ಮುಹಮ್ಮದ್ (ಸ) ದೇವರಾಗದಿರುವುದಕ್ಕೆ ಇನ್ನೊಂದು ಮುಖ್ಯ ಕಾರಣವೇನೆಂದರೆ, ಅವರೊಬ್ಬ ಐತಿಹಾಸಿಕ ವ್ಯಕ್ತಿಯೇ ಹೊರತು ಕಥಾಪಾತ್ರ ಅಲ್ಲ. ಅವರ ವ್ಯಕ್ತಿತ್ವವಾಗಲಿ ಸಂದೇಶವಾಗಲಿ ಯಾರಾದರೂ ಸೃಜನಶೀಲ ಕವಿ, ಸಾಹಿತಿ ಅಥವಾ ಕಾದಂಬರಿಕಾರನ ಕಲ್ಪನೆಯಿಂದ ಮೂಡಿದ್ದಲ್ಲ. ಅದು ಸಮಾಜದಲ್ಲಿ ಜನರ ಕಣ್ಣಮುಂದೆ ವಿಕಾಸಗೊಂಡ ವ್ಯಕ್ತಿತ್ವ ಮತ್ತು ಸಂದೇಶವಾಗಿತ್ತು. ಹಾಗೆಯೇ ಅವರ ಇತಿಹಾಸವು, ಇತಿಹಾಸವನ್ನು ದಾಖಲಿಸುವ ಅತ್ಯಂತ ವೃತ್ತಿಪರ, ವಿಶ್ವಾಸಾರ್ಹ ವಿಧಾನಗಳಿಂದ ದಾಖಲಿಸಲಾಗಿದೆ.

ಪ್ರವಾದಿ ಮುಹಮ್ಮದ್ (ಸ) ಈ ಲೋಕದಿಂದ ನಿರ್ಗಮಿಸಿ ಬಹುತೇಕ ಹದಿನಾಲ್ಕು ಶತಮಾನಗಳಾದವು. ವರ್ತಮಾನ ಜಗತ್ತಿನಲ್ಲಿ ಮುಹಮ್ಮದ್ (ಸ) ಅವರ ಅನುಯಾಯಿಗಳ ಸಂಖ್ಯೆ ಸುಮಾರು 200 ಕೋಟಿಯಷ್ಟು ಅಥವಾ ಶೇ. 25ರಷ್ಟಿದೆ. ಅವರ ನಿಷ್ಠ ಅನುಯಾಯಿಗಳು ಜಗತ್ತಿನ ಬಹುತೇಕ ಎಲ್ಲ ಭೂಭಾಗಗಳಲ್ಲಿ ಕಂಡು ಬರುತ್ತಾರೆ. 50ಕ್ಕೂ ಹೆಚ್ಚಿನ ದೇಶಗಳಲ್ಲಿ ಅವರು ಬಹುಸಂಖ್ಯಾತರು. 140ಕ್ಕೂ ಹೆಚ್ಚಿನ ದೇಶಗಳಲ್ಲಿ ಅವರು ಅಲ್ಪಸಂಖ್ಯಾತರಾಗಿದ್ದಾರೆ. ಅವರಲ್ಲಿ ನೂರಾರು ವಿಭಿನ್ನ ಮಾತೃ ಭಾಷೆಯವರಿದ್ದಾರೆ. ಅವರ ನಡುವೆ ಹಲವಾರು ಪಂಥ, ಪಂಗಡಗಳೆಲ್ಲಾ ಇವೆ. ಅವರೆಲ್ಲಾ ಅಲ್ಲಾಹನ ಭಕ್ತರು. ಅಲ್ಲಾಹನನ್ನು ಆರಾಧಿಸುವವರು. ಅವರು ಮುಹಮ್ಮದ್ (ಸ) ರ ಅನುಯಾಯಿಗಳು. ಮುಹಮ್ಮದ್ (ಸ)ರನ್ನು ಮನಸಾರೆ ಪ್ರೀತಿಸುವವರು. ಅವರು ಪ್ರತಿದಿನ ಮುಹಮ್ಮದ್ (ಸ)ರನ್ನು ಅಪಾರ ಗೌರವದೊಂದಿಗೆ ಸ್ಮರಿಸುತ್ತಾರೆ. ಅವರ ಪ್ರಸ್ತಾಪ ಬಂದಾಗ ಭಾವುಕರಾಗಿ ಬಿಡುತ್ತಾರೆ. ಅವರ ಕುರಿತಾದ ಇತಿಹಾಸ ಮತ್ತು ಕಥೆಗಳನ್ನು ಕೇಳಿ ಸ್ಫೂರ್ತಿ ಪಡೆಯುತ್ತಾರೆ. ಅವರ ಗುಣಗಾನ ಮಾಡುವ ಕವನಗಳನ್ನು ಬರೆಯುತ್ತಾರೆ, ಕೇಳುತ್ತಾರೆ, ಹಾಡುತ್ತಾರೆ. ಆದರೆ ಒಂದು ಗಮನಾರ್ಹ ವಿಶೇಷತೆ ಏನೆಂದರೆ, ಅವರಲ್ಲಿ ಯಾರೂ ಮುಹಮ್ಮದ್ (ಸ)ರನ್ನು ಪೂಜಿಸುವುದಿಲ್ಲ. ಆರಾಧಿಸುವುದಿಲ್ಲ. ಮುಹಮ್ಮದರನ್ನುದ್ದೇಶಿಸಿ ಪ್ರಾರ್ಥಿಸುವುದಿಲ್ಲ. ಅವರ ಚಿತ್ರ ಅಥವಾ ವಿಗ್ರಹವನ್ನು ಇಟ್ಟುಕೊಳ್ಳುವುದಿಲ್ಲ. ಅವರನ್ನು ದೇವರೆಂದಾಗಲಿ, ದೇವಾಂಶ ಸಂಭೂತರೆಂದಾಗಲಿ, ದೇವರ ಅವತಾರವೆಂದಾಗಲಿ, ದೇವರ ಸಂತಾನವೆಂದಾಗಲಿ, ದೇವರಿಗೆ ಸಮಾನರೆಂದಾಗಲಿ ಕರೆಯುವುದಿಲ್ಲ. ಅಲ್ಲಾಹನೇ ನಮ್ಮ ಒಡೆಯ, ಮುಹಮ್ಮದರೇ ನಮ್ಮ ನಾಯಕರು ಎಂಬುದು ಅವರ ಧೋರಣೆ. ಅಲ್ಲಾಹನು, ಮುಹಮ್ಮದ್ (ಸ) ಅವರ ಸಹಿತ ಎಲ್ಲ ಮಾನವರ ಸೃಷ್ಟಿಕರ್ತ ಮತ್ತು ಒಡೆಯ. ನಮ್ಮೆಲ್ಲರಂತೆ ಮುಹಮ್ಮದ್ (ಸ) ಕೂಡಾ ಅಲ್ಲಾಹನ ದಾಸರು ಎಂದು ಅವರು ನಂಬುತ್ತಾರೆ.

