ಸಾಂದರ್ಭಿಕ ಚಿತ್ರ | Photo Credit : magnific.com

ಲೋಳೆ ಎಂದು ಮೂಗು ಮುರಿಯಬೇಡಿ, ಬೆಂಡೆಕಾಯಿಯಲ್ಲಿದೆ ಆರೋಗ್ಯದ ಗಣಿ

ಲೋಳೆಯ ರಚನೆಯಿಂದಾಗಿ ಬೆಂಡೆಕಾಯಿ ತಿನ್ನಲು ಇಷ್ಟಪಡದವರು ಖಂಡಿತವಾಗಿಯೂ ಬಹಳ ಜನರಿದ್ದಾರೆ. ಮಕ್ಕಳೂ ಈ ತರಕಾರಿ ತಿನ್ನಲು ಅಳುತ್ತಾರೆ. ಆದರೆ ಬೆಂಡೆಕಾಯಿಯ ಪೌಷ್ಠಿಕ ಪ್ರಯೋಜನಗಳು ಬಹಳ ಇವೆ. ಜಿಗುಟಾಗಿದೆ ಎಂದು ಅದನ್ನು ತೊರೆಯುವವರು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು.

18 ವರ್ಷಗಳಿಗೂ ಹೆಚ್ಚು ಅನುಭವವಿರುವ ಹಾಗೂ ಸ್ಲೋ ಬರ್ನ್ ಮೆಥಡ್‌ ನ ಸಂಸ್ಥಾಪಕರಾಗಿರುವ, ‘ಕ್ವಾಡ್ ಫಿಟ್‌ನೆಸ್‌’ನ ಸಹ ಸಂಸ್ಥಾಪಕ ಮತ್ತು ಮುಖ್ಯ ತರಬೇತುದಾರರಾಗಿರುವ ಚೆನ್ನೈ ಮೂಲದ ಫಿಟ್‌ನೆಸ್ ತರಬೇತುದಾರ ರಾಜ್ ಗಣಪತಿ, ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ವೀಡಿಯೋದಲ್ಲಿ ಬೆಂಡೆಕಾಯಿ ತಿನ್ನುವುದರಿಂದ ಆಗುವ ಪೌಷ್ಠಿಕಾಂಶದ ಪ್ರಯೋಜನಗಳನ್ನು ವಿವರಿಸಿದ್ದಾರೆ.

Full View

ಫೈಬರ್

ಬೆಂಡೆಕಾಯಿ ಕರಗುವ ಮತ್ತು ಕರಗದ ಫೈಬರ್ ಎರಡರಲ್ಲೂ ಸಮೃದ್ಧವಾಗಿದೆ. ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಪ್ರಕಾರ, ಇದರ ಜೆಲ್‌ ತರಹದ ಕರಗುವ ಫೈಬರ್ ಜೀರ್ಣಾಂಗದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಬೆಂಡೆಕಾಯಿಯು ಪೆಕ್ಟಿನ್ ಅನ್ನೂ ಒಳಗೊಂಡಿದೆ. ಪೆಕ್ಟಿನ್ ಸಕಾರಾತ್ಮಕವಾಗಿ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುವ ಮತ್ತು ಆರೋಗ್ಯಕರ ಜೀರ್ಣಕ್ರಿಯೆಯನ್ನು ಬೆಂಬಲಿಸುವ ಪ್ರಿಬಯಾಟಿಕ್ ಫೈಬರ್ ಆಗಿರುತ್ತದೆ.

“ಅಚ್ಚರಿಯ ವಿಷಯವೆಂದರೆ ಬೆಂಡೆಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. 100 ಗ್ರಾಂ ಬೆಂಡೆಕಾಯಿಯಲ್ಲಿ 30 ಕ್ಯಾಲರಿಗಳಷ್ಟೇ ಇದ್ದು, 3–4 ಗ್ರಾಂ ಫೈಬರ್ ಒದಗಿಸುತ್ತದೆ. ಹೀಗಾಗಿ ಬೆಂಡೆಕಾಯಿಯ ಲೋಳೆ ಪ್ರಯೋಜನಕಾರಿ ಫೈಬರ್” ಎನ್ನುತ್ತಾರೆ ರಾಜ್.

ಮೆಗ್ನೇಸಿಯಂ

ಬೆಂಡೆಕಾಯಿಯಲ್ಲಿ ಮೆಗ್ನೇಸಿಯಂ ಸಮೃದ್ಧವಾಗಿದೆ. ಮೆಗ್ನೇಸಿಯಂ ಆರೋಗ್ಯಕರ ನರ ಮತ್ತು ಸ್ನಾಯುಗಳ ಕಾರ್ಯವನ್ನು ಬೆಂಬಲಿಸುವ ಅತ್ಯಗತ್ಯ ಖನಿಜ. ವರದಿಗಳ ಪ್ರಕಾರ, ಮೆಗ್ನೇಸಿಯಂ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲೂ ಪಾತ್ರವಹಿಸುತ್ತದೆ. ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆಗೆ ಕೆಲಸ ಮಾಡುತ್ತದೆ.

“100 ಗ್ರಾಂ ಬೆಂಡೆಕಾಯಿಯು 50ರಿಂದ 60 ಮಿಲಿಗ್ರಾಂ ಮೆಗ್ನೇಸಿಯಂ ಹೊಂದಿರುತ್ತದೆ. ಅಂದರೆ, ನಿಮ್ಮ ದೈನಂದಿನ ಅವಶ್ಯಕತೆಯ ಶೇ 15ರಷ್ಟು ಮೆಗ್ನೇಸಿಯಂ ಹೊಂದಿರುತ್ತದೆ” ಎನ್ನುತ್ತಾರೆ ರಾಜ್.

ವಿಟಮಿನ್‌ ಗಳು

“ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. 100 ಗ್ರಾಂನಲ್ಲಿ ಎರಡೂ ವಿಟಮಿನ್‌ಗಳ ದೈನಂದಿನ ಅವಶ್ಯಕತೆಯ ಶೇ 25ಕ್ಕಿಂತ ಹೆಚ್ಚಿನದನ್ನು ಕೇವಲ 30ರಿಂದ 35 ಕ್ಯಾಲರಿಗಳಲ್ಲಿ ಒದಗಿಸುತ್ತದೆ” ಎನ್ನುತ್ತಾರೆ ರಾಜ್.

ಬೆಂಡೆಕಾಯಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಕೆ ಒದಗಿಸುತ್ತದೆ. ವಿಟಮಿನ್ ಸಿ ಆ್ಯಂಟಿಆಕ್ಸಿಡಂಟ್‌ ಆಗಿ ಕೆಲಸ ಮಾಡುತ್ತದೆ. ರೋಗನಿರೋಧಕ ಕಾರ್ಯ, ಅಂಗಾಂಶ ದುರಸ್ತಿ ಮತ್ತು ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುವಾಗ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ನೆರವಾಗುತ್ತದೆ. ವಿಟಮಿನ್ ಕೆ ಆರೋಗ್ಯಕರ ರಕ್ತ ಹೆಪ್ಪುಗಟ್ಟುವಿಕೆಗೆ ಅತ್ಯಗತ್ಯ. ಸರಿಯಾದ ಕ್ಯಾಲ್ಸಿಯಂ ನಿಯಂತ್ರಣವನ್ನು ಬೆಂಬಲಿಸುವ ಮೂಲಕ ಬಲವಾದ ಮೂಳೆಗಳನ್ನು ಕಾಪಾಡಲು ಸಹಾಯ ಮಾಡುತ್ತದೆ.

ಆ್ಯಂಟಿಆಕ್ಸಿಡಂಟ್‌ ಗಳು

ಬೆಂಡೆಕಾಯಿಯಲ್ಲಿ ಆ್ಯಂಟಿಆಕ್ಸಿಡಂಟ್‌ಗಳು ಸಮೃದ್ಧವಾಗಿದ್ದು, ಹಾನಿಕರ ಸ್ವತಂತ್ರ ಕಣಗಳಿಂದ ಉಂಟಾಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಈ ಸಸ್ಯ ಸಂಯುಕ್ತಗಳು ಉರಿಯೂತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಬೆಂಬಲಿಸಬಹುದು.

“ಆ್ಯಂಟಿಆಕ್ಸಿಡಂಟ್‌ಗಳಲ್ಲಿ ನಿರ್ದಿಷ್ಟವಾಗಿ ನಿಮ್ಮ ಹೃದಯದ ಆರೋಗ್ಯ ಮತ್ತು ಮೆದುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುವ ಪಾಲಿಫಿನಾಲ್‌ಗಳಲ್ಲೂ ಸಮೃದ್ಧವಾಗಿದೆ” ಎನ್ನುತ್ತಾರೆ ರಾಜ್.

ಸೂಚನೆ: ಲೇಖನವನ್ನು ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಮಾಧ್ಯಮಗಳ ಮೂಲದಿಂದ ಬರೆಯಲಾಗಿದ್ದು, ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯ ಸಲಹೆಗಳಿಗೆ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor