ವಿಶ್ವವಿದ್ಯಾನಿಲಯವನ್ನು ಘಟಕವನ್ನಾಗಿ ಪರಿಗಣಿಸಿ ಬೋಧಕ ಸಿಬ್ಬಂದಿ ನೇಮಕಾತಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಅನ್ಯಾಯ ಸಾಧ್ಯತೆ
PC: bcu.ac.in
ಬೆಂಗಳೂರು : ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ವಿಶ್ವವಿದ್ಯಾನಿಲಯವನ್ನು ಘಟಕವನ್ನಾಗಿ ಪರಿಗಣಿಸಿದ್ದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲಭ್ಯವಾಗುತ್ತಿರುವ ಒಟ್ಟು ಹುದ್ದೆಗಳಲ್ಲಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೇ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬೀಳುತ್ತದೆ ಎಂದು ಡಾ.ಮನಮೋಹನ್ ಸಿಂಗ್ ಬೆಂಗಳೂರು ವಿಶ್ವವಿದ್ಯಾನಿಲಯವು ಸರಕಾರಕ್ಕೆ ತನ್ನ ಅಭಿಪ್ರಾಯವನ್ನು ಸಲ್ಲಿಸಿದೆ.
ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಷಯವಾರು ಮೀಸಲಾತಿ ಅಥವಾ ವಿಶ್ವವಿದ್ಯಾನಿಲಯ, ಶೈಕ್ಷಣಿಕ ಸಂಸ್ಥೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸುವ ಸಂಬಂಧ ಡಾ.ಮನಮೋಹನ್ ಸಿಂಗ್ ಬೆಂಗಳೂರು ವಿವಿ ನೀಡಿರುವ ಅಭಿಪ್ರಾಯದಲ್ಲಿ ಈ ಆತಂಕವನ್ನು ವ್ಯಕ್ತಪಡಿಸಿದೆ.
ಮೈಸೂರು, ಕೊಡಗು, ಕರ್ನಾಟಕ ಸಂಸ್ಕೃತ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ, ತುಮಕೂರು ವಿಶ್ವವಿದ್ಯಾನಿಲಯವು ತನ್ನ ಅಭಿಪ್ರಾಯ ನೀಡಿವೆ. ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಈ ವಿಶ್ವವಿದ್ಯಾನಿಲಯಗಳು 2026ರ ಮಾರ್ಚ್ 2, 3, 4ರಂದು ನೀಡಿರುವ ಅಭಿಪ್ರಾಯಗಳ ಪ್ರತಿಗಳು "the-file.in"ಗೆ ಲಭ್ಯವಾಗಿವೆ.
ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಶ್ವವಿದ್ಯಾನಿಲಯವನ್ನು ಒಂದು ಘಟಕ ಎಂದು ಪರಿಗಣಿಸಿ ಮೀಸಲಾತಿ ಅನ್ವಯಿಸಬೇಕೇ ಅಥವಾ ವಿಷಯವಾರು ಮೀಸಲಾತಿ ಅನ್ವಯಿಸಬೇಕೇ ಎಂಬ ಬಗ್ಗೆ ಸಾಧಕ-ಬಾಧಕಗಳ ಸಲಹೆ, ಶಿಫಾರಸುಗಳನ್ನು ಸಲ್ಲಿಸಲು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ 2026ರ ಫೆ.26ರಂದು ಸಭೆ ನಡೆದಿತ್ತು. ಈ ಸಭೆಯ ನಂತರ ಈ ಸಂಬಂಧ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಾಮರ್ಶಿಸಿ ವಿಶ್ವವಿದ್ಯಾನಿಲಯದ ಸೂಕ್ತವಾದ ಸಲಹೆ, ಶಿಫಾರಸುಗಳನ್ನು ಕೋರಿ ಉನ್ನತ ಶಿಕ್ಷಣ ಇಲಾಖೆಯು ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಪತ್ರ ಬರೆದಿತ್ತು.