ಈ ಜಗತ್ತಿನಲ್ಲಿ ಪೂಜಿಸಲ್ಪಡುವ, ಅಪಾರ ಸಂಖ್ಯೆಯ ದೇವರುಗಳ ವೈವಿಧ್ಯ ಮತ್ತು ಬಾಹುಳ್ಯ ನೋಡಿದರೆ, ಇಲ್ಲಿ ದೇವರಾಗಿ ಬಿಡುವುದು ಮಾನವರಾಗುವುದಕ್ಕಿಂತ ತುಂಬಾ ಸುಲಭದ ಕೆಲಸವೆಂಬಂತೆ ತೋರುತ್ತದೆ. ಮನುಷ್ಯ ಸಮಾಜದಲ್ಲಿ ಮನುಷ್ಯರ ನಡುವೆ ಮನುಷ್ಯರಾಗಿ ಬದುಕಿದ್ದ ಅದೆಷ್ಟೋ ಮಂದಿಯನ್ನು, ನೋಡುನೋಡುತ್ತಿದ್ದಂತೆ ದೇವರಾಗಿಸಿ ಬಿಟ್ಟ ಜಗತ್ತಿದು. ಕೆಲವೊಮ್ಮೆ ಒಬ್ಬ ಮೃತ ವ್ಯಕ್ತಿಯ ಕುರಿತು ಜನರು ರಂಗುರಂಗಿನ ಕಥೆಗಳನ್ನು ಕಟ್ಟತೊಡಗುತ್ತಾರೆ. ಅವನನ್ನು ಹೊಗಳುವ ಸ್ಪರ್ಧೆ ಆರಂಭವಾಗುತ್ತದೆ. ಹೊಗಳುವ ಭರದಲ್ಲಿ ಅವನನ್ನು ಮನುಷ್ಯತ್ವದ ಗಡಿಯಿಂದಲೇ ಹೊರದಬ್ಬಿ, ದೇವರಾಗಿಸಿ ಬಿಡಲಾಗುತ್ತದೆ. ಅವನನ್ನು ಹೊಗಳುವವರು ಯಾವ ಮಟ್ಟದ ಉತ್ಪ್ರೇಕ್ಷೆಗೆ ಇಳಿದುಬಿಡುತ್ತಾರೆಂದರೆ, ಅವನ ಮುಂದೆ ಜನರಿಗೆ ಸಾಕ್ಷಾತ್ ದೇವರೇ ಕುಬ್ಜನಾಗಿ ಕಾಣಿಸತೊಡಗುತ್ತಾನೆ. ಮನುಷ್ಯರು ಸೃಷ್ಟಿಸಿ ಬೆಳೆಸಿದ ದೇವರುಗಳ ಮುಂದೆ, ಎಲ್ಲ ಮನುಷ್ಯರನ್ನು ಮತ್ತು ಸಮಸ್ತ ವಿಶ್ವವನ್ನು ಸೃಷ್ಟಿಸಿದ ಆ ಸಾಕ್ಷಾತ್ ಸರ್ವಶಕ್ತ ದೇವರು ಅಪ್ರಸ್ತುತನಾಗಿ ಬಿಡುತ್ತಾನೆ. ಕೆಲವೊಮ್ಮೆ ಜನರು ಆ ವ್ಯಕ್ತಿ ಸಾಯುವುದಕ್ಕೂ ಕಾಯದೆ ಅವನ ಜೀವನಾವಧಿಯಲ್ಲೇ ಅವನನ್ನು ದೇವರಾಗಿಸಿ ಅವನನ್ನು ಪೂಜಿಸತೊಡಗುತ್ತಾರೆ. ಒಬ್ಬ ವ್ಯಕ್ತಿಯ ಸಮಕ್ಷಮವೇ ಅವನ ಹೆಸರಲ್ಲಿ ಆರಾಧನಾಲಯ ನಿರ್ಮಿಸಿ, ಅವನ ವಿಗ್ರಹ ಸ್ಥಾಪಿಸಿ, ಪೂಜಾದಿ ಕರ್ಮಗಳನ್ನು ಆರಂಭಿಸುತ್ತಾರೆ. 21ನೇ ಶತಮಾನದಲ್ಲೂ ಈ ದೃಶ್ಯಾವಳಿ ನಮಗೆ ಅಲ್ಲಲ್ಲಿ ಕಾಣ ಸಿಗುತ್ತದೆ. ದೇವರುಗಳನ್ನು ಈ ಮಟ್ಟಕ್ಕೆ ಇಳಿಸಿಬಿಟ್ಟ ಮೇಲೆ, ಅಂತಹ ದೇವರುಗಳು ನೀಚ ಹಗರಣಗಳಲ್ಲಿ ಅಥವಾ ಘೋರ ಅಪರಾಧಗಳಲ್ಲಿ ಸಿಕ್ಕಿ ಬಿದ್ದರೂ ಅವರ ಭಕ್ತರಿಗೆ ಆಘಾತವಾಗುವುದಿಲ್ಲ. ಆಘಾತವಾಗುವುದು ದೇವರು ಯಾರು, ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವೆ ಇರುವ ಅಂತರ ಏನು ಎಂಬ ಕುರಿತು ಒಂದಿಷ್ಟು ಅರಿವು ಇರುವವರಿಗೆ ಮಾತ್ರ. ಪಶು, ಪಕ್ಷಿ, ಹಾವು, ಚೇಳು ಇತ್ಯಾದಿಗಳನ್ನು ದೇವರಾಗಿಸಿದವರ ಕಥೆ ಬೇರೆಯೇ ಇದೆ.

ಇಂತಹ ಜಗತ್ತಿನಲ್ಲಿ ಜನಿಸಿದ ಪ್ರವಾದಿ ಮುಹಮ್ಮದ್ (ಸ), ತಾವು ಲೋಕದಿಂದ ತೆರಳಿ ಹತ್ತಾರು ಶತಮಾನಗಳು ಕಳೆದಿದ್ದರೂ, ನೂರಾರು ಕೋಟಿ ಮಂದಿಯ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರೂ ಮಾನವನಾಗಿಯೇ ಸ್ಮರಿಸಲ್ಪಡುವುದಕ್ಕೆ ಕಾರಣವೇನು? ಇನ್ನೊಬ್ಬ ದೇವರಾಗಿ ಬಿಡುವ ದುರಂತಕ್ಕೆ ಅವರೇಕೆ ಗುರಿಯಾಗಲಿಲ್ಲ?

ಈ ವಿಷಯದಲ್ಲಿ ಸಂಶೋಧನೆಗೆ ಹೊರಟರೆ ಹಲವು ಮಹತ್ವದ ಮಾಹಿತಿಗಳು ಅನಾವರಣಗೊಳ್ಳುತ್ತವೆ. ಉದಾ:

* ಪ್ರವಾದಿ ಮುಹಮ್ಮದ್ (ಸ) ತಮ್ಮ ಸಮಾಜದಲ್ಲಿ ಒಬ್ಬ ಸೌಮ್ಯ ಸ್ವಭಾವದ, ಸುಶೀಲ, ಪ್ರಾಮಾಣಿಕ, ಪರೋಪಕಾರಿ ವರ್ತಕರಾಗಿ ಪರಿಚಿತರಾಗಿದ್ದರು. ತಮ್ಮ 40ರ ಹರೆಯದಲ್ಲಿ ಅವರನ್ನು ಜಗತ್ತಿಗೆಲ್ಲಾ ದಿವ್ಯ ಸಂದೇಶವನ್ನು ತಲುಪಿಸಲಿಕ್ಕಾಗಿ ದೇವದೂತರಾಗಿ ನಿಯುಕ್ತಗೊಳಿಸಿದಾಗ, ಆ ಸುದ್ದಿಯು ಬೇರೆಲ್ಲರಿಗಿಂತ ಹೆಚ್ಚಾಗಿ ಸ್ವತಃ ಅವರ ಪಾಲಿಗೆ ಅತ್ಯಂತ ಅನಿರೀಕ್ಷಿತ ಹಾಗೂ ಆಘಾತಕಾರಿ ಸುದ್ದಿ ಯಾಗಿತ್ತು. ತನಗೆ ದಿವ್ಯ ಸಂದೇಶ ಸಿಗುತ್ತಿದೆ ಎಂಬ ತನಗಾದ ವಿಶಿಷ್ಟ ಅನುಭವವು ಕನಸು ಅಥವಾ ಭ್ರಮೆ ಅಲ್ಲ ಎಂಬುದನ್ನು ಖಚಿತವಾಗಿ ಅಂಗೀಕರಿಸಲು ಅವರಿಗೆ ಒಂದಷ್ಟು ಸಮಯ ಬೇಕಾಗಿತ್ತು.

