×
Ad

ಸೆಕ್ಷನ್ 39A ವಿರುದ್ಧ ಪ್ರತಿಭಟಿಸುತ್ತಿರುವ ಗೋವಾ ಜನತೆ; ಕಾರಣವೇನು?

Update: 2026-03-10 17:15 IST

Photo : indianexpress

ಗೋವಾ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಕಾಯ್ದೆ, 2024ರ ಭಾಗವಾಗಿರುವ ಸೆಕ್ಷನ್ 39A ಗೆ ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು ಮತ್ತು ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ

ಗೋವಾದಲ್ಲಿ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಟಿಸಿಪಿ) ಕಾಯ್ದೆಯಲ್ಲಿ ಹೊಸದಾಗಿ ಪರಿಚಯಿಸಲಾದ ನಿಬಂಧನೆಯ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಗೋವಾ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಕಾಯ್ದೆ, 2024ರ ಭಾಗವಾಗಿರುವ ಸೆಕ್ಷನ್ 39A ಗೆ ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು ಮತ್ತು ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಸರ- ಸೂಕ್ಷ್ಮ ವಲಯಗಳನ್ನು ವಸತಿಪ್ರದೇಶಗಳಾಗಿ ಪರಿವರ್ತಿಸುವುದು ಸೇರಿದಂತೆ ಭೂ-ಬಳಕೆಯ ಬದಲಾವಣೆಗಳಿಗೆ ಕಾನೂನು ಅನುಮತಿಸುತ್ತದೆ. ಹೀಗಾಗಿ ಪರಿಸರವಾದಿಗಳು ಯೋಜಿತವಲ್ಲದ ಅಭಿವೃದ್ಧಿ ಮತ್ತು ಪರಿಸರ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸೆಕ್ಷನ್ 39A ಏನು ಅನುಮತಿಸುತ್ತದೆ?

ಸೆಕ್ಷನ್ 39A ಕಾನೂನು ಚೀಫ್ ಟೌನ್ ಪ್ಲಾನರ್ಗೆ (ಪಟ್ಟಣ ಯೋಜನೆ ರೂಪಿಸುವವರು) ಸರ್ಕಾರಿ ನಿರ್ದೇಶನಗಳು ಅಥವಾ ಖಾಸಗಿಯವರ ವಿನಂತಿಗಳ ಮೇರೆಗೆ ಪ್ರಾದೇಶಿಕ ಯೋಜನೆ ಮತ್ತು ರೂಪುರೇಷೆ ಅಭಿವೃದ್ಧಿ ಯೋಜನೆಗಳನ್ನು ಬದಲಿಸಲು ಅಥವಾ ಮಾರ್ಪಡಿಸಲು ಅಧಿಕಾರ ನೀಡುತ್ತದೆ. ಟಿಸಿಪಿ ಮಂಡಳಿಯ ಅನುಮೋದನೆ ಮತ್ತು 30 ದಿನಗಳ ಸಾರ್ವಜನಿಕ ಸೂಚನೆಯ ಅವಧಿಯೊಂದಿಗೆ ಭತ್ತದ ಗದ್ದೆಗಳು, ತೋಟಗಳು ಮತ್ತು ಅಭಿವೃದ್ಧಿ ರಹಿತ ವಲಯಗಳನ್ನು ಒಳಗೊಂಡಂತೆ ಭೂ ಪಾರ್ಸೆಲ್ಗಳನ್ನು ‘ವಸಾಹತು’ಗಳಾಗಿ ಪರಿವರ್ತಿಸಬಹುದು. ಒಮ್ಮೆ ‘ವಸತಿ ಪ್ರದೇಶ’ ಎಂದು ವರ್ಗೀಕರಿಸಿದ ನಂತರ ವಸತಿ ಮತ್ತು ವಾಣಿಜ್ಯ ನಿರ್ಮಾಣಕ್ಕೆ ಅನುಮತಿ ದೊರೆಯುವಂತೆ ಭೂಮಿಯ ಮೌಲ್ಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ.

Full View

ಹೊಸ ಯೋಜನೆಗೆ ವಿರೋಧವೇಕೆ?

ಸೆಕ್ಷನ್ 39A ಮೂಲಕ ಟಿಸಿಪಿ ಇಲಾಖೆಗೆ ಅನಿಯಂತ್ರಿತ ಅಧಿಕಾರಗಳನ್ನು ನೀಡಿ ಯೋಜಿತ ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿದೆ ಎಂದು ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ. ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಂದ ನಡೆಸಲಾಗುವ ಇಂತಹ ಬದಲಾವಣೆಗಳು ಗೋವಾದ ಸೂಕ್ಷ್ಮ ಪರಿಸರವಲಯವನ್ನು ನಾಶ ಮಾಡಲಿದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ವಾಸ್ತುಶಿಲ್ಪಿ ತಾಹಿರ್ ನೊರೊನ್ಹಾ ಅವರು ಮಾಧ್ಯಮಗಳಿಗೆ ನೀಡಿರುವ ವಿವರಗಳ ಪ್ರಕಾರ, “ಹೊಸ ಕಾನೂನಿನಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿದೆ. ಟಿಸಿಪಿ ಮಂಡಳಿಗೆ ಅನಿಯಂತ್ರಿತ ಅಧಿಕಾರ ನೀಡುತ್ತದೆ. ನಾಗರಿಕರು ಸಲ್ಲಿಸಿದ ಆಕ್ಷೇಪಗಳನ್ನು ವಜಾಗೊಳಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಪ್ರತಿಭಟನೆ ಮಾಡುವುದರ ಹೊರತು ಇನ್ಯಾವುದೇ ದಾರಿಯಿಲ್ಲ.”

ರೈನ್ಬೋ ವಾರಿಯರ್ಸ್ನಂತರ ಪರಿಸರ ಸಂಘಟನೆಗಳು ರಾಜ್ಯಾದ್ಯಂತ ವಲಯ ರೂಪಣೆಯು ಏಕರೂಪದಲ್ಲಿರಬೇಕು ಮತ್ತು ವ್ಯಕ್ತಿಗತವಾದ ವಿನಂತಿಗಳಿಗೆ ಅನುಸರಿಸಿ ಬದಲಿಸಬಾರದು ಎಂದು ಒತ್ತಿ ಹೇಳಿದ್ದಾರೆ.

ವೇಗಗೊಂಡ ಪ್ರಕೃತಿ ನಾಶ

ಸೆಕ್ಷನ್ 39A ಕಾರ್ಯರೂಪಕ್ಕೆ ಬಂದ ನಂತರ ಈಗಾಗಲೇ 9.29 ಲಕ್ಷ ಚದರ ಮೀಟರ್ಗಳಿಗೂ ಹೆಚ್ಚು ಪ್ರದೇಶವನ್ನು ವಸತಿ ನೆಲೆಗಳಾಗಿ ಪರಿವರ್ತಿಸಲಾಗಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಈ ಟ್ರೆಂಡ್ ಇನ್ನೂ ವೇಗಗೊಳ್ಳಲಿದೆ ಮತ್ತು ಪ್ರಾಕೃತಿಕ ಸಂಪತ್ತು ನಾಶ ಮಾಡಿ ಅನಿಯಂತ್ರಿತ ನಗರೀಕರಣಕ್ಕೆ ಕಾರಣವಾಗಲಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಕ್ಷೇತ್ರದಲ್ಲಿ 39A ಸ್ಥಗಿತಗೊಳಿಸಿದ ಸರ್ಕಾರ

ರೆವೊಲ್ಯುಷನರಿ ಗೋವನ್ಸ್ ಪಾರ್ಟಿ ನಾಯಕ ಮತ್ತು ಶಾಸಕ ವೀರೇಶ್ ಬೋರ್ಕರ್ ಸೆಕ್ಷನ್ 39A ಕಾನೂನನ್ನು ಹಿಂಪಡೆಯಬೇಕು ಎಂದು ಬೇಡಿಕೆಯಿಟ್ಟು ಆರು ದಿನಗಳ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಅವರ ವಿಧಾನಸಭಾ ಕ್ಷೇತ್ರದಲ್ಲಿ ಉದ್ದೇಶಿಸಿದ್ದ ವಲಯವಾರು ಬದಲಾವಣೆಗಳನ್ನು ಟಿಸಿಪಿ ಇಲಾಖೆಯು ನಿಲ್ಲಿಸಿದ ನಂತರ ಅವರು ಉಪವಾಸ ಸತ್ಯಾಗ್ರಹ ತ್ಯಜಿಸಿದ್ದರು. ಸೆಕ್ಷನ್ 39A ಸಂಪೂರ್ಣವಾಗಿ ತೊಡೆದು ಹಾಕುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ. ಇತ್ತೀಚೆಗೆ ಗೋವಾದ ಜನತೆ ಟಿಸಿಪಿ ಸಚಿವರ ನಿವಾಸದ ಮುಂದೆ ಪ್ರತಿಭಟಿಸಿ ಸೆಕ್ಷನ್ 39A ತೊಡೆದು ಹಾಕುವಂತೆ ಒತ್ತಾಯಿಸಿದ್ದಾರೆ.

