ಭಾರತದ ಸೆಮಿಕಂಡಕ್ಟರ್ ಹಾದಿಯಲ್ಲಿ ಟಾಟಾ-ASML ಒಪ್ಪಂದದ ಮಹತ್ವವೇನು?
Photo Credit : PTI
ಭಾರತದ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಡಚ್ ತಂತ್ರಜ್ಞಾನ ದೈತ್ಯ ASML (ಅಡ್ವಾನ್ಸ್ಡ್ ಸೆಮಿಕಂಡಕ್ಟರ್ ಮೆಟೀರಿಯಲ್ಸ್ ಲಿಥೋಗ್ರಫಿ) ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶೀಯ ಸೆಮಿಕಂಡಕ್ಟರ್ ಉತ್ಪಾದನಾ ನೆಲೆಯನ್ನು ಅಭಿವೃದ್ಧಿಪಡಿಸಲು ಭಾರತ ಒತ್ತು ನೀಡುತ್ತಿರುವ ಬೆನ್ನಲ್ಲೇ, ಭಾರತದ ಮೊದಲ 'ಫ್ರಂಟ್-ಎಂಡ್ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್' ಘಟಕವನ್ನು ನಿರ್ಮಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
'ಫ್ರಂಟ್-ಎಂಡ್ ಉತ್ಪಾದನೆ' ಎಂದರೆ ವಿಶೇಷ ಲಿಥೋಗ್ರಾಫಿಕ್ ಯಂತ್ರಗಳನ್ನು ಬಳಸಿ ಖಾಲಿ ಸಿಲಿಕಾನ್ ವೇಫರ್ ನ ಮೇಲೆ ಸೂಕ್ಷ್ಮ ಸರ್ಕ್ಯೂಟ್ ಗಳನ್ನು ವಿನ್ಯಾಸಗೊಳಿಸುವುದಾಗಿದೆ. ಜಗತ್ತಿನಾದ್ಯಂತ ಮೈಕ್ರೋಚಿಪ್ ಗಳ ಬೃಹತ್ ಉತ್ಪಾದನೆಯಲ್ಲಿ ಬಳಸಲಾಗುವ ಲಿಥೋಗ್ರಾಫಿಕ್ ತಂತ್ರಜ್ಞಾನದಲ್ಲಿ ಎಎಸ್ಎಂಎಲ್ ಸಂಸ್ಥೆ ಮುಂಚೂಣಿಯಲ್ಲಿದೆ.
"ಭಾರತದ ವೇಗವಾಗಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರವು ಹಲವು ಆಕರ್ಷಕ ಅವಕಾಶಗಳನ್ನು ಪ್ರತಿನಿಧಿಸುತ್ತದೆ. ಈ ವಲಯದಲ್ಲಿ ದೀರ್ಘಕಾಲೀನ ಪಾಲುದಾರಿಕೆಯನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ," ಎಂದು ಎಎಸ್ಎಂಎಲ್ ಸಿಇಒ ಕ್ರಿಸ್ಟೋಫ್ ಫೌಕೆಟ್ ಹೇಳಿದ್ದಾರೆ.
ಸೆಮಿಕಂಡಕ್ಟರ್ ಚಿಪ್ ಗಳು ಆಧುನಿಕ ತಂತ್ರಜ್ಞಾನಕ್ಕೆ ಶಕ್ತಿಯನ್ನು ನೀಡುತ್ತವೆ. ಸ್ಮಾರ್ಟ್ಫೋನ್ಗಳು ಮತ್ತು ಕಾರುಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ ಸಿಸ್ಟಂ ಮತ್ತು ರಕ್ಷಣಾ ತಂತ್ರಜ್ಞಾನದವರೆಗೆ ಪ್ರತಿಯೊಂದಕ್ಕೂ ಇವು ಅತ್ಯಂತ ನಿರ್ಣಾಯಕವಾಗಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ನೆದರ್ಲ್ಯಾಂಡ್ಸ್ ಭೇಟಿ ಸಂದರ್ಭದಲ್ಲಿ ಈ ಒಪ್ಪಂದವನ್ನು ಘೋಷಿಸಲಾಯಿತು. ಈ ಪ್ರವಾಸವು ರವಿವಾರ ಮುಕ್ತಾಯವಾಗಿದೆ.
►ಒಪ್ಪಂದದಲ್ಲೇನಿದೆ?
ಈ ಒಪ್ಪಂದದ ಅಡಿಯಲ್ಲಿ, ಬಹುರಾಷ್ಟ್ರೀಯ ಟಾಟಾ ಸಮೂಹದ ಅಂಗಸಂಸ್ಥೆಯಾದ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗೆ 300mm ವೇಫರ್ ಗಳ ತಯಾರಿಕೆಗಾಗಿ ಎಎಸ್ಎಂಎಲ್ ಸಂಸ್ಥೆಯು ಸುಧಾರಿತ ಲಿಥೋಗ್ರಫಿ ತಂತ್ರಜ್ಞಾನವನ್ನು ಪೂರೈಸಲಿದೆ. ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್ ನ ಧೋಲೇರಾದಲ್ಲಿ ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಪ್ಲಾಂಟ್ ನಿರ್ಮಿಸಲು ಟಾಟಾ ಎಲೆಕ್ಟ್ರಾನಿಕ್ಸ್ 11 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ.
ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಯುರೋಪ್ ನ ಅತ್ಯಂತ ದೊಡ್ಡ ತಂತ್ರಜ್ಞಾನ ಕಂಪನಿಯಾಗಿರುವ ASML, ಸುಧಾರಿತ ಚಿಪ್ ತಯಾರಿಕೆಗೆ ಅತ್ಯಗತ್ಯವೆಂದು ಪರಿಗಣಿಸಲಾದ ತಂತ್ರಜ್ಞಾನವನ್ನು ಭಾರತಕ್ಕೆ ಒದಗಿಸಬಲ್ಲದು. ಈ ಡಚ್ ಕಂಪನಿಯು ತನ್ನ ಅತ್ಯಾಧುನಿಕ ಚಿಪ್ ತಯಾರಿಕಾ ಪರಿಕರಗಳನ್ನು ಪೂರೈಸುವ ಮೂಲಕ ಯೋಜಿತ ಘಟಕದಲ್ಲಿ ಉತ್ಪಾದನೆಯನ್ನು ವೇಗಗೊಳಿಸಲು ಸಹಾಯ ಮಾಡುವುದಾಗಿ ತಿಳಿಸಿದೆ.
ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ತೈವಾನ್ನ 'ಪವರ್ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್' (PSMC) ಜೊತೆ ಕೈಜೋಡಿಸಿದ್ದು, ಈ ಸಂಸ್ಥೆಯು ಸ್ಥಾವರವನ್ನು ಸ್ಥಾಪಿಸಲು ಸಹಾಯ ಮಾಡುತ್ತಿದೆ. ಮೆಮೊರಿ ಚಿಪ್ ಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಈ ಕಂಪನಿಯು ಸೆಮಿಕಂಡಕ್ಟರ್ ವಲಯದ ಪ್ರಮುಖ ಶಕ್ತಿಯಾಗಿದೆ. ಟಾಟಾ ಸಂಸ್ಥೆಯ ಪ್ರಕಾರ, ಪಿಎಸ್ಎಂಸಿ ಕಂಪನಿಯು 28nm, 40nm, 55nm, 90nm ಮತ್ತು 110nm ಚಿಪ್ ತಯಾರಿಕಾ ತಂತ್ರಜ್ಞಾನಗಳು ಸೇರಿದಂತೆ ತನ್ನ ವ್ಯಾಪಕ ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳಲಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಈ ಸ್ಥಾವರವು 2028ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ.
ಭಾರತವು ತನ್ನದೇ ಆದ ದೇಶೀಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಶ್ರಮಿಸುತ್ತಿದ್ದು, ತಂತ್ರಜ್ಞಾನ ವರ್ಗಾವಣೆ, ಪೂರೈಕೆ-ಸರಪಳಿ ಏಕೀಕರಣ ಮತ್ತು ಕಾರ್ಯಪಡೆಯ ಅಭಿವೃದ್ಧಿಗಾಗಿ ತೈವಾನ್ ಸಂಸ್ಥೆಗಳೊಂದಿಗೆ ದಿನೇದಿನೇ ತನ್ನ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಭಾರತ ಮತ್ತು ತೈವಾನ್ ನಡುವೆ ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಒಟ್ಟಾರೆ ವ್ಯಾಪಾರದಲ್ಲಿ ಭಾರಿ ಪ್ರಗತಿ ಕಂಡುಬಂದಿದ್ದು, 2024ರಲ್ಲಿ ಇದು 10 ಶತಕೋಟಿ ಡಾಲರ್ ತಲುಪಿದೆ. ಜಾಗತಿಕ ಸೆಮಿಕಂಡಕ್ಟರ್ ಗಳ ಉತ್ಪಾದನೆಯಲ್ಲಿ ತೈವಾನ್ ಅತ್ಯಂತ ಪ್ರಮುಖ ಪಾತ್ರವನ್ನು ಹೊಂದಿದೆ.
►300mm ಸೆಮಿಕಂಡಕ್ಟರ್ ವೇಫರ್ ಗಳು ಎಂದರೇನು?
ಗುಜರಾತ್ ಘಟಕವು 300mm ವೇಫರ್ ಗಳನ್ನು ಬಳಸಿ ಚಿಪ್ ಗಳನ್ನು ತಯಾರಿಸಲಿದೆ. ಇದು ಸುಧಾರಿತ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಉದ್ಯಮದ ಮಾನದಂಡವಾಗಿದೆ. 300mm ವೇಫರ್ ಎಂಬುದು ಸಿಲಿಕಾನ್ನ ಒಂದು ತೆಳುವಾದ ವೃತ್ತಾಕಾರದ ಸ್ಲೈಸ್ ಆಗಿದ್ದು, ಇದರ ಮೇಲೆ ಚಿಪ್ ಗಳನ್ನು ನಿರ್ಮಿಸಲಾಗುತ್ತದೆ.
ದೊಡ್ಡ ಗಾತ್ರದ ವೇಫರ್ ಗಳು ತಯಾರಕರಿಗೆ ಪ್ರತಿ ಉತ್ಪಾದನಾ ಚಕ್ರದಲ್ಲಿ ಹೆಚ್ಚಿನ ಸಂಖ್ಯೆಯ ಚಿಪ್ ಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತವೆ. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ ಮತ್ತು ದಕ್ಷತೆ ಹೆಚ್ಚುತ್ತದೆ. AI ಸರ್ವರ್ ಗಳು, ಡೇಟಾ ಸೆಂಟರ್ ಗಳು, ಸ್ಮಾರ್ಟ್ಫೋನ್ಗಳು ಮತ್ತು ಸುಧಾರಿತ ವಾಹನಗಳಲ್ಲಿ ಬಳಸಲಾಗುವ ಅನೇಕ ಅತ್ಯಾಧುನಿಕ ಚಿಪ್ ಗಳನ್ನು 300mm ವೇಫರ್ ಗಳ ಮೇಲೆಯೇ ಉತ್ಪಾದಿಸಲಾಗುತ್ತದೆ.
ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ 300mm ಫ್ಯಾಬ್ರಿಕೇಶನ್ ಪ್ರಕ್ರಿಯೆಯು ಫ್ರಂಟ್-ಎಂಡ್ ಉತ್ಪಾದನಾ ಹಂತದ ಪ್ರಮುಖ ಕೇಂದ್ರಭಾಗವಾಗಿದೆ. ಈ ಹಂತದಲ್ಲಿ ಸಿಲಿಕಾನ್ ವೇಫರ್ ಗಳ ಮೇಲೆ ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳನ್ನು ವಿನ್ಯಾಸಗೊಳಿಸಿ ತಯಾರಿಸಲಾಗುತ್ತದೆ. ಇದರ ನಂತರದ ಬ್ಯಾಕ್-ಎಂಡ್ ಹಂತಗಳಲ್ಲಿ ಚಿಪ್ ಗಳನ್ನು ಕತ್ತರಿಸಿ, ಪ್ಯಾಕೇಜ್ ಮಾಡಿ, ಪರೀಕ್ಷಿಸಲಾಗುತ್ತದೆ.
►ಈ ಒಪ್ಪಂದವು ಭಾರತಕ್ಕೆ ಏಕೆ ಮಹತ್ವದ್ದಾಗಿದೆ?
ಭಾರತದ ಪಾಲಿಗೆ ಈ ಒಪ್ಪಂದವು ಕೈಗಾರಿಕಾ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಇದು ದೇಶದ ಸ್ವಾವಲಂಬನೆಯನ್ನು ಉತ್ತೇಜಿಸುವುದರೊಂದಿಗೆ ಯುರೋಪ್ ಜೊತೆಗಿನ ಸಂಬಂಧವನ್ನು ಬಲಪಡಿಸುತ್ತದೆ. ಭಾರತವು ಜನವರಿಯಲ್ಲಿ ಯುರೋಪ್ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದನ್ನು ಒಪ್ಪಂದಗಳಲ್ಲೇ ಅತ್ಯಂತ ದೊಡ್ಡ ಒಪ್ಪಂದ ಎಂದು ಕರೆಯಲಾಗಿದೆ.
"ಭಾರತವು 12nm ಚಿಪ್ ಗಳನ್ನು ತಯಾರಿಸುವ ಮೂಲಕ ತನ್ನ ಸೆಮಿಕಂಡಕ್ಟರ್ ಉದ್ಯಮವನ್ನು ವಿಸ್ತರಿಸಲು ಮುಂದಾಗಿದೆ. ಇವುಗಳ ಉತ್ಪಾದನೆಗೆ ಅಗತ್ಯವಿರುವ ಉಪಕರಣಗಳನ್ನು ಪೂರೈಸುವ ಸಾಮರ್ಥ್ಯ ಎಎಸ್ಎಂಎಲ್ ಕಂಪನಿಗೆ ಇದೆ" ಎಂದು 'ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್' ಸಂಸ್ಥೆಯ ನಿರ್ದೇಶಕ ಮತ್ತು ಸೀನಿಯರ್ ಫೆಲೋ ಸುಜಯ್ ಶಿವಕುಮಾರ್ ಹೇಳಿರುವುದಾಗಿ ALJAZEERA ವರದಿ ಮಾಡಿದೆ.
ಈ ನಿಟ್ಟಿನಲ್ಲಿ ಇದು ಎಎಸ್ಎಂಎಲ್ ಕಂಪನಿಯ ಮಾರುಕಟ್ಟೆ ಬೆಳವಣಿಗೆಗೆ ಹಾಗೂ ಭಾರತದ ಒಳಗಿನ ಉತ್ಪಾದನಾ ಸಾಮರ್ಥ್ಯದ ವೃದ್ಧಿಗೆ ಒಂದು ಪ್ರಮುಖ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಒಪ್ಪಂದವು "ಇತ್ತೀಚಿನ ವರ್ಷಗಳಲ್ಲಿ ಭಾರತವು ಕಂಡ ಅತ್ಯಂತ ಪ್ರಮುಖ ಸೆಮಿಕಂಡಕ್ಟರ್ ಬೆಳವಣಿಗೆಗಳಲ್ಲಿ ಒಂದಾಗಿದೆ" ಎಂದು ವಿಶ್ಲೇಷಕರಾದ ಹರ್ಷ್ ವಿ ಪಂತ್ ಅಭಿಪ್ರಾಯಪಟ್ಟಿದ್ದಾರೆ.
AI ಆರ್ಥಿಕತೆಯಲ್ಲಿ ಭಾರತದ ಪಾತ್ರವು "ಕೇವಲ ಸಾಫ್ಟ್ವೇರ್ ಸೇವೆಗಳು ಮತ್ತು AI ಪ್ರತಿಭೆಗಳನ್ನು ಒದಗಿಸುವುದರಿಂದ ಹಿಡಿದು, AI ತಂತ್ರಜ್ಞಾನದ ಹಿಂದಿರುವ ಭೌತಿಕ ಮೂಲಸೌಕರ್ಯದ ಮಾಲೀಕತ್ವವನ್ನು ಹೊಂದುವ ಕಡೆಗೆ ಬದಲಾಗುತ್ತಿರುವುದನ್ನು ಈ ಒಪ್ಪಂದವು ಸೂಚಿಸುತ್ತದೆ" ಎಂದು ಹೊಸದಿಲ್ಲಿಯ ಒಬ್ಸರ್ವರ್ ರಿಸರ್ಚ್ ಫೌಂಡೇಶನ್ನ ಸ್ಟ್ರಾಟೆಜಿಕ್ ಸ್ಟಡೀಸ್ ಕಾರ್ಯಕ್ರಮದ ಮುಖ್ಯಸ್ಥ ಪಂತ್ ಅವರು Aljazeeraಗೆ ತಿಳಿಸಿದ್ದಾರೆ.
ಇದು ಭಾರತವನ್ನು ರಾತ್ರೋರಾತ್ರಿ ಸೆಮಿಕಂಡಕ್ಟರ್ ಪವರ್ಹೌಸ್ ಆಗಿ ಮಾಡದೇ ಇರಬಹುದು. ಆದರೆ ಭಾರತವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಖ್ಯ ದೇಶವಾಗಲು, ಭೌಗೋಳಿಕ ರಾಜಕೀಯವಾಗಿ ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರನಾಗಲು ಮತ್ತು ಅಂತಿಮವಾಗಿ ಕೇವಲ AI ಗ್ರಾಹಕನಾಗಿ ಉಳಿಯದೆ AI ಮೂಲಸೌಕರ್ಯದ ಪ್ರಮುಖ ಪಾಲಾಗಲು ಬಯಸುತ್ತಿದೆ ಎಂಬುದಕ್ಕೆ ಇದು ಅತ್ಯಂತ ಸ್ಪಷ್ಟವಾದ ಸಂಕೇತವಾಗಿದೆ. ಅದಕ್ಕಾಗಿಯೇ ಈ ಒಪ್ಪಂದವು ಅತ್ಯಂತ ಮಹತ್ವದ್ದಾಗಿದೆ. ಭಾರತವು ಇದನ್ನು ಮುಂದಕ್ಕೆ ಕೊಂಡೊಯ್ಯಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಪಂತ್ ಹೇಳಿದ್ದಾರೆ.
ಇದು ದೇಶವನ್ನು ಪ್ರಮುಖ ಜಾಗತಿಕ ತಂತ್ರಜ್ಞಾನ ಮತ್ತು AI ನಾಯಕನನ್ನಾಗಿ ಬಿಂಬಿಸುವ ಸರ್ಕಾರದ ವಿಶಾಲವಾದ ಪ್ರಯತ್ನಕ್ಕೆ ಬೆಂಬಲ ನೀಡುತ್ತದೆ. AI ಸ್ಪರ್ಧೆಯಲ್ಲಿ ಭಾರತವು ಅಮೆರಿಕ ಮತ್ತು ಚೀನಾ ನಂತರದ ಸ್ಥಾನದಲ್ಲಿದೆ.
ವಿಶ್ವದ ಒಟ್ಟು ಚಿಪ್ ಡಿಸೈನ್ ಎಂಜಿನಿಯರ್ ಗಳಲ್ಲಿ ಸುಮಾರು 20 ಪ್ರತಿಶತದಷ್ಟು ಜನರು ಭಾರತೀಯರಾಗಿದ್ದಾರೆ. ಆದ್ದರಿಂದ, ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿಯ ಕೇಂದ್ರವಾಗುವ ತನ್ನ ಪ್ರಯತ್ನದಲ್ಲಿ ಭಾರತವು ಈ ಪ್ರತಿಭಾವಂತರ ಬಳಗವನ್ನು ಬಳಸಿಕೊಳ್ಳಬಹುದು. ಡಿಸೈನ್ ಒಳಗೊಂಡಂತೆ ಈ ಉದ್ಯಮವು "ಸ್ವಭಾವತಃ ಸಂಕೀರ್ಣವಾಗಿದೆ" ಮತ್ತು ಜಾಗತಿಕವಾಗಿ ಪರಸ್ಪರ ಸಂಪರ್ಕ ಹೊಂದಿದೆ. ಯುಎಸ್ ಕಂಪನಿಗಳಲ್ಲಿ ಕೆಲಸ ಮಾಡುವ ಭಾರತೀಯ ಎಂಜಿನಿಯರ್ ಗಳು ಈ ಪರಿಸರ ವ್ಯವಸ್ಥೆಯ ಭಾಗವಾಗಿದ್ದಾರೆ. ನಾವು ಈಗ ನೋಡುತ್ತಿರುವುದು ಆ ಸಂಬಂಧಗಳ ತೀವ್ರತೆಯನ್ನು ಎಂದು ನಾನು ಭಾವಿಸುತ್ತೇನೆ ಎಂದು ಸುಜಯ್ ಶಿವಕುಮಾರ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿರುವ ಸುಂಕ ಸಮರದ ನಡುವೆ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವನ್ನು ಯುರೋಪಿಯನ್ ಒಕ್ಕೂಟ ಒಂದು ಪ್ರಮುಖ ವ್ಯಾಪಾರ ಪಾಲುದಾರ ಮತ್ತು ತನ್ನ ಸರಕು ಹಾಗೂ ಸೇವೆಗಳ ಮಾರುಕಟ್ಟೆಯಾಗಿ ನೋಡುತ್ತದೆ. ತಾಂತ್ರಿಕ ಸ್ವಾತಂತ್ರ್ಯಕ್ಕೆ ಸೆಮಿಕಂಡಕ್ಟರ್ ಉತ್ಪಾದನೆಯು ಅತ್ಯಗತ್ಯ ಎಂದು ಪರಿಗಣಿಸಲಾಗಿರುವುದರಿಂದ, ಈ ಒಪ್ಪಂದವು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ ಅಂತಾರೆ ತಜ್ಞರು.
ಈ ಮಧ್ಯೆ, ಸೆಮಿಕಂಡಕ್ಟರ್ ಉತ್ಪಾದನೆಯನ್ನು ಹೆಚ್ಚಿಸುವ ಭಾರತದ ಪ್ರಯತ್ನಗಳಿಗೆ ಹಿನ್ನಡೆಗಳೂ ಉಂಟಾಗಿವೆ.
2023ರಲ್ಲಿ, ತೈವಾನ್ನ ಫಾಕ್ಸ್ಕಾನ್ ಸಂಸ್ಥೆಯು ವೇದಾಂತ ಸಮೂಹದೊಂದಿಗಿನ 19.5 ಬಿಲಿಯನ್ ಡಾಲರ್ ಮೊತ್ತದ ಸೆಮಿಕಂಡಕ್ಟರ್ ಜಂಟಿ ಉದ್ಯಮದಿಂದ ಹಿಂದೆ ಸರಿಯಿತು. ವರದಿಗಳ ಪ್ರಕಾರ, ಭಾರತ ಸರ್ಕಾರದಿಂದ ಪ್ರೋತ್ಸಾಹಕ ಅನುಮೋದನೆ ದೊರೆಯಲು ವಿಳಂಬವಾದ ಕಾರಣ ಈ ಒಪ್ಪಂದ ಮುರಿದು ಬಿತ್ತು.
ಭಾರತದ AI ಮಹತ್ವಾಕಾಂಕ್ಷೆಗಳು ಯಾವುವು?
ಭಾರತವು ಜಾಗತಿಕ AI ಮತ್ತು ಡಿಜಿಟಲ್ ಆರ್ಥಿಕತೆಯ ನಾಯಕನಾಗಬೇಕು ಎಂಬ ತಮ್ಮ ಆಶಯವನ್ನು ಪ್ರಧಾನಿ ಮೋದಿ ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ AI ಸಂಶೋಧನೆ, ಸೆಮಿಕಂಡಕ್ಟರ್ ಉತ್ಪಾದನೆ, ಡಿಜಿಟಲ್ ಮೂಲಸೌಕರ್ಯ ಮತ್ತು ಸುಧಾರಿತ ಕಂಪ್ಯೂಟಿಂಗ್ ಉಪಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದೆ.
2024ರಲ್ಲಿ ಭಾರತವು ತನ್ನ ಪ್ರಮುಖ AI ಯೋಜನೆಯಾದ ‘ಇಂಡಿಯಾ AI ಮಿಷನ್’ ಪ್ರಾರಂಭಿಸಿತು. ಇದಕ್ಕಾಗಿ ಐದು ವರ್ಷಗಳ ಅವಧಿಗೆ 1.07 ಬಿಲಿಯನ್ ಡಾಲರ್ ಹಣವನ್ನು ಮೀಸಲಿಟ್ಟಿತು. ಸರ್ಕಾರದ ಪ್ರಕಾರ, "ಕಂಪ್ಯೂಟಿಂಗ್ ಸಾಮರ್ಥ್ಯದ ಲಭ್ಯತೆಯನ್ನು ವಿಸ್ತರಿಸುವುದು, ಸಂಶೋಧನೆಗೆ ಬೆಂಬಲ ನೀಡುವುದು ಮತ್ತು ಸ್ಟಾರ್ಟ್-ಅಪ್ ಗಳಿಗೆ ಸಹಾಯ ಮಾಡುವುದು" ಈ ಯೋಜನೆಯ ಪ್ರಮುಖ ಗುರಿಗಳಾಗಿವೆ.
ಈ ಮಿಷನ್ ಏಳು ಪ್ರಮುಖ ಸ್ತಂಭಗಳನ್ನು ಒಳಗೊಂಡಿದೆ. ಇದರಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಮೂಲಗಳನ್ನು ಬಳಸಿಕೊಂಡು ಮಾದರಿಗಳ ತರಬೇತಿಗಾಗಿ ಡೇಟಾಸೆಟ್ ಗಳನ್ನು ರಚಿಸುವುದು, ಆರೋಗ್ಯ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ವಿವಿಧ ಕ್ಷೇತ್ರಗಳಿಗಾಗಿ AI ಅಪ್ಲಿಕೇಶನ್ಗಳನ್ನು ನಿರ್ಮಿಸುವುದು ಮತ್ತು AI ಸ್ಟಾರ್ಟ್-ಅಪ್ ಗಳಿಗೆ ಆರ್ಥಿಕ ನೆರವು ನೀಡುವುದು ಸೇರಿದೆ.
ಫೆಬ್ರವರಿಯಲ್ಲಿ ಭಾರತ ಹೊಸದಿಲ್ಲಿಯಲ್ಲಿ ‘AI ಇಂಪ್ಯಾಕ್ಟ್ ಸಮ್ಮಿಟ್’ ಆಯೋಜಿಸಿತ್ತು. ಇದರಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಓಪನ್AI ಸಿಇಒ ಸ್ಯಾಮ್ ಆಲ್ಟ್ ಮನ್ ಸೇರಿದಂತೆ ವಿಶ್ವದ ವಿವಿಧ ದೇಶಗಳ ಪ್ರಮುಖರು ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.
ಭಾರತದ ಬೃಹತ್ ಜನಸಂಖ್ಯೆ, ಎಂಜಿನಿಯರಿಂಗ್ ಉದ್ಯೋಗ ಶಕ್ತಿ ಮತ್ತು ಡಿಜಿಟಲ್ ಆರ್ಥಿಕತೆಯು ದೇಶವನ್ನು ಪ್ರಮುಖ AI ಮಾರುಕಟ್ಟೆ ಹಾಗೂ ಆವಿಷ್ಕಾರದ ಕೇಂದ್ರವನ್ನಾಗಿ ಮಾಡಲು ಪೂರಕವಾಗಿವೆ ಎಂದು ಮೋದಿ ಪದೇ ಪದೇ ಹೇಳಿದ್ದಾರೆ.
ಆರ್ಥಿಕತೆಯನ್ನು ಉತ್ತೇಜಿಸಲು, ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ರಕ್ಷಣೆ ಹಾಗೂ ದೂರಸಂಪರ್ಕ ಸೇರಿದಂತೆ ಆಯಕಟ್ಟಿನ ಉದ್ಯಮಗಳಿಗೆ ಬೆಂಬಲ ನೀಡಲು ಸೆಮಿಕಂಡಕ್ಟರ್ ಉತ್ಪಾದನೆಯು ಒಂದು ಉತ್ತಮ ಮಾರ್ಗ ಎಂದು ಸರ್ಕಾರ ಭಾವಿಸಿದೆ. ಆದರೆ AI ಕ್ಷೇತ್ರದಲ್ಲಿ ಭಾರತದ ಭವಿಷ್ಯವು ಉಜ್ವಲವಾಗಿದೆ ಎಂದು ತಜ್ಞರು ಪರಿಗಣಿಸಿದ್ದರೂ, ಸವಾಲುಗಳು ಇನ್ನೂ ಬಾಕಿ ಉಳಿದಿವೆ.
ಸುಜಯ್ ಶಿವಕುಮಾರ್ ಅವರ ಪ್ರಕಾರ, ಭಾರತದ ಪ್ರಮುಖ ಸವಾಲು "ಮೂಲಸೌಕರ್ಯ"ಕ್ಕೆ ಸಂಬಂಧಿಸಿದ್ದಾಗಿದೆ. ಇದರರ್ಥ ಗಣನೀಯವಾದ, ವಿಶ್ವಾಸಾರ್ಹವಾದ ಮತ್ತು ಉತ್ತಮ ಗುಣಮಟ್ಟದ ವಿದ್ಯುತ್, ನೀರು ಸರಬರಾಜು ಹಾಗೂ ಉನ್ನತ ಮಟ್ಟದ ಮತ್ತು ತಾಂತ್ರಿಕ ಮಟ್ಟದ ಕೌಶಲ್ಯಗಳನ್ನು ಒಳಗೊಂಡ ಎಲ್ಲಾ ಹಂತದ ಕೌಶಲ್ಯಾಭಿವೃದ್ಧಿಯ ಅಗತ್ಯವಿದೆ.
ಇದಲ್ಲದೆ, ಇರಾನ್ ಮೇಲಿನ ಯುಎಸ್-ಇಸ್ರೇಲ್ ಯುದ್ಧದ ಉಲ್ಬಣದ ನಂತರ, ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಗಳಿಂದ 20 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚು ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಇದು ಇದುವರೆಗೆ ದಾಖಲಾದ ಅತ್ಯಂತ ತೀವ್ರವಾದ ಬಂಡವಾಳ ಹೊರಹರಿವಾಗಿದೆ.
ಈ ಒತ್ತಡವು ರೂಪಾಯಿಯ ಮೌಲ್ಯವನ್ನು ಸಹ ಕುಗ್ಗಿಸಿದೆ. ಇದರಿಂದಾಗಿ ಕರೆನ್ಸಿಗೆ ಬೆಂಬಲ ನೀಡಲು RBI ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡಬೇಕಾಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಪ್ರಾರಂಭವಾಗುವ ಮೊದಲು 720 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿದ್ದ ಆ ಮೀಸಲು ನಿಧಿಯು ಈಗ ಸುಮಾರು 697 ಬಿಲಿಯನ್ ಡಾಲರ್ಗೆ ಕುಸಿದಿದೆ.
►ವಿಶ್ವದ ಪ್ರಮುಖ ಚಿಪ್ ತಯಾರಕರು ಯಾರು?
ಜಾಗತಿಕ ಸೆಮಿಕಂಡಕ್ಟರ್ ಉದ್ಯಮವು ಕೆಲವು ನಿರ್ದಿಷ್ಟ ಕಂಪನಿಗಳು ಮತ್ತು ದೇಶಗಳ ನಿಯಂತ್ರಣದಲ್ಲಿದೆ.
►ಪ್ರಮುಖ ಕಂಪನಿಗಳು ಇವು:
ASML: ವೆಲ್ಡ್ಹೋವನ್, ನೆದರ್ಲ್ಯಾಂಡ್ಸ್
ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ (TSMC): ಹ್ಸಿಂಚು ಸಿಟಿ, ತೈವಾನ್
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್: ಸುವಾನ್-ಸಿ, ದಕ್ಷಿಣ ಕೊರಿಯಾ
ಇಂಟೆಲ್: ಸಾಂಟಾ ಕ್ಲಾರಾ, ಕ್ಯಾಲಿಫೋರ್ನಿಯಾ, ಅಮೆರಿಕ
ಎನ್ವಿಡಿಯಾ: ಸಾಂಟಾ ಕ್ಲಾರಾ, ಕ್ಯಾಲಿಫೋರ್ನಿಯಾ
ಕ್ವಾಲ್ಕಾಮ್: ಸ್ಯಾನ್ ಡಿಯಾಗೋ, ಕ್ಯಾಲಿಫೋರ್ನಿಯಾ
ಬ್ರಾಡ್ಕಾಮ್: ಪಾಲೋ ಆಲ್ಟೊ, ಕ್ಯಾಲಿಫೋರ್ನಿಯಾ
►ಮೋದಿಯವರ ಬಹುರಾಷ್ಟ್ರ ಪ್ರವಾಸದ ಅಜೆಂಡಾ ಏನು?
ನೆದರ್ಲ್ಯಾಂಡ್ಸ್ ಪ್ರವಾಸದ ನಂತರ ಮೋದಿ ತಮ್ಮ ಐದು ರಾಷ್ಟ್ರಗಳ ಪ್ರವಾಸವನ್ನು ಮುಂದುವರಿಸಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಈ ಪ್ರವಾಸವು ವ್ಯಾಪಾರ, ಇಂಧನ ಸಹಕಾರ ಮತ್ತು ಹೂಡಿಕೆಯ ಮೇಲೆ ಹೆಚ್ಚಿನ ಗಮನ ಹರಿಸಿದೆ.
ಮೋದಿಯವರ ಮೊದಲ ಭೇಟಿ ಯುಎಇ ಆಗಿತ್ತು. ಅಲ್ಲಿ ಅವರು ರಕ್ಷಣೆ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದರು. ಇರಾನ್ ಯುದ್ಧದಿಂದ ಉಂಟಾದ ತೈಲ ಬಿಕ್ಕಟ್ಟಿನಿಂದ ಭಾರತ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ, ತನ್ನ ಆಯಕಟ್ಟಿನ ತೈಲ ಮೀಸಲು ಹೆಚ್ಚಿಸಲು ಭಾರತವು ಯುಎಇ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಸ್ವೀಡನ್ ನಲ್ಲಿ ರಕ್ಷಣಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮೋದಿ ಸೋಮವಾರ ನಾರ್ವೆಗೆ ಪ್ರಯಾಣಿಸಿದ್ದರು. ಅವರ ಈ ಪ್ರವಾಸವು ಇಟಲಿಯಲ್ಲಿ ಮುಕ್ತಾಯಗೊಳ್ಳಲಿದ್ದು, ಅಲ್ಲಿ ಅವರು ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ.
ಮೋದಿ ಸ್ವೀಡನ್ ನಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರೊಂದಿಗೆ ಯುರೋಪಿಯನ್ ಬಿಸಿನೆಸ್ ಫೋರಂನಲ್ಲಿಯೂ ಭಾಗವಹಿಸಿದ್ದರು.
ಮೋದಿ ಇಂದು (ಮಂಗಳವಾರ) ನಾರ್ವೆಯಲ್ಲಿ ನಡೆಯಲಿರುವ 'ಭಾರತ-ನಾರ್ಡಿಕ್ ಶೃಂಗಸಭೆ'ಯಲ್ಲಿ (India-Nordic Summit) ಭಾಗವಹಿಸಿದ್ದು, ಈ ಮೂಲಕ ಕಳೆದ 40 ವರ್ಷಗಳಲ್ಲಿ ನಾರ್ವೆಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಶೃಂಗಸಭೆಯು ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.