* ದೇವದೂತರಾಗಿ ಮುಹಮ್ಮದ್ (ಸ) ಅವರ ಪ್ರಧಾನ ಕಾಯಕ, ಜಗತ್ತಿಗೆ ಸತ್ಯವನ್ನು ತಿಳಿಸುವುದಾಗಿತ್ತು. ಯಾವುದೇ ಹೊಸ ಸತ್ಯವಲ್ಲ. ಎಲ್ಲ ಕಾಲಗಳಲ್ಲೂ ಜಗತ್ತಿನ ಎಲ್ಲ ಭಾಗಗಳಲ್ಲೂ ದೇವರ ಕಡೆಯಿಂದ ತಿಳಿಸಲಾದ, ಹಲವರು ತಮ್ಮ ಬುದ್ಧಿ-ವಿವೇಕಗಳನ್ನು ಬಳಸಿ ಅಥವಾ ಪ್ರಕೃತಿಯ ಅಧ್ಯಯನದ ಮೂಲಕ ಮನಗಂಡ ವಿಶ್ವಮಾನ್ಯ ಸತ್ಯಗಳು. ಎಲ್ಲ ಕಾಲಗಳಲ್ಲೂ ಹೆಚ್ಚಿನ ಜನರು ತುಸು ಕಾಲ ನೆನಪಿಟ್ಟು ಕ್ರಮೇಣ ಮರೆತುಬಿಟ್ಟ ಅಥವಾ ಕ್ಷೀಣವಾದ ಅಸ್ಪಷ್ಟ ನೆನಪಿನ ರೂಪದಲ್ಲಿ ಮಾತ್ರ ಉಳಿಸಿಕೊಂಡ ಸತ್ಯಗಳು. ವಿಶ್ವದ ಅಸ್ತಿತ್ವ, ಅದರ ಸ್ವರೂಪ, ಜೀವನ, ಅದರ ಔಚಿತ್ಯ, ಸನ್ಮಾರ್ಗ, ಅದರ ರೂಪುರೇಷೆಗಳು, ನ್ಯಾಯ, ಸಮಾನತೆ, ಸಹತಾಪ ಹೀಗೆ ಸಂವೇದನಾ ಶೀಲ ಮಾನವರೆಲ್ಲಾ ಮಹತ್ವದ್ದೆಂದು ಅಂಗೀಕರಿಸುವ, ಕುತೂಹಲ ಪ್ರಕಟಿಸುವ ವಿವಿಧ ವಿಷಯಗಳ ಕುರಿತಾದ ಸತ್ಯಗಳು.

* ಸೃಷ್ಟಿ ಮತ್ತು ಸೃಷ್ಟಿಕರ್ತ, ಮಾನವರು ಮತ್ತು ದೇವರು, ಆರಾಧ್ಯರು ಮತ್ತು ಆರಾಧಕರು - ಅವರು ಚರ್ಚೆಗೆತ್ತಿಕೊಂಡ ವಿಷಯಗಳಲ್ಲಿ, ಇವುಗಳಿಗೆಲ್ಲಾ ವಿಶೇಷ ಸ್ಥಾನವಿತ್ತು.

* ಅವರು ಸತ್ಯ ಪ್ರಸಾರ ಆರಂಭಿಸಿದ್ದು ಮಕ್ಕಾ ಎಂಬ ಐತಿಹಾಸಿಕ ಪಟ್ಟಣದಲ್ಲಿ. ಅಲ್ಲಿ ದೇವರು ಅಪರಿಚಿತನಾಗಿರಲಿಲ್ಲ. ಅಲ್ಲಿ ಒಬ್ಬ ದೇವರನ್ನು ನಂಬುವವರು, ಅಲ್ಲಾಹನೊಬ್ಬನೇ ವಿಶ್ವದೊಡೆಯನೆನ್ನುವವರು, ಏಕಕಾಲದಲ್ಲಿ ಹಲವಾರು ದೇವರುಗಳನ್ನು ನಂಬುವವರು, ಯಾವ ದೇವರನ್ನೂ ನಂಬದವರು ಹೀಗೆ ಹಲವು ಬಗೆಯ ಜನರಿದ್ದರು. ಏಕದೇವತ್ವ ಎಂಬುದು ಮಕ್ಕಾದ ಜನತೆಗೆ ಹೊಸ ನಂಬಿಕೆಯಾಗಿರಲಿಲ್ಲ. ಅವರು ಪ್ರವಾದಿ ಇಬ್ರಾಹೀಮ್(ರ)ರ ಅಭಿಮಾನಿಗಳಾಗಿದ್ದರು. ಇಬ್ರಾಹೀಮರು ಸುಮಾರು ಕ್ರಿ.ಪೂ. 2,000ದಲ್ಲಿ, ಅಂದರೆ ಪ್ರವಾದಿ ಮುಹಮ್ಮದ್ (ಸ) ಅವರಿಗಿಂತ ಸುಮಾರು 2,500 ವರ್ಷಗಳ ಹಿಂದೆ ಬದುಕಿದ್ದವರು. ಯಹೂದಿ ಮತ್ತು ಕ್ರೈಸ್ತ ಸಮುದಾಯಗಳಲ್ಲೂ ಗೌರವದ ಸ್ಥಾನ ಉಳ್ಳವರು. ಇರಾಕ್ ನಲ್ಲಿ ಜನಿಸಿ ಈಜಿಪ್ಟ್‌ಗೆ ವಲಸೆ ಹೋಗಿ ಅಲ್ಲಿಂದ ಮಕ್ಕಾದ ನಿರ್ಜನ ಮರುಭೂಮಿಗೆ ಪ್ರಯಾಣಿಸಿ ಅಲ್ಲಿ ಪವಿತ್ರ ಕಾಬಾ ಎಂಬ ಮಸೀದಿಯನ್ನು ನಿರ್ಮಿಸಿದವರು. ಬಾಲ್ಯದಲ್ಲೇ ವಿಗ್ರಹಾರಾಧನೆಯ ಔಚಿತ್ಯವನ್ನು ಪ್ರಶ್ನಿಸಿದವರು. ತಮ್ಮದೇ ಕುಟುಂಬದವರ ವಿಗ್ರಹಾಲಯದಲ್ಲಿ ವಿಗ್ರಹಗಳೊಡನೆ ಸಂವಾದ ನಡೆಸಲು ಯತ್ನಿಸಿ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಕೆರಳಿ ಆ ವಿಗ್ರಹಗಳನ್ನು ಉರುಳಿಸಿದವರು. ಯವ್ವನದಲ್ಲಿ ನಮ್ರೂದ್ ಎಂಬ ಸರ್ವಾಧಿಕಾರಿ ದೊರೆಯ ವಿರುದ್ಧ ಬಂಡೆದ್ದು ಅವನ ಜೊತೆ ಘರ್ಷಣೆಗಿಳಿದವರು. ಮಕ್ಕಾದವರು ಸಾಮಾನ್ಯವಾಗಿ ತಮ್ಮ ವಂಶವೃಕ್ಷವನ್ನು ಪ್ರಸ್ತಾಪಿಸಿ, ಇಬ್ರಾಹೀಮರು ನಮ್ಮ ತಾತ ಎಂದು ಬಹಳ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಇಬ್ರಾಹೀಮರು ಶುದ್ಧ ಏಕದೇವತ್ವವಾದಿಯಾಗಿದ್ದರು ಮತ್ತು ಅವರು ವಿಗ್ರಹಾರಾಧನೆಯ ವಿರೋಧಿಗಳಾಗಿದ್ದರು ಎಂಬುದು ಮಕ್ಕಾದವರಿಗೆ ತಿಳಿದಿತ್ತು. ಆದರೆ ಕಾಲಕ್ರಮೇಣ ಅವರಲ್ಲಿ ಹೆಚ್ಚಿನವರು ಇಬ್ರಾಹೀಮರ ಹೆಸರನ್ನು ಮತ್ತು ಅವರಿಗೆ ಸಂಬಂಧಿಸಿದ ಕೆಲವು ಔಪಚಾರಿಕ ಆಚರಣೆಗಳನ್ನು ಮಾತ್ರ ನೆನಪಿಟ್ಟುಕೊಂಡು ಅವರ ಉಪದೇಶಗಳನ್ನೆಲ್ಲಾ ಮರೆತು ವಿಗ್ರಹಾರಾಧನೆಯಲ್ಲಿ ತೊಡಗಿದ್ದರು.

