ವಂದೇ ಭಾರತ್ ಸ್ಲೀಪರ್ ಪ್ರಯಾಣಿಕರಿಗೆ ʼತತ್ಕಾಲ್ ಬುಕಿಂಗ್ʼ ರದ್ದು ಮಾಡಲು ಕಾರಣವೇನು?
ಸಾಂದರ್ಭಿಕ ಚಿತ್ರ (Photo: PTI)
ಭಾರತೀಯ ರೈಲ್ವೆಯು ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲುಗಳಲ್ಲಿ ತತ್ಕಾಲ್ ಕೋಟಾವನ್ನು ಕೈಬಿಟ್ಟಿದೆ. ಎಲ್ಲಾ ಬರ್ತ್ ಗಳನ್ನು ಸಾಮಾನ್ಯ ಮುಂಗಡ ಕಾಯ್ದಿರಿಸುವಿಕೆ ಕೋಟಾದ ಅಡಿಯಲ್ಲಿ ಲಭ್ಯವಾಗಿಸಿದೆ. ಆರ್ಎಸಿ (RAC), ವೈಟಿಂಗ್ ಲಿಸ್ಟ್ (waitlisted) ಅಥವಾ ಭಾಗಶಃ ದೃಢೀಕರಿಸಿದ (partially confirmed) ಟಿಕೆಟ್ಗಳನ್ನು ಹೊಂದಿರುವ ಪ್ರಯಾಣಿಕರಿಗೆ ರೈಲು ಹತ್ತುವ ಅವಕಾಶವಿರುವುದಿಲ್ಲ. ಟಿಕೆಟ್ ರದ್ದುಗೊಳಿಸುವ ಸಮಯವನ್ನು ಆಧರಿಸಿ, ಟಿಕೆಟ್ ದರದ ಶೇ 25 ರಿಂದ ಶೇ 100ರವರೆಗೆ ರದ್ದತಿ ಶುಲ್ಕವನ್ನು ರೈಲ್ವೆ ಮಂಡಳಿಯು ನಿಗದಿಪಡಿಸಿದೆ.
ಪ್ರಸ್ತುತ, ದೇಶಾದ್ಯಂತ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲುಗಳ ಮೂರು ಜೋಡಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹೌರಾ-ಕಾಮಾಖ್ಯ-ಹೌರಾ ಸೇವೆ (27575/27576), ವಾರಣಾಸಿ-ಹೊಸದಿಲ್ಲಿ-ವಾರಣಾಸಿ ಸೇವೆ (27421/27422) ಮತ್ತು ಎಸ್ಎಮ್ವಿಟಿ (SMVT) ಬೆಂಗಳೂರು-ಸಿಎಸ್ಎಂಟಿ (CSMT) ಮುಂಬೈ-ಎಸ್ಎಮ್ವಿಟಿ ಬೆಂಗಳೂರು ಸೇವೆ (27651/27652) ಸೇರಿವೆ.
ಇಲ್ಲಿ ಗಮನಿಸಬೇಕಾದುದೆಂದರೆ, ರೈಲುಗಳನ್ನು ಓಡಿಸುವ ವೆಚ್ಚ ತುಂಬಾ ಹೆಚ್ಚಿದ್ದರೂ, ಭಾರತೀಯ ರೈಲ್ವೆಯು ಪ್ರಯಾಣಿಕರ ದರಗಳನ್ನು ದಶಕಗಳಿಂದಲೂ ಕೈಗೆಟಕುವ ಮಟ್ಟದಲ್ಲೇ ಇರಿಸಿಕೊಂಡು ಬಂದಿದೆ. ಉದಾಹರಣೆಗೆ, 2024-25ನೇ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸೇವೆಗಳು ಮತ್ತು ಇತರ ಕೋಚಿಂಗ್ ಸೇವೆಗಳಿಂದ 63,721 ರೂ. ಕೋಟಿಗಳಷ್ಟು ಆಪರೇಷನಲ್ ನಷ್ಟ ಉಂಟಾಗಿದೆ. ಅದೇ ಸಮಯದಲ್ಲಿ ಸರಕು ಸಾಗಣೆ ಸೇವೆಗಳು 50,505 ರೂ. ಕೋಟಿಗಳಷ್ಟು ಕಾರ್ಯಾಚರಣಾ ಲಾಭವನ್ನು ಗಳಿಸಿವೆ.
