×
Ad

ರಮಝಾನ್ ನಲ್ಲಿ ಸಾವಿರಾರು ಕೋಟಿ ರೂ. ಝಕಾತ್; ಬಡಕುಟುಂಬಗಳ ಬದುಕಿಗೆ ಆಶಾಕಿರಣ

Update: 2026-03-10 04:40 IST

PC | indianexpress

ಹೊಸದಿಲ್ಲಿ: ಪವಿತ್ರ ರಮಝಾನ್ ತಿಂಗಳಲ್ಲಿ ಮುಸ್ಲಿಮರು ನೀಡುವ ಝಕಾತ್ ದೇಣಿಗೆಗಳು ಭಾರತದಲ್ಲಿ ಶಿಕ್ಷಣ, ಕಾನೂನು ನೆರವು ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಬೆಂಬಲ ಒದಗಿಸುವ ಪ್ರಮುಖ ಸಾಮಾಜಿಕ ನೆರವಿನ ಮೂಲವಾಗುತ್ತಿವೆ. ಸಮುದಾಯ ಸಂಘಟನೆಗಳ ಅಂದಾಜಿನ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಝಕಾತ್ ರೂಪದಲ್ಲಿ ಸುಮಾರು 10,000 ಕೋಟಿ ರೂ.ಯಿಂದ 40,000 ಕೋಟಿ ರೂ.ವರೆಗೆ ದೇಣಿಗೆ ಸಂಗ್ರಹವಾಗಬಹುದು.

ರಮಝಾನ್ ತಿಂಗಳು ಮುಸ್ಲಿಮರಿಗೆ ಉಪವಾಸ, ಪ್ರಾರ್ಥನೆ ಮತ್ತು ದಾನಕ್ಕೆ ವಿಶೇಷ ಮಹತ್ವ ಹೊಂದಿದೆ. ಈ ಅವಧಿಯಲ್ಲಿ ಅನೇಕರು ತಮ್ಮ ಝಕಾತ್ ಕರ್ತವ್ಯವನ್ನು ನೆರವೇರಿಸುತ್ತಾರೆ. ಝಕಾತ್ ಇಸ್ಲಾಂ ಧರ್ಮದಲ್ಲಿ ಕಡ್ಡಾಯವಾದ ದಾನ ಪದ್ಧತಿಯಾಗಿದ್ದು, ಆರ್ಥಿಕವಾಗಿ ಸಮರ್ಥರಾದ ಮುಸ್ಲಿಮರು ತಮ್ಮ ಸಂಪತ್ತಿನ ಒಂದು ಭಾಗವನ್ನು ಅಗತ್ಯವಿರುವವರಿಗೆ ನೀಡಬೇಕೆಂಬ ನಿಯಮವನ್ನು ಒಳಗೊಂಡಿದೆ.

►ಝಕಾತ್ ಎಂದರೇನು?

ಝಕಾತ್ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಸಮಾಜದಲ್ಲಿ ಸಂಪತ್ತು ಸಮನಾಗಿ ಹರಿದಾಡಿ ದುರ್ಬಲ ವರ್ಗಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ. ಸಾಮಾನ್ಯವಾಗಿ ವ್ಯಕ್ತಿಯ ಉಳಿತಾಯ, ಆಸ್ತಿ ಮತ್ತು ಸಂಗ್ರಹಿಸಿದ ಸಂಪತ್ತಿನ ಮೇಲೆ ಶೇಕಡಾ 2.5ರಷ್ಟು ಝಕಾತ್ ನೀಡಲಾಗುತ್ತದೆ.

ಈ ದಾನ ನೀಡುವ ಹೊಣೆಗಾರಿಕೆ ‘ನಿಸಾಬ್’ ಎಂದು ಕರೆಯಲಾಗುವ ಕನಿಷ್ಠ ಸಂಪತ್ತಿನ ಮಿತಿಯನ್ನು ಮೀರಿದವರ ಮೇಲೆ ಅನ್ವಯಿಸುತ್ತದೆ. ನಿಸಾಬ್ ಮೌಲ್ಯವನ್ನು ಚಿನ್ನ ಅಥವಾ ಬೆಳ್ಳಿಯ ಬೆಲೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. 87.5 ಗ್ರಾಂ ಚಿನ್ನ ಅಥವಾ 612.36 ಗ್ರಾಂ ಬೆಳ್ಳಿಯ ಮೌಲ್ಯಕ್ಕೆ ಸಮಾನವಾದ ಸಂಪತ್ತನ್ನು ಹೊಂದಿರುವವರು ಝಕಾತ್ ನೀಡಬೇಕಾಗುತ್ತದೆ.

ಭಾರತದಲ್ಲಿ ಸುಮಾರು 17.18 ಕೋಟಿ ಮುಸ್ಲಿಮರು ಇದ್ದು, ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 14.2ರಷ್ಟಾಗಿದೆ. ಇವರು ನೀಡುವ ಝಕಾತ್ ಮೊತ್ತವು ಗಣನೀಯ ಪ್ರಮಾಣದಲ್ಲಿದೆ. ಆದರೆ ನಿಖರ ಅಂಕಿಅಂಶಗಳು ಲಭ್ಯವಿಲ್ಲ.

2005ರಲ್ಲಿ ‘ಝಕಾತ್ ಫೌಂಡೇಶನ್ ಆಫ್ ಇಂಡಿಯಾ’ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಂಡಿಸಲಾದ ಅಧ್ಯಯನ ಪ್ರಬಂಧವು ವಿವಿಧ ಧಾರ್ಮಿಕ ಸಮುದಾಯಗಳ ಮನೆಮನೆ ಆದಾಯದ ದತ್ತಾಂಶವನ್ನು ಆಧರಿಸಿ ಝಕಾತ್ ಮೊತ್ತವನ್ನು ವರ್ಷಕ್ಕೆ ಸುಮಾರು 10,000 ಕೋಟಿ ರೂ. ಎಂದು ಅಂದಾಜಿಸಿತ್ತು.

ಆದರೆ ಸಮುದಾಯ ಕಾರ್ಯಕರ್ತರ ಪ್ರಕಾರ, ಆದಾಯದ ಏರಿಕೆ ಮತ್ತು ಜನಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಈ ಮೊತ್ತವು ಈಗ ಗಮನಾರ್ಹವಾಗಿ ಹೆಚ್ಚಿರಬಹುದು. ಪ್ರಸ್ತುತ ವರ್ಷಕ್ಕೆ 10,000 ಕೋಟಿ ರೂ.ವಿನಿಂದ 40,000 ಕೋಟಿ ರೂ.ವರೆಗೆ ಝಕಾತ್ ಸಂಗ್ರಹವಾಗುವ ಸಾಧ್ಯತೆ ಇದೆ. ವಿಶೇಷವಾಗಿ ರಮಝಾನ್ ಸಮಯದಲ್ಲಿ ಹೆಚ್ಚಿನವರು ತಮ್ಮ ಕರ್ತವ್ಯವನ್ನು ನೆರವೇರಿಸಲು ಮುಂದಾಗುತ್ತಾರೆ.

►ಸಂಘಟಿತ ಉಪಕ್ರಮಗಳತ್ತ ಒಲವು

ಈ ದತ್ತಿ ನಿಧಿಗಳ ಹೆಚ್ಚಿನ ಭಾಗವನ್ನು ಸಾಮಾನ್ಯವಾಗಿ ಅನೌಪಚಾರಿಕವಾಗಿ ಅಥವಾ ಸಣ್ಣ ಪ್ರಮಾಣದಲ್ಲಿ ವಿತರಿಸಲಾಗುತ್ತದೆ. ಇದರಿಂದ ಅದರ ದೀರ್ಘಕಾಲೀನ ಪರಿಣಾಮ ಸೀಮಿತವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ, ಬಡತನ ನಿರ್ಮೂಲನೆ ಮತ್ತು ಕಾನೂನು ನೆರವು ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಗುರಿಯೊಂದಿಗೆ ಝಕಾತ್ ಅನ್ನು ಸಂಘಟಿತ ಉಪಕ್ರಮಗಳ ಮೂಲಕ ಬಳಸುವ ಪ್ರಯತ್ನಗಳು ಹೆಚ್ಚುತ್ತಿವೆ.

ಮುಂಬೈ ಮೂಲದ ‘ಮುಸ್ಲಿಂ ವೃತ್ತಿಪರರ ಸಂಘ’ವು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಆರಂಭಿಸಿದೆ. ಈ ಯೋಜನೆಯಡಿ 10,000 ರೂ. ದೇಣಿಗೆಯ ಮೂಲಕ ಒಂದು ವಿದ್ಯಾರ್ಥಿಯ ಒಂದು ವರ್ಷದ ಶಿಕ್ಷಣವನ್ನು ಪ್ರಾಯೋಜಿಸಲು ದಾನಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.

ಭಾರತದ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳಿಗೆ ನೆರವು ನೀಡುವುದು ಈ ಉಪಕ್ರಮದ ಗುರಿಯಾಗಿದೆ. ಪರಿಶೀಲನಾ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳನ್ನು ಗುರುತಿಸಲಾಗುತ್ತದೆ ಮತ್ತು ಹಣವನ್ನು ನೇರವಾಗಿ ಶಿಕ್ಷಣ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಇದರಿಂದ ಶಾಲಾ ಶುಲ್ಕ ಹಾಗೂ ಸಂಬಂಧಿತ ಶಿಕ್ಷಣ ವೆಚ್ಚಗಳಿಗೆ ನೆರವು ದೊರೆಯುತ್ತದೆ.

