ಪ್ರವಾಸೋದ್ಯಮದಲ್ಲಿ ಹೊಸ ಟ್ರೆಂಡ್; ಮನೆಗಳನ್ನೇ ಪ್ರವಾಸಿಗರಿಗೆ ತೆರೆಯುತ್ತಿರುವ ಯುವ ಭಾರತೀಯರು!
ಸಾಂದರ್ಭಿಕ ಚಿತ್ರ | Photo Credit : magnific
ಬೆಂಗಳೂರು, ದಿಲ್ಲಿ, ಗುರುಗ್ರಾಮ, ಇಂದೋರ್, ಮುಂಬೈ ಮತ್ತು ನೋಯ್ಡಾಗಳು Gen Z ಅತಿಥೇಯರು ಹೆಚ್ಚಾಗುತ್ತಿರುವ ಪ್ರಮುಖ ನಗರಗಳಾಗಿವೆ.
ಭಾರತದ Gen Z ಪ್ರಯಾಣದ ವಿಧಾನವನ್ನೂ ಬದಲಿಸುತ್ತಿದ್ದಾರೆ. ಯುವ ಭಾರತೀಯರು ತಮ್ಮ ಮನೆಗಳನ್ನು ಪ್ರಯಾಣಿಕರಿಗೆ ತೆರೆಯುತ್ತಿದ್ದಾರೆ. 2026ರ ಮೊದಲಾರ್ಧದಲ್ಲಿ ತನ್ನ Gen Z ಅತಿಥೇಯ ಸಮುದಾಯವು ವರ್ಷದಿಂದ ವರ್ಷಕ್ಕೆ ಸುಮಾರು ಶೇ. 40ರಷ್ಟು ಬೆಳವಣಿಗೆ ಕಂಡಿದೆ ಎಂದು Airbnb ವರದಿ ಮಾಡಿದೆ.
2026ರ ಮೊದಲಾರ್ಧದ ಅವಧಿಯಲ್ಲಿ ಭಾರತದಲ್ಲಿ ಪ್ರತಿ ಐದು ಹೊಸ Airbnb ಅತಿಥೇಯರಲ್ಲಿ ಸುಮಾರು ಇಬ್ಬರು 18ರಿಂದ 29 ವರ್ಷ ವಯಸ್ಸಿನವರಾಗಿದ್ದರು. ಪ್ರಮುಖ ನಗರಗಳು, ಸಣ್ಣ ನಗರ ಕೇಂದ್ರಗಳು ಮತ್ತು ಗ್ರಾಮೀಣ ತಾಣಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಯುವ ಭಾರತೀಯರಿಗೆ ತಮ್ಮ ಸ್ಥಳೀಯ ಸಮುದಾಯಗಳನ್ನು ಪ್ರವಾಸಿಗರೊಂದಿಗೆ ಹಂಚಿಕೊಳ್ಳುವುದು ಆದಾಯ ಗಳಿಸುವ ಆಕರ್ಷಕ ಮಾರ್ಗವಾಗುತ್ತಿದೆ ಎನ್ನುವುದನ್ನು ಈ ಬೆಳವಣಿಗೆ ಸೂಚಿಸುತ್ತದೆ.
Gen Z ಅತಿಥೇಯರು ಭಾರತಾದ್ಯಂತ ಹರಡಿದ್ದಾರೆ. ಅನೇಕ ಪ್ರಮುಖ ನಗರಗಳು ಉತ್ತಮ ಬೆಳವಣಿಗೆ ದಾಖಲಿಸುತ್ತಿವೆ. ಬೆಂಗಳೂರು, ದಿಲ್ಲಿ, ಗುರುಗ್ರಾಮ, ಇಂದೋರ್, ಮುಂಬೈ ಮತ್ತು ನೋಯ್ಡಾಗಳು Gen Z ಅತಿಥೇಯರು ಹೆಚ್ಚಾಗುತ್ತಿರುವ ಪ್ರಮುಖ ನಗರಗಳಾಗಿವೆ.
Gen Z ಅತಿಥೇಯರಿಗೆ ಸಂಬಂಧಿಸಿ ಇಂದೋರ್ ಹೆಚ್ಚು ಬೆಳವಣಿಗೆ ದಾಖಲಿಸಿದೆ. ಇಂದೋರ್ನಲ್ಲಿ ವರ್ಷದಿಂದ ವರ್ಷಕ್ಕೆ ಶೇ. 120ಕ್ಕಿಂತಲೂ ಹೆಚ್ಚು ಯುವ ಅತಿಥೇಯರು Airbnb ಸೇರಿದ್ದಾರೆ. ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ಕೊಚ್ಚಿ, ಲಕ್ನೋ, ಮಥುರಾ ಮೊದಲಾದ ಪ್ರದೇಶಗಳಲ್ಲಿ Gen Z ಅತಿಥೇಯರು ನಿರ್ವಹಿಸುತ್ತಿರುವ Airbnb ವಸತಿಗಳು ಹೆಚ್ಚು ಪ್ರಚಾರ ಪಡೆಯುತ್ತಿವೆ.
►Gen Z ಹೆಚ್ಚು ಗಳಿಕೆ ಮಾಡುತ್ತಿದ್ದಾರೆಯೇ?
