×
Ad

ನಿದ್ರೆ ಮಾಡಿದರೆ ಅಪರಾಧಿ ಭಾವ ಬೇಡ!

Update: 2026-01-25 18:40 IST

Photo: Freepik

ನಿತ್ಯವೂ ಅಧಿಕ ನಿದ್ರೆ ಮಾಡಿದೆ ಎನ್ನುವ ಅಪರಾಧಿ ಭಾವ ಕಾಡುತ್ತಿದೆಯೇ? ವಿಶ್ರಾಂತಿ ದೇಹಕ್ಕೆ ಅತಿ ಅಗತ್ಯ ಎಂದು ವೈದ್ಯರು ಹೇಳುತ್ತಾರೆ

ಬೆಳಗ್ಗೆ ತಡವಾಗಿ ಎದ್ದಾಗ ಪ್ರತಿ ಬಾರಿ ಪಶ್ಚಾತ್ತಾಪ ಪಡುತ್ತೀರಾ? ಬಹಳ ಹೆಚ್ಚು ನಿದ್ರೆ ಮಾಡಿದೆ ಎಂಬ ಭಾವನೆ ಕಾಡುತ್ತಿದೆಯೇ? ಕಚೇರಿಯ ಕೆಲಸವೆಲ್ಲ ಹಾಗೆಯೇ ಉಳಿಸಿ ಮಲಗಿದ ಭಾವನೆಯೇ? ಹೀಗೆ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ. 7–8 ಗಂಟೆಗಳ ಕಾಲ ಮಲಗಿದರೆ ಅದೇ ಉತ್ತಮ ನಿದ್ರೆ! ವೈದ್ಯರ ಪ್ರಕಾರ, ನೀವು ಮರುದಿನ ಉಲ್ಲಾಸದಿಂದ ಎಲ್ಲಾ ಕೆಲಸಗಳನ್ನು ಮಾಡಬೇಕಾದರೆ ರಾತ್ರಿ ಚೆನ್ನಾಗಿ ನಿದ್ರೆ ಮಾಡುವುದು ಅತ್ಯಂತ ಮುಖ್ಯ.

ಕಾರ್ಪೋರೇಟ್ ವೃತ್ತಿಪರರಿಂದ ಹಿಡಿದು ವೃತ್ತಿಪರ ತಾಯಂದಿರವರೆಗೆ ‘ಹೆಚ್ಚು ಮಲಗಿದೆ’ ಎನ್ನುವ ಅಪರಾಧಿ ಭಾವನೆ ಸದಾ ಕಾಡುತ್ತಿರುತ್ತದೆ. ಒಂದಕ್ಕಿಂತ ಹೆಚ್ಚು ಅಲಾರಂ ಇಡುವುದು ಬಹುತೇಕ ಎಲ್ಲರ ವಾಡಿಕೆಯಾಗಿದೆ. ಒಂದು ರೀತಿಯಲ್ಲಿ ‘ಉತ್ಪಾದಕತೆ ನಷ್ಟ’ವಾಗುತ್ತಿದೆ ಎನ್ನುವ ಭಾವನೆ ಇರುತ್ತದೆ. ವೃತ್ತಿ ಮತ್ತು ಇತರ ಕೆಲಸಗಳ ನಡುವೆ ನಿದ್ರೆಯ ಸಮಯ ಕಡಿಮೆ ಮಾಡುವುದು ಹಾಗೂ ಕಡಿಮೆ ನಿದ್ರೆ ಮಾಡಬೇಕು, ಹೆಚ್ಚು ಕೆಲಸ ಮಾಡಬೇಕು ಎನ್ನುವ ಮನೋಭಾವ ಇತ್ತೀಚೆಗೆ ಹೆಚ್ಚಾಗಿದೆ. ಆದರೆ ದೇಹಕ್ಕೆ ವಿಶ್ರಾಂತಿ ಕೊಡುವುದು ಸೋಮಾರಿತನವಲ್ಲ. ಮುಖ್ಯವಾಗಿ ಅಧಿಕ ಒತ್ತಡದ ಕೆಲಸದ ನಂತರ ಸುಖನಿದ್ರೆ ಅತ್ಯಾವಶ್ಯಕ.

