ಸಾಂದರ್ಭಿಕ ಚಿತ್ರ (AI Imagined)

ದಿಲ್ಲಿಯ ನಾಲ್ಕು ಸರ್ಕಾರಿ ಆಸ್ಪತ್ರೆಗಳ ಪೈಕಿ ಮೂರರಲ್ಲಿ (ಸಫ್ದರ್‌ಜಂಗ್ ಆಸ್ಪತ್ರೆ ಹೊರತುಪಡಿಸಿ) ಕಳೆದ ಆರೂವರೆ ವರ್ಷಗಳ ಅವಧಿಯಲ್ಲಿ 6,500ಕ್ಕೂ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, ಸರಾಸರಿ ಪ್ರತಿ ಮೂರು ದಿನಕ್ಕೊಬ್ಬ ರೋಗಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಹಕ್ಕು (RTI) ಕಾಯ್ದೆಯಡಿ ಪಡೆದ ಅಂಕಿಅಂಶಗಳನ್ನು ಉಲ್ಲೇಖಿಸಿ PTI ವರದಿ ಮಾಡಿದೆ.

ರಾಷ್ಟ್ರ ಮಟ್ಟದಲ್ಲೂ ಈ ಕಾಯಿಲೆಯ ತೀವ್ರತೆ ಅಷ್ಟೇ ಆತಂಕಕಾರಿಯಾಗಿದೆ. 'ಗ್ಲೋಬೋಕ್ಯಾನ್ 2024' (Globocan 2024) ಅಂದಾಜಿನ ಪ್ರಕಾರ, ಆ ವರ್ಷ ಭಾರತದಲ್ಲಿ 1,12,659 ಹೊಸ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, ಇದು ದೇಶದ ಮೂರನೇ ಅತಿ ಸಾಮಾನ್ಯ ಕ್ಯಾನ್ಸರ್ ಎನಿಸಿಕೊಂಡಿದೆ. ಅಲ್ಲದೆ, ಈ ಕಾಯಿಲೆಯಿಂದ 98,687 ಮಂದಿ ಮೃತಪಟ್ಟಿದ್ದು, ಎಲ್ಲಾ ರೀತಿಯ ಕ್ಯಾನ್ಸರ್‌ಗಳ ಪೈಕಿ ಅತಿ ಹೆಚ್ಚು ಸಾವುಗಳಿಗೆ ಕಾರಣವಾಗುವ ಮೂಲಕ ಮೊದಲ ಸ್ಥಾನದಲ್ಲಿದೆ.

'ಪಿಟಿಐ ಭಾಷಾ' ಸಲ್ಲಿಸಿದ್ದ ಪ್ರತ್ಯೇಕ ಆರ್‌ಟಿಐ ಅರ್ಜಿಗಳಿಗೆ ದೊರೆತ ಉತ್ತರದ ಪ್ರಕಾರ, ನಾಲ್ಕು ಆಸ್ಪತ್ರೆಗಳ ಪೈಕಿ ಮೂರು ಆಸ್ಪತ್ರೆಗಳಲ್ಲಿ (ಸಫ್ದರ್‌ಜಂಗ್ ಹೊರತುಪಡಿಸಿ) ಒಟ್ಟು 6,581 ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು, ಇದು ತಿಂಗಳಿಗೆ ಸರಾಸರಿ 83 ಪ್ರಕರಣಗಳಷ್ಟಾಗುತ್ತದೆ. ನಾಲ್ಕೂ ಆಸ್ಪತ್ರೆಗಳಲ್ಲಿ ಒಟ್ಟು 913 ಸಾವುಗಳು ಸಂಭವಿಸಿದ್ದು, ಅಂದರೆ ಪ್ರತಿ ಮೂರು ದಿನಕ್ಕೊಬ್ಬ ರೋಗಿ ಪ್ರಾಣ ಕಳೆದುಕೊಂಡಿದ್ದಾರೆ.

ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟಿ 'ತೀವ್ರ' ಹಂತಕ್ಕೆ ಕುಸಿಯುತ್ತಿರುವ ಬೆನ್ನಲ್ಲೇ ಈ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

2020ರ ಜನವರಿ 1 ರಿಂದ 2026ರ ಜುಲೈ 31ರವರೆಗೆ ದಾಖಲಾದ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಮತ್ತು ಅದರಿಂದ ಸಂಭವಿಸಿದ ಸಾವುಗಳ ಕುರಿತು ಏಮ್ಸ್ (AIIMS), ಆರ್‌ಎಂಎಲ್ (RML) ಆಸ್ಪತ್ರೆ, ಸಫ್ದರ್‌ಜಂಗ್ ಆಸ್ಪತ್ರೆ ಹಾಗೂ ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯಿಂದ (DSCI) 'ಪಿಟಿಐ ಭಾಷಾ' ಆರ್‌ಟಿಐ ಮೂಲಕ ಮಾಹಿತಿ ಕೋರಿತ್ತು.

ಸಫ್ದರ್‌ಜಂಗ್ ಆಸ್ಪತ್ರೆಯು ಶ್ವಾಸಕೋಶದ ಕ್ಯಾನ್ಸರ್‌ನಿಂದ ಮೃತಪಟ್ಟವರ ಸಂಖ್ಯೆಯನ್ನು ಮಾತ್ರ ನೀಡಿದ್ದು, ಒಟ್ಟು ಪ್ರಕರಣಗಳ ವಿವರಗಳನ್ನು ಬಹಿರಂಗಪಡಿಸಿಲ್ಲ.

ಆಸ್ಪತ್ರೆಗಳು ನೀಡಿರುವ ಮಾಹಿತಿಯ ಪ್ರಕಾರ, ಅತಿ ಹೆಚ್ಚು ಪ್ರಕರಣಗಳು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ದಾಖಲಾಗಿವೆ.

2020ರ ಜನವರಿಯಿಂದ 2026ರ ಮಾರ್ಚ್‌ವರೆಗಿನ ಅವಧಿಯ ಅಂಕಿಅಂಶಗಳನ್ನು ಏಮ್ಸ್ ಒದಗಿಸಿದ್ದು, ಈ ಸಮಯದಲ್ಲಿ 4,860 ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ನೋಂದಣಿಯಾಗಿವೆ ಮತ್ತು 158 ಸಾವುಗಳು ಸಂಭವಿಸಿವೆ. ಅಂದರೆ ತಿಂಗಳಿಗೆ ಸರಾಸರಿ 65 ಪ್ರಕರಣಗಳು ದಾಖಲಾಗಿದ್ದು, ಪ್ರತಿ ತಿಂಗಳು ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ.

ಅದೇ ರೀತಿ, ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆ (DSCI) ನೀಡಿರುವ ಮಾಹಿತಿಯಂತೆ, 2020ರ ಜನವರಿ 1 ರಿಂದ 2026ರ ಜುಲೈವರೆಗೆ 1,613 ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 354 ಮಂದಿ ಮೃತಪಟ್ಟಿದ್ದು, ತಿಂಗಳಿಗೆ ಸರಾಸರಿ 20 ಪ್ರಕರಣಗಳು ದಾಖಲಾದಂತಾಗಿದೆ. 2021ರಲ್ಲಿ ಇಬ್ಬರು ಮಕ್ಕಳಲ್ಲೂ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೆ, ಈ ಆರೂವರೆ ವರ್ಷಗಳ ಅವಧಿಯಲ್ಲಿ 351 ಮಹಿಳೆಯರಿಗೆ ಈ ಕಾಯಿಲೆ ಇರುವುದು ದೃಢಪಟ್ಟಿದೆ.

ದೀರ್ಘಕಾಲದವರೆಗೆ ವಾಯುಮಾಲಿನ್ಯಕ್ಕೆ ತೆರೆದುಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವಾರ್ಷಿಕ ಸರಾಸರಿ 197 µg/m³ ಸೂಕ್ಷ್ಮ ಧೂಳಿನ ಕಣಗಳ (PM) ಸಾಂದ್ರತೆಯನ್ನು ಹೊಂದಿರುವ ದಿಲ್ಲಿ ಭಾರತದ ಅತ್ಯಂತ ಕಲುಷಿತ ನಗರವಾಗಿದೆ.

ಆರ್‌ಎಂಎಲ್ ಆಸ್ಪತ್ರೆಯಲ್ಲೂ ಮಹಿಳೆಯರಲ್ಲಿ ಪ್ರಕರಣ ಪತ್ತೆ:

ಈ ಅವಧಿಯಲ್ಲಿ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯಲ್ಲಿ 47 ಮಹಿಳೆಯರು ಸೇರಿದಂತೆ ಒಟ್ಟು 108 ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯ (DSCI) ಹಿರಿಯ ವೈದ್ಯರೊಬ್ಬರು ಪಿಟಿಐ ಜೊತೆ ಮಾತನಾಡಿ, "ಆಸ್ಪತ್ರೆಯಲ್ಲಿ ಕೇವಲ ದಿಲ್ಲಿಯವರು ಮಾತ್ರವಲ್ಲದೆ ಉತ್ತರ ಪ್ರದೇಶ, ಹರ್ಯಾಣ, ಬಿಹಾರ ಮತ್ತು ನೇಪಾಳದಿಂದ ಬರುವ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.

ಧೂಮಪಾನವೇ ಪ್ರಮುಖ ಅಪಾಯಕಾರಿ ಅಂಶ:

ದಿಲ್ಲಿಯ ಕಲುಷಿತ ಗಾಳಿಯು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದಾದರೂ, ಅದೊಂದನ್ನೇ ಈ ಕಾಯಿಲೆಗೆ ಏಕೈಕ ಕಾರಣವೆಂದು ಪರಿಗಣಿಸಬಾರದು ಎಂದು ವೈದ್ಯರು ಹೇಳುತ್ತಾರೆ. ಧೂಮಪಾನ ಮತ್ತು ತಂಬಾಕು ಹೊಗೆಗೆ ಒಡ್ಡಿಕೊಳ್ಳುವುದು ಈಗಲೂ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ. ಜತೆಗೆ ಆನುವಂಶಿಕ ಬದಲಾವಣೆಗಳೂ (Genetic mutations) ಇದಕ್ಕೆ ಕಾರಣವಾಗಬಹುದು. ಧೂಮಪಾನ ಮಾಡದ ಮಹಿಳೆಯರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಆನುವಂಶಿಕ ಅಂಶಗಳು ಮತ್ತು ವಾಯುಮಾಲಿನ್ಯ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಡಿಎಸ್‌ಸಿಐ ವೈದ್ಯರು ಗಮನಸೆಳೆದಿದ್ದಾರೆ.

ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ತೀವ್ರವಾದ ಹಂತಕ್ಕೆ ತಲುಪಿದ ನಂತರವೇ ಪತ್ತೆಯಾಗುತ್ತಿರುವುದು ಮತ್ತೊಂದು ಆತಂಕದ ಸಂಗತಿಯಾಗಿದೆ. ಕಾಯಿಲೆ ತಡವಾಗಿ ಪತ್ತೆಯಾದಾಗ ಚಿಕಿತ್ಸೆ ಕಷ್ಟಕರವಾಗುತ್ತದೆ ಮತ್ತು ಅದನ್ನು ನಿಯಂತ್ರಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಶ್ವಾಸಕೋಶದ ಕ್ಯಾನ್ಸರ್‌ ಆರಂಭಿಕ ಲಕ್ಷಣಗಳೇನು?

ಆರಂಭಿಕ ಹಂತಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸ್ಪಷ್ಟ ಲಕ್ಷಣಗಳನ್ನು ತೋರಿಸದಿರಬಹುದು. ನಿರಂತರ ಕೆಮ್ಮು, ಕೆಮ್ಮಿನೊಂದಿಗೆ ರಕ್ತ ಬರುವುದು, ಉಸಿರಾಟದ ತೊಂದರೆ, ಎದೆ ನೋವು, ಧ್ವನಿಯಲ್ಲಿ ಬದಲಾವಣೆ, ಕಾರಣವಿಲ್ಲದೆ ತೂಕ ಇಳಿಕೆಯಾಗುವುದು ಮತ್ತು ಪದೇ ಪದೇ ಎದೆಯ ಸೋಂಕು ಕಾಣಿಸಿಕೊಳ್ಳುವುದು ಇದರ ಸಂಭವನೀಯ ಎಚ್ಚರಿಕೆಯ ಚಿಹ್ನೆಗಳಾಗಿವೆ.

ದಿಲ್ಲಿಯ ವಿಷಕಾರಿ ಗಾಳಿ ಕ್ಯಾನ್ಸರ್ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?

ದಿಲ್ಲಿಯ ತೀವ್ರ ವಾಯುಮಾಲಿನ್ಯವು ದೊಡ್ಡ ಆತಂಕಕಾರಿ ವಿಷಯವಾಗಿದೆ. ಏಕೆಂದರೆ ಜನರು ದೀರ್ಘಕಾಲದವರೆಗೆ, ವಿಶೇಷವಾಗಿ ಮಾಲಿನ್ಯದ ಮಟ್ಟ ತೀವ್ರವಾಗಿ ಏರಿಕೆಯಾಗುವ ಚಳಿಗಾಲದ ತಿಂಗಳುಗಳಲ್ಲಿ ಕಲುಷಿತ ಗಾಳಿಯನ್ನು ಉಸಿರಾಡಬೇಕಾಗುತ್ತದೆ. ದೀರ್ಘಕಾಲದವರೆಗೆ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಆದರೆ ಮಾಲಿನ್ಯಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಈ ಕಾಯಿಲೆ ಬರುತ್ತದೆ ಎಂದರ್ಥವಲ್ಲ.

ಅಪೋಲೋ ಅಥೀನಾ ಮಹಿಳಾ ಕ್ಯಾನ್ಸರ್ ಕೇಂದ್ರದ ಹಿರಿಯ ತಜ್ಞೆ ಡಾ. ಗೀತಾ ಕಡಯಪ್ರತ್ ಪಿಟಿಐ ಜೊತೆ ಮಾತನಾಡಿ, ದಿಲ್ಲಿಯಂತಹ ನಗರಗಳಲ್ಲಿ ಸಾಮಾನ್ಯವಾಗಿರುವ ಕಲುಷಿತ ಗಾಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಭಾಗವಾಗಿರುವ 'ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ' (IARC), ಹೊರಾಂಗಣ ವಾಯುಮಾಲಿನ್ಯ ಮತ್ತು ಸೂಕ್ಷ್ಮ ಧೂಳಿನ ಕಣಗಳನ್ನು ಮನುಷ್ಯರಲ್ಲಿ ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಕಲುಷಿತ ಗಾಳಿಯಲ್ಲಿರುವ 'ಪಿಎಂ 2.5' (PM2.5) ಎಂಬ ಅತಿ ಸೂಕ್ಷ್ಮ ಕಣಗಳು ಅತ್ಯಂತ ಅಪಾಯಕಾರಿಯಾಗಿವೆ. ಈ ಕಣಗಳು ತೀರಾ ಚಿಕ್ಕದಾಗಿರುವುದರಿಂದ ಉಸಿರಾಟದ ವ್ಯವಸ್ಥೆಯ ಆಳಕ್ಕೆ ಇಳಿದು ಶ್ವಾಸಕೋಶವನ್ನು ತಲುಪುತ್ತವೆ. ಪದೇ ಪದೇ ಮತ್ತು ದೀರ್ಘಕಾಲದವರೆಗೆ ಇವುಗಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದಲ್ಲಿ ಉರಿಯೂತ ಮತ್ತು ಜೀವಕೋಶಗಳಿಗೆ ಹಾನಿಯಾಗಿ, ಕಾಲಾನಂತರದಲ್ಲಿ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು.