ಹೀಗಾಗಿ, ಸರಕು ಸಾಗಣೆಯಿಂದ ಬರುವ ಲಾಭವನ್ನು ಪ್ರಯಾಣಿಕರ ಸಾಗಣೆಯಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಸರ್ಕಾರ ಬಳಸುತ್ತದೆ. ಭಾರತೀಯ ರೈಲ್ವೆಯು ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲುಗಳಲ್ಲಿ ತತ್ಕಾಲ್ ಕೋಟಾವನ್ನು ಕೈಬಿಟ್ಟಿದೆ. ಎಲ್ಲಾ ಬರ್ತ್ಗಳನ್ನು ಸಾಮಾನ್ಯ ಮುಂಗಡ ಕಾಯ್ದಿರಿಸುವಿಕೆ ಕೋಟಾದ ಅಡಿಯಲ್ಲಿ ಲಭ್ಯವಾಗಿಸಿದೆ. ಅಲ್ಲದೆ ಈ ಸೇವೆಯಲ್ಲಿ 'ಆರ್ಎಸಿ' (RAC - Reservation Against Cancellation) ಸೌಲಭ್ಯವನ್ನೂ ತೆಗೆದು ಹಾಕಲಾಗಿದೆ.
ಹಾಗಿದ್ದರೆ, ಪ್ರಯಾಣಿಕರ ಸೇವೆಗಳು ಈಗಾಗಲೇ ನಷ್ಟದಲ್ಲಿರುವಾಗ ಕೊನೆ ಕ್ಷಣದಲ್ಲಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಂದ ಹೆಚ್ಚಿನ ಶುಲ್ಕ ವಿಧಿಸುವ ಅವಕಾಶವನ್ನು ಭಾರತೀಯ ರೈಲ್ವೆ ಏಕೆ ಕೈಬಿಡಬೇಕು? ಏಕೆಂದರೆ ‘ತತ್ಕಾಲ್’ ಟಿಕೆಟ್ಗಳು ಹೆಚ್ಚುವರಿ ಆದಾಯ ತಂದುಕೊಡುತ್ತವೆ. ಅಲ್ಲದೆ, ಪ್ರಯಾಣಿಕರು ಹೆಚ್ಚಿನ ಹಣ ಪಾವತಿಸಲು ಸಿದ್ಧರಿರಬಹುದಾದ ಸೇವೆ ಯಾವುದಾದರೂ ಇದ್ದರೆ ಅದು ಖಂಡಿತವಾಗಿಯೂ ಆಧುನಿಕ, ಹವಾನಿಯಂತ್ರಿತ ರಾತ್ರಿ ರೈಲು ಪ್ರಯಾಣವೇ ಆಗಿರಬೇಕು, ಅಲ್ಲವೆ?
ʼಫಿನ್ಶಾಟ್ʼ ವರದಿ ಮಾಡಿರುವ ಪ್ರಕಾರ, ಭಾರತೀಯ ರೈಲ್ವೆ ತನ್ನ ಪ್ರೀಮಿಯಂ ರೈಲುಗಳಲ್ಲಿ ಇಂತಹ ಡೈನಾಮಿಕ್ ಪ್ರೈಸಿಂಗ್ (ಬೇಡಿಕೆಗೆ ಅನುಗುಣವಾಗಿ ದರ ಬದಲಿಸುವ ಪದ್ಧತಿ) ಮೂಲಕ ಹೆಚ್ಚಿನ ಆದಾಯ ಗಳಿಸಲು ಈ ಹಿಂದೆ ಪ್ರಯತ್ನಿಸಿದಾಗ ಏನಾಯಿತು ಎಂಬುದನ್ನು ಗಮನಿಸಿದರೆ ಇದಕ್ಕೆ ಉತ್ತರ ಸ್ಪಷ್ಟವಾಗುತ್ತದೆ. ಇಲ್ಲಿ ಎರಡು ವ್ಯವಸ್ಥೆಗಳ ನಡುವಿನ ವ್ಯತ್ಯಾಸ ಅರಿಯುವುದು ಮುಖ್ಯ.