“ಪ್ರತಿ ವರ್ಷ ಭಾರತದಲ್ಲಿ ದೊಡ್ಡ ಪ್ರಮಾಣದ ಹಣ ಝಕಾತ್ ರೂಪದಲ್ಲಿ ವಿತರಿಸಲಾಗುತ್ತದೆ. ಆದರೆ ಹಣ ಚದುರಿಹೋಗಿರುವುದರಿಂದ ಅದರ ಪರಿಣಾಮ ಸೀಮಿತವಾಗುತ್ತದೆ. ಸಮುದಾಯ ಸಂಸ್ಥೆಗಳು ಈ ಕೊಡುಗೆಗಳನ್ನು ಸಂಘಟಿತ ಕಾರ್ಯಕ್ರಮಗಳ ಮೂಲಕ ಬಳಸಿದಾಗ, ನೆರವು ಹೆಚ್ಚು ಅಗತ್ಯವಿರುವವರನ್ನು ತಲುಪುತ್ತದೆ ಮತ್ತು ದೀರ್ಘಕಾಲೀನ ಪರಿಣಾಮ ಉಂಟಾಗುತ್ತದೆ,” ಎಂದು ಮುಸ್ಲಿಂ ವೃತ್ತಿಪರರ ಸಂಘದ ಸ್ಥಾಪಕ ಅಧ್ಯಕ್ಷ ಆಮಿರ್ ಇದ್ರಿಸಿ ಹೇಳಿದ್ದಾರೆ.

►ಕಾನೂನು ನೆರವಿಗೂ ಝಕಾತ್ ಬಳಕೆ

ಶಿಕ್ಷಣದ ಜೊತೆಗೆ ನ್ಯಾಯಕ್ಕೆ ಪ್ರವೇಶವನ್ನು ವಿಸ್ತರಿಸಲು ಝಕಾತ್ ನಿಧಿಗಳನ್ನು ಬಳಸುವ ಪ್ರಯತ್ನಗಳೂ ನಡೆಯುತ್ತಿವೆ. ಮುಂಬೈ ಮೂಲದ ‘ಗ್ಲೋಬಲ್ ಕೇರ್ ಫೌಂಡೇಶನ್’ ನಂತಹ ಸಂಸ್ಥೆಗಳು ಜಾಮೀನು ಅಥವಾ ಕಾನೂನು ನೆರವು ಪಡೆಯಲು ಸಾಧ್ಯವಾಗದ ವಿಚಾರಣಾಧೀನ ಕೈದಿಗಳೊಂದಿಗೆ ಕೆಲಸ ಮಾಡುತ್ತಿವೆ.

ಸಂಸ್ಥೆಯ ಮಾಹಿತಿ ಪ್ರಕಾರ, 2025ರಲ್ಲಿ ಮುಂಬೈ, ಪುಣೆ ಮತ್ತು ನಾಸಿಕ್ ಜೈಲುಗಳಿಂದ 490ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿಗೆ ಕಾನೂನು ಹಾಗೂ ಆರ್ಥಿಕ ನೆರವು ನೀಡಿ ಬಿಡುಗಡೆಗೊಳ್ಳಲು ಸಹಾಯ ಮಾಡಲಾಗಿದೆ. ಮುಂಬೈ, ಗೋವಂಡಿ ಮತ್ತು ಮುಂಬ್ರಾದಲ್ಲಿ ಕಾನೂನು ನೆರವು ಕೇಂದ್ರಗಳನ್ನು ನಡೆಸುವ ಮೂಲಕ ಕುಟುಂಬಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.

‘ಜಮಿಯತ್ ಉಲಮಾ ಇ ಹಿಂದ್’ ನಡೆಸುವ ಉಪಕ್ರಮಗಳ ಮೂಲಕವೂ ಕೈದಿಗಳಿಗೆ ಕಾನೂನು ಸಹಾಯ ಒದಗಿಸಲು ಝಕಾತ್ ಹಣವನ್ನು ಬಳಸಲಾಗುತ್ತಿದೆ.

“ಇಸ್ಲಾಮಿಕ್ ಬೋಧನೆಗಳು ಝಕಾತ್ ಪಡೆಯಬಹುದಾದ ಹಲವು ವರ್ಗಗಳನ್ನು ಗುರುತಿಸುತ್ತವೆ. ಜೈಲಿನಲ್ಲಿರುವ ಅಥವಾ ಸಂಕಷ್ಟದಲ್ಲಿರುವವರೂ ಅದರಲ್ಲಿ ಸೇರಿದ್ದಾರೆ. ಅನೇಕ ವಿಚಾರಣಾಧೀನ ಕೈದಿಗಳು ಶಿಕ್ಷೆಗೆ ಒಳಗಾದ ಕಾರಣದಿಂದಲ್ಲ, ತಮ್ಮ ಪ್ರಕರಣಗಳನ್ನು ಮುಂದುವರಿಸಲು ಅಥವಾ ಕಾನೂನು ಪ್ರತಿನಿಧಿಯನ್ನು ಪಡೆಯಲು ಹಣದ ಕೊರತೆಯಿಂದ ಜೈಲಿನಲ್ಲಿ ಉಳಿಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಝಕಾತ್ ನಿಧಿಗಳು ಅವರಿಗೆ ನ್ಯಾಯ ಪಡೆಯಲು ಮಹತ್ವದ ಪಾತ್ರ ವಹಿಸುತ್ತವೆ,” ಎಂದು ಜಮಿಯತ್ ಉಲಮಾ ಐ ಹಿಂದ್ನ ಕಾನೂನು ಸಲಹೆಗಾರ ವಕೀಲ ಶಾಹಿದ್ ನದೀಮ್ ಹೇಳಿದ್ದಾರೆ.

ಸಂಸ್ಥೆಯ ಪ್ರಕಾರ, ಇಂತಹ ಬೆಂಬಲದ ಮೂಲಕ 500ಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಕೈದಿಗಳಿಗೆ ಕಾನೂನು ನೆರವು ಒದಗಿಸಲಾಗಿದ್ದು, ಅವರಲ್ಲಿ ಹಲವರು ನಂತರ ಜಾಮೀನು ಅಥವಾ ಖುಲಾಸೆಯಾಗಿದ್ದಾರೆ.

►ಸಮುದಾಯ ಬೆಂಬಲ

ಮಹಾರಾಷ್ಟ್ರ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಸಮುದಾಯ ಸಂಘಟನೆಗಳು ಝಕಾತ್ ಅನ್ನು ಹೆಚ್ಚು ಸಂಘಟಿತ ರೀತಿಯಲ್ಲಿ ಸಂಗ್ರಹಿಸಿ ವಿತರಿಸುವ ಉಪಕ್ರಮಗಳನ್ನು ಆರಂಭಿಸಿವೆ. ಕೆಲವು ಸಂದರ್ಭಗಳಲ್ಲಿ ಝಕಾತ್ ನೆರವು ಪಡೆದ ಫಲಾನುಭವಿಗಳು ತಮ್ಮ ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗುತ್ತಾರೆ. ಇದರಿಂದ ಸಮುದಾಯದೊಳಗೆ ಪರಸ್ಪರ ಬೆಂಬಲದ ಸರಪಳಿ ನಿರ್ಮಾಣವಾಗುತ್ತಿದೆ.

“ಹಲವು ಸಂದರ್ಭಗಳಲ್ಲಿ ಝಕಾತ್ ನೆರವಿನಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಂತರ ಆರ್ಥಿಕವಾಗಿ ಸ್ಥಿರರಾದ ಬಳಿಕ ಮತ್ತೆ ಕೊಡುಗೆ ನೀಡಲು ಮುಂದಾಗುತ್ತಾರೆ. ಹಲವಾರು ಫಲಾನುಭವಿಗಳು ತಮ್ಮ ಪರಿಸ್ಥಿತಿ ಸುಧಾರಿಸಿದ ನಂತರ ಇತರರಿಗೆ ಸಹಾಯ ಮಾಡಲು ಹಿಂತಿರುಗುತ್ತಿರುವುದನ್ನು ನಾವು ನೋಡಿದ್ದೇವೆ. ತಕ್ಷಣದ ಸಂಕಷ್ಟವನ್ನು ಪರಿಹರಿಸುವುದರ ಜೊತೆಗೆ, ಝಕಾತ್ ಜವಾಬ್ದಾರಿಯ ಭಾವನೆ ಬೆಳೆಸುತ್ತದೆ ಮತ್ತು ಸಮುದಾಯದಲ್ಲಿ ಪರಸ್ಪರ ಬೆಂಬಲದ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ,” ಎಂದು ಅಗತ್ಯವಿರುವವರಿಗೆ ಝಕಾತ್ ಹಣವನ್ನು ಸಂಗ್ರಹಿಸಿ ವಿತರಿಸುವ ‘ಬೈತುಲ್ ಮಾಲ್’ ಸಂಘಟನೆಯ ಸದಸ್ಯ ಇಮ್ತಿಯಾಜ್ ಶೇಖ್ ತಿಳಿಸಿದ್ದಾರೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News