ವಿವಾದಾಸ್ಪದ ಭೂ-ಬಳಕೆ ಯೋಜನೆಗಳು

ಗೋವಾದ ಭೂ-ಬಳಕೆ ಯೋಜನೆಗಳು ಹಿಂದಿನಿಂದಲೂ ವಿವಾದಾಸ್ಪದವಾಗಿದೆ. 1988ರಲ್ಲಿ ಮಾಡಿದ ಸೆಕ್ಷನ್ 17ರಂತಹ ತಿದ್ದುಪಡಿಗಳು “ಸ್ಪಾಟ್ ಝೋನಿಂಗ್’ಗೆ ಅವಕಾಶ ಮಾಡಿಕೊಟ್ಟವು. ಹಿಗಾಗಿ ಗೊಂದಲದ ಅಭಿವೃದ್ಧಿಗೆ ಕಾರಣವಾಗಿತ್ತು. 1988 ಮತ್ತು 2005ರ ನಡುವೆ ಸುಮಾರು 2,241 ಕ್ಕೂ ಅಧಿಕ ತಾತ್ಕಾಲಿಕ ಬದಲಾವಣೆಗಳು ಕೃಷಿ ಮತ್ತು ಅರಣ್ಯ ಪ್ರದೇಶವನ್ನು ದೊಡ್ಡ ಪ್ರಮಾಣದಲ್ಲಿ ಪರಿವರ್ತಿಸಲು ಕಾರಣವಾಯಿತು. 2011ರಲ್ಲಿ ಪ್ರಾದೇಶಿಕ ಯೋಜನೆಯ ಸುತ್ತಲೂ ಇಂತಹ ವಿವಾದಗಳು ಹರಿದಾಡಿದ್ದವು. ಸಾಮೂಹಿಕ ಪ್ರತಿಭಟನೆಗಳ ನಂತರ ಇದನ್ನು ರದ್ದುಗೊಳಿಸಲಾಗಿತ್ತು. ನಂತರದ ನಿಬಂಧನೆಗಳಾದ ಸೆಕ್ಷನ್ 16B (2018) ಮತ್ತು ಸೆಕ್ಷನ್ 17(2) (2023) ಕೂಡ ಪ್ರತಿಭಟನೆ ಎದುರಿಸಿದ್ದವು ಮತ್ತು ಕಾನೂನು ಸವಾಲುಗಳನ್ನು ಎದುರಿಸಿದವು.

39A ಭವಿಷ್ಯ ಅನಿಶ್ಚಿತ

ಈ ಬಾರಿಯೂ ಸರ್ಕಾರ ಸೆಕ್ಷನ್ 39A ಗೆ ಮತ್ತೆ ತಿದ್ದುಪಡಿ ತರಲು ಸರ್ಕಾರ ಯೋಜಿಸುತ್ತಿದೆ ಎಂದು ಗೋವಾದ ಸರ್ಕಾರಿ ಮೂಲಗಳು ತಿಳಿಸಿವೆ. “ಪ್ರಸ್ತುತ 39A ಅನ್ನು ಒಂದು ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಸ್ಥಗಿತಗೊಳಿಸಿದ್ದಾರೆ. 2026 ಫೆಬ್ರವರಿ 26ರಿಂದ ಗೋವಾ ಸರ್ಕಾರವು ಸೇಂಟ್ ಆಂಡ್ರೆ ಕ್ಷೇತ್ರದಲ್ಲಿನ ಎಲ್ಲಾ ಸೆಕ್ಷನ್ 39A ಭೂ ವಲಯ ಬದಲಾವಣೆ ಪ್ರಕರಣಗಳನ್ನು (ತಾತ್ಕಾಲಿಕ ಮತ್ತು ಅಂತಿಮ ಎರಡೂ) ಸ್ಥಗಿತಗೊಳಿಸಿದೆ. ಸೇಂಟ್ ಆಂಡ್ರೆ ಶಾಸಕ ವೀರೇಶ್ ಬೋರ್ಕರ್ ಅವರ ಪ್ರತಿಭಟನೆಗಳು ಮತ್ತು ಉಪವಾಸ ಸತ್ಯಾಗ್ರಹದ ನಂತರ ಕ್ರಮ ಕೈಗೊಳ್ಳಲಾಗಿದೆ” ಎಂದು ಮೂಲಗಳು ತಿಳಿಸಿವೆ.

ಸೆಕ್ಷನ್ 39A ಗೋವಾದ ಅಭಿವೃದ್ಧಿ ಮಾದರಿಯ ಕುರಿತಂತ ಹಳೇ ಚರ್ಚೆಗಳನ್ನು ಮುನ್ನೆಲೆಗೆ ತಂದಿದೆ. ಯೋಜನೆಯಲ್ಲಿ ಹೊಂದಾಣಿಕೆಯ ಬಗ್ಗೆ ಸರ್ಕಾರ ವಾದಿಸಿದರೂ, ಅನಿಯಂತ್ರಿತ ಕನ್ವರ್ಷನ್ಗಳು ರಾಜ್ಯದ ಪರಿಸರ ಸಮತೋಲನಕ್ಕೆ ಅಪಾಯ ತರಲಿದೆ ಎಂದು ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಬಲವಾದ ಸಾರ್ವಜನಿಕ ವಿರೋಧ ಮತ್ತು ಐತಿಹಾಸಿಕವಾಗಿ ತೆಗೆದುಕೊಳ್ಳಲಾದ ಇತರ ಪ್ರಕರಣಗಳ ಹಿಂತೆಗೆತವನ್ನು ಗಮನಿಸಿದರೆ ಸೆಕ್ಷನ್ 39A ಭವಿಷ್ಯವೂ ಅನಿಶ್ಚಿತವಾಗಿಯೇ ಉಳಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News