ಸಾಂದರ್ಭಿಕ ಚಿತ್ರ

10 ರೂಪಾಯಿ, 20 ರೂಪಾಯಿ ಅಥವಾ 40 ರೂಪಾಯಿಯ ಯಾವುದೇ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಕೈಗೆತ್ತಿಕೊಂಡು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಬಹುತೇಕ ಬಾಟಲಿಗಳ ಸುತ್ತಲೂ ಉಬ್ಬುಗಳು, ಸಣ್ಣ ತಗ್ಗುಗಳು ಅಥವಾ ಒಳಭಾಗಕ್ಕೆ ಒತ್ತಿದಂತಹ ಗೆರೆಗಳು ಕಾಣಿಸುತ್ತವೆ. ಕೆಲವು ಬಾಟಲಿಗಳ ಕೆಳಭಾಗದಲ್ಲಿ ದಪ್ಪನಾದ ಉಂಗುರದಂತಹ ವಿನ್ಯಾಸವಿದ್ದರೆ, ಇನ್ನು ಕೆಲವು ಬಾಟಲಿಗಳ ಮೇಲೆ ಇಂತಹ ಗೆರೆಗಳಿರುತ್ತವೆ. ನೋಡಲು ಇವು ಕೇವಲ ವಿನ್ಯಾಸದಂತೆ ಕಂಡರೂ, ಇವುಗಳ ಹಿಂದೆ ಹಲವು ಪ್ರಾಯೋಗಿಕ ಉದ್ದೇಶಗಳಿವೆ. ಬಾಟಲಿಗಳಿಗೆ ದೃಢತೆ ನೀಡುವುದರಿಂದ ಹಿಡಿದು, ತಯಾರಿಕೆಯಲ್ಲಿ ಬಳಸುವ ಪ್ಲಾಸ್ಟಿಕ್ ಪ್ರಮಾಣವನ್ನು ಕಡಿಮೆ ಮಾಡುವವರೆಗೆ ಈ ಸಣ್ಣ ಗೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ, ಸಾಗಾಟ, ಸಂಗ್ರಹಣೆ ಮತ್ತು ದಿನನಿತ್ಯದ ಬಳಕೆಯ ವೇಳೆ ಬಾಟಲಿಗಳು ಒತ್ತಡವನ್ನು ತಡೆದುಕೊಳ್ಳಲು ಇವು ನೆರವಾಗುತ್ತವೆ. ಹಾಗಾದರೆ, ತಯಾರಕರು ಬಾಟಲಿಗಳ ಮೇಲೆ ಈ ಗೆರೆಗಳನ್ನು ಏಕೆ ಹಾಕುತ್ತಾರೆ? ಒಂದು ವೇಳೆ ಬಾಟಲಿಗಳು ಸಂಪೂರ್ಣ ನುಣುಪಾಗಿದ್ದರೆ ಏನಾಗುತ್ತಿತ್ತು?

ಈ ಗೆರೆಗಳು ಬಾಟಲಿಗೆ ಹೆಚ್ಚಿನ ಬಲ ನೀಡುತ್ತವೆ

ಬಾಟಲಿಗಳ ಮೇಲೆ ಇಂತಹ ಉಬ್ಬುಗಳನ್ನು ನೀಡುವುದರ ಹಿಂದಿನ ಪ್ರಮುಖ ಕಾರಣವೆಂದರೆ, ಅವುಗಳಿಗೆ ಹೆಚ್ಚಿನ ಬಲ ನೀಡುವುದು. ಸಾಮಾನ್ಯವಾಗಿ ಒಮ್ಮೆ ಬಳಸಿ ಎಸೆಯುವ ನೀರಿನ ಬಾಟಲಿಗಳನ್ನು ಪಾಲಿಥಿಲೀನ್ ಟೆರೆಫ್ತಾಲೇಟ್ (PET) ಎಂಬ ಹಗುರವಾದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಆಹಾರ ಮತ್ತು ಪಾನೀಯಗಳ ಪ್ಯಾಕೇಜಿಂಗ್‌ನಲ್ಲಿ ಇದನ್ನು ವ್ಯಾಪಕವಾಗಿ ಬಳಸುತ್ತಾರೆ.

