×
Ad

ಜಗತ್ತಿನ ಗಮನ ಸೆಳೆದ ಪೆಂಗ್ವಿನ್ ಪಕ್ಷಿಯ ಒಂಟಿ ನಡಿಗೆ

Update: 2026-01-25 12:40 IST

Photo: instagram

 

ಒಂಟಿಯಾಗಿ ಸಾಗುವ ಪೆಂಗ್ವಿನ್‌ ನ ನಿಗೂಢ ಪ್ರಯಾಣಕ್ಕೆ ಬಳಕೆದಾರರು ಹಾಸ್ಯ, ತತ್ವಶಾಸ್ತ್ರ ಮತ್ತು ಭಾವನಾತ್ಮಕ ಅರ್ಥಗಳನ್ನು ನೀಡುತ್ತಿದ್ದಂತೆ ಟಿಕ್‌ಟಾಕ್‌, ಇನ್‌ಸ್ಟಾಗ್ರಾಮ್‌, ರೆಡಿಟ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವ್ಯಾಪಕವಾಗಿ ಜನಪ್ರಿಯವಾಗುತ್ತಿದೆ.

 

ವರ್ನರ್ ಹೆರ್ಜಾಗ್ ಅವರ ಸಾಕ್ಷ್ಯಚಿತ್ರದಲ್ಲಿರುವ ಒಂದು ಪೆಂಗ್ವಿನ್ ಏಕಾಂಗಿಯಾಗಿ ಒಳನಾಡಿನತ್ತ ನಡೆಯುವ ದೃಶ್ಯ ಇದೀಗ ವೈರಲ್ ಮೀಮ್ ಆಗಿದೆ. ಆಧುನಿಕ ಮನಸ್ಥಿತಿಗೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವ ಕಾರಣದಿಂದ ಈ ಒಂಟಿ ಪೆಂಗ್ವಿನ್ ಜನರ ಗಮನ ಸೆಳೆಯುತ್ತಿದೆ. ಈ ಪೆಂಗ್ವಿನ್‌ ನ ಒಂಟಿ ನಡಿಗೆ ಆಧುನಿಕ ಕಾಲದ ಭಾವನಾತ್ಮಕ ಹೋರಾಟಗಳು ಮತ್ತು ಪ್ರತ್ಯೇಕತೆಯನ್ನು ಸಂಕೇತಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಒಂಟಿಯಾಗಿ ಭಿನ್ನ ಹಾದಿ ಹಿಡಿದು ಸಾಗುವ ಪೆಂಗ್ವಿನ್‌ ನ ಭಾವನಾತ್ಮಕ ತೊಳಲಾಟಗಳು ವೈರಲ್ ಸಂವೇದನೆಗಳಲ್ಲಿ ಒಂದಾಗಿವೆ. ಬಳಕೆದಾರರು ಅದರ ನಿಗೂಢ ಪ್ರಯಾಣಕ್ಕೆ ಹಾಸ್ಯ, ತತ್ವಶಾಸ್ತ್ರ ಮತ್ತು ಭಾವನಾತ್ಮಕ ಅರ್ಥಗಳನ್ನು ನೀಡುತ್ತಿದ್ದಂತೆ ಟಿಕ್‌ಟಾಕ್‌, ಇನ್‌ಸ್ಟಾಗ್ರಾಮ್‌, ರೆಡಿಟ್‌ ಮತ್ತು ಇತರ ವೇದಿಕೆಗಳಲ್ಲಿ ಈ ವೀಡಿಯೊ ಹೆಚ್ಚು ಜನಪ್ರಿಯವಾಗುತ್ತಿದೆ.

Full View

►ಜನರ ಗಮನ ಸೆಳೆದ ಒಂಟಿ ನಡಿಗೆ

ಪ್ರಸ್ತುತ ಜಾಗತಿಕವಾಗಿ ಗಮನ ಸೆಳೆಯುತ್ತಿರುವ ಈ ಪೆಂಗ್ವಿನ್‌ ನ ದೃಶ್ಯ 2007ರಲ್ಲಿ ಬಿಡುಗಡೆಯಾದ ‘ಎನ್‌ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಎಂಬ ಸಾಕ್ಷ್ಯಚಿತ್ರದಿಂದ ಬಂದಿದೆ. ಹೆರ್ಜಾಗ್ ಅವರ ತಂಡ ಪೆಂಗ್ವಿನ್‌ ಗಳ ಚಿತ್ರೀಕರಣ ನಡೆಸುತ್ತಿದ್ದಾಗ, ಒಂದು ಪೆಂಗ್ವಿನ್ ಸಮುದ್ರದ ಕಡೆಗೆ ತೆರಳುತ್ತಿದ್ದ ತನ್ನ ಸಮೂಹದಿಂದ ದೂರ ಸರಿದು ಏಕಾಂಗಿಯಾಗಿ ಒಳನಾಡಿನತ್ತ, ಹಿಮಪರ್ವತಗಳ ಸಾಲಿನೆಡೆಗೆ ಸಾಗಲು ಆರಂಭಿಸುತ್ತದೆ.

