ಅಶೋಕ್ ಗುಲಾಟಿ | Photo Credit :PTI 

ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೃಷಿ ಅರ್ಥಶಾಸ್ತ್ರಜ್ಞ ಪ್ರಾದ್ಯಾಪಕ ಅಶೋಕ್ ಗುಲಾಟಿ ಪ್ರಕಾರ ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವುದು ಮತ್ತು ದಾಸ್ತಾನು ಕಡಿಮೆಯಾಗುವುದರ ಜೊತೆಗೆ ಸರ್ಕಾರದ ವಿಳಂಬ ನೀತಿ ಈಗಿನ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.

ಇತ್ತೀಚೆಗಿನ ವಾರಗಳಲ್ಲಿ ಸಕ್ಕರೆ ಬೆಲೆಗಳು ತೀವ್ರವಾಗಿ ಏರಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ಕಳವಳ ವ್ಯಕ್ತವಾಗಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೃಷಿ ಅರ್ಥಶಾಸ್ತ್ರಜ್ಞ ಪ್ರಾದ್ಯಾಪಕ ಅಶೋಕ್ ಗುಲಾಟಿ ಪ್ರಕಾರ ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವುದು ಮತ್ತು ದಾಸ್ತಾನು ಕಡಿಮೆಯಾಗುವುದು ಈ ಏರಿಕೆಗೆ ಪ್ರಮುಖ ಕಾರಣಗಳಾಗಿದ್ದು, ಕಬ್ಬನ್ನು ಎಥೆನಾಲ್ಗೆ ತಿರುಗಿಸುವುದು ಸಕ್ಕರೆಯ ಮೇಲೆ ಒತ್ತಡ ಹೇರಿದೆ ಎಂದು indiatoday.in ವರದಿ ಮಾಡಿದೆ.

“ಈ ಬಾರಿ ಸಕ್ಕರೆ ಉತ್ಪಾದನೆ ಕಡಿಮೆಯಾಗಿತ್ತು. ಅದರ ನಡುವೆ ದಾಸ್ತಾನು ಕಡಿಮೆಯಾಗುವುದು ಮತ್ತು ಕೆಲವು ಕಬ್ಬನ್ನು ಎಥೆನಾಲ್ಗೆ ತಿರುಗಿಸುವುದರಿಂದ ಪರಿಸ್ಥಿತಿ ಜಟಿಲವಾಗಿದೆ. ಆರಂಭಿಕ ದಾಸ್ತಾನುಗಳು ಸುಮಾರು 8 ಮಿಲಿಯನ್ ಟನ್ಗಳಿಂದ 5 ಮಿಲಿಯನ್ ಟನ್ಗಳಿಗೆ ಇಳಿದಿದ್ದು, ಪೂರೈಕೆ ತೀವ್ರವಾಗಿ ಖಾಲಿಯಾಗಿದೆ” ಎನ್ನುತ್ತಾರೆ ಗುಲಾಟಿ.

ಸರ್ಕಾರವು ಈ ಕೊರತೆಯನ್ನು ಬಹಳ ಮೊದಲೇ ಗುರುತಿಸಿ ಸರಿಪಡಿಸುವ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಗುಲಾಟಿ ಅಭಿಪ್ರಾಯಪಟ್ಟರು. “ನಾಲ್ಕು ಅಥವಾ ಐದು ತಿಂಗಳ ಹಿಂದೆಯೇ ಆಮದು ತೆರೆಯುವ ನಿರ್ಧಾರ ಕೈಗೊಳ್ಳಬೇಕಾಗಿತ್ತು. ದಾಸ್ತಾನು ತೀರಾ ಕಡಿಮೆ ಮಟ್ಟ ತಲುಪುವ ಮೊದಲೇ ಪರಿಸ್ಥಿತಿ ನಿರ್ವಹಿಸಬಹುದಾಗಿತ್ತು” ಎನ್ನುತ್ತಾರೆ ಗುಲಾಟಿ.