ಮೊದಲನೆಯದು ತತ್ಕಾಲ್ ಎನ್ನುವುದು ರೈಲು ಹೊರಡುವ ಸ್ವಲ್ಪ ಸಮಯದ ಮೊದಲು ಲಭ್ಯವಾಗುವ ಪ್ರತ್ಯೇಕ ಮುಂಗಡ ಕಾಯ್ದಿರಿಸುವಿಕೆ ಕೋಟಾ (quota) ಆಗಿದೆ. ಕೊನೆಯ ಕ್ಷಣದಲ್ಲಿ ಟಿಕೆಟ್ ಪಡೆಯಲು ಪ್ರಯಾಣಿಕರು ಹೆಚ್ಚುವರಿ ಶುಲ್ಕವನ್ನು ಪಾವತಿಸುತ್ತಾರೆ. ಮತ್ತೊಂದೆಡೆ ‘ಫ್ಲೆಕ್ಸಿ-ಫೇರ್ ಎಂಬುದು ಭಾರತೀಯ ರೈಲ್ವೆಯು 2016 ಸೆಪ್ಟೆಂಬರ್ ನಲ್ಲಿ ಜಾರಿಗೆ ತಂದ ಡೈನಾಮಿಕ್ ಪ್ರೈಸಿಂಗ್ ವ್ಯವಸ್ಥೆಯಾಗಿತ್ತು. ರಾಜಧಾನಿ, ಶತಾಬ್ದಿ ಮತ್ತು ದುರಂತೋ ರೈಲುಗಳಲ್ಲಿ ಪರಿಚಯಿಸಲಾಯಿತು. ಇದರಲ್ಲಿ ಹೆಚ್ಚು ಸೀಟುಗಳು ಕಾಯ್ದಿರಿಸಲಾದಂತೆ ಟಿಕೆಟ್ ದರಗಳು ಏರಿಕೆಯಾಗುತ್ತಿದ್ದವು.
ಆದರೆ, ಇದರ ಫಲಿತಾಂಶಗಳು ರೈಲ್ವೆ ನಿರೀಕ್ಷಿಸಿದಂತಿರಲಿಲ್ಲ. 2018ರ ಲೆಕ್ಕ ಪರಿಶೋಧನೆಯಲ್ಲಿ ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ಅವರು, ‘ಫ್ಲೆಕ್ಸಿ-ಫೇರ್’ ವ್ಯವಸ್ಥೆಯು ಕೆಲವು ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ ಎಂದು ಕಂಡುಕೊಂಡರು. ಉದಾಹರಣೆಗೆ, 'AC 3-ಟೈರ್' (AC 3-tier) ವಿಭಾಗದಲ್ಲಿ, ಈ ಯೋಜನೆ ಜಾರಿಗೆ ಬಂದ ನಂತರ ಖಾಲಿ ಬರ್ತ್ಗಳ ಪ್ರಮಾಣವು ಶೇ 0.66 ರಿಂದ ಶೇ 4.46 ಕ್ಕೆ ಏರಿತು. ಅಲ್ಲದೆ, ಪರಿಶೀಲನೆಗೆ ಒಳಪಡಿಸಿದ ಅವಧಿಯಲ್ಲಿ ಈ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯು 6.75 ಲಕ್ಷದಷ್ಟು ಕಡಿಮೆಯಾಯಿತು.
13 ವಾಯುಯಾನ ಮತ್ತು ರೈಲು ಮಾರ್ಗಗಳಲ್ಲಿ ದರಗಳನ್ನು ಹೋಲಿಸಿದಾಗ, CAG (ಕಂಟ್ರೋಲರ್ ಆಂಡ್ ಆಡಿಟರ್ ಜನರಲ್) ಮತ್ತೊಂದು ಸಮಸ್ಯೆಯನ್ನು ಗುರುತಿಸಿತು. ಹಲವು ಮಾರ್ಗಗಳಲ್ಲಿ ‘ಫ್ಲೆಕ್ಸಿ-ಫೇರ್’ ಅಡಿಯಲ್ಲಿ ರೈಲು ಟಿಕೆಟ್ ದರಗಳು ಗರಿಷ್ಠ ಮಟ್ಟವನ್ನು ತಲುಪಿದಾಗ ವಿಮಾನ ಪ್ರಯಾಣದ ದರಗಳು ರೈಲು ಟಿಕೆಟ್ಗಳಿಗಿಂತ ಅಗ್ಗವಾಗಿದ್ದವು. ಇದು ರೈಲ್ವೆಯನ್ನು ಕಠಿಣ ಪರಿಸ್ಥಿತಿಗೆ ತಳ್ಳಿತು. ಏಕೆಂದರೆ, ವಿಮಾನ ಪ್ರಯಾಣಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ರೈಲು ಪ್ರಯಾಣಕ್ಕಾಗಿ ಪ್ರಯಾಣಿಕರು ಹೆಚ್ಚಿನ ಹಣ ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಅಲ್ಲದೆ ವಿಮಾನ ಟಿಕೆಟ್ಗಳಿಗೆ ಭಿನ್ನವಾಗಿ ರೈಲ್ವೆಯಲ್ಲಿ ಹೆಚ್ಚಿನ ದರ ಪಾವತಿಸಿ ‘ವೇಟಿಂಗ್ ಲಿಸ್ಟ್’ ಟಿಕೆಟ್ ಪಡೆದರೂ ಅದರಲ್ಲಿ ಖಚಿತವಾದ ಬರ್ತ್ ಸಿಗುವುದು ಖಾತರಿ ಇರಲಿಲ್ಲ. ಹೀಗಾಗಿ ‘ಡೈನಾಮಿಕ್ ಪ್ರೈಸಿಂಗ್ ವ್ಯವಸ್ಥೆ’ಯು ರೈಲಿನಲ್ಲಿ ಪ್ರಯಾಣಿಸಬೇಕೆ ಅಥವಾ ಬೇಡವೇ ಎಂದು ಮರುಪರಿಶೀಲಿಸುವಂತೆ ಪ್ರಯಾಣಿಕರನ್ನು ಪ್ರೇರೇಪಿಸುವಂತಾಯಿತು.
ಪ್ರಯಾಣಿಕರ ಪ್ರತಿಕ್ರಿಯೆ ಮತ್ತು ಸಿಎಜಿ ಕಂಡುಕೊಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಸಚಿವಾಲಯವು ಸರಾಸರಿ ಮಾಸಿಕ ಪ್ರಯಾಣಿಕರ ಸಂಖ್ಯೆ ಶೇ 50ಕ್ಕಿಂತ ಕಡಿಮೆ ಇದ್ದ 15 ರೈಲುಗಳಿಂದ ಈ ಯೋಜನೆಯನ್ನು ಹಿಂಪಡೆಯಿತು. ಟಿಕೆಟ್ ದರದ ಗರಿಷ್ಠ ಗುಣಕವನ್ನು ಕಡಿಮೆ ಮಾಡಲಾಯಿತು ಮತ್ತು ಕಡಿಮೆ ಪ್ರಯಾಣಿಕರಿರುವ ರೈಲುಗಳಿಗೆ ಶೇ 20ರವರೆಗಿನ ರಿಯಾಯಿತಿ ಪರಿಚಯಿಸಲಾಯಿತು.
‘ವಂದೇ ಭಾರತ್ ಸ್ಲೀಪರ್’ ರೈಲಿಗೆ ವಿಶೇಷವಾಗಿ ಇದು ಅನ್ವಯಿಸುತ್ತದೆ. ಏಕೆಂದರೆ ಅನೇಕ ಸಾಮಾನ್ಯ ರೈಲುಗಳಿಗಿಂತ ಭಿನ್ನವಾಗಿ ಇದನ್ನು ಒಂದು ಪ್ರೀಮಿಯಂ ರಾತ್ರಿ ಪ್ರಯಾಣದ ಸೇವೆಯಾಗಿ ರೂಪಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಿಗದಿತ ಮತ್ತು ಸ್ಪಷ್ಟವಾದ ದರವು ಸ್ಪರ್ಧಾತ್ಮಕ ಅನುಕೂಲ ಒದಗಿಸಬಲ್ಲದು. ಈ ನಿರ್ಧಾರಕ್ಕೆ ಪೂರೈಕೆ ಅಥವಾ ಲಭ್ಯತೆಗೆ ಸಂಬಂಧಿಸಿದ ಕಾರಣವೂ ಇದೆ. ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 823 ಬರ್ತ್ಗಳಿವೆ. ಇವುಗಳಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಬರ್ತ್ಗಳು ಎಸಿ 3 ಟೈರ್ ವಿಭಾಗದಲ್ಲಿವೆ. ಈ ವಿಭಾಗವು 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ಎಸಿ 3 ಟೈರ್ ವಿಭಾಗವು 3,645 ಕೋಟಿ ರೂ. ಗಳ ಕಾರ್ಯಾಚರಣಾ ಹೆಚ್ಚುವರಿಯನ್ನು ಗಳಿಸಿದೆ. ಇದಕ್ಕೆ ಹೋಲಿಸಿದರೆ ಸ್ಲೀಪರ್ ಕ್ಲಾಸ್ ವಿಭಾಗವು 19,158 ಕೋಟಿ ರೂ. ಗಳ ಕಾರ್ಯಾಚರಣಾ ನಷ್ಟವನ್ನು ಅನುಭವಿಸಿದೆ. ಹೀಗಾಗಿ ಎಸಿ 3 ಟೈರ್ ಬರ್ತ್ಗಳನ್ನು ಭರ್ತಿ ಮಾಡುವುದು ಬಹಳ ಮುಖ್ಯ. ಅದರಿಂದ ರೈಲ್ವೆಗೆ ಆದಾಯ ಸಿಗುತ್ತದೆ. ಹೀಗಾಗಿ ವಂದೇ ಭಾರತ್ ಸ್ಲೀಪರ್ ಅನ್ನು ತತ್ಕಾಲ್ ಕೋಟಾದಿಂದ ಹೊರಗಿಡಲು ಸೂಕ್ತ ಕಾರಣ ಸಿಗುತ್ತದೆ.
ಇದು ಬಹುಶಃ ವಂದೇ ಭಾರತ್ ಸ್ಲೀಪರ್ನಲ್ಲಿ ತತ್ಕಾಲ್ ಕೋಟಾ ಏಕೆ ಇಲ್ಲ ಎಂಬುದರ ಸುಳಿವು ನೀಡುತ್ತದೆ. ಕೊನೆಯ ಕ್ಷಣದಲ್ಲಿ ಪ್ರಯಾಣಿಕರ ಬುಕಿಂಗ್ನಿಂದ ಹೆಚ್ಚುವರಿ ಪ್ರೀಮಿಯಂ ಸಂಗ್ರಹಿಸುವ ಅವಕಾಶವನ್ನು ರೈಲ್ವೆ ಬಿಟ್ಟುಕೊಡುತ್ತಿರಬಹುದು. ಆದರೆ ಇದು ಸೇವೆಯನ್ನು ಹೆಚ್ಚು ಊಹಿಸಬಹುದಾದಂತೆ ಮಾಡಲು ಮತ್ತು ಮುಂಗಡ ಬುಕಿಂಗ್ಗಳನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದೆ.