಾರತದಲ್ಲಿ ಮಕ್ಕಳ ಆರೈಕೆಯನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಶಿಶು ಮರಣವನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಕೊಡುಗೆ ನೀಡಿದ ಎದೆ ಹಾಲಿನ ಬ್ಯಾಂಕ್ ಅವರ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ನವಜಾತ ಶಿಶುಶಾಸ್ತ್ರದಲ್ಲಿ ಭಾರತದ ಆರಂಭಿಕ ಡಾಕ್ಟರೇಟ್ ಕಾರ್ಯಕ್ರಮಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅರ್ಮಿಡಾ, ಸಯಾನ್ ಆಸ್ಪತ್ರೆ ಎಂದೂ ಕರೆಯಲ್ಪಡುವ LTMG ಆಸ್ಪತ್ರೆಯ ಡೀನ್ ಆಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ, 2001ರಲ್ಲಿ ನಿವೃತ್ತರಾದರು.

ಎದೆಹಾಲಿನ ಬ್ಯಾಂಕ್ ಆರಂಭಿಸಿದ ಸಮಯದಲ್ಲಿ ಅದು ಹೆಚ್ಚು ಪರಿಚಯವಿಲ್ಲದ ಹಾಗೂ ಸಾಮಾನ್ಯವಾಗಿ ಸ್ವೀಕಾರಾರ್ಹವಲ್ಲದ ವಿಷಯವಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದರೂ ಡಾ. ಅರ್ಮಿಡಾ ಫೆರ್ನಾಂಡಿಸ್ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅದನ್ನು ವಹಿಸಿಕೊಳ್ಳುವ ಮೊದಲು, ಖಾಸಗಿ ದಾನಿಗಳ ಬೆಂಬಲದೊಂದಿಗೆ ಎದೆ ಹಾಲಿನ ಬ್ಯಾಂಕ್ ಆರಂಭದಲ್ಲಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿತು. ನವಜಾತ ಶಿಶುಗಳನ್ನು ಬೆಚ್ಚಗಿರಿಸಲು ಓವರ್‌ಹೆಡ್ ದೀಪಗಳ ಬಳಕೆಯಂತಹ ಕಡಿಮೆ ವೆಚ್ಚದ ನಾವೀನ್ಯತೆಗಳನ್ನು ಸಹ ಅರ್ಮಿಡಾ ಪರಿಚಯಿಸಿದರು.

ನವಜಾತ ಶಿಶುಗಳ ಘಟಕಗಳಿಗೆ ತಾಯಂದಿರು ಬಂದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ ಎಂಬ ಕಾರಣ ನೀಡಿ, ಹೆಚ್ಚಿನ ವೈದ್ಯರು ಅಮ್ಮಂದಿರಿಗೆ ಪ್ರವೇಶ ನಿರಾಕರಿಸುತ್ತಿದ್ದ ಕಾಲದಲ್ಲಿ, ತಮ್ಮ ಶಿಶುಗಳ ಆರೈಕೆ ಮಾಡಲು ಅಮ್ಮಂದಿರಿಗೆ ಅವಕಾಶ ಕಲ್ಪಿಸಿದವರು ಡಾ. ಅರ್ಮಿಡಾ. ಶಿಶುಗಳ ಜೊತೆ ಅಮ್ಮಂದಿರುವುದರಿಂದ ಸೋಂಕು ಹರಡುವುದಿಲ್ಲ, ಬದಲಿಗೆ ಮಕ್ಕಳಿಗೆ ಹೆಚ್ಚಿನ ರಕ್ಷಣೆ ಸಿಗುತ್ತದೆ ಎಂಬುದು ಸಾಬೀತಾಗಿದೆ ಎಂದು ಸಯಾನ್ ಆಸ್ಪತ್ರೆಯ ಮಾಜಿ ಡೀನ್ ಹಾಗೂ ಅರ್ಮಿಡಾ ಅವರ ಆಪ್ತ ಸಹೋದ್ಯೋಗಿ ಡಾ. ಜಯಶ್ರೀ ಮಾಂಡ್ಕರ್ ಹೇಳಿದ್ದಾರೆ.

1999ರಲ್ಲಿ ಡಾ. ಫೆರ್ನಾಂಡಿಸ್ ಲೋಕೋಪಕಾರಿಗಳು ಮತ್ತು ನವಜಾತ ಶಿಶುಶಾಸ್ತ್ರಜ್ಞರ ಗುಂಪಿನೊಂದಿಗೆ SNEHA ಎಂಬ ಎನ್‌ಜಿಒ ಪ್ರಾರಂಭಿಸಿದರು. 90ರ ದಶಕದಲ್ಲಿ ಸಾರ್ವಜನಿಕ ಆರೋಗ್ಯ ಎಂದರೆ ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಸೀಮಿತ ಎಂಬ ಭಾವನೆ ಇತ್ತು. ನಗರಗಳಲ್ಲಿ ವಾಸಿಸುವ ಬಡವರ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಡಾ. ಅರ್ಮಿಡಾ, ತಜ್ಞರು ಮತ್ತು ದಾನಿಗಳೊಂದಿಗೆ ನಗರ ಬಡವರಿಗೆ ಆರೋಗ್ಯ ಸೌಕರ್ಯ ಒದಗಿಸುವ ಕಾರ್ಯಕ್ಕೆ ಮುಂದಾದರು.

ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆಗಾಗಿ SNEHA ಕಾರ್ಯನಿರ್ವಹಿಸಿತು. ಮಕ್ಕಳ ಆರೈಕೆ ಮತ್ತು ಪೋಷಣೆ, ಹದಿಹರೆಯದವರ ಆರೋಗ್ಯದ ಮೇಲೆಯೂ ಸಂಸ್ಥೆ ಕೆಲಸ ಮಾಡಿತು. ಇಂದು SNEHA 500ಕ್ಕಿಂತ ಹೆಚ್ಚು ಜನರ ಕಾರ್ಯಪಡೆಯನ್ನು ಹೊಂದಿದ್ದು, ಮುಂಬೈನ ಕೊಳೆಗೇರಿ ಸಮುದಾಯಗಳಲ್ಲಿ ಸೇವೆ ಸಲ್ಲಿಸುತ್ತಿದೆ.

ಎದೆಹಾಲಿನ ಬ್ಯಾಂಕ್ ಸ್ಥಾಪನೆಗೆ ಕಾರಣ

ಮಗುವಿನ ಜೀವನದ ಮೊದಲ ನಾಲ್ಕು ವಾರಗಳಲ್ಲಿ ತಾಯಿಯ ಹಾಲು ಅತ್ಯಂತ ನಿರ್ಣಾಯಕವಾಗಿದೆ. ಇದರಿಂದ ಕೊಲೊಸ್ಟ್ರಮ್ ದೊರೆಯುತ್ತದೆ. ಇದು ಪೌಷ್ಠಿಕಾಂಶಗಳಿಂದ ಕೂಡಿದ, ಪ್ರತಿಕಾಯ-ಸಮೃದ್ಧ ‘ಮೊದಲ ರೋಗನಿರೋಧಕ’ವಾಗಿದ್ದು, ರೋಗನಿರೋಧಕ ಶಕ್ತಿಯನ್ನು ನಿರ್ಮಿಸುತ್ತದೆ. ಸೋಂಕುಗಳನ್ನು ತಡೆಯುತ್ತದೆ ಮತ್ತು ಶಿಶುವಿನ ಜೀರ್ಣಾಂಗ ವ್ಯವಸ್ಥೆಯನ್ನು ಪ್ರಾರಂಭಿಸುತ್ತದೆ. ಕರುಳಿನ ಪಕ್ವತೆಗೆ ಸಹಾಯ ಮಾಡುತ್ತದೆ. ಸುಲಭವಾಗಿ ಹೀರಿಕೊಳ್ಳುವ ಹಾಗೂ ಜೀರ್ಣವಾಗುವ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ಅವಧಿಗೆ ಮುಂಚೆ ಹುಟ್ಟಿದ ಅಥವಾ ಹುಟ್ಟುವಾಗ ಕಡಿಮೆ ತೂಕವಿರುವ ಶಿಶುಗಳಿಗೆ ಇದು ಅತ್ಯಗತ್ಯ. ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ. ತಾಯಿಯ ಪ್ರಸವಾನಂತರದ ಚೇತರಿಕೆಗೆ ಸಹಾಯ ಮಾಡುವುದರ ಜೊತೆಗೆ ತಾಯಿ–ಮಗು ಬಂಧವನ್ನು ಬಲಪಡಿಸುತ್ತದೆ. ಶಿಶುಗಳು ಆರಂಭದಲ್ಲಿ ತೂಕ ಕಳೆದುಕೊಳ್ಳಬಹುದಾದರೂ, ಕೊಲೊಸ್ಟ್ರಮ್ ಮತ್ತು ಎದೆಹಾಲು ಅದನ್ನು ಮರಳಿ ಪಡೆಯಲು ಪೋಷಣೆಯನ್ನು ಒದಗಿಸುತ್ತದೆ.

