ChatGPT Images 2.0 ಗೆ ಭಾರತ ಅತಿ ದೊಡ್ಡ ಮಾರುಕಟ್ಟೆ!
Photo Credit : openart.ai
ಜಾಗತಿಕವಾಗಿ ChatGPT Images 2.0 ಬಳಕೆದಾರರಲ್ಲಿ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ ಎಂದು OpenAI CEO ಸ್ಯಾಮ್ ಆಲ್ಟ್ಮನ್ ಹೇಳಿದ್ದಾರೆ.
ಭಾರತೀಯ ಬಳಕೆದಾರರು ChatGPT Images 2.0 ಬಳಸಿ ಒಂದು ಶತಕೋಟಿಗೂ ಮೀರಿ ಚಿತ್ರಗಳನ್ನು ರಚಿಸಿದ್ದಾರೆ. ಹೀಗಾಗಿ ಜಾಗತಿಕವಾಗಿ ChatGPT Images 2.0 ಬಳಕೆದಾರರಲ್ಲಿ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಸ್ಯಾಮ್ ಆಲ್ಟ್ಮನ್ ಹೇಳಿದ್ದಾರೆ.
‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸ್ಯಾಮ್ ಆಲ್ಟ್ಮನ್ ಬರೆದುಕೊಂಡ ನಂತರ ಈ ಕುರಿತು OpenAI ಪ್ರಕಟಣೆಯನ್ನೂ ಬಿಡುಗಡೆ ಮಾಡಿದೆ. “ChatGPT Images 2.0 ಭಾರತವನ್ನು ಪ್ರೀತಿಸುತ್ತದೆ. ಈಗಾಗಲೇ 1 ಶತಕೋಟಿಗೂ ಮೀರಿ ಚಿತ್ರಗಳನ್ನು ರಚಿಸಲಾಗಿದೆ; ಅದ್ಭುತವೆನಿಸುತ್ತಿದೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.
ಕಂಪನಿಯು ಈ ವರ್ಷದ ಏಪ್ರಿಲ್ ನಲ್ಲಿ ತನ್ನ ಹಿಂದಿನ AI ಇಮೇಜ್ ಜನರೇಶನ್ ಸಿಸ್ಟಂನ ನವೀಕರಿಸಿದ ಆವೃತ್ತಿಯಾದ ChatGPT Images 2.0 ಅನ್ನು ಪರಿಚಯಿಸಿದೆ. ಆ ಸಮಯದಲ್ಲಿ OpenAI ಹೊಸ ಮಾದರಿಯನ್ನು ಹೆಚ್ಚು ಕ್ಲಿಷ್ಟವಾದ ಇಮೇಜ್‌ಗಳನ್ನು ನಿರ್ವಹಿಸಲು ಮತ್ತು ಹೆಚ್ಚು ನಿಖರವಾದ ಹಾಗೂ ಪ್ರಾಯೋಗಿಕವಾಗಿ ಬಳಸಬಹುದಾದ ವಿಶುವಲ್ ಗಳನ್ನು ಉತ್ಪಾದಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿತ್ತು.
ಬಳಕೆದಾರರು ಹೇಗೆ ಬಳಸುತ್ತಿದ್ದಾರೆ?
ಭಾರತೀಯ ಬಳಕೆದಾರರು ಈ AI ಸಾಧನವನ್ನು ಹೆಚ್ಚು ಸೃಜನಶೀಲವಾಗಿ ಬಳಸುತ್ತಿದ್ದಾರೆಯೇ ವಿನಾ ವೃತ್ತಿಪರವಾಗಿ ಬಳಸುತ್ತಿಲ್ಲ. OpenAI ಗಮನಿಸಿರುವ ಪ್ರಕಾರ, ಭಾರತೀಯ ಬಳಕೆದಾರರು ತಮ್ಮ ಅನಿಮೇಷನ್ ಪಾತ್ರಗಳನ್ನು ಸೃಷ್ಟಿಸಲು, ಕಾಲ್ಪನಿಕ ದಿನಪತ್ರಿಕೆಯ ತಾರೆಗಳು, ಟಾರೋಟ್ ಕಾರ್ಡ್‌ಗಳು, ಸಿನಿಮೀಯವಾಗಿ ಕಾಣುವ ಹೃದಯವಿದ್ರಾವಕ ಎಡಿಟ್‌ಗಳು, ಪಾಪರಾಜಿ ಶಾಟ್‌ಗಳು ಮತ್ತು ಫ್ಯಾಷನ್ ಮೂಡ್‌ಬೋರ್ಡ್‌ಗಳನ್ನು ರಚಿಸಲು ಈ AI ಸಾಧನವನ್ನು ಬಳಸುತ್ತಿದ್ದಾರೆ.
