ಗಣರಾಜ್ಯೋತ್ಸವದಲ್ಲಿ ಮೊದಲ ಬಾರಿಗೆ ‘ಬ್ಯಾಟಲ್ ಅರೇ’
ಈ ವರ್ಷದ ಗಣರಾಜ್ಯೋತ್ಸವದ ಅತ್ಯಂತ ರೋಮಾಂಚಕ ಅಂಶವೆಂದರೆ, ಹಿಂದೆಂದೂ ನಡೆದಿರದ ಒಂದು ಕಾರ್ಯಕ್ರಮ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಭಾರತೀಯ ಸೇನೆ ಪರೇಡ್ ಸಂದರ್ಭದಲ್ಲಿ ಒಂದು ‘ಬ್ಯಾಟಲ್ ಅರೇ ಸಂರಚನೆ’ಯನ್ನು ಪ್ರದರ್ಶಿಸಲಿದೆ. ಇದು ಕೇವಲ ಒಂದು ಬದಲಾವಣೆ ಮಾತ್ರವಲ್ಲ. ನಾವು ನಮ್ಮ ಮಿಲಿಟರಿ ಬಲವನ್ನು ಹೇಗೆ ಪ್ರದರ್ಶಿಸುತ್ತೇವೆ ಎನ್ನುವುದರಲ್ಲಿನ ಬಹುದೊಡ್ಡ ಪರಿವರ್ತನೆಯೂ ಹೌದು.
ಪ್ರತಿವರ್ಷವೂ ಜನವರಿ 26ರಂದು ಭಾರತ ಅತ್ಯಂತ ಹೆಮ್ಮೆ ಮತ್ತು ಸಂಭ್ರಮಗಳಿಂದ ತನ್ನ ಗಣರಾಜ್ಯ ದಿನವನ್ನು ಆಚರಿಸುತ್ತದೆ. ಇದು ಭಾರತೀಯ ಸಂವಿಧಾನ ನಮ್ಮ ನೆಲದ ಅಧಿಕೃತ ಕಾನೂನಾಗಿ ಜಾರಿಗೆ ಬಂದ ಐತಿಹಾಸಿಕ ದಿನ. 2026ರಲ್ಲಿ ನಾವು ಗಣರಾಜ್ಯೋತ್ಸವವನ್ನು 77ನೇ ಬಾರಿಗೆ ಆಚರಿಸಲಿದ್ದೇವೆ. ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಅದ್ದೂರಿ ಗಣರಾಜ್ಯೋತ್ಸವ ಪರೇಡ್ ಅನ್ನು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಜನರು ಯೋಧರ ಪಥಸಂಚಲವನ್ನು, ಯುದ್ಧ ಟ್ಯಾಂಕುಗಳ ಸಾಗುವಿಕೆಯನ್ನು ಮತ್ತು ಭಾರತದ ವೈವಿಧ್ಯವನ್ನು ಪ್ರದರ್ಶಿಸುವ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ.
ಈ ವರ್ಷದ ಗಣರಾಜ್ಯೋತ್ಸವಕ್ಕೆ ‘ವಂದೇ ಮಾತರಂ ಗೀತೆಯ 150 ವರ್ಷಗಳು’ ಎಂಬ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಾಡನ್ನು ಗೌರವಿಸಲು ವಂದೇ ಮಾತರಂನ ಸಾಲುಗಳನ್ನು ಹೊಂದಿರುವ ಸುಂದರ ಚಿತ್ರಗಳನ್ನು ಪರೇಡ್ ಸಾಗುವ ಪಥದಲ್ಲಿ ಪ್ರದರ್ಶಿಸಲಾಗುತ್ತದೆ. ಗಣರಾಜ್ಯೋತ್ಸವವನ್ನು ಸಂಭ್ರಮಿಸುವ ಸಲುವಾಗಿ ಜನವರಿ 19ರಿಂದ 26ರ ತನಕ ದೇಶಾದ್ಯಂತ ವಿವಿಧ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಯುರೋಪಿನ ಪ್ರಮುಖ ನಾಯಕರನ್ನು ಆರಿಸಲಾಗಿದೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೊನಿಯೊ ಕೊಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಉಪಸ್ಥಿತಿ ಭಾರತ ಹೇಗೆ ಜಗತ್ತಿನಾದ್ಯಂತ ವಿವಿಧ ದೇಶಗಳೊಡನೆ ಬಲವಾದ ಸ್ನೇಹ ಸಂಬಂಧ ನಿರ್ವಹಿಸುತ್ತದೆ ಎನ್ನುವುದನ್ನು ತೋರಿಸಲಿದೆ.