“1972–73ರಲ್ಲಿ ಮುಂಬೈನ ಸಯಾನ್ ಆಸ್ಪತ್ರೆಯಲ್ಲಿ ನಾನು ವೃತ್ತಿಜೀವನ ಆರಂಭಿಸಿದೆ. ಆ ಸಮಯದಲ್ಲಿ ನವಜಾತ ಶಿಶು ಮರಣ ಪ್ರಮಾಣ ಬಹಳ ಹೆಚ್ಚಾಗಿತ್ತು. ಶಿಶುಗಳು ಮತ್ತು ಪುಟ್ಟ ಮಕ್ಕಳು ಸೆಪ್ಸಿಸ್ ಹಾಗೂ ಅತಿಸಾರಕ್ಕೆ ಹೆಚ್ಚು ಗುರಿಯಾಗುತ್ತಿದ್ದರು. ಅತಿಸಾರಕ್ಕೆ ಮೂಲ ಕಾರಣ ಫಾರ್ಮುಲಾ ಹಾಲು ಮತ್ತು ಬಾಟಲಿಗಳು ಎಂದು ಸಂಶೋಧನೆಯ ಮೂಲಕ ತಿಳಿದುಬಂತು. ಇದಕ್ಕೆ ಕಡಿಮೆ ವೆಚ್ಚದ ಹಾಗೂ ಪ್ರಾಯೋಗಿಕ ಪರಿಹಾರ ಬೇಕಿತ್ತು. ಪ್ರತಿಯೊಂದು ಮಗುವಿಗೂ, ವಿಶೇಷವಾಗಿ ಅತ್ಯಂತ ದುರ್ಬಲ ಶಿಶುವಿಗೂ ತಾಯಿಯ ಎದೆ ಹಾಲು ಅಗತ್ಯ ಎಂದು ಚಿಂತಿಸಿ ಕಾರ್ಯರೂಪಕ್ಕೆ ತಂದೆ” ಎಂದು ಡಾ. ಫೆರ್ನಾಂಡಿಸ್ ತಿಳಿಸಿದ್ದಾರೆ.

ಎದೆಹಾಲಿನ ಬ್ಯಾಂಕ್ ಶುರು ಮಾಡಿದ್ದು

ಆರೋಗ್ಯವಂತರಾಗಿರುವ ಹಾಲುಣಿಸುವ ತಾಯಂದಿರು ತಮ್ಮಲ್ಲಿರುವ ಹೆಚ್ಚುವರಿ ಹಾಲನ್ನು ದಾನ ಮಾಡಿದರೆ, ಅದನ್ನು ಎದೆಹಾಲು ಇಲ್ಲದ ಅಥವಾ ಆರೋಗ್ಯವಿಲ್ಲದ ಶಿಶುಗಳಿಗೆ ಬಳಸಬಹುದು. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿರುವ ಶಿಶುಗಳಿಗೆ ಇದು ಅತ್ಯಗತ್ಯವೆಂದು ಗುರುತಿಸಿದ ಡಾ. ಅರ್ಮಿಡಾ 1989ರಲ್ಲಿ ಎದೆಹಾಲಿನ ಬ್ಯಾಂಕ್ ಸ್ಥಾಪಿಸಿದರು. ಅದು ಏಷ್ಯಾದ ಮೊದಲ ಎದೆಹಾಲಿನ ಬ್ಯಾಂಕ್ ಆಗಿತ್ತು. ನಂತರ ತಾಜ್ ಗ್ರೂಪ್ ಆಫ್ ಹೋಟೆಲ್ಸ್ ಮತ್ತು ಇತರರ ಬೆಂಬಲದೊಂದಿಗೆ ಅದನ್ನು ನವೀಕರಿಸಲಾಯಿತು. ಆ ಬಳಿಕ ಸಯಾನ್‌ನಲ್ಲಿ ಯಾವುದೇ ಶಿಶುವಿಗೂ ಫಾರ್ಮುಲಾ ಹಾಲು ನೀಡಲಾಗಲಿಲ್ಲ.

ಈ ಮಾದರಿಯು ಮೊದಲು ಮುಂಬೈನ ಕೆಇಎಂ ಮತ್ತು ಜೆಜೆ ಆಸ್ಪತ್ರೆಗಳಿಗೆ, ನಂತರ ರೋಟರಿ ಕ್ಲಬ್‌ಗಳ ಸಹಭಾಗಿತ್ವದೊಂದಿಗೆ ಇತರ ಕೇಂದ್ರಗಳಿಗೆ ವಿಸ್ತರಿಸಿತು. ಈ ಕಲ್ಪನೆಯನ್ನು ಅಳವಡಿಸಿಕೊಂಡ ನಂತರ ಅದು ವೇಗವಾಗಿ ಬೆಳೆಯಿತು. ಇಂದು ದೇಶಾದ್ಯಂತ 100ಕ್ಕಿಂತ ಹೆಚ್ಚು ಎದೆಹಾಲಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ.

ಯುನಿಸೆಫ್ ಬೆಂಬಲದೊಂದಿಗೆ ಡಾ. ಅರ್ಮಿಡಾ ‘ಬ್ಲೂ ಮಾಡ್ಯೂಲ್’ ಎಂಬ ಸ್ತನ್ಯಪಾನ ಕೈಪಿಡಿ ಮತ್ತು ಶೈಕ್ಷಣಿಕ ವೀಡಿಯೊಗಳನ್ನು ಸಿದ್ಧಪಡಿಸಿದರು. ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿ ವೈದ್ಯರು, ದಾದಿಯರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ನೀಡಲು ಈ ಸಾಮಗ್ರಿಗಳನ್ನು ಬಳಸಲಾಗಿದೆ.

ಮೇ 2025ರಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ಬಿಡುಗಡೆ ಮಾಡಿದ ಮಾದರಿ ನೋಂದಣಿ ವ್ಯವಸ್ಥೆ (SRS) ವರದಿ–2021ರ ಪ್ರಕಾರ, ಭಾರತವು ತಾಯಂದಿರು ಮತ್ತು ಮಕ್ಕಳ ಆರೋಗ್ಯ ಸೂಚಕಗಳಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದೆ. ತಾಯಿಯ ಮರಣ ಅನುಪಾತವು ಲಕ್ಷ ಜನನಗಳಿಗೆ 130ರಿಂದ 93ಕ್ಕೆ ಇಳಿದಿದೆ. ಶಿಶು ಮರಣ ಪ್ರಮಾಣವು 2014ರಲ್ಲಿ 1,000 ಜನನಗಳಿಗೆ 39ರಿಂದ 2021ರಲ್ಲಿ 27ಕ್ಕೆ ಇಳಿದಿದೆ. ನವಜಾತ ಶಿಶು ಮರಣ ಪ್ರಮಾಣವು 2014ರಲ್ಲಿ 1,000 ಜನನಗಳಿಗೆ 26ರಿಂದ 2021ರಲ್ಲಿ 19ಕ್ಕೆ ಇಳಿದಿದೆ.