ಒಂದೇ ಪೆಂಗ್ವಿನ್ ದೂರ ಸಾಗುತ್ತಿರುವುದನ್ನು ತಂಡ ಗಮನಿಸುತ್ತದೆ. ಆಹಾರ, ಬದುಕುಳಿಯುವಿಕೆ ಮತ್ತು ಸಮುದಾಯದೊಂದಿಗೆ ಸಾಗುವ ಬದಲಾಗಿ ಏಕಾಂಗಿಯಾಗಿ ಸಾಗುತ್ತಿರುವ ಪೆಂಗ್ವಿನ್ ಸ್ವಲ್ಪ ದೂರ ಹೋಗಿ ತಿರುಗಿ ನೋಡುತ್ತದೆ. ಉಳಿದ ಪೆಂಗ್ವಿನ್‌ ಗಳು ಕೆಲ ಕ್ಷಣಗಳ ಕಾಲ ಅದನ್ನು ಗಮನಿಸಿ, ಮತ್ತೆ ತಮ್ಮ ಹಾದಿ ಹಿಡಿಯುತ್ತವೆ.

ಸಾಮಾನ್ಯವಾಗಿ ಪೆಂಗ್ವಿನ್‌ ಗಳು ಗುಂಪಾಗಿ ಸಾಗುತ್ತವೆ. ಆದರೆ ಈ ಪೆಂಗ್ವಿನ್‌ ನ ಒಂಟಿ ನಡಿಗೆಯನ್ನು ಹೆರ್ಜಾಗ್ ‘ಡೆತ್ ಮಾರ್ಚ್’ (ಸಾವಿನ ನಡಿಗೆ) ಎಂದು ಕರೆಯುತ್ತಾರೆ. ಏಕೆಂದರೆ ಪೆಂಗ್ವಿನ್‌ ಗಳು ಒಳನಾಡಿನತ್ತ ಸಾಗಿದರೆ ಬದುಕುಳಿಯುವ ಸಾಧ್ಯತೆ ಇರುವುದಿಲ್ಲ.

►ಹಳೆಯ ವೀಡಿಯೊಗೆ ಹೊಸ ಭಾವನೆ

2026ರ ಆರಂಭದಲ್ಲಿ ಈ ಒಂಟಿ ಪೆಂಗ್ವಿನ್‌ ನ ಸಣ್ಣ ತುಣುಕುಗಳು ಆನ್‌ಲೈನ್‌ ನಲ್ಲಿ ವೇಗವಾಗಿ ಹರಡಲು ಆರಂಭಿಸಿದವು. ‘ನಿಹಿಲಿಸ್ಟ್ ಪೆಂಗ್ವಿನ್’ ಎಂಬ ಅಡ್ಡಹೆಸರಿನೊಂದಿಗೆ ಈ ದೃಶ್ಯಗಳು ವೈರಲ್ ಆದವು. ಜನವರಿ 16ರಂದು ಟಿಕ್‌ಟಾಕ್‌ ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಮೊದಲ ಬಾರಿಗೆ ವ್ಯಾಪಕವಾಗಿ ಗಮನ ಸೆಳೆಯಿತು.

ಪೆಂಗ್ವಿನ್‌ ನ ಭಾವನಾತ್ಮಕ ಒಂಟಿ ಪಯಣವನ್ನು ‘ಎಲ್ ಅಮೂರ್ ಟೂಜೂರ್ಸ್’ ಎಂಬ ಪ್ರಸಿದ್ಧ ಹಾಡಿನೊಂದಿಗೆ ಮಿಶ್ರ ಮಾಡಿ ಟಿಕ್‌ಟಾಕ್‌ ನಲ್ಲಿ ಹಂಚಲಾಗಿತ್ತು. ನಾಟಕೀಯ ಸಂಗೀತ, ಹೆರ್ಜಾಗ್ ಅವರ ನಿರೂಪಣೆ ಮತ್ತು ಪೆಂಗ್ವಿನ್‌ ನ ನಿಧಾನಗತಿಯ ಪ್ರಯಾಣ ಪ್ರಬಲ ಆಡಿಯೊ-ವಿಜುವಲ್ ಮೀಮ್ ಆಗಿ ರೂಪುಗೊಂಡವು.

►‘ನಿಹಿಲಿಸ್ಟ್ ಪೆಂಗ್ವಿನ್’ ಎಂದರೇನು?

ಈ ಬಾರಿ ಇಂಟರ್ನೆಟ್ ಮೀಮ್ ಗಳ ಮೂಲಕ ಪೆಂಗ್ವಿನ್‌ ನ ನಡಿಗೆಯಲ್ಲಿ ಹೆಚ್ಚು ಆಳವಾದ ಅರ್ಥವನ್ನು ಜನರು ಕಾಣುತ್ತಿದ್ದಾರೆ. ಇದಕ್ಕೆ ‘ನಿಹಿಲಿಸ್ಟ್ ಪೆಂಗ್ವಿನ್’ ಎಂಬ ಹೆಸರು ಲಭಿಸಿದೆ. ‘ನಿಹಿಲಿಸ್ಟ್’ ಅಥವಾ ‘ಶೂನ್ಯವಾದಿ’ ಎಂದರೆ ಜೀವನಕ್ಕೆ ಅರ್ಥವಿಲ್ಲ ಎಂದು ನಂಬುವ ಮತ್ತು ಧಾರ್ಮಿಕ ಹಾಗೂ ನೈತಿಕ ತತ್ವಗಳನ್ನು ತಿರಸ್ಕರಿಸುವ ವ್ಯಕ್ತಿ.

ಹೀಗಾಗಿ ವೀಕ್ಷಕರು ಪೆಂಗ್ವಿನ್‌ ನ ನಿಧಾನಗತಿಯ ಒಂಟಿ ನಡಿಗೆಯ ಮೇಲೆ ಮಾನವ ಭಾವನೆಗಳು ಮತ್ತು ಅಸ್ತಿತ್ವವಾದದ ಪ್ರಶ್ನೆಗಳನ್ನು ಹೇರಿದ್ದಾರೆ. ಹಲವರು ಈ ಪೆಂಗ್ವಿನ್‌ ನ ಶಾಂತ ಆದರೆ ಗುರಿಯಿಲ್ಲದ ನಡಿಗೆಯನ್ನು ಆಧುನಿಕ ಜೀವನದ ಹೋರಾಟಗಳಿಗೆ ಹೋಲಿಸಿದ್ದಾರೆ. ಇನ್ನು ಕೆಲವರು ಇದನ್ನು ಸುಸ್ತು, ಭಾವನಾತ್ಮಕ ಆಯಾಸ, ದಿನಚರಿ ಮತ್ತು ನಿರೀಕ್ಷೆಗಳಿಂದ ದೂರವಿರುವ ಭಾವನೆ, ಅಥವಾ ಅಗಾಧ ಜಗತ್ತಿನಲ್ಲಿ ಕಳೆದುಹೋಗುವ ಶಾಂತತೆಯ ಸಂಕೇತವಾಗಿ ನೋಡುತ್ತಿದ್ದಾರೆ.

►ವೈಜ್ಞಾನಿಕ ವಿವರಣೆಗೆ ಯತ್ನ

ವೈಜ್ಞಾನಿಕ ದೃಷ್ಟಿಯಿಂದಲೂ ಪೆಂಗ್ವಿನ್‌ ನ ಈ ನಡಿಗೆಯನ್ನು ವಿಶ್ಲೇಷಿಸಲಾಗುತ್ತಿದೆ. ಕೆಲವು ಪೆಂಗ್ವಿನ್‌ ಗಳು ತಮ್ಮ ಸಮೂಹದಿಂದ ದೂರ ಸರಿದು ಪರ್ವತಗಳ ಕಡೆಗೆ ಸಾಗುವುದು ಕಂಡುಬರುತ್ತದೆ. ಇದಕ್ಕೆ ವಯಸ್ಸು, ಗೊಂದಲ ಅಥವಾ ಕಾಂತೀಯ ಕ್ಷೇತ್ರಗಳ ಪ್ರಭಾವ ಕಾರಣವಾಗಿರಬಹುದು ಎಂದು ಕೆಲವು ವಿಜ್ಞಾನಿಗಳು ಹೇಳುತ್ತಾರೆ.

ಇನ್ನು ಕೆಲವರ ಪ್ರಕಾರ ಇದು ಸಂಪೂರ್ಣವಾಗಿ ನೈಸರ್ಗಿಕವಾದ, ಕಾರಣವಿಲ್ಲದ ನಡಿಗೆಯೂ ಆಗಿರಬಹುದು. ಕೆಲ ಜೀವಿಗಳು ಸಹಜವಾಗಿಯೇ ಭಿನ್ನ ಹಾದಿಯನ್ನು ಆಯ್ಕೆ ಮಾಡುತ್ತವೆ ಎಂಬ ವಿವರಣೆಯೂ ಇದೆ.

ವಿಜ್ಞಾನಿಗಳ ಅಭಿಪ್ರಾಯದಲ್ಲಿ, ಇದು ಒಂದು ಪ್ರತ್ಯೇಕ ನಡಿಗೆಯಷ್ಟೇ. ಇದಕ್ಕೆ ಮಾನವ ಜೀವನದ ಅರ್ಥಗಳನ್ನು ಹೇರಬೇಕಾಗಿಲ್ಲ. ಇದು ವೈಜ್ಞಾನಿಕವಾಗಿ ಕುತೂಹಲಕರವಾದ ವರ್ತನೆ ಮಾತ್ರ; ಎಚ್ಚರಿಕೆಯ ಸಂಕೇತವೆಂದು ಪರಿಗಣಿಸುವ ಅಗತ್ಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

Similar News