ಮನಮೋಹನ್ ಸಿಂಗ್ ಬೆಂ.ನಗರ ವಿವಿ ಅಭಿಪ್ರಾಯವೇನು?: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ವಿಶ್ವವಿದ್ಯಾನಿಲಯವನ್ನು ಘಟಕವಾಗಿ ಪರಿಗಣಿಸಿದ್ದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗ ಲಭ್ಯವಾಗುತ್ತಿರುವ ಒಟ್ಟು ಹುದ್ದೆಗಳಲ್ಲಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದ್ದು ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬೀಳುತ್ತದೆ ಎಂದು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ಆತಂಕ ವ್ಯಕ್ತಪಡಿಸಿರುವುದು ಅಭಿಪ್ರಾಯದಿಂದ ಗೊತ್ತಾಗಿದೆ.
ಕೊಡಗು ವಿವಿಯ ನಿಲುವಿನಲ್ಲೇನಿದೆ?: ಒಂದು ವಿಶ್ವವಿದ್ಯಾನಿಲಯವನ್ನು ಒಂದು ಘಟಕವಾಗಿ ಪರಿಗಣಿಸಿ ರೋಸ್ಟರ್ ಬಿಂದುಗಳನ್ನು ಅಳವಡಿಸುವ ಅಥವಾ ವಿಷಯವಾರು ರೋಸ್ಟರ್‌ಗಳನ್ನು ಅಳವಡಿಸುವ ಬಗ್ಗೆ ಕೊಡಗು ವಿವಿ ಆಂತರಿಕವಾಗಿ ಚರ್ಚಿಸಿದೆ. ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿನ ಸಭೆಯು ನೀಡಿದ್ದ ಸೂಚನೆಯನ್ನು ಕೊಡಗು ವಿಶ್ವವಿದ್ಯಾಲಯವೂ ಸಮ್ಮತಿಸಿದೆ.
ಮೈಸೂರು ವಿವಿಯ ಅಭಿಪ್ರಾಯದಲ್ಲೇನಿದೆ?: ಒಂದು ವಿಶ್ವವಿದ್ಯಾನಿಲಯವನ್ನು ಒಂದು ಘಟಕವಾಗಿ ಪರಿಗಣಿಸುವ ಕುರಿತು ಮೈಸೂರು ವಿವಿಯು ಚರ್ಚಿಸಿದೆ. ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪ್ರವರ್ಗ ಎ, ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಎಂದು 3 ಪ್ರವರ್ಗಗಳಾಗಿ ವರ್ಗೀಕರಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಶೇ.17ರಷ್ಟು ಮೀಸಲಾತಿ, ಪ್ರವರ್ಗ ಎ ರಲ್ಲಿ ಸಮುದಾಯಗಳಿಗೆ ಶೇ.6, ಪ್ರವರ್ಗ ಬಿಯಲ್ಲಿನ ಸಮುದಾಯಗಳಿಗೆ ಶೆ. 6 ಮತ್ತು ಪ್ರವರ್ಗ ಸಿ ಯಲ್ಲಿನ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ನೀಡಿ ಸರಕಾರವು 2025ರ ಆಗಸ್ಟ್ 25ರಲ್ಲಿ ಆದೇಶ ಹೊರಡಿಸಿದೆ ಎಂದು ಸರಕಾರದ ಗಮನ ಸೆಳೆದಿದೆ.
ಅದೇ ರೀತಿ 2022ರ ಡಿಸೆಂಬರ್ 28ರಂದು ಹೊರಡಿಸಿರುವ ಸರಕಾರದ ಆದೇಶದ ಅನುಬಂಧದಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಲಾಗಿರುವ 17 ಬಿಂದುಗಳನ್ನು ಮಾತ್ರ ಅನುಬಂಧದ ಪ್ರಕಾರ ಪುನರ್ ವರ್ಗೀಕರಿಸಿ ಆದೇಶಿಸಿದೆ. ಸರಕಾರದ ಆದೇಶದಂತೆಯೇ ಮೈಸೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರ ವೃಂದದ ಹುದ್ದೆಗಳನ್ನು ವಿಷಯವಾರು ಮೀಸಲಾತಿ ಅನ್ವಯಿಸಿ ಭರ್ತಿ ಮಾಡಬೇಕಾಗುತ್ತದೆ ಎಂದು ತನ್ನ ಅಭಿಪ್ರಾಯದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಕನ್ನಡ ವಿಭಾಗದಲ್ಲಿ ಪ.ಜಾತಿ, ಪ್ರವರ್ಗ ಎ (ಸಾಮಾನ್ಯ), ಸಾಮಾನ್ಯ ಅಭ್ಯರ್ಥಿ, ಪ.ಪಂಗಡ (ಸಾಮಾನ್ಯ, ಸಾಮಾನ್ಯ ಆಭ್ಯರ್ಥಿ (ಮಹಿಳೆ), ಪ್ರವರ್ಗ 1 (ಸಾಮಾನ್ಯ ಅಭ್ಯರ್ಥಿ), ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಅರ್ಥ ಶಾಸ್ತ್ರ ವಿಭಾಗದಲ್ಲಿಯೂ ಇದೇ ಮಾದರಿ ಅನುಸಾರವೇ ಭರ್ತಿ ಮಾಡಬೇಕು ಎಂದು ವಿವರಿಸಿರುವುದು ಗೊತ್ತಾಗಿದೆ.
ಮಹಿಳಾ ವಿವಿ ಅಭಿಪ್ರಾಯವೇನು?: ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಪ್ರಸ್ತುತ ವಿವಿಯನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತಿದೆ. ಇದೇ ನಿಯಮಗಳನ್ನು ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಅನುಸರಿಸಬೇಕಾದ ವಿಧಾನಗಳ ಸಾಧಕ ಬಾಧಕಗಳನ್ನು ಸರಕಾರದ ಗಮನ ಸೆಳೆದಿದೆ.
ವಿಷಯವಾರು ಮೀಸಲಾತಿ ಅನ್ವಯಿಸುವ ಕುರಿತು ಚರ್ಚಿಸಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಈ ವ್ಯವಸ್ಥೆಯು ಪ್ರಸ್ತುತ ಜಾರಿಯಲ್ಲಿದೆ ಎಂದು ಹೇಳಿದೆ. ಅಲ್ಲದೇ ಬಾಧಕಗಳ ಕುರಿತು ವಿವಿ ವಿವರಿಸಿದೆ. ಇದರ ಪ್ರಕಾರ 100 ಬಿಂದು ರೋಸ್ಟರ್ ಅನುಸರಿಸಿ ಮೀಸಲಾತಿ ಸೌಕರ್ಯವನ್ನು ನೀಡಲಾಗುತ್ತಿದೆ. ಆದರೆ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳಲ್ಲಿ ವಿಷಯವಾರು ಎರಡು ಅಥವಾ ಮೂರು ಹುದ್ದೆಗಳು ಮಾತ್ರ ಇವೆ. ಬಿಂದು 1- ಎಸ್‌ಸಿ, ಬಿಂದು 2-ಸಾಮಾನ್ಯ ಹಾಗೂ ಬಿಂದು 3- ಎಸ್‌ಟಿ ಮಾತ್ರ ತುಂಬಲ್ಪಡುವ ಸಾಧ್ಯತೆಗಳೇ ಹೆಚ್ಚಿವೆ.
ಹೀಗೆ ಒಮ್ಮೆ ಭರ್ತಿಯಾದ ಹುದ್ದೆಗಳು ಆ ವ್ಯಕ್ತಿ ನಿವೃತ್ತವಾಗುವವರೆಗೂ ಖಾಲಿ ಆಗುವುದಿಲ್ಲ. ಅಂದರೆ ಸುಮಾರು 30ರಿಂದ 33 ವರ್ಷದವರೆಗೆ ರೋಸ್ಟರ್-3 ಅಥವಾ ರೋಸ್ಟರ್ 4ನೇ ಬಿಂದುವನ್ನು ಕಾರ್ಯಗತಗೊಳಿಸುವುದಿಲ್ಲ. ಹೀಗಾಗಿ ರೋಸ್ಟರ್ ಬಿಂದು 100 ತಲುಪಿ ಮೀಸಲಾತಿ ಸೌಲಭ್ಯವು ಎಲ್ಲರಿಗೂ ತಲುಪುವುದು ಅಸಾಧ್ಯ ಎಂದು ವಿವರಿಸಿದೆ.