* ಪ್ರವಾದಿ ಮುಹಮ್ಮದ್ (ಸ) ಅವರ ಜನನಕ್ಕಿಂತ ಸುಮಾರು ನಾಲ್ಕು ನೂರು ವರ್ಷ ಮುನ್ನ, ಮಕ್ಕಾದಲ್ಲಿ ವರ್ತಕನಾಗಿದ್ದ ಅಮ್ರ್ ಬಿನ್ ಲುಹಯ್ಯ್ ಎಂಬ ವ್ಯಕ್ತಿ ವ್ಯಾಪಾರ ನಿಮಿತ್ತ ಸಿರಿಯಾ ದೇಶಕ್ಕೆ ಹೋಗಿದ್ದನು. ಅಲ್ಲಿ ಜನರು ವಿವಿಧ ಬಗೆಯ ಮೂರ್ತಿಗಳನ್ನಿಟ್ಟು ಪೂಜಿಸುವುದನ್ನು ಕಂಡು ಅವನಿಗೆ ಮೂರ್ತಿಗಳಲ್ಲಿ ಆಸಕ್ತಿ ಮೂಡಿತು. ಅವನು ಅಲ್ಲಿಂದ ಮರಳುವಾಗ ಮರದ ಒಂದು ಮೂರ್ತಿಯನ್ನು ತಂದಿದ್ದನು. ಮನುಷ್ಯನ ಆಕಾರದಲ್ಲಿದ್ದ ಆ ಮೂರ್ತಿಯ ಕುರಿತು ತಾನು ಕೇಳಿದ್ದ ಕತೆಗಳನ್ನೆಲ್ಲಾ ಜನರಿಗೆ ಹೇಳಿ ಅದನ್ನು ಪೂಜಿಸುವುದರಿಂದ ಇಂತಿಂತಹ ಲಾಭಗಳಾಗುತ್ತವೆ ಎಂದೂ ಜನರನ್ನು ನಂಬಿಸಿದ್ದನು. ಹುಬಲ್ ಎಂಬ ಆ ಮೂರ್ತಿ ಕ್ರಮೇಣ ಜನಪ್ರಿಯ ಆರಾಧ್ಯ ವಸ್ತುವಾಗಿ ಬಿಟ್ಟಿತು. ಈ ರೀತಿ ಮಕ್ಕಾದಲ್ಲಿ ಮೊದಲ ವಿಗ್ರಹ ಪ್ರತಿಷ್ಠಾಪಿಸಿದವನು ಎಂಬ ಕಾರಣಕ್ಕಾಗಿ ಅವನನ್ನು ಜನರು ‘ಅಬುಲ್ ಅಸ್ನಾಮ್’ (ವಿಗ್ರಹಗಳ ತಂದೆ) ಎಂಬ ಬಿರುದಿನಿಂದ ಸ್ಮರಿಸುತ್ತಿದ್ದರು. ಈ ರೀತಿ ಆರಂಭವಾದ ಮೂರ್ತಿ ಪೂಜೆಯ ಪರಂಪರೆ ಮಕ್ಕಾದಲ್ಲಿ ಕಾಲಕ್ರಮೇಣ ಬಹಳಷ್ಟು ಬೆಳೆಯಿತು. ಸ್ವತಃ ತಮ್ಮ ಕೆಲವು ಪೂರ್ವಜರ ಬಗ್ಗೆ ರಂಗುರಂಗಿನ ಕಥೆಗಳನ್ನು ಕಟ್ಟಿಕೊಂಡು ಅವರ ಹೆಸರಲ್ಲಿ ವಿಗ್ರಹಗಳನ್ನು ರಚಿಸಿ ಅವರನ್ನೇ ದೇವರೆಂದು ಕರೆಯ ತೊಡಗಿದ್ದರು. ಲಾತ್, ಮನಾತ್, ವದ್ದ್, ಸುವಾ, ಯಾಗೂಸ್, ಯವೂಕ್, ನಸ್ರ್ ಇತ್ಯಾದಿ ಹೆಸರಿನ ಹಲವು ದೇವರುಗಳು ಮತ್ತವರ ಮೂರ್ತಿಗಳ ಸ್ಥಾಪನೆಯಾಯಿತು. ಹಲವು ಬುಡಕಟ್ಟುಗಳಿಗೆ ಸೇರಿದವರು ತಮ್ಮದೇ ದೇವರುಗಳನ್ನು ಸೃಷ್ಟಿಸಿಕೊಂಡರು. ಇಬ್ರಾಹೀಮರು ನಿರಾಕಾರನಾದ ಏಕದೇವನ ಆರಾಧನೆಗೆಂದು ನಿರ್ಮಿಸಿದ್ದ ಕಾಬಾ ಮಸೀದಿಯೊಳಗೂ ವಿಗ್ರಹಗಳನ್ನು ಸ್ಥಾಪಿಸಿ ಅದನ್ನು ವಿಗ್ರಹಾಲಯವಾಗಿ ಪರಿವರ್ತಿಸಲಾಯಿತು. ಅವರಲ್ಲಿ ಅನೇಕರು ಅಲ್ಲಾಹನೇ ಸೃಷ್ಟಿಕರ್ತ ಎಂಬುದನ್ನು ಒಪ್ಪುತ್ತಿದ್ದರು. ಯಾವುದೇ ವಿಗ್ರಹವನ್ನು ಅವರು ಅಲ್ಲಾಹನ ವಿಗ್ರಹವೆಂದು ಕರೆಯುತ್ತಿರಲಿಲ್ಲ. ಆದರೆ ಬೇರೆ ಬೇರೆ ಅಗತ್ಯಗಳಿಗಾಗಿ ಬೇರೆ ಬೇರೆ ಮೂರ್ತಿಗಳ ಮೊರೆ ಹೋಗುತ್ತಿದ್ದರು. ತಮ್ಮ ಹಾಗೂ ಅಲ್ಲಾಹನ ನಡುವೆ ಮಧ್ಯಸ್ಥಿಕೆಗೆ ಸಣ್ಣಪುಟ್ಟ ದೇವರುಗಳ ಅಗತ್ಯವಿದೆ ಎನ್ನುತ್ತಿದ್ದರು.

ಇಂತಹ ವಾತಾವರಣದಲ್ಲಿ ಪ್ರವಾದಿ ಮುಹಮ್ಮದರು (ಸ) ಕಟ್ಟುನಿಟ್ಟಿನ ಏಕದೇವತ್ವದ ಸಂದೇಶವನ್ನು ಮುಂದಿಟ್ಟಾಗ ಸ್ವಾಭಾವಿಕವಾಗಿಯೇ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಏಕದೇವತ್ವದ ಪರವಾಗಿ ಅವರು ಜನರ ಮುಂದಿಟ್ಟ ತರ್ಕಗಳು ಮತ್ತು ಪುರಾವೆಗಳೆದುರು ಜನರ ಮೌಢ್ಯಗಳು ಕರಗಿ ಹೋದವು. ಈ ಜಗತ್ತು ಹಲವು ಶಕ್ತಿಗಳ ಜಂಟಿ ಸೃಷ್ಟಿಯಾಗಿರಲು ಸಾಧ್ಯವೇ? ಇಷ್ಟೊಂದು ಸುವ್ಯವಸ್ಥಿತ ಜಗತ್ತು ಹಲವರ ಜಂಟಿ ಪರಿಪಾಲನೆಯಲ್ಲಿರಲು ಸಾಧ್ಯವೇ? ನೀವೇ ಸೃಷ್ಟಿಸಿ, ನೀವು ಪೂಜಿಸುವ ಕೃತಕ ದೇವರುಗಳಿಗೆ ಏನಾದರೂ ಶಕ್ತಿ-ಸಾಮರ್ಥ್ಯ ಇದೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಪ್ರವಾದಿವರ್ಯರು ಜನರ ಬುದ್ಧಿ, ವಿವೇಕ ಮತ್ತು ಆತ್ಮ ಸಾಕ್ಷಿಯನ್ನು ಕೆದಕಿದರು. ಪ್ರಕೃತಿಯ ಅದ್ಭುತಗಳನ್ನು ಅವರು ತಮ್ಮ ವಾದಗಳಿಗೆ ಪುರಾವೆಯಾಗಿ ಬಳಸಿದರು. ನಿಮ್ಮ ಪೂರ್ವಜರಾಗಿದ್ದ ಇಬ್ರಾಹೀಮರು, ಅವರ ವಂಶದಲ್ಲಿ ಜನಿಸಿದ ಇತರ ಗೌರವಾನ್ವಿತ ದೂತರು ಮಾತ್ರವಲ್ಲ, ಇಬ್ರಾಹೀಮರಿಗಿಂತ ಮುನ್ನ ಜಗತ್ತಿನ ಬೇರೆಬೇರೆ ಕಡೆ ಬಂದಿದ್ದ ಎಲ್ಲ ದೂತರುಗಳು ಕೂಡಾ ಏಕದೇವತ್ವವನ್ನೇ ಉಪದೇಶಿದ್ದಾರೆಂಬುದನ್ನು ನೆನಪಿಸಿದರು. ಅವರು ಏಕದೇವಾರಾಧನೆಯನ್ನು ಉಪದೇಶಿಸುವ ಜೊತೆಗೆ, ದೇವರು ಅಂದರೇನು ಎಂಬುದನ್ನು ಜನರಿಗೆ ವಿವರಿಸಿದರು. ಅವರು ದೇವರನ್ನು ಅವನ ಗುಣಗಳ ಮೂಲಕ ಪರಿಚಯಿಸಿದರು. ಅವನು ಈ ಭೂಮಿ ಮಾತ್ರವಲ್ಲ, ಸಂಪೂರ್ಣ ವಿಶ್ವದ ಸೃಷ್ಟಿಕರ್ತ. ಸೂರ್ಯ, ಚಂದ್ರ, ಗೃಹ, ನಕ್ಷತ್ರ, ಆಕಾಶ, ಭೂಮಿ, ಜಲ, ವಾಯು, ಅಗ್ನಿ, ಮಾನವರು, ಜಿನ್ನ್‌ಗಳು, ಮಲಕ್‌ಗಳು, ಪಕ್ಷಿ, ಪ್ರಾಣಿಗಳು ಇತ್ಯಾದಿ ಎಲ್ಲರ ನಿಯಂತ್ರಕ. ಅವನು ಸರ್ವಜ್ಞ ಮತ್ತು ಸರ್ವ ಶಕ್ತ. ಏಕಕಾಲದಲ್ಲಿ ಎಲ್ಲವನ್ನೂ ಕೇಳಬಲ್ಲವನು, ನೋಡಬಲ್ಲವನು ಮತ್ತು ಎಲ್ಲವನ್ನೂ ನಿಯಂತ್ರಿಸಬಲ್ಲವನು......ಹೀಗೆ ದೇವರನ್ನು ಗುಣಾತ್ಮಕವಾಗಿ ಪರಿಚಯಿಸಿದರು. ಜೊತೆಗೆ ದೇವರ ಮೇಲೆ ಆರೋಪಿಸಲಾಗುವ ದೌರ್ಬಲ್ಯಗಳನ್ನು ಮತ್ತು ಇತಿಮಿತಿಗಳನ್ನು ಒಂದೊಂದಾಗಿ ಪ್ರಸ್ತಾಪಿಸಿ ಅವೆಲ್ಲಾ ತಪ್ಪೆಂದು ಜನರಿಗೆ ಮನವರಿಕೆ ಮಾಡಿಸಿದರು. ದೇವರು ಕಾಲ, ಸ್ಥಾನ ಇತ್ಯಾದಿ ಎಲ್ಲ ಇತಿ ಮಿತಿಗಳಿಂದ, ಎಲ್ಲ ಅಗತ್ಯಗಳಿಂದ, ಎಲ್ಲ ದೌರ್ಬಲ್ಯಗಳಿಂದ ಮುಕ್ತನು ಎಂಬುದನ್ನು ಮನವರಿಕೆ ಮಾಡಿಸಿದರು. ಅಲ್ಲಾಹನನ್ನು ಯಾರಿಗೂ ಯಾವುದಕ್ಕೂ ಹೋಲಿಸಬಾರದು. ಹಾಗೆಯೇ, ಯಾರನ್ನೂ ಯಾವುದನ್ನೂ ಅಲ್ಲಾಹನಿಗೆ ಹೋಲಿಸಬಾರದು ಎಂಬುದನ್ನು ಮುಹಮ್ಮದರು (ಸ) ಸ್ಪಷ್ಟಪಡಿಸಿದರು.

ಅಂದರೆ ಮುಹಮ್ಮದರು (ಸ), ಯಾರು ದೇವರು ಎಂಬುದನ್ನು ಪರಿಚಯಿಸುವುದರ ಜೊತೆಗೆ ಯಾರು ದೇವರಲ್ಲ ಎಂಬುದನ್ನೂ ವಿವರವಾಗಿ ತಿಳಿಸಿದರು. ಪ್ರೀತಿ, ಗೌರವ, ಭಕ್ತಿ, ಪೂಜೆ, ಪ್ರಾರ್ಥನೆ, ಹರಕೆ ಇತ್ಯಾದಿ ಎಲ್ಲವೂ ಅಂತಿಮವಾಗಿ ಏಕಮಾತ್ರನೂ ಅನನ್ಯನೂ ಆಗಿರುವ ದೇವರಿಗೆ ಮಾತ್ರ ಸಲ್ಲಬೇಕು ಎಂಬುದನ್ನು ಅವರು ಜನರಿಗೆ ಮನಗಾಣಿಸಿದರು. ಈ ವಿಷಯದಲ್ಲಿ ಅವರು ಜನರ ಮುಂದಿಟ್ಟ, ದಿವ್ಯ ಮೂಲದಿಂದ ಪ್ರಾಪ್ತವಾದ ಕುರ್ ಆನ್‌ನ ವಚನಗಳು ಜನರ ಮೇಲೆ ತುಂಬಾ ಪರಿಣಾಮ ಬೀರಿದವು. ಉದಾ:

‘‘ಅಲ್ಲಾಹ್ - ಅವನ ಹೊರತು ಪೂಜೆಗೆ ಅರ್ಹರು ಬೇರಾರೂ ಇಲ್ಲ. ಅವನು ಸದಾ ಜೀವಂತನು, ಎಲ್ಲರ ನಿಯಂತ್ರಕನು. ತೂಕಡಿಕೆಯಾಗಲಿ ನಿದ್ದೆಯಾಗಲಿ ಅವನನ್ನು ಬಾಧಿಸುವುದಿಲ್ಲ. ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಎಲ್ಲವೂ ಅವನದೇ. ಅವನ ಮುಂದೆ, ಅವನ ಅಪ್ಪಣೆ ಇಲ್ಲದೆ ಶಿಫಾರಸು ಮಾಡಬಲ್ಲವರು ಯಾರು? ಅವರ (ಜನರ) ಮುಂದಿರುವ ಮತ್ತು ಅವರ ಹಿಂದಿರುವ ಎಲ್ಲವನ್ನೂ ಅವನು ಬಲ್ಲನು. ಅವನ ಜ್ಞಾನದ ಯಾವ ಅಂಶವನ್ನೂ ಗ್ರಹಿಸಲು ಅವರಿಗೆ ಸಾಧ್ಯವಿಲ್ಲ - ಅವನೇ ಇಚ್ಛಿಸುವಷ್ಟರ ಹೊರತು. ಅವನ ಅಧಿಕಾರ ಪೀಠವು ಆಕಾಶಗಳನ್ನು ಮತ್ತು ಭೂಮಿಯನ್ನು ಆವರಿಸಿದೆ. ಅವುಗಳ ಸಂರಕ್ಷಣೆಯ ಕೆಲಸವು ಅವನನ್ನು ದಣಿಸುವುದಿಲ್ಲ ಮತ್ತು ಅವನು ಅತ್ಯುನ್ನತನೂ, ಮಹಾನನೂ ಆಗಿದ್ದಾನೆ.’’ (ಕುರ್ ಆನ್: 2:255)

‘‘ಮಾನವರೇ, ನಿಮಗೊಂದು ಉದಾಹರಣೆ ನೀಡಲಾಗುತ್ತಿದೆ. ಅದನ್ನು ಆಲಿಸಿರಿ; ನೀವು ಅಲ್ಲಾಹನ ಹೊರತು ಯಾರನ್ನೆಲ್ಲಾ ಕೂಗಿ ಪ್ರಾರ್ಥಿಸುತ್ತೀರೋ ಅವರು ಖಂಡಿತ ಒಂದು ನೊಣವನ್ನು ಕೂಡಾ ಸೃಷ್ಟಿಸಲಾರರು. ಅದಕ್ಕಾಗಿ ಅವರೆಲ್ಲರೂ ಒಂದುಗೂಡಿದರೂ ಸರಿಯೇ. ಇನ್ನು, ಒಂದು ನೊಣವು ಅವರಿಂದ ಏನನ್ನಾದರೂ ಕಿತ್ತುಕೊಂಡರೆ ಅದನ್ನು ಅದರಿಂದ ಬಿಡಿಸಿಕೊಳ್ಳುವುದಕ್ಕೂ ಅವರಿಂದ ಸಾಧ್ಯವಿಲ್ಲ. ಅಪೇಕ್ಷಿಸುವವರೂ ದುರ್ಬಲರು ಮತ್ತು ಯಾರಿಂದ ಅಪೇಕ್ಷಿಸಲಾಗುತ್ತಿದೆಯೋ ಅವರೂ ದುರ್ಬಲರು.’’ (ಕುರ್ ಆನ್: 22:73)

‘‘ಅವರೇನು ಸ್ವತಃ ತಮ್ಮ ಕುರಿತು ಚಿಂತನೆ ನಡೆಸುವುದಿಲ್ಲವೇ? ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನ್ಯಾಯೋಚಿತವಾಗಿ ಹಾಗೂ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿರುವನು. ಆದರೆ ಜನರಲ್ಲಿ ಹೆಚ್ಚಿನವರು ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿರುವುದನ್ನು ಧಿಕ್ಕರಿಸುತ್ತಾರೆ.’’ (ಕುರ್ ಆನ್: 30:8)

‘‘ರಾತ್ರಿ ಮತ್ತು ಹಗಲು, ಸೂರ್ಯ ಮತ್ತು ಚಂದ್ರ (ಇವೆಲ್ಲಾ) ಅವನ (ಅಲ್ಲಾಹನ) ಪುರಾವೆಗಳ ಸಾಲಿಗೆ ಸೇರಿವೆ. ನೀವು ನಿಜಕ್ಕೂ ಅವನನ್ನೇ ಪೂಜಿಸುವವರಾಗಿದ್ದರೆ, ಸೂರ್ಯನಿಗಾಗಲಿ ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಸಾಷ್ಟಾಂಗವೆರಗಿರಿ.’’

(ಕುರ್ ಆನ್: 41:37)

‘‘ಅವರು ಒಂಟೆಗಳತ್ತ ನೋಡುವುದಿಲ್ಲವೇ - ಅವುಗಳನ್ನು ಯಾವ ರೀತಿ ಸೃಷ್ಟಿಸಲಾಗಿದೆ ಎಂದು? ಮತ್ತು ಆಕಾಶದೆಡೆಗೆ (ನೋಡುವುದಿಲ್ಲವೇ) -ಅದನ್ನು ಯಾವ ರೀತಿ ಎತ್ತರಿಸಲಾಗಿದೆ ಎಂದು? ಮತ್ತು ಪರ್ವತಗಳೆಡೆಗೆ, (ನೋಡುವುದಿಲ್ಲವೇ) ಅವುಗಳನ್ನು ಯಾವ ರೀತಿ ನೆಡಲಾಗಿದೆ ಎಂದು? ಮತ್ತು ಭೂಮಿಯೆಡೆಗೆ, (ನೋಡುವುದಿಲ್ಲವೇ) ಅದನ್ನು ಯಾವ ರೀತಿ ಹಾಸಲಾಗಿದೆ ಎಂದು?’’ (ಕುರ್ ಆನ್: 88:17ರಿಂದ 20)

‘‘ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು). ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು.. ಅವನಿಗೆ ಯಾರೂ ಜನಿಸಿಲ್ಲ ಮತ್ತು ಅವನು ಯಾರಿಗೂ ಜನಿಸಿದವನಲ್ಲ. ಯಾರೂ ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ.’’ (ಕುರ್ ಆನ್: ಅಧ್ಯಾಯ 112)

ತಮ್ಮ ಸಂದೇಶವನ್ನು ಜನರಿಗೆ ತಲುಪಿಸಲು ಮುಹಮ್ಮದರು (ಸ) ಬಳಸಿದ ಭಾಷೆ ಮತ್ತು ಅವರ ಧಾಟಿ, ಅತ್ಯಂತ ನೇರ, ಸ್ಪಷ್ಟ ಹಾಗೂ ಸರಳವಾಗಿತ್ತು. ಅವರ ಸಂದೇಶದಲ್ಲಿ ಲೋಕ, ಪರಲೋಕ, ವಿಜ್ಞಾನ, ಅಧ್ಯಾತ್ಮ, ನೈತಿಕ ನಿಯಮಗಳು, ಶಿಷ್ಟಾಚಾರಗಳು, ಆರಾಧನಾ ಕರ್ಮಗಳು, ಸಾಮಾಜಿಕ ಸಂಬಂಧಗಳು, ಕುಟುಂಬ ನಿಯಮಗಳು, ವಾಣಿಜ್ಯದ ತತ್ವಗಳು, ಆಡಳಿತ ಸೂತ್ರಗಳು, ಇತಿಹಾಸ, ಸಂಸ್ಕೃತಿ ಇತ್ಯಾದಿ ಹಲವಾರು ವಿಷಯಗಳಿದ್ದವು. ಆದರೆ ಯಾವುದೂ ತತ್ವಶಾಸ್ತ್ರ ಅಥವಾ ತರ್ಕಶಾಸ್ತ್ರದ ಜಟಿಲ, ಸಂಕೀರ್ಣ ಭಾಷೆಯಲ್ಲಿರಲಿಲ್ಲ. ಯಾವುದೂ ನಿಗೂಢವಾಗಿರಲಿಲ್ಲ. ಯಾವುದೇ ವಿವರಣೆ ಅಥವಾ ವ್ಯಾಖ್ಯಾನದ ಹಂಗಿಲ್ಲದೆ ಜನಸಾಮಾನ್ಯರಿಗೆ ಕೂಡಾ ಅವರ ಮಾತುಗಳು ಅರ್ಥವಾಗುತ್ತಿದ್ದವು. ‘‘ಎಲ್ಲವೂ ದೇವರದ್ದು’’ ಎಂದೂ ಹೇಳುತ್ತಾ, ಹಠಾತ್ತನೆ ‘‘ಎಲ್ಲವೂ ದೇವರು’’ ಎಂದು ಹೇಳಿಬಿಡುವವರು ಗೊಂದಲಕ್ಕೆ ಕಾರಣರಾಗುತ್ತಾರೆ. ಹಾಗೆಯೇ ‘‘ಎಲ್ಲೆಡೆಯೂ ದೇವರ ಉಪಸ್ಥಿತಿ ಇದೆ’’ ಎಂದು ಹೇಳುತ್ತಾ ಹಠಾತ್ತನೆ, ‘‘ಎಲ್ಲರೊಳಗೂ ದೇವರಿದ್ದಾನೆ’’ ಎನ್ನುವವರೂ ಜನರನ್ನು ಗೊಂದಲಕ್ಕೆ ಕೆಡವುತ್ತಾರೆ. ಪ್ರವಾದಿ ಮುಹಮ್ಮದ್ (ಸ) ಇಂತಹ ಗೊಂದಲಗಳನ್ನು ನಿವಾರಿಸಿದರು.

ಒಬ್ಬ ದೇವನ ಕುರಿತಾದ ಅಜ್ಞಾನ ಹಲವು ದೇವರುಗಳ ಉದಯಕ್ಕೆ ಕಾರಣವಾಗುತ್ತದೆ. ಹಾಗೆಯೇ ಒಬ್ಬ ವ್ಯಕ್ತಿಯ ಕುರಿತಾದ ಅತಿಯಾದ ಪ್ರೀತಿ, ಆಧಾರಗಳು ಆತನ ಮೇಲೆ ದಿವ್ಯತ್ವವನ್ನು ಆರೋಪಿಸುವುದಕ್ಕೆ ಕಾರಣವಾಗಿ ಬಿಡುತ್ತದೆ. ಈ ವಿಷಯದಲ್ಲಿ ಪ್ರವಾದಿ ಮುಹಮ್ಮದ್ (ಸ) ವಿಶೇಷ ಮುಂಜಾಗ್ರತೆ ವಹಿಸಿದರು. ತಾನು ದೇವರ ದೂತ ಎನ್ನುವುದರ ಜೊತೆ ತಾನು ದೇವರ ದಾಸ ಎಂಬುದನ್ನೂ ಅವರು ಪದೇ ಪದೇ ಒತ್ತಿಹೇಳಿದರು. ತನ್ನನ್ನು ಗೌರವಿಸುವ ವಿಷಯದಲ್ಲಿ ಪಾಲಿಸಬೇಕಾದ ಇತಿಮಿತಿಗಳನ್ನು ಅವರು ಜನರಿಗೆ ಸ್ಪಷ್ಟಪಡಿಸುತಿದ್ದರು. ಯಾರಾದರೂ ತನ್ನ ಮುಂದೆ ತಲೆಬಾಗುವುದನ್ನು, ತನ್ನ ಮುಂದೆ ಸಾಷ್ಟಾಂಗ ಎರಗುವುದನ್ನು, ತನ್ನ ಪಾದ ಮುಟ್ಟುವುದನ್ನು ಅವರು ಅನುಮತಿಸಲಿಲ್ಲ. ತನ್ನ ಗೌರವಾರ್ಥ ಜನರು ಎದ್ದು ನಿಲ್ಲುವುದನ್ನೂ ಅವರು ಅನುಮತಿಸಲಿಲ್ಲ.

ಒಮ್ಮೆ ಜನರ ಒಂದು ತಂಡವು ಪ್ರವಾದಿ ಮುಹಮ್ಮದ್ (ಸ) ಅವರ ಬಳಿಗೆ ಬಂದು ‘‘ಓ ಮುಹಮ್ಮದ್ (ಸ), ನೀವು ಅತ್ಯಂತ ಸತ್ಯ ಸಂಧ ವ್ಯಕ್ತಿ ಮತ್ತು ನೀವು ನಮ್ಮಲ್ಲಿನ ಅತ್ಯಂತ ಸತ್ಯ ಸಂಧ ವ್ಯಕ್ತಿಯ ಪುತ್ರ. ನೀವು ನಮ್ಮ ನಾಯಕ ಮತ್ತು ನೀವು ನಮ್ಮ ನಾಯಕನ ಪುತ್ರ...’’ ಎಂದೆಲ್ಲಾ ಅವರನ್ನು ಹೊಗಳತೊಡಗಿದರು. ಆಗ ಪ್ರವಾದಿ (ಸ) ಅವರನ್ನುದ್ದೇಶಿಸಿ ಹೇಳಿದರು: ‘‘ನಿಮಗೆ ಹೇಳಬೇಕಾದ ಎಲ್ಲವನ್ನೂ ಹೇಳಿ. ಆದರೆ ಶೈತಾನನು ನಿಮ್ಮನ್ನು ವಂಚಿಸದಂತೆ ಎಚ್ಚರ ವಹಿಸಿ. ನಾನು ಅಬ್ದುಲ್ಲಾಹ್‌ರ ಪುತ್ರ ಮುಹಮ್ಮದ್. ನಾನು ಅಲ್ಲಾಹನ ದಾಸ ಮತ್ತು ಅವನ ದೂತ. ನನಗೆ ಸರ್ವಶಕ್ತನೂ ಸರ್ವಾಧಿಪತಿಯೂ ಆಗಿರುವ ಅಲ್ಲಾಹನು ನೀಡಿರುವ ಸ್ಥಾನಕ್ಕಿಂತ ಉನ್ನತ ಸ್ಥಾನವನ್ನು ನೀವು ನನಗೆ ನೀಡುವುದು ನನಗೆ ಖಂಡಿತ ಇಷ್ಟವಿಲ್ಲ.’’

(ವರದಿ: ಅನಸ್ ಬಿನ್ ಮಾಲಿಕ್. ಗ್ರಂಥ: ಅನ್ನಸಾಈ)

ಪ್ರವಾದಿ ಪತ್ನಿ ಆಯಿಷಾ (ರ) ಹೇಳುತ್ತಾರೆ:

‘‘ಮುಹಮ್ಮದರು (ಸ) ಅಲ್ಲಾಹನನ್ನು ಕಂಡಿದ್ದಾರೆ ಎಂದು ಯಾರಾದರೂ ನಿಮ್ಮೊಡನೆ ಹೇಳಿದರೆ, ಅವನು ಸುಳ್ಳುಹೇಳುತ್ತಿದ್ದಾನೆ. ‘‘ಕಣ್ಣುಗಳು ಅವನನ್ನು ಗ್ರಹಿಸಲಾರವು’’ ಎಂದು ಅಲ್ಲಾಹನೇ ಸಾರಿರುವನು. (ಕುರ್ ಆನ್ 6.103). ಹಾಗೆಯೇ, ಮುಹಮ್ಮದ್ (ಸ)ರಿಗೆ ಅದೃಶ್ಯದ ಜ್ಞಾನವಿತ್ತು ಎಂದು ಯಾರಾದರೂ ನಿಮ್ಮೊಡನೆ ಹೇಳಿದರೆ ಅವನು ಸುಳ್ಳು ಹೇಳುತ್ತಿದ್ದಾನೆ. ಏಕೆಂದರೆ ‘‘ಅದೃಶ್ಯದ ಜ್ಞಾನವು ಅಲ್ಲಾಹನ ಹೊರತು ಬೇರಾರ ಬಳಿಯೂ ಇಲ್ಲ’’ ಎಂದು ಅಲ್ಲಾಹನೇ ಸಾರಿರುವನು.’’ (ಗ್ರಂಥ: ಸಹೀಹ್ ಅಲ್ ಬುಖಾರಿ 7380)

ಹಿನ್ನೆಲೆ:

‘‘ಕಣ್ಣುಗಳು ಅವನನ್ನು ಗ್ರಹಿಸಲಾರವು. ಆದರೆ ಅವನು ಕಣ್ಣುಗಳನ್ನು ಗ್ರಹಿಸಬಲ್ಲನು. ಅವನು ತೀರಾ ಸೂಕ್ಷ್ಮ ಸಂಗತಿಗಳನ್ನೂ ಗುರುತಿಸುವವನು ಮತ್ತು ಅರಿವು ಉಳ್ಳವನಾಗಿದ್ದಾನೆ.’’ (ಕುರ್ ಆನ್ 6:103).

‘‘ಹೇಳಿರಿ; ಅಲ್ಲಾಹನೊಬ್ಬನ ಹೊರತು, ಗುಪ್ತ ವಿಷಯಗಳನ್ನು ಬಲ್ಲವನು ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಯಾರೂ ಇಲ್ಲ. ತಮ್ಮನ್ನು ಯಾವಾಗ ಮತ್ತೆ ಜೀವಂತಗೊಳಿಸಲಾಗುವುದು ಎಂಬ ಅರಿವೂ ಅವರಿಗೆ (ಇತರರಿಗೆ) ಇಲ್ಲ.’’ (ಕುರ್ ಆನ್ 27:65)

ಪ್ರವಾದಿ ಮುಹಮ್ಮದ್ (ಸ) ಹೇಳಿದರು:

‘‘ಮರ್ಯಮ್‌ರ ಪುತ್ರ ಈಸಾ (ಅ) ಅವರ ವಿಷಯದಲ್ಲಿ ಕ್ರಿಸ್ತರು ಉತ್ಪ್ರೇಕ್ಷೆ ಮಾಡಿದಂತೆ, ನನ್ನ ಸ್ಥಾನಮಾನದ ವಿಷಯದಲ್ಲಿ ನೀವು ಯಾವುದೇ ಉತ್ಪ್ರೇಕ್ಷೆ ಮಾಡಬೇಡಿ. ನಾನು ಕೇವಲ ದಾಸ. ನನ್ನನ್ನು ಅಲ್ಲಾಹನ ದಾಸ ಹಾಗೂ ಅವನ ದೂತ ಎಂದು ಮಾತ್ರ ಕರೆಯಿರಿ.’’

(ವರದಿ: ಉಮರ್ ಬಿನ್ ಅಲ್ ಖತ್ತಾಬ್ (ರ) ಗ್ರಂಥ: ಸಹೀಹ್ ಅಲ್ ಬುಖಾರಿ - 3445)

ಈ ವಿಷಯವನ್ನು ಕುರ್ ಆನ್‌ನಲ್ಲೂ ಹಲವು ಬಾರಿ, ಹಲವು ವಿಧದಲ್ಲಿ ಸ್ಪಷ್ಟಪಡಿಸಲಾಯಿತು. ಉದಾ:

‘‘(ದೂತರೇ), ಹೇಳಿರಿ; ನನ್ನ ಬಳಿ ಅಲ್ಲಾಹನ ಭಂಡಾರಗಳಿವೆ ಎಂದಾಗಲಿ, ಗುಪ್ತ ವಿಷಯಗಳ ಜ್ಞಾನ ನನಗಿದೆ ಎಂದಾಗಲಿ ನಾನು ನಿಮ್ಮೊಡನೆ ಹೇಳಿಲ್ಲ. ಹಾಗೆಯೇ ನಾನು ‘ಮಲಕ್’ ಎಂದು ಕೂಡಾ ನಿಮ್ಮೊಡನೆ ಹೇಳಿಕೊಂಡಿಲ್ಲ. ನಾನಂತೂ, ನನ್ನೆಡೆಗೆ ಕಳಿಸಲಾಗುತ್ತಿರುವ ದಿವ್ಯ ಸಂದೇಶವನ್ನಷ್ಟೇ ಅನುಸರಿಸುತ್ತಿದ್ದೇನೆ........’’ (ಕುರ್ ಆನ್: 6:50)

‘‘ಹೇಳಿರಿ; ನಾನಂತೂ, ಅಲ್ಲಾಹನು ಇಚ್ಛಿಸದೆ, ಸ್ವತಃ ನನಗೆ ಯಾವುದೇ ಲಾಭ ಅಥವಾ ನಷ್ಟವನ್ನುಂಟುಮಾಡುವ ಅಧಿಕಾರ ಉಳ್ಳವನಲ್ಲ. ಒಂದು ವೇಳೆ ನನಗೆ ಗುಪ್ತ ವಿಷಯಗಳ ಜ್ಞಾನ ಇದ್ದಿದ್ದರೆ ನಾನು ಭಾರೀ ಪ್ರಮಾಣದಲ್ಲಿ ಒಳಿತನ್ನು (ಸಂಪತ್ತನ್ನು) ಸಂಗ್ರಹಿಸುತ್ತಿದ್ದೆ ಮತ್ತು ಯಾವ ಹಾನಿಯೂ ನನಗೆ ಸಂಭವಿಸುತ್ತಿರಲಿಲ್ಲ. ನಾನು, ಎಚ್ಚರಿಕೆ ನೀಡುವ ಮತ್ತು ನಂಬುವವರಿಗೆ ಶುಭವಾರ್ತೆ ನೀಡುವ ಕೇವಲ ಒಬ್ಬ ಮನುಷ್ಯನಲ್ಲದೆ ಬೇರೇನಾದರೂ ಆಗಿರುವೆನೇ?’’ (ಕುರ್ ಆನ್: 7:188)

ನಿತ್ಯ ಐದು ಹೊತ್ತು ನಮಾಝ್ ಮಾಡುವ ಜಗತ್ತಿನ ಎಲ್ಲ ಮುಸ್ಲಿಮರು ತಮ್ಮೆಲ್ಲಾ ನಮಾಝ್‌ಗಳಲ್ಲಿ ಬೇರೆ ಹಲವು ಮಾತುಗಳ ಜೊತೆ ಒಂದು ಮಾತನ್ನು ಹಲವು ಬಾರಿ ಉಚ್ಚರಿಸುತ್ತಾರೆ: ‘‘ಮುಹಮ್ಮದರು (ಸ) ಅಲ್ಲಾಹನ ದೂತರು ಮತ್ತು ದಾಸರು ಎಂದು ನಾನು ಸಾಕ್ಷಿ ಹೇಳುತ್ತೇನೆ’’.

ನಿಜವಾಗಿ ಯಾರಾದರೂ ಇಸ್ಲಾಮ್ ಧರ್ಮವನ್ನು ಸ್ವೀಕರಿಸಬಯಸಿದರೆ ಅವನು ಕಡ್ಡಾಯವಾಗಿ ಮಾಡಬೇಕಾದ ಒಂದು ಘೋಷಣೆ ಇದೆ. ಆಘೋಷಣೆ ಹೀಗಿದೆ:

‘‘ಅಲ್ಲಾಹನ ಹೊರತು ಬೇರಾರೂ ಪೂಜಾರ್ಹರಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ಮತ್ತು ಮುಹಮ್ಮದರು ಅಲ್ಲಾಹನ ದೂತರು ಮತ್ತು ಅವನ ದಾಸರು ಎಂದು ನಾನು ಸಾಕ್ಷಿ ಹೇಳುತ್ತೇನೆ.’’

ಈ ಘೋಷಣೆಯನ್ನು ಮುಸಲ್ಮಾನರೆಲ್ಲಾ ನಿತ್ಯ ಹಲವು ಬಾರಿ ಆವರ್ತಿಸುತ್ತಿರುತ್ತಾರೆ.

ಮುಹಮ್ಮದ್ (ಸ) ದೇವರಾಗದಿರುವುದಕ್ಕೆ ಇನ್ನೊಂದು ಮುಖ್ಯ ಕಾರಣವೇನೆಂದರೆ, ಅವರೊಬ್ಬ ಐತಿಹಾಸಿಕ ವ್ಯಕ್ತಿಯೇ ಹೊರತು ಕಥಾಪಾತ್ರ ಅಲ್ಲ. ಅವರ ವ್ಯಕ್ತಿತ್ವವಾಗಲಿ ಸಂದೇಶವಾಗಲಿ ಯಾರಾದರೂ ಸೃಜನಶೀಲ ಕವಿ, ಸಾಹಿತಿ ಅಥವಾ ಕಾದಂಬರಿಕಾರನ ಕಲ್ಪನೆಯಿಂದ ಮೂಡಿದ್ದಲ್ಲ. ಅದು ಸಮಾಜದಲ್ಲಿ ಜನರ ಕಣ್ಣಮುಂದೆ ವಿಕಾಸಗೊಂಡ ವ್ಯಕ್ತಿತ್ವ ಮತ್ತು ಸಂದೇಶವಾಗಿತ್ತು. ಹಾಗೆಯೇ ಅವರ ಇತಿಹಾಸವು, ಇತಿಹಾಸವನ್ನು ದಾಖಲಿಸುವ ಅತ್ಯಂತ ವೃತ್ತಿಪರ, ವಿಶ್ವಾಸಾರ್ಹ ವಿಧಾನಗಳಿಂದ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರೂಹಿ, ಮಂಗಳೂರು

contributor