Gen Z ಅತಿಥೇಯರ Airbnb ಮೂಲಕದ ಆದಾಯವು ವರ್ಷದಿಂದ ವರ್ಷಕ್ಕೆ ಶೇ. 60ಕ್ಕಿಂತ ಹೆಚ್ಚಾಗಿದೆ ಎಂದು Airbnb ತಿಳಿಸಿರುವುದಾಗಿ ವರದಿಯಾಗಿದೆ. ಸ್ಥಳ ಮತ್ತು ಲಿಸ್ಟಿಂಗ್ ನ ವಿಧವನ್ನು ಅವಲಂಬಿಸಿ ಗಳಿಕೆಯು ಬದಲಾಗಬಹುದು ಎಂದು ಕಂಪೆನಿ ಹೇಳುತ್ತದೆ.
ಸಂಖ್ಯೆಯಲ್ಲಿ ಆದ ಬೆಳವಣಿಗೆಯಿಂದ ಗುಣಮಟ್ಟದ ಮೇಲೆ ಪರಿಣಾಮವಾಗಿಲ್ಲ. ಭಾರತದಲ್ಲಿ ಸುಮಾರು ಏಳು ಮಂದಿ Gen Z ಅತಿಥೇಯರಲ್ಲಿ ಒಬ್ಬರು ಸೂಪರ್ ಹೋಸ್ಟ್ ಸ್ಥಾನಮಾನ ಗಳಿಸಿದ್ದಾರೆ. ಸೂಪರ್ ಹೋಸ್ಟ್ ಎಂದರೆ ಸ್ಥಿರವಾದ ಹೆಚ್ಚಿನ ಆತಿಥ್ಯಕ್ಕಾಗಿ Airbnb ನೀಡುವ ಮನ್ನಣೆಯಾಗಿದೆ. Gen Z ಅತಿಥೇಯ ಸಮುದಾಯವು ಒಂದು ವರ್ಷದಲ್ಲಿ ಸುಮಾರು ಶೇ. 40ರಷ್ಟು ಬೆಳೆದ ಕಾರಣ ಆದಾಯದ ಪಾಲು ಸ್ಥಿರವಾಗಿದೆ.
ಗ್ರಾಮೀಣ ಪ್ರದೇಶಗಳಿಗೂ ಹರಡಿದ Airbnb ಅತಿಥೇಯರು
ಗ್ರಾಮೀಣ ಮತ್ತು ಕಡಿಮೆ ಜನನಿಬಿಡ ನಗರ ತಾಣಗಳಲ್ಲಿ Gen Z ಅತಿಥೇಯರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ Gen Z ಅತಿಥೇಯರ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಶೇ. 60ರಷ್ಟಿದೆ. ಕಡಿಮೆ ಜನದಟ್ಟಣೆ ಇರುವ ನಗರ ತಾಣಗಳಲ್ಲಿ ಈ ಬೆಳವಣಿಗೆ ಶೇ. 70ರಷ್ಟಿದೆ. ಇಂದೋರ್ ನಲ್ಲಿ ಶೇ. 120ರಷ್ಟು ಮತ್ತು ಭಾರತಾದ್ಯಂತ ಒಟ್ಟಾರೆ ಶೇ. 40ರಷ್ಟು Gen Z ಅತಿಥೇಯರ ಬೆಳವಣಿಗೆ ದಾಖಲಾಗಿದೆ.
ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ Airbnbನ ಭಾರತ ಮತ್ತು ಆಗ್ನೇಯ ಏಷ್ಯಾದ ಮುಖ್ಯಸ್ಥ ಅಮನ್ ಪ್ರೀತ್ ಸಿಂಗ್ ಬಜಾಜ್ ಪ್ರಕಾರ, “ಭಾರತದ Gen Z ಪ್ರಯಾಣವನ್ನು ಮರುವ್ಯಾಖ್ಯಾನಿಸುತ್ತಿದೆ. ಪ್ರಯಾಣಿಕರಾಗಿ ಮಾತ್ರವಲ್ಲದೆ, ಅತಿಥೇಯರಾಗಿ ಉದ್ಯಮಿಗಳೂ ಆಗುತ್ತಿದ್ದಾರೆ. ಯುವ ಅತಿಥೇಯರು ಸ್ಥಳೀಯ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಅತಿಥಿ ಸತ್ಕಾರದ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಪ್ರಯಾಣಿಕರಿಗೂ ಸಾಂಪ್ರದಾಯಿಕ ಪ್ರವಾಸಿ ಕೇಂದ್ರಗಳ ಹೊರಗೆ ಹೆಚ್ಚಿನ ವಸತಿ ಆಯ್ಕೆಗಳನ್ನು ಕೊಡಬಹುದು, ಯುವ ಅತಿಥೇಯರಿಗೆ ಬಳಕೆಯಾಗದ ಸ್ಥಳಗಳು ಮತ್ತು ಸ್ಥಳೀಯ ಜ್ಞಾನವನ್ನು ಆದಾಯದ ಮೂಲವಾಗಿ ಪರಿವರ್ತಿಸಲು ಮತ್ತೊಂದು ಮಾರ್ಗವನ್ನು ನೀಡುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೌಜನ್ಯ: Hindustan Times