ಈ ವರ್ಷದ ಗಣರಾಜ್ಯೋತ್ಸವದ ಅತ್ಯಂತ ರೋಮಾಂಚಕ ಅಂಶವೆಂದರೆ, ಹಿಂದೆಂದೂ ನಡೆದಿರದ ಒಂದು ಕಾರ್ಯಕ್ರಮ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಭಾರತೀಯ ಸೇನೆ ಪರೇಡ್ ಸಂದರ್ಭದಲ್ಲಿ ಒಂದು ‘ಬ್ಯಾಟಲ್ ಅರೇ ಸಂರಚನೆ’ಯನ್ನು ಪ್ರದರ್ಶಿಸಲಿದೆ. ಇದು ಕೇವಲ ಒಂದು ಬದಲಾವಣೆ ಮಾತ್ರವಲ್ಲ. ನಾವು ನಮ್ಮ ಮಿಲಿಟರಿ ಬಲವನ್ನು ಹೇಗೆ ಪ್ರದರ್ಶಿಸುತ್ತೇವೆ ಎನ್ನುವುದರಲ್ಲಿನ ಬಹುದೊಡ್ಡ ಪರಿವರ್ತನೆಯೂ ಹೌದು.
ಬ್ಯಾಟಲ್ ಅರೇ ಎಂದರೇನು?
ಹಿಂದಿನ ಎಲ್ಲ ಗಣರಾಜ್ಯೋತ್ಸವ ಪಥಸಂಚಲನಗಳಲ್ಲಿ, ಮಿಲಿಟರಿ ಉಪಕರಣಗಳು ಒಂದರ ನಂತರ ಒಂದರಂತೆ, ಸಾಲಾಗಿ ಸಾಗಿ ಹೋಗುತ್ತಿದ್ದವು. ಜನರಿಗೆ ಟ್ಯಾಂಕ್‌ಗಳು, ಗನ್‌ಗಳು, ಯೋಧರು, ಎಲ್ಲವೂ ಕಾಣುತ್ತಿದ್ದರೂ ಎಲ್ಲವೂ ಪ್ರತ್ಯೇಕವಾಗಿ ಸಾಗುತ್ತಿದ್ದವು. ಆದರೆ, ಈ ವರ್ಷ ಈ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗುತ್ತಿದೆ. ಬ್ಯಾಟಲ್ ಅರೇ ಸಂರಚನೆ ನೈಜ ಯುದ್ಧದ ಪರಿಸ್ಥಿತಿಯಲ್ಲಿ ನಮ್ಮ ಸೇನೆ ವಾಸ್ತವವಾಗಿ ಹೇಗೆ ಸಿದ್ಧವಾಗುತ್ತದೆ, ಹೇಗೆ ಚಲಿಸುತ್ತದೆ ಎನ್ನುವುದನ್ನು ಪ್ರದರ್ಶಿಸಲಿದೆ.
ಇವರೆಡರ ನಡುವಿನ ವ್ಯತ್ಯಾಸವನ್ನು ಒಂದು ರೀತಿ ಯುದ್ಧದ ಕುರಿತ ಒಂದು ಚಲನಚಿತ್ರವನ್ನು ನೋಡುವುದು ಮತ್ತು ಅದನ್ನು ಪುಸ್ತಕ ರೂಪದಲ್ಲಿ ಓದುವುದಕ್ಕೆ ಹೋಲಿಸಬಹುದು. ಈ ಸಂರಚನೆ ನೈಜ ಯುದ್ಧದ ಕಾರ್ಯತಂತ್ರವನ್ನು ಪರೇಡ್ ಮೈದಾನದಲ್ಲಿ ಎಲ್ಲರಿಗೂ ಪ್ರದರ್ಶಿಸುತ್ತದೆ. ಈ ಪ್ರಕ್ರಿಯೆ ಮೊದಲು ಸ್ಕೌಟ್ ಪಡೆಯಿಂದ ಆರಂಭವಾಗುತ್ತದೆ. ಇವರು ಒಂದು ಪ್ರದೇಶಕ್ಕೆ ಮೊದಲು ತೆರಳಿ, ಅಲ್ಲಿ ಏನಾದರೂ ಅಪಾಯವಿದೆಯೇ ಎಂದು ಪರಿಶೀಲಿಸುತ್ತಾರೆ. ಆ ಬಳಿಕ ಪೂರೈಕೆಗಳು, ಆಯುಧಗಳು ಮತ್ತು ಉಪಕರಣಗಳನ್ನು ಹೊಂದಿರುವ ಬೆಂಬಲ ತಂಡಗಳು ಬರುತ್ತವೆ. ಬಳಿಕ ಅಂತಿಮವಾಗಿ ನಮಗೆ ಮುಖ್ಯ ಹೋರಾಟದ ಗುಂಪು, ಅಂದರೆ ಸಂಪೂರ್ಣ ಯುದ್ಧ ಸಿದ್ಧರಾಗಿ ಆಯುಧಗಳನ್ನು ಹಿಡಿದು, ದಾಳಿ ನಡೆಸಲು ಅಥವಾ ನಮ್ಮ ನೆಲವನ್ನು ರಕ್ಷಿಸಲು ಸಜ್ಜಾಗಿರುವ ಯೋಧರು ಬರುತ್ತಾರೆ.
ಇದೆಲ್ಲವೂ ಅತ್ಯಂತ ನಿಖರ ವಿಧಾನದಲ್ಲಿ ನಡೆಯುತ್ತದೆ. ಹೇಗೆ ನೈಜ ಕದನದಲ್ಲಿ ನಮ್ಮ ಸೇನೆ ಕಾರ್ಯಾಚರಣೆಗಳನ್ನು ಯೋಜಿಸಿ ಕಾರ್ಯರೂಪಕ್ಕೆ ತರುತ್ತದೋ, ಅದೇ ರೀತಿಯ ನಿಖರತೆಯನ್ನು ಇಲ್ಲೂ ಅನುಸರಿಸಲಾಗುತ್ತದೆ. ಶಕ್ತಿಶಾಲಿ ಟಿ-90 ಟ್ಯಾಂಕುಗಳು ಮತ್ತು ದೇಶೀಯ ನಿರ್ಮಾಣದ ಅರ್ಜುನ್ ಟ್ಯಾಂಕ್‌ಗಳು ಜೊತೆಯಾಗಿ ಚಲಿಸಲಿವೆ. ಇವುಗಳೊಡನೆ ಬಿಎಂಪಿ ಪದಾತಿದಳದ ಸಶಸ್ತ್ರ ವಾಹನಗಳು, ಎಟಿಎಜಿಎಸ್ (ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್) ರೀತಿಯ ಬೃಹತ್ ಫಿರಂಗಿಗಳು ಮತ್ತು ಧನುಷ್ ಹೊವಿಟ್ಜರ್‌ಗಳು, ಬ್ರಹ್ಮೋಸ್ ಮತ್ತು ಆಕಾಶ್ ಸೇರಿದಂತೆ ಮಾರಕ ಫಿರಂಗಿಗಳು ಮತ್ತು ಮೇಲ್ಭಾಗದಲ್ಲಿ ಹಾರುತ್ತಾ ಸಾಗುವ ಡ್ರೋನ್‌ಗಳೂ ಇರಲಿವೆ. ಇವುಗಳೊಡನೆ ರೊಬೊಟಿಕ್ ವಾಹನಗಳು ತಮ್ಮ ಪಾಡಿಗೆ ಚಲಿಸಲಿವೆ. ಎಲ್ಲವೂ ಒಂದ ಸಂರಚನೆಯಲ್ಲಿ ಸಾಗಲಿದ್ದು, ಆಧುನಿಕ ಯುದ್ಧದ ನೈಜ ಚಿತ್ರಣ ಒದಗಿಸಲಿವೆ.