ತುಮಕೂರು ವಿವಿ ಅಭಿಪ್ರಾಯ: ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಮೀಸಲಾತಿ ಬಿಂದು ಅಳವಡಿಸುವ ಮೂಲಕ ವಿಶ್ವವಿದ್ಯಾನಿಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸಬಹುದು ಎಂದು ತುಮಕೂರು ವಿವಿ ಅಭಿಪ್ರಾಯಿಸಿದೆ. ವಿವಿಯಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳನ್ನು ವೃಂದವಾರು ಒಟ್ಟುಗೂಡಿಸಿ ವಿವಿಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಮೀಸಲಾತಿ ಬಿಂದುಗಳನ್ನು ಗುರುತಿಸಬಹುದು ಎಂದು ವಿವರಿಸಿದೆ.
ಪ್ರವರ್ಗಗಳಿಗೆ ನ್ಯಾಯ ಕಷ್ಟಸಾಧ್ಯವೆಂದ ಬೆಂಗಳೂರು ಉತ್ತರ ವಿವಿ
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ಸಹ ಒಂದು ವಿಶ್ವವಿದ್ಯಾನಿಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ರೋಷ್ಟರ್ ಬಿಂದುಗಳನ್ನು ಅಳವಡಿಸುವ ಅಥವಾ ವಿಷಯವಾರು ರೋಸ್ಟರ್‌ಗಳನ್ನು ಅಳವಡಿಸಲು ಅಭಿಪ್ರಾಯ ನೀಡಿದೆ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಪ್ರವರ್ಗಗಳಿಗೆ ಮೀಸಲಾತಿ ಅನ್ವಯವಾಗುವಂತೆ ರೋಸ್ಟರ್ ಹೆಚ್ಚಿಸಿ ಖಾಲಿ ಇರುವ ಸಂಬಂಧದಲ್ಲಿ ಎಲ್ಲ ಪ್ರವರ್ಗಗಳಿಗೂ ಮೀಸಲಾತಿ ಜಾರಿಗೊಳಿಸುವ ಸಂಬಂಧ ಯಾವುದೇ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳನ್ನು ಕಡೆಗಣಿಸುವಂತಿಲ್ಲ ಎಂದು ತನ್ನ ಅಭಿಪ್ರಾಯದಲ್ಲಿ ವಿವರಿಸಿದೆ.
ವಿಭಾಗವಾರು ಅಧ್ಯಾಪಕರ ಸಂಖ್ಯೆ ಕಡಿಮೆ: ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವಿಭಾಗಗಳಲ್ಲೂ ಕೇವಲ ಒಂದು ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಮಾತ್ರ ಇರುವುದರ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ವಿಭಾಗವಾರು ಅಧ್ಯಾಪಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ರೋಸ್ಟರ್ ಬಿಂದುಗಳನ್ನು ಅಳವಡಿಸಲು ತುಂಬಾ ಕಠಿಣ ಹಾಗೂ ಎಲ್ಲಾ ಪ್ರವರ್ಗಗಳಿಗೂ ನ್ಯಾಯ ದೊರಕಿಸಿಕೊಡುವುದು ಕಷ್ಟ ಸಾಧ್ಯ ಎಂದಿದೆ.
ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು ಖಾಲಿ ಇರುವ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದ ಹುದ್ದೆಗಳಿಗೆ ವಿವಿಯನ್ನು ಒಂದ ಘಟಕವನ್ನಾಗಿ ಪರಿಗಣಿಸಿ ಮೀಸಲಾತಿಯನ್ನು ಅಳವಡಿಸುವುದು ಸರಿಯಾದ ಮಾರ್ಗ ಹಾಗೂ ಹೀಗೆ ಮಾಡುವ ಮೂಲಕ ಎಲ್ಲ ವರ್ಗಗಳಿಗೂ ನ್ಯಾಯ ದೊರಕಿಸಿದಂತಾಗುತ್ತದೆ ಎಂದು ವಿವಿಯ ಕುಲಪತಿ ಪ್ರೊ.ಬಿ.ಕೆ ರವಿ ಅವರು ತಮ್ಮ ಅಭಿಪ್ರಾಯವನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಗೆ ವಿವರಿಸಿದ್ದಾರೆ.