ಈ PET ಪ್ಲಾಸ್ಟಿಕ್ ತನ್ನ ತೂಕಕ್ಕೆ ತಕ್ಕಂತೆ ಬಾಳಿಕೆ ಬರುವಂತಿದ್ದರೂ, ಇದರ ತೆಳುವಾದ ಗೋಡೆಗಳ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಸುಲಭವಾಗಿ ಆಕಾರ ಕಳೆದುಕೊಳ್ಳುವ ಅಥವಾ ಜಜ್ಜಿಹೋಗುವ ಸಾಧ್ಯತೆ ಇರುತ್ತದೆ.

ಆದ್ದರಿಂದ ಸಂಪೂರ್ಣ ನುಣುಪಾದ ಬಾಟಲಿಯನ್ನು ಕೈಯಲ್ಲಿ ಹಿಡಿದು ಒತ್ತಿದಾಗ ಅಥವಾ ಒಂದರ ಮೇಲೊಂದು ಜೋಡಿಸಿಟ್ಟಾಗ ಅದು ಸುಲಭವಾಗಿ ಕುಗ್ಗುವ ಮತ್ತು ಆಕಾರ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಸಮಸ್ಯೆಯನ್ನು ಬಗೆಹರಿಸಲು ಬಾಟಲಿಯ ಮೇಲಿನ ಉಬ್ಬುಗಳು ನೆರವಾಗುತ್ತವೆ. ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿರುವ ಅಲೆಗಳಂತಹ ಮಡಿಕೆಗಳು ಅಥವಾ ಕಟ್ಟಡಗಳ ವಿನ್ಯಾಸದಲ್ಲಿ ಬಳಸುವ ಕಮಾನುಗಳಂತೆ, ಈ ಗೆರೆಗಳು ಬಾಟಲಿ ತನ್ನ ಆಕಾರ ಕಳೆದುಕೊಳ್ಳದಂತೆ ತಡೆಯುತ್ತವೆ. ಒತ್ತಡವು ಒಂದೇ ಕಡೆ ಬಿದ್ದು ಇಡೀ ಬಾಟಲಿ ಕುಸಿಯುವ ಬದಲು, ಈ ಗೆರೆಗಳು ಒತ್ತಡವನ್ನು ಬಾಟಲಿಯ ವಿವಿಧ ಭಾಗಗಳಿಗೆ ಸಮನಾಗಿ ಹಂಚುತ್ತವೆ. ಬಾಟಲಿಗಳನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಒತ್ತೊತ್ತಾಗಿ ತುಂಬಿ, ಗೋದಾಮುಗಳಲ್ಲಿ ಒಂದರ ಮೇಲೊಂದು ಪೇರಿಸಿ ದೂರದ ಊರುಗಳಿಗೆ ಸಾಗಿಸುವಾಗ ಇದು ತುಂಬಾ ಉಪಯುಕ್ತವಾಗುತ್ತದೆ.

ಕಡಿಮೆ ಪ್ಲಾಸ್ಟಿಕ್ ಸಾಕು

ಇದರ ಹಿಂದಿರುವ ಮತ್ತೊಂದು ಪ್ರಮುಖ ಕಾರಣವೆಂದರೆ ವೆಚ್ಚ ಮತ್ತು ಕಚ್ಚಾ ವಸ್ತುಗಳ ಉಳಿತಾಯ. ದ್ರವ ಪದಾರ್ಥಗಳನ್ನು ಸುರಕ್ಷಿತವಾಗಿ ಹಿಡಿದಿಡುವ ಸಾಮರ್ಥ್ಯಕ್ಕೆ ಧಕ್ಕೆಯಾಗದಂತೆ, ಪ್ಯಾಕೇಜಿಂಗ್ ತೂಕವನ್ನು ಹಗುರಗೊಳಿಸಲು ಪ್ಲಾಸ್ಟಿಕ್ ತಯಾರಕರು ಸದಾ ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ. ಇಡೀ ಬಾಟಲಿಗೆ ದಪ್ಪನೆಯ ಪ್ಲಾಸ್ಟಿಕ್ ಬಳಸಿದರೆ ಅದು ಗಟ್ಟಿಯಾಗುತ್ತದೆ ನಿಜ, ಆದರೆ ಅದಕ್ಕೆ ಹೆಚ್ಚಿನ ಪ್ರಮಾಣದ ಕಚ್ಚಾ ವಸ್ತು ಬೇಕಾಗುತ್ತದೆ.

ಇದಕ್ಕೆ ಪರ್ಯಾಯವಾಗಿ ಈ ಉಬ್ಬು ಮತ್ತು ತಗ್ಗುಗಳ ವಿನ್ಯಾಸ ನೆರವಿಗೆ ಬರುತ್ತದೆ. ಬಾಟಲಿಯ ದಪ್ಪವನ್ನು ಹೆಚ್ಚಿಸದೆಯೇ, ಕೇವಲ ಅದರ ಆಕಾರದಲ್ಲಿ ಬದಲಾವಣೆ ಮಾಡುವ ಮೂಲಕ ಬಾಟಲಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಇದರಿಂದ ಸಾಗಾಟ ಮತ್ತು ಸಂಗ್ರಹಣೆಗೆ ಬೇಕಾದ ದೃಢತೆಯನ್ನು ಕಾಯ್ದುಕೊಳ್ಳುವ ಜೊತೆಗೆ, ಹಗುರವಾದ ಬಾಟಲಿಗಳನ್ನು ತಯಾರಿಸಲು ಕಂಪೆನಿಗಳಿಗೆ ಸಾಧ್ಯವಾಗುತ್ತದೆ.

ಕೇವಲ ಒಂದು ಬಾಟಲಿಯನ್ನು ನೋಡಿದಾಗ ಈ ವ್ಯತ್ಯಾಸ ಅಷ್ಟೇನೂ ದೊಡ್ಡದೆಂದು ಕಾಣಿಸದಿರಬಹುದು. ಆದರೆ ಪಾನೀಯ ಕಂಪೆನಿಗಳು ಪ್ರತಿದಿನ ಲಕ್ಷಾಂತರ ಬಾಟಲಿಗಳನ್ನು ತಯಾರಿಸುತ್ತವೆ. ಪ್ರತಿ ಬಾಟಲಿಯಲ್ಲಿ ಬಳಸುವ ಪ್ಲಾಸ್ಟಿಕ್ ಪ್ರಮಾಣದಲ್ಲಿ ಆಗುವ ಸಣ್ಣ ಕಡಿತವೂ, ದೊಡ್ಡ ಮಟ್ಟದ ಉತ್ಪಾದನೆಯಲ್ಲಿ ಭಾರಿ ಪ್ರಮಾಣದ ಕಚ್ಚಾ ವಸ್ತುವಿನ ಉಳಿತಾಯಕ್ಕೆ ಕಾರಣವಾಗುತ್ತದೆ.

ಬಾಟಲಿಯನ್ನು ಸುಲಭವಾಗಿ ಹಿಡಿದುಕೊಳ್ಳಲು ನೆರವಾಗುತ್ತವೆ

ಜನರು ಸಾಮಾನ್ಯವಾಗಿ ಗಮನಿಸದ ಮತ್ತೊಂದು ದೈನಂದಿನ ಪ್ರಯೋಜನವೆಂದರೆ ಬಾಟಲಿಯ ಮೇಲಿನ ಗ್ರಿಪ್. ನುಣುಪಾದ ಪ್ಲಾಸ್ಟಿಕ್ ಬಾಟಲಿಗಳು ಕೈಯಿಂದ ಜಾರುವ ಸಾಧ್ಯತೆ ಹೆಚ್ಚು. ಅದರಲ್ಲೂ ಫ್ರಿಡ್ಜ್‌ನಿಂದ ಹೊರತೆಗೆದಾಗ ಬಾಟಲಿಯ ಹೊರಭಾಗದಲ್ಲಿ ನೀರಿನ ಹನಿಗಳು ಸಂಗ್ರಹವಾಗಿ ಮತ್ತಷ್ಟು ಜಾರುತ್ತವೆ. ಆಗ ಈ ಉಬ್ಬುಗಳು ಕೈಗೆ ಉತ್ತಮ ಹಿಡಿತ ನೀಡಿ, ಬಾಟಲಿ ಜಾರಿ ಬೀಳದಂತೆ ತಡೆಯುತ್ತವೆ.