ಇದರಿಂದ ಪರೇಡ್ ಕೇವಲ ನೋಡಲು ಸುಂದರವಾಗಿ ಕಾಣುವುದು ಮಾತ್ರವಲ್ಲದೆ, ಅರ್ಥವತ್ತಾಗಿಯೂ, ಶೈಕ್ಷಣಿಕವಾಗಿಯೂ ಇರಲಿದೆ. ಭಾರತೀಯ ಸೇನಾ ಪಡೆಗಳು ಅತ್ಯಾಧುನಿಕ ಮತ್ತು ಅತ್ಯಂತ ಶಕ್ತಿಶಾಲಿ ಸಶಸ್ತ್ರ ಪಡೆಗಳಾಗಿ ಸಾಗಿ ಬಂದ ಹಾದಿಯನ್ನೂ ಇದು ಪ್ರದರ್ಶಿಸಲಿದೆ.
ಈ ವರ್ಷ ಏಕೆ ಇಷ್ಟೊಂದು ವಿಶೇಷ?
2025ರಲ್ಲಿ ನಡೆದ ಆಪರೇಶನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆಗಳು ಒಂದು ಮಹತ್ವದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡವು. ಅದರ ಬೆನ್ನಲ್ಲೇ ಈ ಪ್ರಮುಖ ಬದಲಾವಣೆಗಳೂ ಜಾರಿಗೆ ಬಂದಿವೆ. ಈ ಬಾರಿಯ ಪರೇಡ್ ಆಪರೇಶನ್ ಸಿಂಧೂರದ ನೈಜ ಕಥೆ ಮತ್ತು ಶೌರ್ಯದ ಕ್ರಮಗಳನ್ನು ಪ್ರದರ್ಶಿಸಲಿದೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನೂತನವಾಗಿ ಸ್ಥಾಪಿಸಿರುವ ಭೈರವ್ ಲೈಟ್ ಕಮಾಂಡೋ ಬಟಾಲಿಯನ್‌ನಂತಹ ವಿಶೇಷ ಪಡೆಗಳೂ ಮೊದಲ ಬಾರಿಗೆ ಹೆಜ್ಜೆ ಹಾಕಲಿವೆ. ಭೈರವ್ ಬಟಾಲಿಯನ್‌ಗಳು ಕ್ಷಿಪ್ರ ಕಾರ್ಯಾಚರಣಾ ಪಡೆಗಳಾಗಿದ್ದು, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ, ಅತ್ಯಂತ ಕಷ್ಟಕರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ತರಬೇತಿ ಹೊಂದಿವೆ.
ಭಾರತೀಯ ವಾಯು ಸೇನೆ ಆಪರೇಶನ್ ಸಿಂಧೂರದ ಸಂದರ್ಭದಲ್ಲಿ ನಡೆಸಿದ ರಚನೆಯೂ ಸೇರಿದಂತೆ, ವಿವಿಧ ವಿಶೇಷ ವೈಮಾನಿಕ ರಚನೆಗಳನ್ನು ಆಗಸದಲ್ಲಿ ಪ್ರದರ್ಶಿಸಲಿದೆ. ಇದಕ್ಕಾಗಿ ರಫೇಲ್ ಯುದ್ಧ ವಿಮಾನಗಳು, ಸು-30 ಯುದ್ಧ ವಿಮಾನಗಳು ಮತ್ತು ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಬಳಕೆಯಾಗಲಿವೆ. ನಮ್ಮ ವೀರ ಮಾಜಿ ಯೋಧರನ್ನು ಗೌರವಿಸುವ ಸಲುವಾಗಿ ಅವರಿಗೆ ವಿಶೇಷ ಆಸನ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತದೆ.
ಅಂದಾಜು 2,500 ಪ್ರತಿಭಾವಂತ ಕಲಾವಿದರು ನೃತ್ಯ ಮತ್ತು ಸಂಗೀತ ಪ್ರದರ್ಶನ ನೀಡಲಿದ್ದು, ಭಾರತದ ಅಮೋಘ ಸಾಂಸ್ಕೃತಿಕ ವೈವಿಧ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ವಿವಿಧ ರಾಜ್ಯಗಳು ಮತ್ತು ಸಂಸ್ಥೆಗಳ 30ರಷ್ಟು ಸ್ತಬ್ಧಚಿತ್ರಗಳೂ ಸಮಾರಂಭಕ್ಕೆ ಮೆರುಗು ನೀಡಲಿವೆ. ಇವೆಲ್ಲವೂ ಆಯಾ ರಾಜ್ಯಗಳ ಪರಂಪರೆ ಮತ್ತು ನವೀನ ಆಲೋಚನೆಗಳನ್ನು ಪ್ರದರ್ಶಿಸಲಿವೆ.