► ವಿಶ್ರಾಂತಿ ಸೋಮಾರಿತನವಲ್ಲ

“ವಿಶ್ರಾಂತಿಯನ್ನು ನಿಧಾನವಾಗಿ ನಾವು ಸೋಮಾರಿತನ ಅಥವಾ ಮಹತ್ವಾಕಾಂಕ್ಷೆ ಇಲ್ಲದಿರುವುದೆಂದು ವ್ಯಾಖ್ಯಾನಿಸುತ್ತಾ ಬಂದಿದ್ದೇವೆ. ಬಹಳಷ್ಟು ಮಂದಿ ಉತ್ಪಾದಕತೆಯೇ ಮುಖ್ಯ ಎನ್ನುವ ಭಾವನೆಯೊಂದಿಗೆ ಬೆಳೆದುಬಂದಿರುತ್ತಾರೆ. ಹೀಗಾಗಿ ವಿಶ್ರಾಂತಿಯಲ್ಲಿ ಕಳೆದ ಸಮಯವನ್ನು ವ್ಯರ್ಥವೆಂದು ಭಾವಿಸುತ್ತಾರೆ” ಎಂದು ಮನಶ್ಶಾಸ್ತ್ರದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಡಾ. ವಿಶಾಲ್ ಘುಲೆ ಹೇಳುತ್ತಾರೆ. ಅವರು ಎಂಐಟಿ–ಡಬ್ಲ್ಯುಪಿಯುನ ದಿ ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್‌ನಲ್ಲಿ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಘುಲೆ ಅವರ ಪ್ರಕಾರ ನಿದ್ರೆ ದುಬಾರಿಯಾಗಿ ಪರಿಣಮಿಸಬಾರದು. ನಿದ್ರೆ ಒಂದು ಜೈವಿಕ ಅಗತ್ಯ. ಕಡಿಮೆ ನಿದ್ರೆ ಮಾಡಿದರೆ ಹೆಚ್ಚು ಉತ್ಪಾದಕತೆ ಸಾಧ್ಯ ಎನ್ನುವ ಆಲೋಚನೆಯನ್ನು ಬದಲಿಸಿಕೊಳ್ಳಬೇಕು. “ಮನಶ್ಶಾಸ್ತ್ರದ ದೃಷ್ಟಿಕೋನದಲ್ಲಿ ಹೇಳುವುದಾದರೆ, ದೀರ್ಘಕಾಲ ನಿದ್ರೆಯ ಕೊರತೆ ಉತ್ಪಾದಕತೆಯನ್ನು ಕಡಿಮೆಗೊಳಿಸುತ್ತದೆ. ಕಿರಿಕಿರಿ ಹಾಗೂ ಆತಂಕ (anxiety) ಹೆಚ್ಚಾಗುತ್ತದೆ. ಬಳಲಿಕೆ ಕಾಣಿಸಿಕೊಳ್ಳುತ್ತದೆ.”

► ಭಾವನಾತ್ಮಕ ನಿಯಂತ್ರಣಕ್ಕೆ ನಿದ್ರೆ ಅಗತ್ಯ

ಸಾಕಷ್ಟು ನಿದ್ರೆ ಮಾಡಿದರೆ ಭಾವನಾತ್ಮಕ ನಿಯಂತ್ರಣ ಸಾಧ್ಯವಾಗುತ್ತದೆ. ನೆನಪಿನ ಶಕ್ತಿ ಉತ್ತಮವಾಗುತ್ತದೆ. ನಿರ್ಧಾರ ಕೈಗೊಳ್ಳುವ ಶಕ್ತಿ ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಘುಲೆ ಹೇಳುತ್ತಾರೆ.

ನೀವು ವಿಶ್ರಾಂತಿ ತೆಗೆದುಕೊಂಡಾಗ ಮೆದುಳು ಕಲಿಕೆಯನ್ನು ಕ್ರೂಢೀಕರಿಸುತ್ತದೆ ಮತ್ತು ಭಾವನಾತ್ಮಕ ಸಮತೋಲನವನ್ನು ಮರುಸ್ಥಾಪಿಸುತ್ತದೆ. ಹೀಗಾಗಿ ನಿದ್ರೆ ಕಾರ್ಯದಕ್ಷತೆಗೆ ಮಾಡುವ ಹೂಡಿಕೆಯಾಗಿದೆ. ಆ ಹೂಡಿಕೆಯನ್ನು ಹಿಂಪಡೆಯಬಾರದು. ನಿದ್ರೆ ಮಾಡುವುದಕ್ಕೆ ತಪ್ಪಿತಸ್ಥ ಭಾವನೆ ಬರುವುದು ಉಸಿರಾಡುವುದಕ್ಕೆ ಪಶ್ಚಾತ್ತಾಪ ಪಡುವಂತೆಯೇ. ನಿದ್ರೆ ಮತ್ತು ಉಸಿರಾಟ ಎರಡೂ ದೇಹಕ್ಕೆ ಅತ್ಯಂತ ಅಗತ್ಯ ಎಂದು ಘುಲೆ ಅಭಿಪ್ರಾಯಪಡುತ್ತಾರೆ.

