Photo: Benoit Gougeon/Université de Montréal

ಖಗೋಳ ಶಾಸ್ತ್ರಜ್ಞರು ಭೂಮಿಯಿಂದ ಕೇವಲ 28 ಬೆಳಕಿನ ವರ್ಷಗಳ ದೂರದಲ್ಲಿರುವ ಅಸಾಮಾನ್ಯ ತ್ರಿವಳಿ ನಕ್ಷತ್ರ ವ್ಯವಸ್ಥೆಯನ್ನು ಗುರುತಿಸಿದ್ದಾರೆ!

ನಮಗೆ ಪರಿಚಿತವಾಗಿರುವುದು ಸೌರಮಂಡಲ ಮಾತ್ರ. ಸೂರ್ಯನೆಂಬ ಒಂದೇ ನಕ್ಷತ್ರದ ಸುತ್ತ ಸುತ್ತುವ ಎಂಟು ಗ್ರಹಗಳನ್ನು ಹೊಂದಿದೆ ನಮ್ಮ ಸೌರಮಂಡಲ. ಆದರೆ ಇಂತಹ ಬಹು-ನಕ್ಷತ್ರ ವ್ಯವಸ್ಥೆಗಳು (multiple star systems) ನಕ್ಷತ್ರಪುಂಜದಾದ್ಯಂತ ಸಾಮಾನ್ಯವಾಗಿವೆ. ಕೆಲವು ಕಡೆ ಮೂರು ನಕ್ಷತ್ರಗಳು ಒಂದಕ್ಕೊಂದು ಗುರುತ್ವಾಕರ್ಷಣೆಯ ಬಲದಿಂದ ಬಂಧಿಯಾಗಿ ಒಟ್ಟಿಗೆ ಸುತ್ತುತ್ತಿರುತ್ತವೆ. ಇದನ್ನು ತ್ರಿವಳಿ-ನಕ್ಷತ್ರ ವ್ಯವಸ್ಥೆ ಎನ್ನುತ್ತಾರೆ.

ಅನೇಕ ನಕ್ಷತ್ರಗಳು ಗುರುತ್ವಾಕರ್ಷಣೆಯಿಂದ ಬಂಧನಕ್ಕೆ ಒಳಗಾಗಿ ಜೋಡಿಯಾಗಿ ಅಥವಾ ದೊಡ್ಡ ಗುಂಪುಗಳಾಗಿ ಅಸ್ತಿತ್ವದಲ್ಲಿರುತ್ತವೆ. ಈ ನಕ್ಷತ್ರ ವ್ಯವಸ್ಥೆಗಳು ವಿವಿಧ ಆಕಾರ, ಗಾತ್ರ ಮತ್ತು ಸಂಯೋಜನೆಗಳಲ್ಲಿ ಕಂಡುಬರುತ್ತವೆ. ಸಣ್ಣ ಮತ್ತು ತಂಪಾದ ನಕ್ಷತ್ರಗಳಿಂದ ಸುತ್ತುವರಿದ ದೊಡ್ಡ ಬಿಸಿಯಾದ ನಕ್ಷತ್ರಗಳು, ಗ್ರಹಗಳಿಂದ ಸುತ್ತುವರಿದ ಜೋಡಿ ನಕ್ಷತ್ರಗಳು, ಮತ್ತು ಕ್ಷ-ಕಿರಣಗಳನ್ನು (X-rays) ಹೊರಸೂಸುವ ಜೋಡಿಗಳು. ಇಂತಹ ಜೋಡಿಗಳಲ್ಲಿ ಒಂದು ನಕ್ಷತ್ರವು ತನ್ನ ಮೂಲಧಾತುಗಳನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೊಂದು ನಕ್ಷತ್ರವು ಅವುಗಳನ್ನು ತನ್ನೊಳಗೆ ಸೆಳೆದುಕೊಂಡು ಕಬಳಿಸುತ್ತಿರುತ್ತದೆ.

ಒಂದು ಅತ್ಯುತ್ತಮ ಉದಾಹರಣೆಯೆಂದರೆ ಆಲ್ಫಾ ಸೆಂಟೌರಿ, ಇದು ಭೂಮಿಯಿಂದ ಸುಮಾರು 4.37 ಬೆಳಕಿನ ವರ್ಷಗಳ ಅಥವಾ ಜ್ಯೋತಿರ್ವರ್ಷದ ದೂರದಲ್ಲಿರುವ ತ್ರಿವಳಿ ನಕ್ಷತ್ರ ವ್ಯವಸ್ಥೆ. ಇದೀಗ ಖಗೋಳ ಶಾಸ್ತ್ರಜ್ಞರು ಭೂಮಿಯಿಂದ ಕೇವಲ 28 ಬೆಳಕಿನ ವರ್ಷಗಳ ದೂರದಲ್ಲಿರುವ ಮತ್ತೊಂದು ಅಸಾಮಾನ್ಯ ತ್ರಿವಳಿ ನಕ್ಷತ್ರ ವ್ಯವಸ್ಥೆಯನ್ನು ಗುರುತಿಸಿದ್ದಾರೆ.

ಬೆಳಕಿನ ವರ್ಷ ಎಂದರೆ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ. ಬ್ರಹ್ಮಾಂಡದ ವಿಸ್ತಾರಕ್ಕೆ ಹೋಲಿಸಿದರೆ 28 ಬೆಳಕಿನ ವರ್ಷಗಳು ಎಂದರೆ ನಮ್ಮ ಭೂಮಿಗೆ ಬಹಳ ಹತ್ತಿರದಲ್ಲಿದೆ ಎಂದರ್ಥ.

ಈ ಅಸಾಮಾನ್ಯ ತ್ರಿವಳಿ ನಕ್ಷತ್ರಗಳ ಗುಂಪಿಗೆ ವಿಜ್ಞಾನಿಗಳು ವೆಲೊಪೋʻಐ ಎಂದು ಹೆಸರಿಟ್ಟಿದ್ದಾರೆ. ಅಂದರೆ, ಎರಡು ಸತ್ತ ನಕ್ಷತ್ರಗಳ ಅವಶೇಷಗಳು (ಬಿಳಿ ಕುಬ್ಜಗಳು) ಮತ್ತು ಒಂದು ಸಣ್ಣ ಜೀವಂತ ನಕ್ಷತ್ರ (ಕೆಂಪು ಕುಬ್ಜ) ಒಟ್ಟಿಗೆ ಸುತ್ತುತ್ತಿರುವ ಅಪರೂಪದ ವ್ಯವಸ್ಥೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ಕೆಂಪು ಕುಬ್ಜ ನಕ್ಷತ್ರ ಗಾತ್ರದಲ್ಲಿ ಚಿಕ್ಕದಾದ, ಕಡಿಮೆ ತಾಪಮಾನ ಮತ್ತು ಮಂದವಾದ ಬೆಳಕನ್ನು ಹೊಂದಿರುವ ನಕ್ಷತ್ರಗಳಾಗಿದ್ದು, ದೀರ್ಘಕಾಲ ಬದುಕುತ್ತವೆ. ಬಿಳಿ ಕುಬ್ಜ ನಕ್ಷತ್ರಗಳು ತಮ್ಮ ಜೀವಿತಾವಧಿಯ ಕೊನೆಯಲ್ಲಿ ಇಂಧನ ಕಳೆದುಕೊಂಡು ಕುಗ್ಗಿದಾಗ ಉಳಿಯುವ ಅತ್ಯಂತ ಸಾಂದ್ರವಾದ ಅವಶೇಷಗಳಾಗಿವೆ.

ಮಾಂಟ್ರಿಯಲ್ ವಿಶ್ವವಿದ್ಯಾಲಯದ ಟ್ರಾಟಿಯರ್ ಇನ್ಸ್ಟಿಟ್ಯೂಟ್ ಫಾರ್ ರೀಸರ್ಚ್ ಆನ್ ಎಕ್ಸೋಪ್ಲಾನೆಟ್ಸ್ನ ಸಂಶೋಧಕರು ಕೆಂಪು ಕುಬ್ಜವನ್ನು ಸುತ್ತುವ ಗ್ರಹಗಳನ್ನು ಹುಡುಕುತ್ತಿದ್ದಾಗ ಈ ವೆಲೊಪೋʻಐ ಅನ್ನು ಪತ್ತೆ ಮಾಡಿದ್ದಾರೆ. ಕೆಂಪು ಕುಬ್ಜ ಮತ್ತು ಬಿಳಿ ಕುಬ್ಜದ ಬಗ್ಗೆ ಈಗಾಗಲೇ ತಿಳಿದಿದ್ದರು ಹೆಚ್ಚಿನ ಅವಲೋಕನಗಳು ಎರಡನೇ, ಹಿಂದೆ ಪತ್ತೆಯಾಗದ, ಬಿಳಿ ಕುಬ್ಜವನ್ನು ಬಹಿರಂಗಪಡಿಸಿವೆ.

“ವಾಸ್ತವದಲ್ಲಿ ನಕ್ಷತ್ರಗಳಿಗೆ ಸುತ್ತುವ ಗ್ರಹಗಳನ್ನು ಹುಡುಕುತ್ತಿದ್ದೆವು. ಬದಲಾಗಿ ಆಶ್ಚರ್ಯಕರ ಅಂಶ ಕಂಡುಬಂತು. ನಮ್ಮ ಸೌರವ್ಯೂಹದಿಂದ ಕೇವಲ 28 ಬೆಳಕಿನ ವರ್ಷಗಳ ದೂರದಲ್ಲಿ ತ್ರಿವಳಿ-ನಕ್ಷತ್ರ ವ್ಯವಸ್ಥೆ ಪತ್ತೆಯಾಗಿದೆ. ಕನಿಷ್ಠ 100 ಬೆಳಕಿನ ವರ್ಷಗಳ ಒಳಗೆ ಯಾವುದೇ ರೀತಿಯ ಇಂತಹ ವ್ಯವಸ್ಥೆಗಳಿಲ್ಲ” ಎಂದು ಸಂಶೋಧಕರು ಹೇಳಿದ್ದಾರೆ.

ಇಂತಹ ವ್ಯವಸ್ಥೆ ಅಸ್ತಿತ್ವದಲ್ಲಿ ಇರಬಾರದು ಎನ್ನುವುದೇ ಬೆರಗುಗೊಳಿಸುವ ಸಂಗತಿಯಾಗಿದೆ. ಬಿಳಿ ಕುಬ್ಜಗಳಳಲ್ಲಿ ಪರಿಣತಿ ಹೋಂದಿರುವ ಸಂಶೋಧಕರೊಬ್ಬರ ಪ್ರಕಾರ, ಅದು ಹೇಗೆ ಬಂತು ಎಂಬುದಕ್ಕೆ ಸ್ಪಷ್ಟ ವಿವರಣೆಗಳಿಲ್ಲ. ಇದರ ಹಿಂದಿನ ರಹಸ್ಯ ಅರ್ಥ ಮಾಡಿಕೊಳ್ಳಲು ಖಗೋಳಶಾಸ್ತ್ರಜ್ಞರು ಮೂರು ನಕ್ಷತ್ರಗಳ ಇತಿಹಾಸವನ್ನು ಕಂಡುಹಿಡಿಯಬೇಕಾಗುತ್ತದೆ.

ನಮ್ಮ ಸೂರ್ಯನಿಗೆ ಹೋಲುವ ದ್ರವ್ಯರಾಶಿಯ ನಕ್ಷತ್ರವು ತನ್ನ ಜೀವಿತಾವಧಿಯ ಅಂತ್ಯವನ್ನು ತಲುಪಿದಾಗ ಬಿಳಿ ಕುಬ್ಜ ಉಳಿಯುತ್ತದೆ. ನಕ್ಷತ್ರದ ಹೊರಪದರಗಳು ಉದುರಿ ಹೋಗುತ್ತವೆ ಮತ್ತು ಅವು ಬಾಹ್ಯಾಕಾಶದಲ್ಲಿ ಹರಡುತ್ತವೆ. ಆದರೆ ಅದರ ಮೂಲ (core) ಅಂಶವು ಭೂಮಿಗೆ ಹೋಲುವ ವ್ಯಾಸವನ್ನು ಹೊಂದಿರುವ ಆದರೆ ಸಾಮಾನ್ಯವಾಗಿ ಸೌರ ದ್ರವ್ಯರಾಶಿಯ ಅರ್ಧ ಮತ್ತು ಮೂರನೇ ಎರಡರಷ್ಟು ದ್ರವ್ಯರಾಶಿಯನ್ನು ಹೊಂದಿರುವ ಜಡ ಬಿಳಿ ಕುಬ್ಜವಾಗಿ ಪರಿಣಮಿಸುತ್ತದೆ.

ಹೀಗಾಗಿ ವೆಲೋಪೋ'ಐ ವ್ಯವಸ್ಥೆಯು ಒಂದು ಕಾಲದಲ್ಲಿ ಎರಡು ಸೂರ್ಯನಂತಹ ನಕ್ಷತ್ರಗಳು ಮತ್ತು ಕೆಂಪು ಕುಬ್ಜವನ್ನು ಹೊಂದಿರುವ ತ್ರಿವಳಿ-ನಕ್ಷತ್ರ ವ್ಯವಸ್ಥೆಯಾಗಿತ್ತು. ಎರಡು ಸೂರ್ಯನಂತಹ ನಕ್ಷತ್ರಗಳು ‘ನಕ್ಷತ್ರ ಸಾವಿಗೆ’ ಒಳಗಾಗಿವೆ. ಆದರೆ ಅವುಗಳ ಒಡನಾಡಿ ಕೆಂಪು ಕುಬ್ಜವು ಕಾಲಹರಣ ಮಾಡುತ್ತಲೇ ಇದೆ. ಏಕೆಂದರೆ ಅದರ ಕಡಿಮೆ ದ್ರವ್ಯರಾಶಿಯು ಅದರ ಕೋರ್ ಹೈಡ್ರೋಜನ್ ಅನ್ನು ಬೇಗನೆ ಬಳಸುವುದಿಲ್ಲವಾದ್ದರಿಂದ ಅದಕ್ಕೆ ದೀರ್ಘಾವಧಿಯ ಜೀವಿತಾವಧಿ ನೀಡಿದೆ.

ಸಂಶೋಧಕರ ಪ್ರಕಾರ ಬಿಳಿ ಕುಬ್ಜವು ಎಷ್ಟು ಬೃಹತ್ ಪ್ರಮಾಣದಲ್ಲಿರಬೇಕು ಎಂಬುದನ್ನು ನಿರ್ದೇಶಿಸುವ ನಕ್ಷತ್ರ ವಿಕಾಸದ ಬಗ್ಗೆ ವೆಲೋಪೋ'ಐ ಕೆಲವು ಅಮೂಲ್ಯವಾದ ಒಳನೋಟಗಳನ್ನು ನೀಡಬಹುದು.

ಕೃಪೆ: ಇಂಡಿಯನ್ ಎಕ್ಸ್ಪ್ರೆಸ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.