ಧೂಮಪಾನ ನಿಯಂತ್ರಣವನ್ನೂ ಮೀರಿದ ಮುನ್ನೆಚ್ಚರಿಕೆ ಅಗತ್ಯ

ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಪತ್ತೆಹಚ್ಚುವಿಕೆಗೆ ಭಾರತವು ಕೇವಲ ತಂಬಾಕು ನಿಯಂತ್ರಣಕ್ಕೆ ಸೀಮಿತವಾಗದೆ, ವಿಸ್ತೃತವಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾಯುಮಾಲಿನ್ಯ, ವೃತ್ತಿಪರ ಕೆಲಸದ ಸ್ಥಳಗಳಲ್ಲಿನ ವಿಷಕಾರಿ ಅಂಶಗಳಿಗೆ ತೆರೆದುಕೊಳ್ಳುವುದು, ಒಳಾಂಗಣ ಗಾಳಿಯ ಗುಣಮಟ್ಟ ಹಾಗೂ ದೀರ್ಘಕಾಲದ ರೋಗಲಕ್ಷಣಗಳ ಆರಂಭಿಕ ತಪಾಸಣೆಯನ್ನೂ ಇದರಲ್ಲಿ ಒಳಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Molecular testing ಮತ್ತೊಂದು ಪ್ರಮುಖ ಕೊರತೆಯಾಗಿದೆ. ಭಾರತದ ಗಣನೀಯ ಪ್ರಮಾಣದ ರೋಗಿಗಳಲ್ಲಿ ಇಜಿಎಫ್‌ಆರ್ (EGFR) ಮತ್ತು ಎಎಲ್‌ಕೆ (ALK) ನಂತಹ ಚಿಕಿತ್ಸೆಗೆ ಸ್ಪಂದಿಸಬಲ್ಲ ಆನುವಂಶಿಕ ಬದಲಾವಣೆಗಳು ಕಂಡುಬರುತ್ತವೆ. ಇದು ಅವರನ್ನು ನಿರ್ದಿಷ್ಟ ಗುರಿಯ ಚಿಕಿತ್ಸೆಗಳಿಗೆ (Targeted therapies) ಅರ್ಹರನ್ನಾಗಿಸುತ್ತದೆ. ಆದರೆ, ಪರೀಕ್ಷೆ ಮತ್ತು ಚಿಕಿತ್ಸೆಯ ವೆಚ್ಚವು ಈಗಲೂ ಅನೇಕರಿಗೆ ಕೈಗೆಟುಕದಂತಿದೆ.

ಶ್ವಾಸಕೋಶದ ಕ್ಯಾನ್ಸರ್ ದಾಖಲಾತಿ ವ್ಯವಸ್ಥೆ (Registry), ಭಾರತೀಯ ಜನಸಂಖ್ಯೆಗೆ ತಕ್ಕಂತೆ ಅಪಾಯ ಆಧಾರಿತ ತಪಾಸಣಾ ಮಾದರಿಗಳು, ನಿರಂತರ ಉಸಿರಾಟದ ತೊಂದರೆಗಳಿಗೆ ಸ್ಪಷ್ಟವಾದ ಚಿಕಿತ್ಸಾ ಮಾರ್ಗಸೂಚಿಗಳು ಹಾಗೂ ಕೈಗೆಟುಕುವ ದರದಲ್ಲಿ ರೋಗನಿರ್ಣಯ ಮತ್ತು ಔಷಧಿಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಡಾ. ರೋಹಟ್ಗಿ ಒತ್ತಾಯಿಸಿರುವುದಾಗಿ ʼಇಂಡಿಯಾ ಟುಡೇʼ ವರದಿ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com