ಪ್ರಯಾಣಿಸುವಾಗ, ವ್ಯಾಯಾಮ ಮಾಡುವಾಗ ಅಥವಾ ಹೊರಗೆ ನಡೆದಾಡುವಾಗ ನೀರಿನ ಬಾಟಲಿ ಹಿಡಿದುಕೊಳ್ಳಲು ಇದು ತುಂಬಾ ಅನುಕೂಲಕರ. ಅಲ್ಲದೆ, ಬಾಟಲಿ ಸ್ವಲ್ಪ ಜಜ್ಜಿಕೊಂಡಿದ್ದರೆ ಅಥವಾ ನೀರು ಖಾಲಿಯಾಗುತ್ತಾ ಬಂದಾಗಲೂ ಅದನ್ನು ಹಿಡಿದುಕೊಳ್ಳುವುದು ಸುಲಭವಾಗುತ್ತದೆ. ಬಾಟಲಿಯ ಆಕಾರ, ಸಾಮರ್ಥ್ಯ ಮತ್ತು ಬಳಕೆಯ ಉದ್ದೇಶಕ್ಕೆ ತಕ್ಕಂತೆ ಈ ಗೆರೆಗಳ ಸ್ಥಾನ ಮತ್ತು ಆಳ ಬದಲಾಗುತ್ತದೆ. ಕೆಲವು ತಯಾರಕರು ತೆಳುವಾದ ಅಡ್ಡ ಗೆರೆಗಳನ್ನು ನೀಡಿದರೆ, ಇನ್ನು ಕೆಲವರು ಆಳವಾದ ತಗ್ಗುಗಳು ಅಥವಾ ವಿಶೇಷ ವಿನ್ಯಾಸಗಳನ್ನು ಬಳಸುತ್ತಾರೆ.

ಈ ಗೆರೆಗಳು ಬಾಟಲಿಗೆ ಒತ್ತಡ ತಡೆದುಕೊಳ್ಳಲು ನೆರವಾಗುತ್ತವೆಯೇ?

ಹೌದು, ಆದರೆ ಅವುಗಳ ಕಾರ್ಯವು ಬಾಟಲಿಯ ವಿಧ ಮತ್ತು ಅದರ ವಿನ್ಯಾಸವನ್ನು ಅವಲಂಬಿಸಿರುತ್ತದೆ. ಪ್ಲಾಸ್ಟಿಕ್ ಬಾಟಲಿಗಳು ತಯಾರಿಕೆ, ಸಾಗಾಟ ಮತ್ತು ಸಂಗ್ರಹಣೆಯ ಸಮಯದಲ್ಲಿ ವಿವಿಧ ರೀತಿಯ ಒತ್ತಡಗಳಿಗೆ ಒಳಗಾಗುತ್ತವೆ. ಅಷ್ಟೇ ಅಲ್ಲದೆ, ತಾಪಮಾನ ಮತ್ತು ವಾತಾವರಣದ ಒತ್ತಡದಲ್ಲಿನ ಬದಲಾವಣೆಗಳು ಕೂಡ ಮುಚ್ಚಿದ ಬಾಟಲಿಯ ಆಕಾರದ ಮೇಲೆ ಪರಿಣಾಮ ಬೀರಬಹುದು.

ಈ ಗೆರೆಗಳು ಬಾಟಲಿಯ ರಚನೆಗೆ ಸ್ವಲ್ಪ ಮಟ್ಟಿನ ಫ್ಲೆಕ್ಸಿಬಿಲಿಟಿ ನೀಡುತ್ತವೆ. ಇದರಿಂದ ಎಲ್ಲಾ ಒತ್ತಡವೂ ಒಂದೇ ಕಡೆ ಬೀಳುವ ಬದಲು, ಬಾಟಲಿಯ ನಿರ್ದಿಷ್ಟ ಭಾಗಗಳು ಸ್ವಲ್ಪಮಟ್ಟಿಗೆ ಬಾಗಿ ಒತ್ತಡವನ್ನು ತಡೆದುಕೊಳ್ಳುತ್ತವೆ. ಇದು ಬಾಟಲಿ ಅನಗತ್ಯವಾಗಿ ಆಕಾರ ಕಳೆದುಕೊಳ್ಳುವುದನ್ನು ತಡೆಯುತ್ತದೆ. ಆದರೆ ಎಲ್ಲಾ ಗೆರೆಗಳನ್ನೂ ಒಂದೇ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಿರುವುದಿಲ್ಲ. ಕೆಲವು ಬಾಟಲಿಗೆ ದೃಢತೆ ನೀಡಲು ಇದ್ದರೆ, ಇನ್ನು ಕೆಲವು ಕೈಗೆ ಉತ್ತಮ ಹಿಡಿತ ನೀಡಲು ಅಥವಾ ತಯಾರಿಕಾ ಪ್ರಕ್ರಿಯೆಯ ಅಗತ್ಯಗಳಿಗೆ ತಕ್ಕಂತೆ ಇರುತ್ತವೆ.

ಉದಾಹರಣೆಗೆ, ಸೋಡಾ ಮತ್ತು ತಂಪು ಪಾನೀಯಗಳ ಬಾಟಲಿಗಳು ಸಾಮಾನ್ಯವಾಗಿ ಹೆಚ್ಚು ವಿಶೇಷವಾದ ವಿನ್ಯಾಸವನ್ನು ಹೊಂದಿರುತ್ತವೆ. ಏಕೆಂದರೆ, ಅವುಗಳಲ್ಲಿರುವ ಕಾರ್ಬನ್ ಡೈಆಕ್ಸೈಡ್ ಅನಿಲವು ಬಾಟಲಿಯ ಒಳಭಾಗದಿಂದ ಸೃಷ್ಟಿಸುವ ಒತ್ತಡವನ್ನು ಅವು ತಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಾಮಾನ್ಯ ಕುಡಿಯುವ ನೀರಿನ ಬಾಟಲಿಗಳಿಗಿಂತ ಇವುಗಳ ತಳಭಾಗ ಮತ್ತು ಅವುಗಳ ಆಕಾರವನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿರುತ್ತದೆ.

ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳ ಮೇಲೂ ಒಂದೇ ರೀತಿಯ ವಿನ್ಯಾಸ ಯಾಕೆ ಇರುವುದಿಲ್ಲ?

ನೀವು ಬೇರೆ ಬೇರೆ ನೀರಿನ ಬಾಟಲಿಗಳನ್ನು ಹೋಲಿಸಿ ನೋಡಿದರೆ, ಅವುಗಳ ಮೇಲಿರುವ ಗೆರೆಗಳು ಒಂದೇ ರೀತಿ ಇಲ್ಲದಿರುವುದು ಗಮನಕ್ಕೆ ಬರುತ್ತದೆ. ಕೆಲವು ಬಾಟಲಿಗಳ ಮಧ್ಯಭಾಗದಲ್ಲಿ ಸಣ್ಣ ಉಂಗುರಗಳಂತಹ ಗೆರೆಗಳಿದ್ದರೆ, ಇನ್ನು ಕೆಲವು ಉದ್ದುದ್ದವಾದ ಆಳವಾದ ತಗ್ಗುಗಳನ್ನು ಹೊಂದಿರುತ್ತವೆ. ಮತ್ತೆ ಕೆಲವು ಬಾಟಲಿಗಳ ತಳಭಾಗದಲ್ಲಿ ಹೆಚ್ಚು ಉಬ್ಬುಗಳಿರುತ್ತವೆ. ಇದಕ್ಕೆ ಕಾರಣ, ಬಾಟಲಿಯ ವಿನ್ಯಾಸವು ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಬಳಸುವ ಪ್ಲಾಸ್ಟಿಕ್‌ನ ವಿಧ, ಅದು ಹಿಡಿದಿಟ್ಟುಕೊಳ್ಳಬೇಕಾದ ನೀರಿನ ಪ್ರಮಾಣ, ಬಾಟಲಿಯ ಆಕಾರ, ತಯಾರಿಕೆಯ ಅಗತ್ಯಗಳು ಮತ್ತು ಅದನ್ನು ಸಾಗಿಸುವ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿನ್ಯಾಸ ಬದಲಾಗುತ್ತದೆ. ಒಮ್ಮೆ ಬಳಸಿ ಎಸೆಯುವ ಸಣ್ಣ ಬಾಟಲಿಗೆ ಬೇಕಾದ ವಿನ್ಯಾಸಕ್ಕಿಂತ, ಪದೇ ಪದೇ ಬಳಸುವ ದೊಡ್ಡ ನೀರಿನ ಕ್ಯಾನ್‌ಗಳಿಗೆ ವಿಭಿನ್ನವಾದ ರಚನೆಯ ಅಗತ್ಯವಿರುತ್ತದೆ.

ಬಳಕೆಯ ಸಮಯದಲ್ಲಿ ಬಾಟಲಿ ಸೋರಿಕೆಯಾಗದಂತೆ ಅಥವಾ ಹಾನಿಗೊಳಗಾಗದಂತೆ ನೋಡಿಕೊಳ್ಳುವ ಜೊತೆಗೆ, ಎಷ್ಟು ಪ್ರಮಾಣದ ಪ್ಲಾಸ್ಟಿಕ್ ಉಳಿಸಬಹುದು ಎಂಬುದನ್ನೂ ತಯಾರಕರು ಲೆಕ್ಕ ಹಾಕುತ್ತಾರೆ.

ಕೆಲವು ದುಬಾರಿ ನೀರಿನ ಬಾಟಲಿಗಳು ನುಣುಪಾಗಿರುತ್ತವೆ ಯಾಕೆ?

ಆಸಕ್ತಿದಾಯಕ ಸಂಗತಿಯೆಂದರೆ, ಎಲ್ಲಾ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮೇಲೂ ಉಬ್ಬು ಅಥವಾ ಗೆರೆಗಳು ಕಾಣಿಸುವುದಿಲ್ಲ. ಕೆಲವು ದುಬಾರಿ (ಪ್ರೀಮಿಯಂ) ಬ್ರ್ಯಾಂಡ್‌ಗಳ ನೀರಿನ ಬಾಟಲಿಗಳನ್ನು ಹಗುರವಾದ ಪ್ಲಾಸ್ಟಿಕ್‌ನಿಂದಲೇ ತಯಾರಿಸಿದ್ದರೂ, ಅವು ಯಾವುದೇ ಗೆರೆಗಳಿಲ್ಲದೆ ಸರಳ ಮತ್ತು ನುಣುಪಾದ ವಿನ್ಯಾಸವನ್ನು ಹೊಂದಿರುತ್ತವೆ. ಹಾಗೆಂದ ಮಾತ್ರಕ್ಕೆ ಈ ಬಾಟಲಿಗಳು ದುರ್ಬಲವಾಗಿರುತ್ತವೆ ಅಥವಾ ಇವುಗಳಿಗೆ ಹೆಚ್ಚು ಪ್ಲಾಸ್ಟಿಕ್ ಬಳಸಲಾಗಿದೆ ಎಂದರ್ಥವಲ್ಲ. ಅವುಗಳ ದೃಢತೆಯು ಬಳಸಿದ ಪ್ಲಾಸ್ಟಿಕ್‌ನ ಗುಣಮಟ್ಟ, ಅದರ ದಪ್ಪ, ಬಾಟಲಿಯ ಒಟ್ಟಾರೆ ಆಕಾರ ರೂಪಿಸಿರುವ ತಂತ್ರಜ್ಞಾನವನ್ನು ಅವಲಂಬಿಸಿರುತ್ತದ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com