“ಈ ಟ್ರೆಂಡ್ ಇಂಟರ್ನೆಟ್ ಬಳಕೆದಾರರು ಮೀಮ್‌ಗಳು, ಸೌಂದರ್ಯಶಾಸ್ತ್ರ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಕೃತಿಯನ್ನು AI ಸಾಧನಗಳೊಂದಿಗೆ ಹೆಚ್ಚು ಸೃಜನಶೀಲ ರೀತಿಯಲ್ಲಿ ಹೇಗೆ ಬೆರೆಸುತ್ತಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಹಿಂದಿನ AI ಇಮೇಜ್ ಬಳಕೆದಾರರಿಗಿಂತ ಹೊಸ ಮಾದರಿಯು ಪ್ರಾಂಪ್ಟ್‌ಗಳು ಮತ್ತು ಸೃಜನಶೀಲತೆಯನ್ನು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ. ಹೊಸ ವ್ಯವಸ್ಥೆಯು ಪ್ರಾಯೋಗಿಕವಾಗಿ ಮಾತ್ರವಲ್ಲದೆ ಬಳಕೆದಾರರು ನಿಜವಾಗಿಯೂ ಬಳಸಬಹುದಾದ ಚಿತ್ರಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಕಂಪನಿ ಹೇಳಿಕೊಂಡಿದೆ.
ಸುಧಾರಿತ ಮಾಡೆಲ್
ChatGPT Images 2.0 ನ ಅತಿದೊಡ್ಡ ಅಪ್‌ಗ್ರೇಡ್ ಎಂದರೆ ಹಿಂದಿ ಮತ್ತು ಬಂಗಾಳಿ ಸೇರಿದಂತೆ ಲ್ಯಾಟಿನ್ ಅಲ್ಲದ ಭಾಷೆಗಳಿಗೆ ನೀಡಿರುವ ಸುಧಾರಿತ ಬೆಂಬಲವಾಗಿದೆ. ಹೊಸ ಮಾಡೆಲ್‌ಗೆ ಆಲೋಚನಾ ಸಾಮರ್ಥ್ಯವೂ ಇದೆ ಎಂದು ಕಂಪನಿ ಹೇಳಿದೆ.
OpenAI ಪ್ರಕಾರ, ChatGPT ಯ ‘ಥಿಂಕಿಂಗ್ ಮಾಡೆಲ್’ ಅನ್ನು ಆಯ್ಕೆ ಮಾಡಿದಾಗ ಟೂಲ್ ನೈಜ ಸಮಯದ ಮಾಹಿತಿಗಾಗಿ ವೆಬ್ ಅನ್ನು ಹುಡುಕಬಲ್ಲದು. ಒಂದೇ ಪ್ರಾಂಪ್ಟ್‌ನಲ್ಲಿ ಬಹು ಇಮೇಜ್ ವೇರಿಯೇಶನ್‌ಗಳನ್ನು ಸೃಷ್ಟಿಸಬಲ್ಲದು. ಫಲಿತಾಂಶಗಳನ್ನು ಮುಂದಿಡುವ ಮೊದಲು ತನ್ನದೇ ಔಟ್‌ಪುಟ್‌ಗಳನ್ನು ಎರಡು ಬಾರಿ ಪರಿಶೀಲಿಸುತ್ತದೆ. ಅದೇ ಕಾರಣದಿಂದ ಹೆಚ್ಚು ನಿಖರವಾದ ಮತ್ತು ದೃಶ್ಯಾತ್ಮಕವಾಗಿ ಅತ್ಯುತ್ತಮ ಚಿತ್ರಗಳನ್ನು ನೀಡಲು ಸಾಧ್ಯವಾಗುತ್ತಿದೆ.
ChatGPT Images 2.0 ಯು AI-ರಚಿತ ವಿಶುವಲ್‌ಗಳಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಆಲೋಚನಾ ಸಾಮರ್ಥ್ಯವನ್ನು ನೀಡಿರುವ ಮೊದಲ ಮಾಡೆಲ್ ಆಗಿದೆ ಎಂದು OpenAI ಹೇಳಿದೆ.