ಆಸ್ಪತ್ರೆಯಲ್ಲಿ ಮಾತ್ರ ಆರೈಕೆ ಸಾಕಾಗುವುದಿಲ್ಲ

ನಿಜವಾದ ಬದಲಾವಣೆ ತರಲು ಮತ್ತು ಶಿಶುಗಳನ್ನು ಉಳಿಸಲು ಆಸ್ಪತ್ರೆ ಆಧಾರಿತ ಆರೈಕೆ ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ಅರಿತ ಡಾ. ಅರ್ಮಿಡಾ ಧಾರಾವಿಗೆ ಕಾಲಿಟ್ಟರು. ಅಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ‘ಸೊಸೈಟಿ ಫಾರ್ ನ್ಯೂಟ್ರಿಷನ್, ಎಜುಕೇಶನ್ ಅಂಡ್ ಹೆಲ್ತ್ ಆಕ್ಷನ್’ (SNEHA). ಇದು ತಾಯಿ ಮತ್ತು ನವಜಾತ ಶಿಶು ಆರೋಗ್ಯ, ಮಕ್ಕಳ ಪೋಷಣೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆಗೆ ಕೇಂದ್ರೀಕೃತವಾಗಿದೆ.

ಬದುಕಿನಲ್ಲಿ ತಿರುವು

ಡಾ. ಫೆರ್ನಾಂಡಿಸ್ 13 ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ತಮ್ಮ ಮಗಳನ್ನು ಕಳೆದುಕೊಂಡಾಗ ಅವರ ಬದುಕು ಮಹತ್ವದ ತಿರುವು ಪಡೆದುಕೊಂಡಿತು. “ಅಂತಿಮ ಹಂತದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆರೈಕೆ ನೀಡಲು ಸಾಧ್ಯವಿಲ್ಲವೇ?” ಎಂದು ಯೋಚಿಸಿದ ಅವರು SNEHA ಸಂಸ್ಥೆಯ ವ್ಯಾಪ್ತಿಯನ್ನು ವಿಸ್ತರಿಸಿದರು. ಈ ಮೂಲಕ ಉಪಶಮನ ಹಾಗೂ ಬುದ್ಧಿಮಾಂದ್ಯತೆ ಆರೈಕೆ ಸೇವೆಗಳನ್ನು ಆರಂಭಿಸಿದರು. ಇಂದು ಬಾಂದ್ರಾದಲ್ಲಿರುವ ಕೇಂದ್ರದಲ್ಲಿ ಚಿಕಿತ್ಸೆ ಮತ್ತು ಸಮಾಲೋಚನೆ ನೀಡಲಾಗುತ್ತಿದೆ. ವೈದ್ಯರು, ದಾದಿಯರು ಮತ್ತು ಸಲಹೆಗಾರರ ಬಹುಶಿಸ್ತೀಯ ತಂಡಗಳು ಮುಂಬೈನ ಕೊಳೆಗೇರಿಗಳಲ್ಲಿ ಮನೆ ಭೇಟಿ ನಡೆಸುತ್ತಿವೆ.

ಎದೆಹಾಲು ಏಕೆ ದಾನ ಮಾಡಬೇಕು?

ತಾಯಿಯ ಹಾಲು ಪೌಷ್ಠಿಕಾಂಶ ಒದಗಿಸಿ ಶಿಶುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೋಂಕು ಮತ್ತು ರೋಗಗಳಿಂದ ರಕ್ಷಿಸುತ್ತದೆ.

ಅನಾರೋಗ್ಯ ಪೀಡಿತ ಹಾಗೂ ಅವಧಿಗೆ ಮುಂಚೆ ಜನಿಸಿದ ಶಿಶುಗಳಿಗೆ ಎದೆಹಾಲು ಅತ್ಯಂತ ಮುಖ್ಯ. ಇದು ಶಿಶುಗಳ ಜೀವ ಉಳಿಸುತ್ತದೆ.

ತಾಯಿಯ ಅನಾರೋಗ್ಯ, ಸಾವು ಅಥವಾ ಹಾಲು ಉತ್ಪಾದನೆಯಲ್ಲಿ ವಿಳಂಬದಂತಹ ಅನಿವಾರ್ಯ ಕಾರಣಗಳಿಂದ ಅನೇಕ ದುರ್ಬಲ ಶಿಶುಗಳು ಸ್ವಂತ ತಾಯಿಯ ಹಾಲು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಎದೆಹಾಲಿನ ಬ್ಯಾಂಕ್ ಶಿಶುಗಳ ಜೀವ ಉಳಿಸಬಲ್ಲದು.

ಯಾರು ದಾನ ಮಾಡಬಹುದು?

ಯಾವುದೇ ಹಾಲುಣಿಸುವ ಮಹಿಳೆ ಸ್ವಯಂಪ್ರೇರಣೆಯಿಂದ ಹೆಚ್ಚುವರಿ ಹಾಲನ್ನು ದಾನ ಮಾಡಲು ಸಿದ್ಧರಿದ್ದರೆ ಈ ಉಪಕ್ರಮದ ಭಾಗವಾಗಬಹುದು.

ದಾನ ಮಾಡಲು ತಾಯಿ ಉತ್ತಮ ಆರೋಗ್ಯದಲ್ಲಿರಬೇಕು.

ಪ್ರಕ್ರಿಯೆ

* ದಾನಿ ತಾಯಿಯ ನೋಂದಣಿ ಮತ್ತು ತಪಾಸಣೆ

* ದಾನಿ ತಾಯಿಯಿಂದ ಹಾಲಿನ ಸಂಗ್ರಹ

* ಪಾಶ್ಚರೀಕರಣ ಮತ್ತು ಪರೀಕ್ಷೆ

* ಫ್ರೀಜರ್‌ನಲ್ಲಿ ಸಂಗ್ರಹಣೆ

* ಶಿಶುಗಳಿಗೆ ವೈದ್ಯರ ಪ್ರಿಸ್ಕ್ರಿಪ್ಷನ್

* ಅಗತ್ಯವಿರುವ ಶಿಶುಗಳಿಗೆ ಹಾಲು ವಿತರಣೆ

ದಾನ ಮಾಡುವುದು ತಾಯಿ ಮತ್ತು ಮಗುವಿಗೆ ಹೇಗೆ ಸಹಾಯ ಮಾಡುತ್ತದೆ?

ಹಾಲು ದಾನ ಮಾಡುವುದರಿಂದ ಸ್ತನಗಳ ಊತವನ್ನು ತಡೆಯಲು ಸಹಾಯವಾಗುತ್ತದೆ. ಸ್ತನಗಳು ಗಟ್ಟಿಯಾಗುವುದು ಹಾಗೂ ಊದಿಕೊಳ್ಳುವುದು ಮಗುವಿಗೆ ಹಾಲುಣಿಸಲು ಕಷ್ಟವಾಗುವ ಸ್ಥಿತಿ ಉಂಟುಮಾಡುತ್ತದೆ. ತಾಯಿ ತನ್ನ ಮಗು ಕುಡಿಯುವುದಕ್ಕಿಂತ ಹೆಚ್ಚು ಹಾಲು ಉತ್ಪಾದಿಸಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಹೆಚ್ಚುವರಿ ಹಾಲು ದಾನ ಮಾಡುವುದರಿಂದ ತಾಯಿಗೆ ನೋವಿನಿಂದ ಪರಿಹಾರ ಸಿಗುವುದಲ್ಲದೆ, ಆಸ್ಪತ್ರೆಯಲ್ಲಿ ಇರುವ ಅನೇಕ ನಿರ್ಗತಿಕ ಶಿಶುಗಳ ಜೀವ ಉಳಿಸಲು ಸಹಾಯವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News