ಈ ವರ್ಷದ ಅತಿಥಿಗಳ ಪಟ್ಟಿಯೂ ಅತ್ಯಂತ ವಿಶಿಷ್ಟವಾಗಿದೆ. ಈ ಬಾರಿ ಅಂದಾಜು 10,000 ವಿಶೇಷ ಅತಿಥಿಗಳು ಆಗಮಿಸಲಿದ್ದು, ಅವರು ಕೇವಲ ರಾಜಕಾರಣಿಗಳು, ಅಧಿಕಾರಿಗಳಲ್ಲ! ಅವರಲ್ಲಿ ನೈಸರ್ಗಿಕ ಕೃಷಿಯನ್ನು ಅನುಸರಿಸುವ ರೈತರು, ಪದಕಗಳನ್ನು ಗೆದ್ದಿರುವ ಪ್ಯಾರಾ ಕ್ರೀಡಾಳುಗಳು, ಸರಕಾರಿ ಯೋಜನೆಗಳ ಪ್ರಯೋಜನ ಪಡೆದಿರುವ ತೃತೀಯ ಲಿಂಗಿಗಳು ಮತ್ತು ದೇಶಕ್ಕೆ ಹೆಮ್ಮೆ ತಂದಿರುವ ಸಾಕಷ್ಟು ಸಾಮಾನ್ಯ ನಾಗರಿಕರೂ ಸೇರಿದ್ದಾರೆ. ದಿಲ್ಲಿಯಲ್ಲಿರುವ, ದೇಶದ ವಿವಿಧ ರಾಜ್ಯಗಳಿಂದ ಬಂದಿರುವ 50 ಜೋಡಿಗಳನ್ನೂ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಅವರು ತಮ್ಮ ಸಾಂಪ್ರದಾಯಿಕ ಉಡುಗೆಗಳಲ್ಲಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳುವ ಪಥಸಂಚಲನ 90 ನಿಮಿಷಗಳ ಅವಧಿಯದ್ದಾಗಿರಲಿದೆ. ಇದಕ್ಕೆ ಇ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲೂ ಪಡೆಯಬಹುದಾಗಿದ್ದು, ಸಂಚಾರವನ್ನು ಸುಗಮಗೊಳಿಸಲು ಮೆಟ್ರೊ ರೈಲು ಸೇವೆಯನ್ನು ಉಚಿತ ಮಾಡಲಾಗಿದೆ.
ಬ್ಯಾಟಲ್ ಅರೇ ಸಂರಚನೆ ಕೇವಲ ಮಿಲಿಟರಿ ಪ್ರದರ್ಶನ ಮಾತ್ರವಲ್ಲ. ಇದು ಎಲ್ಲರಿಗೂ ನಮ್ಮ ಸೇನೆ ಹೇಗೆ ಕಾರ್ಯಾಚರಿಸುತ್ತದೆ ಎನ್ನುವ ಅರಿವು, ಜ್ಞಾನ ಮೂಡಿಸಲಿದೆ. ಪ್ರತಿಯೊಬ್ಬ ಭಾರತೀಯನ ಹೃದಯವನ್ನೂ ದೇಶದ ರಕ್ಷಣಾ ಸಾಮರ್ಥ್ಯದ ಕುರಿತ ಹೆಮ್ಮೆಯಿಂದ ಇದು ತುಂಬಿಸಲಿದೆ. ಈ ವರ್ಷ ಭಾರತದ 77ನೇ ಗಣರಾಜ್ಯೋತ್ಸವ ಎಂದಿಗಿಂತಲೂ ಹೆಚ್ಚು ಸಕ್ರಿಯ ಮತ್ತು ಅರ್ಥಪೂರ್ಣವಾಗಿ ಆಚರಿಸಲ್ಪಡಲಿದೆ. ನಾವೆಲ್ಲರೂ ನಮ್ಮ ಮಹಾನ್ ದೇಶಕ್ಕೊಂದು ಗೌರವ ವಂದನೆ ಸಲ್ಲಿಸಿ, ನಮ್ಮ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ಸಂಭ್ರಮಿಸುವ ಈ ಹೊಸ ವಿಧಾನವನ್ನು ಸಂಭ್ರಮಿಸೋಣ.