×
Ad

ಸೌರ ಶಕ್ತಿ ಅಳವಡಿಸಿ ಹೆಚ್ಚುವರಿ ವಿದ್ಯುತ್ ಹೆಸ್ಕಾಂಗೆ ಮಾರಾಟ

ಮಾದರಿಯಾದ ಕಾರವಾರದ ಸಾಮಾಜಿಕ ಅರಣ್ಯ ಇಲಾಖೆ

Update: 2026-07-13 09:45 IST

ಕಾರವಾರ : ಇತ್ತೀಚಿನ ವರ್ಷಗಳಲ್ಲಿ ಪರಿಸರ ಸ್ನೇಹಿ ಮತ್ತು ಸ್ವಾವಲಂಬಿ ಇಂಧನ ಬಳಕೆಗೆ ಜಗತ್ತಿನಾದ್ಯಂತ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರಿ ಕಚೇರಿಯ ಟೆರೇಸ್ (ಮೇಲ್ಛಾವಣಿ) ಮೇಲೆ ಸೌರ ವಿದ್ಯುತ್ ಸ್ಥಾವರಗಳನ್ನು ಅಳವಡಿಸಿ ಯಶಸ್ವಿಯಾಗುವುದರ ಜೊತೆಗೆ ಕಚೇರಿಯ ವಿದ್ಯುತ್ ವೆಚ್ಚದ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಿ, ಆದಾಯವನ್ನಾಗಿಯೂ ಪರಿವರ್ತಿಸಿಕೊಂಡು ಹಸಿರು ಶಕ್ತಿಯ ಬಳಕೆಯತ್ತ ಹೆಜ್ಜೆಯಿಟ್ಟು ಮಾದರಿಯಾಗಿದೆ ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗ ಕಚೇರಿ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಿಶಾ ಸಭೆಯಲ್ಲಿ ಸಂಸದರು ಸರಕಾರಿ ಕಚೇರಿಗಳ ಮೇಲ್ಛಾವಣಿ ಮೇಲೆ ಸೌರಶಕ್ತಿಯ ವಿದ್ಯುತ್ ಉತ್ಪಾದಿಸುವಂತೆ ಕರೆ ನೀಡಿದ್ದು, ಅದರಂತೆ ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಕಟ್ಟದ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಸ್ಥಾವರ ಅಳವಡಿಸಲಾಗಿದೆ. ಇದರಿಂದ ಕಚೇರಿಯ ಬಳಕೆಗೆ ಅಗತ್ಯವಿರುವ ಸಂಪೂರ್ಣ ವಿದ್ಯುತ್ ಉಚಿತವಾಗಿ ದೊರೆಯುತ್ತಿದೆ. ಈಗಾಗಲೇ ಹೆಚ್ಚುವರಿಯಾಗಿ ಉತ್ಪಾದನೆಯಾದ 292 ಯೂನಿಟ್ ವಿದ್ಯುತ್ ಅನ್ನು ಹೆಸ್ಕಾಂಗೆ ಮಾರಾಟ ಮಾಡಲಾಗಿದೆ. ಈ ಯೋಜನೆಯು ಕಚೇರಿಯ ವಿದ್ಯುತ್ ಬಿಲ್ ಉಳಿಸುವ ಯೋಜನೆ ಮಾತ್ರವಾಗಿರದೆ ಸರಕಾರಿ ವಲಯದಲ್ಲೂ ಪರಿಸರಸ್ನೇಹಿ ತಂತ್ರಜ್ಞಾನವನ್ನು ಹೇಗೆ ಯಶಸ್ವಿಯಾಗಿ ಬಳಸಬಹುದು ಎಂಬುದಕ್ಕೆ ಉತ್ತಮ ನಿರ್ಣಯವಾಗಿದೆ ಎನ್ನುತ್ತಾರೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ.

ಕಾರವಾರದ ಸಾಮಾಜಿಕ ಅರಣ್ಯ ವಿಭಾಗ ಕಚೇರಿಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವ ಹಾಗೂ ವಿದ್ಯುತ್ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದಿಂದ 4.20 ಲಕ್ಷ ರೂ. ವೆಚ್ಚದಲ್ಲಿ 5 ಕಿ.ವ್ಯಾ. ಸಾಮರ್ಥ್ಯದ ಸೌರ ಮೇಲ್ಛಾವಣಿ ನೆಟ್ ಮೀಟರಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಸದರಿ ವ್ಯವಸ್ಥೆಯು 2026ರ ಎಪ್ರಿಲ್‌ನಿಂದ ಕಾರ್ಯಾರಂಭ ಮಾಡಿದೆ.

ಈ ಸೌರ ಮೇಲ್ಛಾವಣಿ ವ್ಯವಸ್ಥೆಯಿಂದ ಸರಾಸರಿ ತಿಂಗಳಿಗೆ ಸುಮಾರು 600 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಬೇಸಿಗೆ ಅವಧಿಯಲ್ಲಿ ಗರಿಷ್ಠ ಒಂದು ದಿನದಲ್ಲಿ 29.5 ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿತ್ತು. ಪ್ರಸಕ್ತ ಮಳೆಗಾಲದ ಮೋಡ ಕವಿದ ವಾತಾವರಣದಲ್ಲೂ ದಿನಕ್ಕೆ ಸರಾಸರಿ 6 ಯೂನಿಟ್ ವಿದ್ಯುತ್ ಉತ್ಪಾದನೆಯನ್ನು ಕಾಯ್ದುಕೊಂಡಿದೆ. ಸೌರ ವ್ಯವಸ್ಥೆ ಅಳವಡಿಸುವ ಪೂರ್ವದಲ್ಲಿ ಕಚೇರಿಯ ಮಾಸಿಕ ವಿದ್ಯುತ್ ಬಿಲ್ ಸುಮಾರು 5,000 ರೂ. ಯಿಂದ 6,000 ರೂ. ರವರೆಗೆ ಬರುತ್ತಿತ್ತು. ಪ್ರಸಕ್ತ ನೆಟ್ ಮೀಟರಿಂಗ್ ವ್ಯವಸ್ಥೆ ಜಾರಿಯಾದ ನಂತರ ಮಾಸಿಕ ವಿದ್ಯುತ್ ವೆಚ್ಚವು ನಿಗದಿತ ಕನಿಷ್ಠ ಮೊತ್ತ 1,000 ರೂ. ಬರುತ್ತಿದ್ದು, ವಿದ್ಯುತ್ ವೆಚ್ಚದಲ್ಲಿ ಇಲಾಖೆಗೆ ಪ್ರತಿ ತಿಂಗಳು ಶೇ.80ಕ್ಕಿಂತ ಹೆಚ್ಚು ಹಣ ಉಳಿತಾಯವಾಗುತ್ತಿದೆ.

ಕಚೇರಿಯ ಅಗತ್ಯಕ್ಕೆ ಅನುಗುಣವಾಗಿ ಬಳಕೆಯಾಗುವ ವಿದ್ಯುತ್ ನಂತರ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಮತ್ತು ರವಿವಾರ ಅಥವಾ ಸಾರ್ವಜನಿಕ ರಜಾ ದಿನಗಳಲ್ಲಿ ಕಚೇರಿಯು ಮುಚ್ಚಿ ರುವಾಗ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಸ್ಥಳೀಯ ಗ್ರಿಡ್‌ಗೆ ಸರಬರಾಜು ಮಾಡಲಾಗುತ್ತದೆ. ಇದಕ್ಕೆ ಹೆಸ್ಕಾಂನಿಂದ ಪ್ರತಿ ಯೂನಿಟ್‌ಗೆ 3.08 ರೂ. ಯಂತೆ ಅರಣ್ಯ ಇಲಾಖೆಗೆ ಪಾವತಿಸಲಾಗುತ್ತದೆ.

ಪರಿಸರ ಸಂರಕ್ಷಣೆ ಮತ್ತು ಹಸಿರು ವಲಯದ ವಿಸ್ತರಣೆಯನ್ನೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ಸಾಮಾಜಿಕ ಅರಣ್ಯ ವಿಭಾಗದ ಕಚೇರಿ, ಇದೀಗ ನವೀಕರಿಸಬಹುದಾದ ಇಂಧನ ಬಳಕೆಯಲ್ಲೂ ಇಡೀ ಜಿಲ್ಲೆಗೆ ಮಾದರಿಯಾಗಿ ಹೊರ ಹೊಮ್ಮಿದೆ. ರಾಜ್ಯದಲ್ಲಿನ ಸರಕಾರಿ ಕಚೇರಿಗಳು ಪ್ರತಿ ತಿಂಗಳು ಕೋಟ್ಯಂತರ ರೂ. ವಿದ್ಯುತ್ ಬಿಲ್ ಅನ್ನು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಪಾವತಿಸಬೇಕಾಗಿದ್ದು, ಪ್ರತಿ ವರ್ಷವೂ ಈ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿದೆ. ಎಲ್ಲಾ ಸರಕಾರಿ ಕಟ್ಟಡಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಚೇರಿಯ ಬಳಕೆಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಿದಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಉಳಿತಾಯದ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೊಡುಗೆ ನೀಡಬಹುದಾಗಿದೆ ಮತ್ತು ರಾಜ್ಯವನ್ನು ಸಂಪೂರ್ಣ ಇಂಧನ ಸ್ವಾವಲಂಬಿಯನ್ನಾಗಿ ಮಾಡಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಪ್ರಸಕ್ತ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಸಾಮಾಜಿಕ ಅರಣ್ಯ ವಿಭಾಗದ 7 ವಲಯ ಕಚೇರಿಗಳಲ್ಲಿ ಕಟ್ಟಡಗಳ ವಿಸ್ತೀರ್ಣವನ್ನು ಆಧರಿಸಿ 2 ಕಿ.ವ್ಯಾ. ಸಾಮರ್ಥ್ಯದ ಸೌರ ಮೇಲ್ಛಾವಣಿಯನ್ನು ಅಳವಡಿಸುವ ಯೋಜನೆಯನ್ನು ಹೊಂದಲಾಗಿದೆ.

-ಮಂಜುನಾಥ ನಾವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ಕಾರವಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News