► ಪಶ್ಚಾತ್ತಾಪವಿಲ್ಲದೆ ನಿದ್ರೆ ಮಾಡಿ

ಹೀಗಾಗಿ ನಿದ್ರೆ ಕಳೆದುಹೋಗುವ ಸಮಯವಲ್ಲ. ಉಳಿದ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಲು ನಿದ್ರೆ ಅಗತ್ಯ. ಪಶ್ಚಾತ್ತಾಪವಿಲ್ಲದ ನಿದ್ರೆಗೆ ಇವು ಮುಖ್ಯ:

• ನಿದ್ರೆ ಕುರಿತ ಮಾನಸಿಕ ಅಭಿಪ್ರಾಯ ಬದಲಿಸಿ: “ನಿದ್ರೆ ನನ್ನ ಕೆಲಸದ ಭಾಗ, ಅದರಿಂದ ನಾನು ತಪ್ಪಿಸಿಕೊಳ್ಳುವುದಿಲ್ಲ” ಎಂದು ಸ್ವತಃ ಹೇಳಿಕೊಳ್ಳಿ.

• ಎಲ್ಲ ಮುಗಿಸುವ ಅಭ್ಯಾಸ: ಮಾನಸಿಕವಾಗಿ ಎಲ್ಲವನ್ನು ಮುಗಿಸುವ ನಿರ್ದಿಷ್ಟ ಸಮಯ ನಿಗದಿಪಡಿಸಿ. ನಾಳೆಯ ಕೆಲಸಗಳನ್ನು ಹೇಗೆ ಮಾಡಬೇಕು ಎಂದು ಮುಂಚಿತವಾಗಿ ನಿರ್ಧರಿಸಿಡಿ. ನಿದ್ರೆಗೆ ಜಾರುವಾಗ ನಾಳೆಯ ಚಿಂತೆ ಇರಬಾರದು.

• ಸ್ವಯಂ ಸಹಾನುಭೂತಿ ಇರಲಿ: ಪಶ್ಚಾತ್ತಾಪವನ್ನು ಗಮನಿಸಿ, ಆದರೆ ಅದು ತಪ್ಪೆಂದು ತೀರ್ಮಾನಿಸಬೇಡಿ. ವಿಶ್ರಾಂತಿ ಮಾನವನ ಅಗತ್ಯ; ಅದು ಪಡೆಯಬೇಕಾದ ಬಹುಮಾನವಲ್ಲ ಎಂದು ನೆನಪಿಸಿಕೊಳ್ಳಿ.

• ಉತ್ಪಾದಕತೆ ಹೋಲಿಕೆ ಬಿಡಿ: ಇತರರು ಮಾಡುವಷ್ಟು ಕೆಲಸ ನಿಮ್ಮ ದೇಹ ಅಥವಾ ಮನಸ್ಸಿಗೆ ಸಾಧ್ಯವಾಗದೇ ಇರಬಹುದು. ಹೀಗಾಗಿ ಹೋಲಿಕೆಯನ್ನು ತ್ಯಜಿಸಿ.

• ಗುಣಮಟ್ಟದ ಕಡೆ ಗಮನವಿರಲಿ, ನಿಯಂತ್ರಣವಲ್ಲ: ಒತ್ತಡಪೂರ್ವಕವಾಗಿ ನಿದ್ರೆ ಮಾಡಲು ಯತ್ನಿಸುವ ಬದಲು ಮಂದ ಬೆಳಕು, ನಿಧಾನ ಉಸಿರಾಟದ ಮೂಲಕ ನಿದ್ರೆಗೆ ಬೇಕಾದ ಶಾಂತ ಸ್ಥಿತಿಯನ್ನು ತಂದುಕೊಳ್ಳಿ. ರಾತ್ರಿ ಮಲಗುವಾಗ ಮೊಬೈಲ್ ಬಳಕೆ ಬಿಡಿ. ಸಹಜವಾಗಿ ನಿದ್ರೆ ಬರಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಎನ್ ಕೆ ಸುಪ್ರಭಾ

contributor

Similar News