NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ | ಇಲ್ಲಿವರೆಗೆ ಎಷ್ಟು ಮಂದಿಯನ್ನು ಬಂಧಿಸಲಾಗಿದೆ? ಅವರ್ಯಾರು?
ಸಾಂದರ್ಭಿಕ ಚಿತ್ರ | Photo Credit : magnific
NEET ಪ್ರಶ್ನೆ ಪತ್ರಿಕೆ 2026 ಸೋರಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಇಲ್ಲಿವರೆಗೆ (ಮೇ 19) 10 ಮಂದಿಯನ್ನು ಬಂಧಿಸಿದೆ. ನೀಟ್ ಪ್ರಶ್ನೆ ಪತ್ರಿಕೆಗಳು ಹೇಗೆ ಸೋರಿಕೆಯಾಗಿದ್ದವು? ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ಎಂಬುದರ ಬಗ್ಗೆ ತನಿಖೆ ಮುಂದುವರಿದಿದ್ದು, ಸೋಮವಾರ ಮಹಾರಾಷ್ಟ್ರದ ಲಾತೂರ್‌ನಲ್ಲಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ನಡೆಸುತ್ತಿದ್ದ ಶಿವರಾಜ್ ಮೊಟೇಗಾಂವ್ಕರ್ ನನ್ನು ಬಂಧಿಸಲಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಬಂಧಿತನಾಗಿರುವ 10ನೇ ವ್ಯಕ್ತಿ ಶಿವರಾಜ್ ಆಗಿದ್ದಾನೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತನಿಖೆ ಎಲ್ಲಿವರೆಗೆ ಬಂದಿದೆ? ಬಂಧಿತರಾದವರು ಯಾರೆಲ್ಲ?
ಮಾಸ್ಟರ್ ಮೈಂಡ್ ಪಿ. ವಿ. ಕುಲಕರ್ಣಿ (ಪುಣೆ)
ಸಿಬಿಐ ತನಿಖೆಯಲ್ಲಿ ಈ ಇಡೀ ಜಾಲದ 'ಮಾಸ್ಟರ್ ಮೈಂಡ್' ಎಂದು ಗುರುತಿಸಲ್ಪಟ್ಟ ಮೊದಲ ವ್ಯಕ್ತಿ ನಿವೃತ್ತ ಕೆಮಿಸ್ಟ್ರಿ ಉಪನ್ಯಾಸಕ ಪಿ. ವಿ. ಕುಲಕರ್ಣಿ. ಮೂಲತಃ ಮಹಾರಾಷ್ಟ್ರದ ಲಾತೂರ್‌ನವರಾಗಿರುವ ಕುಲಕರ್ಣಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲೇ ಅವನನ್ನು ಬಂಧಿಸಲಾಗಿದೆ. ಈತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೊತೆ ನಿಕಟ ಸಂಪರ್ಕ ಹೊಂದಿದ್ದು, ಆ ಮೂಲಕ ಪರೀಕ್ಷೆಯ ಅತ್ಯಂತ ರಹಸ್ಯ ಮತ್ತು ಸೂಕ್ಷ್ಮ ದಾಖಲೆಗಳನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದ. ವಿಶೇಷ ಕೋಚಿಂಗ್ ಕ್ಲಾಸ್ ಗಳ ಹೆಸರಿನಲ್ಲಿ ಇವರು ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನು ಹಂಚಿಕೊಳ್ಳುತ್ತಿದ್ದ. ವಿದ್ಯಾರ್ಥಿಗಳು ತಮ್ಮ ನೋಟ್‌ಬುಕ್‌ಗಳಲ್ಲಿ ಬರೆದುಕೊಂಡಿದ್ದ ಈ ಪ್ರಶ್ನೆಗಳು, ಅಸಲಿ ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆಗೆ ಹೊಂದಿಕೆಯಾಗಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.
*ಸಸ್ಯಶಾಸ್ತ್ರ ಶಿಕ್ಷಕಿ ಮನೀಷಾ ಗುರುನಾಥ್ ಮಾಂಧರೆ (ಪುಣೆ)
ಈ ಹಗರಣದ ಎರಡನೇ ಪ್ರಮುಖ ವ್ಯಕ್ತಿ ಸಸ್ಯಶಾಸ್ತ್ರ ವಿಭಾಗದ ಹಿರಿಯ ಶಿಕ್ಷಕಿ ಮನೀಷಾ ಗುರುನಾಥ್ ಮಾಂಧರೆ. ಈಕೆ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಎನ್‌ಟಿಎ ಸಮಿತಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದಳು. ಹೀಗಾಗಿ ಇವರಿಗೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಪ್ರಶ್ನೆಗಳ ಸಂಪೂರ್ಣ ಪ್ರವೇಶವಿತ್ತು. ಇದನ್ನು ದುರುಪಯೋಗಪಡಿಸಿಕೊಂಡ ಮನೀಷಾ, ಕೋಚಿಂಗ್ ತರಗತಿಗಳ ಅವಧಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಲವು ಪ್ರಶ್ನೆಗಳನ್ನು ಚರ್ಚಿಸಿ, ಅವುಗಳನ್ನು ನೋಟ್‌ಬುಕ್ ಮತ್ತು ಪಠ್ಯಪುಸ್ತಕಗಳಲ್ಲಿ ಗುರುತು ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಳು ಎನ್ನುವುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ.
*ಬ್ಯೂಟಿಷಿಯನ್ ಮನೀಷಾ ವಾಘ್ಮಾರೆ (ಪುಣೆ)
ಪುಣೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮನೀಷಾ ವಾಘ್ಮಾರೆ ಎಂಬಾಕೆಯನ್ನು ಮೇ 14ರಂದು ಬಂಧಿಸಲಾಗಿದೆ. ಈಕೆಯ ಕೆಲಸ ಕೋಚಿಂಗ್ ಕ್ಲಾಸ್‌ಗಳ ಹೆಸರಿನಲ್ಲಿ ನಡೆಯುತ್ತಿದ್ದ ಈ ಜಾಲಕ್ಕೆ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಸೆಳೆಯುವುದಾಗಿತ್ತು. ಮನೀಷಾ ಅವರು ಮಾಂಧರೆ ಮತ್ತು ಕುಲಕರ್ಣಿ ನಡೆಸುತ್ತಿದ್ದ ರಹಸ್ಯ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವ ಕೆಲಸ ಮಾಡುತ್ತಿದ್ದಳು ಎಂದು ಆರೋಪವಿದೆ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಯಶಸ್ಸು ಕೊಡಿಸುವ ಆಮಿಷವೊಡ್ಡಿ ಪೋಷಕರಿಂದ ಹಣ ವಸೂಲಿ ಮಾಡುವ ಜಾಲದಲ್ಲಿ ಈಕೆ ಸಕ್ರಿಯರಾಗಿದ್ದಳು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
"ಧನಂಜಯ್ ಲೋಖಂಡೆ (ಅಹಲ್ಯಾನಗರ, ಮಹಾರಾಷ್ಟ್ರ)
ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ಧನಂಜಯ್ ಲೋಖಂಡೆ ಎಂಬವನನ್ನು ಬಂಧಿಸಲಾಗಿದೆ. ಮನೀಷಾ ವಾಘ್ಮಾರೆ ಹಣದ ಆಸೆ ತೋರಿಸಿ ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಲೋಖಂಡೆಗೆ ಪರಿಚಯಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
*ಶುಭಂ ಖೈರ್ನಾರ್ (ನಾಸಿಕ್)
ನಾಸಿಕ್‌ನ ಇಂದಿರಾನಗರದ ನಿವಾಸಿಯಾದ 27 ವರ್ಷದ ಬಿಎಎಂಎಸ್ ವಿದ್ಯಾರ್ಥಿ ಶುಭಂ ಖೈರ್ನಾರ್‌ನನ್ನು ಆತನ ಮನೆಯಿಂದಲೇ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಧನಂಜಯ್ ಲೋಖಂಡೆ, NEET ಪ್ರಶ್ನೆ ಪತ್ರಿಕೆ ಇದ್ದ ಪ್ಯಾಕೆಟ್ ಅನ್ನು ಶುಭಂಗೆ ಕಳುಹಿಸಿಕೊಟ್ಟಿದ್ದ. ಅದಕ್ಕಾಗಿ ಶುಭಂ ಬರೋಬ್ಬರಿ 10 ಲಕ್ಷ ರೂಪಾಯಿ ಹಣ ನೀಡಿದ್ದ ಎಂದು ನಾಸಿಕ್ ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಬಾಯಿಬಿಟ್ಟಿರುವ ಶುಭಂ, ಆ ಪ್ರಶ್ನೆ ಪತ್ರಿಕೆಯನ್ನು ಹರಿಯಾಣದ ಗುರುಗ್ರಾಮದ ವ್ಯಕ್ತಿಯೊಬ್ಬನಿಗೆ ಮೊಬೈಲ್ ಮೂಲಕ ಕಳುಹಿಸಿಕೊಟ್ಟು, ಪ್ರತಿಯಾಗಿ 15 ಲಕ್ಷ ರೂಪಾಯಿ ಪಡೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.
*ಯಶ್ ಯಾದವ್ (ಹರಿಯಾಣ)
ನಾಸಿಕ್ ನ ಶುಭಂ ಖೈರ್ನಾರ್ ನಿಂದ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡಿದ್ದ ಗುರುಗ್ರಾಮದ ನಿವಾಸಿ ಯಶ್ ಯಾದವ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪತ್ರಿಕೆಯಲ್ಲಿ ಬರುವ ಸುಮಾರು 150 ಪ್ರಶ್ನೆಗಳು ಅಸಲಿ ಪರೀಕ್ಷೆಯಲ್ಲೂ ಇರಲಿವೆ ಎಂದು ಹೇಳಿ ಯಶ್, ಜೈಪುರದ ಮಾಂಗಿಲಾಲ್ ಬಿವಾಲ್ (ಮಾಂಗಿಲಾಲ್ ಖಾತಿಕ್) ಎಂಬಾತನಿಗೆ ಪ್ರಶ್ನೆ ಪತ್ರಿಕೆಗಳನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ.
*ವಿಕಾಸ್ ಬಿವಾಲ್, ಮಾಂಗಿಲಾಲ್ ಬಿವಾಲ್ ಮತ್ತು ದಿನೇಶ್ ಬಿವಾಲ್ (ಜೈಪುರ) – ಒಂದೇ ಕುಟುಂಬದ ಮೂವರ ಬಂಧನ!
ಹರಿಯಾಣದ ಯಶ್ ಯಾದವ್ ಜೊತೆ ಜೈಪುರದ ಬಿಜೆಪಿ ಕಾರ್ಯಕರ್ತ ದಿನೇಶ್ ಬಿವಾಲ್ ಕುಟುಂಬಕ್ಕೆ ಹಳೆಯ ನಂಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕುಟುಂಬದ ಹಲವು ವಿದ್ಯಾರ್ಥಿಗಳು ಸಾಧಾರಣ ಅಂಕ ಗಳಿಸುತ್ತಿದ್ದರೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳುತ್ತಿದ್ದುದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ತೀವ್ರ ನಿಗಾ ವಹಿಸಿದ್ದ ಸಿಬಿಐ ಅಧಿಕಾರಿಗಳು ಕಳೆದ ವಾರ ದಿನೇಶ್ ಬಿವಾಲ್, ಆತನ ಸಹೋದರ ಮಾಂಗಿಲಾಲ್ ಮತ್ತು ಮಾಂಗಿಲಾಲ್ ಮಗ ವಿಕಾಸ್ ಅವರನ್ನು ಬಂಧಿಸಿದ್ದಾರೆ.
ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಸಿಬಿಐ ನಡೆಸಿರುವ ಜಂಟಿ ತನಿಖೆಯ ಪ್ರಕಾರ, ಎಪ್ರಿಲ್ 29ರಂದು ಮಾಂಗಿಲಾಲ್ ಟೆಲಿಗ್ರಾಂ ಮೂಲಕ ಯಶ್ ಯಾದವ್ ನಿಂದ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡಿದ್ದ. ಬಳಿಕ ಮಾಂಗಿಲಾಲ್ ಅದರ ಪ್ರಿಂಟ್ ಔಟ್ ತೆಗೆದು ತನ್ನ ಮಗ ಅಮನ್ ಬಿವಾಲ್, ದಿನೇಶ್ ಅವರ ಮಗ ರಿಷಿ ಮತ್ತು ಹಿರಿಯ ಸಹೋದರ ಘನಶ್ಯಾಮ್ ಅವರ ಮಗಳು ಗುಂಜನ್ ಗೆ ನೀಡಿದ್ದ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಗೆ ಈ ಮೂವರೂ ಹಾಜರಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಜೈಪುರ ಜಿಲ್ಲೆಯ ಜಮ್ವಾ ರಾಮ್‌ಗಢ್ ಮೂಲದ ದಿನೇಶ್ ಮತ್ತು ಮಾಂಗಿಲಾಲ್, ಈ ಹಿಂದೆ ಲೇವಾದೇವಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಸುಮಾರು ಐದು ವರ್ಷಗಳ ಹಿಂದೆ, ತಮ್ಮ ಕುಟುಂಬದ ಏಳು ಮಕ್ಕಳನ್ನು ನೀಟ್ ಪರೀಕ್ಷೆಗೆ ಸಿದ್ಧಪಡಿಸುವ ಉದ್ದೇಶದಿಂದ ಇಡೀ ಕುಟುಂಬ ಸಿಕರ್ ನಗರಕ್ಕೆ ವಲಸೆ ಬಂದಿತ್ತು.
*ಶಿವರಾಜ್ ರಘುನಾಥ್ ಮೊಟೇಗಾಂವ್ಕರ್ (ಲಾತೂರ್)
ಮಹಾರಾಷ್ಟ್ರದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳ ಅತ್ಯಂತ ಪ್ರಮುಖ ಕೋಚಿಂಗ್ ನೆಟ್‌ವರ್ಕ್ ಗಳಲ್ಲಿ ಒಂದಾದ 'Renukai Career Centre' (RCC) ಸಂಸ್ಥಾಪಕ ಶಿವರಾಜ್ ರಘುನಾಥ್ ಮೊಟೇಗಾಂವ್ಕರ್ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಮಹಾರಾಷ್ಟ್ರದಾದ್ಯಂತ ವಿದ್ಯಾರ್ಥಿ ವಲಯದಲ್ಲಿ 'ಮೊಟೇಗಾಂವ್ಕರ್ ಸರ್ ಕ್ಲಾಸಸ್' ಎಂದೇ ಖ್ಯಾತಿ ಪಡೆದಿರುವ ಈ ಸಂಸ್ಥೆ, ಕಳೆದ ಎರಡು ದಶಕಗಳಿಂದ ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳಲು ಇರುವ ಹೆಬ್ಬಾಗಿಲು ಎಂದೇ ನಂಬಲಾಗಿತ್ತು.
ಪ್ರಸ್ತುತ ಲಾತೂರ್, ಪುಣೆ, ನಾಸಿಕ್, ಛತ್ರಪತಿ ಸಂಭಾಜಿನಗರ, ನಾಂದೇಡ್, ಸೋಲಾಪುರ್, ಕೊಲ್ಹಾಪುರ್ ಮತ್ತು ಅಕೋಲಾದಲ್ಲಿ ಈ ಸಂಸ್ಥೆಯ ಶಾಖೆಗಳಿದ್ದು, ಪ್ರತಿ ವರ್ಷ ಸುಮಾರು 40,000 ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಾರೆ. ಮಹಾರಾಷ್ಟ್ರದ ಕೋಚಿಂಗ್ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಲಾತೂರ್‌ನಲ್ಲಿ RCC ಅತ್ಯಂತ ಪ್ರಭಾವಿ ಹೆಸರು. ಇದೇ ಕಾರಣಕ್ಕೆ ಇವರ ಬಂಧನ ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮೊಟೇಗಾಂವ್ಕರ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಸಂಘಟಿತ ಅಪರಾಧ ಜಾಲದ ಸಕ್ರಿಯ ಸದಸ್ಯನಾಗಿದ್ದ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಇವರ ಮೊಬೈಲ್ ಫೋನ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಇರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮೇ 3ರಂದು ಪರೀಕ್ಷೆ ನಡೆಯುವುದಕ್ಕಿಂತ 10 ದಿನಗಳ ಮುಂಚಿತವಾಗಿ, ಅಂದರೆ ಏಪ್ರಿಲ್ 23ರಂದೇ ಇವರ ಮೊಬೈಲ್‌ಗೆ ಪ್ರಶ್ನೆ ಪತ್ರಿಕೆ ತಲುಪಿತ್ತು.
*ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ವಿಡಿಯೊ
ಮೊಟೇಗಾಂವ್ಕರ್ ಬಂಧನಕ್ಕೂ ಕೆಲವು ದಿನಗಳ ಮುನ್ನ RCC ಕೋಚಿಂಗ್ ಕ್ಲಾಸ್ ನ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ ಮೊಟೇಗಾಂವ್ಕರ್, "ನಮ್ಮ ಆರ್‌ಸಿಸಿ ಮಾದರಿ ಪರೀಕ್ಷೆಗಳಲ್ಲಿ (Mock Tests) ಕೇಳಲಾಗಿದ್ದ ಪ್ರಶ್ನೆಗಳಲ್ಲಿ ಎಷ್ಟು ಪ್ರಶ್ನೆಗಳು ನೀಟ್ ಪರೀಕ್ಷೆಯಲ್ಲಿ ಬಂದಿದ್ದವು?" ಎಂದು ವಿದ್ಯಾರ್ಥಿಗಳಲ್ಲಿ ಕೇಳುತ್ತಾರೆ. ಅದಕ್ಕೆ ವಿದ್ಯಾರ್ಥಿಗಳು, "ಬಹುತೇಕ ಎಲ್ಲ ಪ್ರಶ್ನೆಗಳೂ ಬಂದಿದ್ದವು" ಎಂದು ಹೇಳುತ್ತಾರೆ.
ಪರೀಕ್ಷೆಗೆ ಮುಂಚೆ RCC ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಭಾವ್ಯ ಪ್ರಶ್ನೆಗಳು ಎಂದು ನೀಡಿದ್ದ 42 ಕೆಮಿಸ್ಟ್ರಿ ಪ್ರಶ್ನೆಗಳಿಗೂ ಮತ್ತು ಲೀಕ್ ಆದ ಪ್ರಶ್ನೆ ಪತ್ರಿಕೆಗೂ ನಿಕಟ ಸಾಮ್ಯತೆ ಇರುವುದು ಕಂಡುಬಂದಿದ್ದು, ಸಿಬಿಐ ಈಗ ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಳಿಸಿದೆ.
*ಹಣದ ವ್ಯವಹಾರ ಮತ್ತು ವಿದ್ಯಾರ್ಥಿ ಜಾಲ
'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, ಮನೀಷಾ ಮಾಂಧರೆಗೆ ಪ್ರಶ್ನೆ ಪತ್ರಿಕೆಗಳ ಪ್ರವೇಶವಿರುವುದು ಮನೀಷಾ ವಾಘ್ಮಾರೆಗೆ ತಿಳಿದುಬಂದಿತ್ತು. ತಕ್ಷಣವೇ ಇಬ್ಬರೂ ಸೇರಿ ಪತ್ರಿಕೆ ಸೋರಿಕೆ ಮಾಡಲು ಯೋಜನೆ ಹೂಡಿದ್ದರು. ಬಳಿಕ ಈ ಯೋಜನೆಗೆ ಅವರು ಪಿ. ವಿ. ಕುಲಕರ್ಣಿಯನ್ನೂ ಸೇರಿಸಿಕೊಂಡು, ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳಿಗೆ ಲಕ್ಷಗಟ್ಟಲೆ ಹಣ ಸುರಿಯಲು ಸಿದ್ಧರಿದ್ದ ವಿದ್ಯಾರ್ಥಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದರು.
ಈ ಹಿಂದೆ ತಮಗೆ ಟ್ಯೂಷನ್ ಸಹಾಯ ಬೇಕೆಂದು ತಮ್ಮನ್ನು ಸಂಪರ್ಕಿಸಿದ್ದ ಹಲವು ವಿದ್ಯಾರ್ಥಿಗಳನ್ನು ಮನೀಷಾ ವಾಘ್ಮಾರೆ ಸಂಪರ್ಕಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಲೀಕ್ ಆದ ಪ್ರಶ್ನೆ ಪತ್ರಿಕೆಗಾಗಿ ಪ್ರತಿ ವಿದ್ಯಾರ್ಥಿಯಿಂದ ಬರೋಬ್ಬರಿ 10 ಲಕ್ಷ ರೂಪಾಯಿ ಪಡೆಯುವುದಾಗಿ ಒಪ್ಪಂದ ಕುದುರಿಸಲಾಗಿತ್ತು. ಹೀಗೆ ಸಂಗ್ರಹವಾಗುವ ಒಟ್ಟು ಮೊತ್ತದಲ್ಲಿ ತಲಾ 2.5 ಲಕ್ಷದಿಂದ 3 ಲಕ್ಷ ರೂಪಾಯಿ ಲಾಭ ಪಡೆಯಲು ಈ ಮೂವರು ಆರೋಪಿಗಳು ಯೋಜನೆ ರೂಪಿಸಿದ್ದರು ಎಂದು ವರದಿ ಹೇಳಿದೆ.
ಧನಂಜಯ್ ಲೋಖಂಡೆ ಅವರು ಕೌನ್ಸಿಲಿಂಗ್ ಆಪರೇಟರ್ ಶುಭಂ ಖೈರ್ನಾರ್‌ಗೆ ಪ್ರಶ್ನೆ ಪತ್ರಿಕೆ ತಲುಪಿಸಿದ್ದರು ಎನ್ನಲಾಗಿದೆ. ಖೈರ್ನಾರ್ ಇದರ ಪಿಡಿಎಫ್ (PDF) ಪ್ರತಿಗಳನ್ನು ಯಶ್ ಯಾದವ್ ಗೆ ಹಂಚಿಕೊಂಡಿದ್ದ. ಹೀಗೆ ಹರಡಿಕೊಂಡ ಈ ವಂಚನೆಯ ಜಾಲದ ಕೊಂಡಿ ಕೊನೆಗೆ ಜೈಪುರದ ವಿದ್ಯಾರ್ಥಿಗಳಿಗೂ ತಲುಪಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ.
ಸಿಬಿಐ ಹೊರಿಸಿರುವ ಆರೋಪಗಳೇನು?
ಸಿಬಿಐ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, RCC ಕೋಚಿಂಗ್ ಇನ್‌ಸ್ಟಿಟ್ಯೂಟ್ ಮತ್ತು ಅದರ ಮಾಲೀಕ ಮೊಟೇಗಾಂವ್ಕರ್ ನಿವಾಸದ ಮೇಲೆ ನಡೆಸಿದ ದಾಳಿಯ ವೇಳೆ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆಗಳು ಪತ್ತೆಯಾಗಿವೆ. ಇದರಲ್ಲಿ ಮೇ 3ರಂದು ನಡೆದ ನೀಟ್-ಯುಜಿ 2026 ಪರೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳೇ ಇದ್ದವು.
"ಆರೋಪಿಯ ಇನ್‌ಸ್ಟಿಟ್ಯೂಟ್ ಮತ್ತು ಮನೆಯಲ್ಲಿ ಸಿಕ್ಕ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಮತ್ತು ಮೇ 3ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆಗಳು ಒಂದೇ ಆಗಿದ್ದವು" ಎಂದು ಸಿಬಿಐ ಹೇಳಿದೆ. ಇದಲ್ಲದೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕೆಮಿಸ್ಟ್ರಿ ಉಪನ್ಯಾಸಕ ಪಿ. ವಿ. ಕುಲಕರ್ಣಿ ಜೊತೆ ಮೊಟೇಗಾಂವ್ಕರ್ ನಿಕಟ ಸಂಬಂಧ ಹೊಂದಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
*ಇಲ್ಲಿಯವರೆಗಿನ ಕೇಸ್ ಡೈರಿ
ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಮೇ 12ರಂದು ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಎಫ್‌ಐಆರ್ ದಾಖಲಿಸಿತ್ತು.
ದೂರು ದಾಖಲಾದ ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿದ ಸಿಬಿಐ, ಹಲವು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿತ್ತು. ಇಲ್ಲಿಯವರೆಗೆ ದಿಲ್ಲಿ, ಜೈಪುರ, ಗುರುಗ್ರಾಮ, ನಾಸಿಕ್, ಪುಣೆ, ಲಾತೂರ್ ಮತ್ತು ಅಹಲ್ಯಾನಗರಗಳಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS), ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ–2024ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.