ಗುಲಾಟಿಯವರ ಪ್ರಕಾರ ಸಕ್ಕರೆ ಉತ್ಪಾದನೆ ಶೇ 10ರಷ್ಟು ಕಡಿಮೆಯಾಗಿದ್ದು, ಕಬ್ಬನ್ನು ಎಥೆನಾಲ್ಗೆ ತಿರುಗಿಸುವುದು ಶೇಕಡಾವಾರುಗಳಲ್ಲಿ ಕಾಣುವುದಕ್ಕಿಂತ ದೊಡ್ಡ ಸಮಸ್ಯೆಯಾಗಿರಬಹುದು. ಉತ್ಪಾದನೆ ಕಡಿಮೆಯಾದಾಗ ಅದು ಸಮಸ್ಯೆಯಾಗಿ ಕಾಡುತ್ತದೆ. ಹೀಗಾಗಿ ಕಬ್ಬನ್ನು ಎಥೆನಾಲ್ ತಯಾರಿಗೆ ತಿರುಗಿಸಿದಾಗಲೆಲ್ಲ ಅದರ ಸಂಚಿತ ಪರಿಣಾಮ ಆಗಿಯೇ ಬಿಡುತ್ತದೆ” ಎಂದು ಗುಲಾಟಿ ಹೇಳಿದರು.

ಸಕ್ಕರೆ ದಾಸ್ತಾನು ಒಂಬತ್ತು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಆಮದುಗಳನ್ನು ಬಹಳ ಮೊದಲೇ ಅನುಮತಿಸಬೇಕಾಗಿತ್ತು. ಹಲವಾರು ತಿಂಗಳಿಂದ ಅಂದರೆ, ಏಳೆಂಟು ತಿಂಗಳಿಂದ ಗೋಚರಿಸುತ್ತಿದ್ದ ಎಚ್ಚರಿಕೆಯ ಚಿಹ್ನೆಗಳನ್ನು ಕಡೆಗಣಿಸಲಾಗಿದೆ. ಆರಂಭದಲ್ಲೇ ಆಮದಿಗೆ ತೀರ್ಮಾನಿಸಿದಲ್ಲಿ ಈಗಿನ ಬೆಲೆಯೇರಿಕೆಯನ್ನು ತಡೆಯಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಭಾರತೀಯ ಆಹಾರ ನಿಗಮದ ದಾಸ್ತಾನಿನಿಂದ ಅಕ್ಕಿ ಬಳಸಿಕೊಂಡು ಗಿರಣಿಗಳನ್ನು ಹೆಚ್ಚು ಸಕ್ಕರೆ ಉತ್ಪಾದಿಸಲು ಪ್ರೋತ್ಸಾಹಿಸುವುದು ಸೇರಿದಂತೆ ಸರ್ಕಾರಕ್ಕೆ ಅನೇಕ ಪರ್ಯಾಯಗಳು ಲಭ್ಯವಿವೆ” ಎಂದು ಅವರು ಹೇಳಿದ್ದಾರೆ.

“ಸಕ್ಕರೆ ಮೇಲೆ ಆಮದು ಶೇ 100 ಸುಂಕವು ಮಾರುಕಟ್ಟೆಯ ಕೊರತೆಗೆ ತ್ವರಿತವಾಗಿ ಪ್ರತಿಕ್ರಿಯಿಸುವುದನ್ನು ತಡೆದಿದೆ. ಭಾರತದ ಸಕ್ಕರೆ ವಲಯವು ಸರ್ಕಾರದಿಂದ ಅತಿಯಾದ ನಿಯಂತ್ರಣಕ್ಕೆ ಒಳಪಟ್ಟಿದೆ. ಜಗತ್ತಿನಲ್ಲಿ ಎಲ್ಲೂ ಈ ರೀತಿಯ ವ್ಯವಸ್ಥೆಯಿಲ್ಲ” ಎಂದು ಅವರು ಹೇಳಿದ್ದಾರೆ.

ಸಕ್ಕರೆಯ ವಲಯದಲ್ಲಿ ಉದಾರೀಕರಣದ ಹೊಸ ಅಲೆಗೆ ಅವರು ಕರೆ ನೀಡಿದ್ದಾರೆ. ಬೆಲೆ ಸ್ಥಿತಿ ಸುಧಾರಿಸುವ ಮೊದಲು ಹದಗೆಡಬಹುದು. ವಿಶೇಷವಾಗಿ ಹಬ್ಬದ ಋತುವಿನಲ್ಲಿ ಬೇಡಿಕೆ ಖಚಿತವಾಗಿ ಏರಲಿದೆ. ವಿಳಂಬದ ನೀತಿಯಿಂದಾಗಿ ತಾಜಾ ಸರಬರಾಜು ತಡವಾಗಬಹುದು ಎಂದು ಅವರು ತಿಳಿಸಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor