×
Ad

ಟಿ.ಶ್ಯಾಮ ಭಟ್ ವಿರುದ್ಧದ ಪ್ರಕರಣ ಕೈಬಿಡಲು ರಾಜ್ಯ ಸರಕಾರ ನಿರ್ಧಾರ

ಬಿಡಿಎ ಬಡಾವಣೆ ನಕ್ಷೆಯನ್ನೇ ತಿದ್ದುಪಡಿಗೊಳಿಸಿ ಅಧಿಕಾರ ದುರುಪಯೋಗ ಆರೋಪ

Update: 2026-01-27 08:17 IST

ಬೆಂಗಳೂರು : ನಿವೇಶನದ ಮೂಲ ಹಂಚಿಕೆದಾರರ ಒಪ್ಪಿಗೆ ಪಡೆಯದೇ ಬಡಾ ವಣೆ ನಕ್ಷೆಯನ್ನೇ ತಿದ್ದುಪಡಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ ಪ್ರಕರಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಟಿ ಶ್ಯಾಮ್ ಭಟ್ ಮತ್ತಿತರರ ವಿರುದ್ಧ ಎರಡೂವರೆ ವರ್ಷದ ಹಿಂದೆ ತನಿಖೆಗೆ ಆದೇಶ ಹೊರಡಿಸಿದ್ದ ಸರಕಾರವು ಇದೀಗ ಈ ಪ್ರಕರಣದಲ್ಲಿ ಪ್ರಾಧಿಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ ಎಂದು ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು)ಗೆ ಸಂಬಂಧಿಸಿ ನಗರಾಭಿವೃದ್ಧಿ ಇಲಾಖೆಯ ಬಿಡಿಎ ಶಾಖೆಯಲ್ಲಿ ಬಾಕಿ ಇರುವ ವಿಚಾರಣೆ, ತನಿಖೆ ನಡೆಸುವ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯು 2026ರ ಜನವರಿ 12ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಟಿ. ಶ್ಯಾಮ್ ಭಟ್ ಅವರ ವಿರುದ್ಧದ ಪ್ರಕರಣಗಳ ಕುರಿತೂ ಚರ್ಚೆ ನಡೆಸಿದೆ.

ವಿಚಾರಣೆ ಅಗತ್ಯವಿಲ್ಲವೆಂದ ಬಿಡಿಎ ಆಯುಕ್ತರು?: ಸರ್ ಎಂ ವಿಶ್ವೇಶ್ವರಯ್ಯ 5ನೇ ಹಂತದ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನ ಸಂಖ್ಯೆ 617ಗೆ ಬದಲಾಗಿ ಸರ್ ಎಂ.ವಿಶ್ವೇಶ್ವರಯ್ಯ 5ನೇ ಹಂತದ ಬಡಾವಣೆ ಯಲ್ಲಿಯೇ 60x40 ಅಳತೆಯ ನಿವೇಶನ ಸಂಖ್ಯೆ 1607x69ನ್ನು ಹಂಚಿಕೆ ಮಾಡಿದ್ದರ ಪ್ರಕರಣದಲ್ಲಿ ಮೂಲ ಹಂಚಿಕೆದಾರರಿಗೆ ಪ್ರಾಧಿಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ. ಹೀಗಾಗಿ ಇವರ ವಿರುದ್ಧ ತನಿಖೆ, ವಿಚಾರಣೆ ನಡೆಸುವುದು ಅಗತ್ಯವಿಲ್ಲ ಎಂದು ಬಿಡಿಎ ಆಯುಕ್ತರು ವರದಿ ನೀಡಿದ್ದಾರೆ.

ಈ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ತಿಳಿಸಬೇಕು. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅನುಮೋದನೆ ಪಡೆಯಲು ಕ್ರಮ ವಹಿಸಲಾಗುತ್ತಿದೆ ಎಂದು ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಇದೇ ಪ್ರಕರಣದಲ್ಲಿ ರೇಷ್ಮೆ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿದ್ದ ಐಎಎಸ್ ರೂಪ, ಬಿಡಿಎ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ.ರಾಮಕೃಷ್ಣ (ಹಾಲಿ ನಿವೃತ್ತ), ಜಿ.ಕೆ. ರವೀಂದ್ರ (ಹಾಲಿ ನಿವೃತ್ತ), ಬಿ.ಸಿ.ಪ್ರಕಾಶ್ ಅವರ ವಿರುದ್ಧ ವಿಚಾರಣೆ, ತನಿಖೆ ಕೈಗೊಳ್ಳಲು 2023ರ ಆಗಸ್ಟ್ 18ರಂದೇ ಪೂರ್ವಾನುಮತಿ ನೀಡಿತ್ತು.

ಮೂಲ ಹಂಚಿಕೆದಾರರಿಗೆ ತೊಂದರೆ ಯನ್ನುಂಟು ಮಾಡಿ ಸರಕಾರಿ ಅಧಿಕಾರಿಗಳು ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪ ಪ್ರಕರಣದಲ್ಲಿ ತನಿಖೆ ವಿಚಾರಣೆ ಕೈಗೊಳ್ಳಲು ಹಿಂದಿನ ಬಿಜೆಪಿ ಸರಕಾರವು ಪೂರ್ವಾನುಮತಿ ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ 100 ದಿನದೊಳಗೆ ಟಿ.ಶ್ಯಾಮ್ ಭಟ್, ಐಎಎಸ್ ಅಧಿಕಾರಿ ರೂಪ ಅವರ ವಿರುದ್ಧ ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ನೀಡಿ ಆದೇಶ ಹೊರಡಿಸಿತ್ತು.

ಒಮ್ಮೆ ತನಿಖೆ ನಡೆಸಲು ಪೂರ್ವಾನುಮತಿ ನೀಡಿ ನಂತರ ತನಿಖೆ ನಡೆಸುವ ಅಗತ್ಯವೇ ಇಲ್ಲವೆಂದು ಬಿಡಿಎ ಆಯುಕ್ತರು ನೀಡಿದ್ದ ವರದಿಗೆ ಮನ್ನಣೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಏನಿದು ಪ್ರಕರಣ?: ಬೆಂಗಳೂರು ಆಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆಯಲ್ಲಿನ ಭಾಸ್ಕರ್ ರೆಡ್ಡಿ ಎಂಬವರಿಗೆ 60x40 ಅಳತೆಯ ನಿವೇಶನವನ್ನು (ಸಂಖ್ಯೆ 617) ಹಂಚಿಕೆ ಮಾಡಿತ್ತು. ನಂತರ ಭಾಸ್ಕರ್ ರೆಡ್ಡಿ ಅವರಿಗೆ ಈ ನಿವೇಶನಕ್ಕೆ ಬದಲಾಗಿ ಸರ್ ಎಸ್. ವಿಶ್ವೇಶ್ವರಯ್ಯ 5ನೇ ಬಡಾವಣೆಯಲ್ಲಿಯೇ 1607/69 ಕ್ರಮಾಂಕದಲ್ಲಿದ್ದ ನಿವೇಶನವನ್ನು ಹಂಚಿಕೆ ಮಾಡಿ ಹಂಚಿಕೆ ಪತ್ರ ನೀಡಿತ್ತು. ಅಲ್ಲದೇ ಬಿಡಿಎ ಉಪ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ರೂಪ ಎಂಬುವರು ಶುದ್ಧ ಕ್ರಯ ಪತ್ರವನ್ನೂ (ದಸ್ತಾವೇಸು ಸಂಖ್ಯೆ; 4505/2005-06) ಮಾಡಿಕೊಟ್ಟಿದ್ದರು.

2012ರಲ್ಲಿ ಭಾಸ್ಕರ್ ರೆಡ್ಡಿ ಮತ್ತು ಇತರರಿಗೆ ಹಂಚಿಕೆಯಾಗಿದ್ದ 60x40 ಅಳತೆಯ ನಿವೇಶನವನ್ನು ಬಿಡಿಎ ಆಯುಕ್ತರ ಆದೇಶದಂತೆ 30x40 ಅಳತೆ ನಿವೇಶನಗಳನ್ನಾಗಿ ಪರಿವರ್ತಿಸಿ ಒಟ್ಟು 12 ನಿವೇಶನಗಳನ್ನಾಗಿ ವಿಂಗಡಿಸಿ ನಿವೇಶನ ಸಂಖ್ಯೆಗಳನ್ನು ನೀಡಲಾಗಿತ್ತು. ಆದರೆ ಈ ಪ್ರಕ್ರಿಯೆ ಸಂಬಂಧ 60x40 ಅಳತೆಯ ನಿವೇಶನದ ಮೂಲ ಹಂಚಿಕೆದಾರರ ಒಪ್ಪಿಗೆಯನ್ನು ಪಡೆಯದೇ ಬಡಾವಣೆ ನಕ್ಷೆ ತಿದ್ದುಪಡಿ ಮಾಡಲಾಗಿತ್ತು. ಇದಕ್ಕೆ ಅಭಿಯಂತರರ ವಿಭಾಗ ಮತ್ತು ಆಡಳಿತ ವಿಭಾಗದ ಅಧಿಕಾರಿ ಸಿಬ್ಬಂದಿ ಅಧಿಕಾರ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆದೇಶದಲ್ಲಿ ವಿವರಿಸಿತ್ತು.

ಅಲ್ಲದೇ ಈ ನಿವೇಶನಗಳನ್ನು ವಿಭಾಗ ಮಾಡಿ ನಂತರ ವಿಶೇಷ ಪ್ರೋತ್ಸಾಹ ಯೋಜನೆ ಅಡಿಯಲ್ಲಿ 30x40 ಅಳತೆ ನಿವೇಶನಗಳನ್ನು ವಿವಿಧ ವ್ಯಕ್ತಿಗಳಿಗೆ (ಫಲಾನುಭವಿಗಳಿಗೆ) ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಭಾಸ್ಕರ್ ರೆಡ್ಡಿ ಅವರಿಗೆ ಹಂಚಿಕೆಯಾಗಿದ್ದ ನಿವೇಶನದಲ್ಲಿ 30x40 ಅಳತೆ ವಿಸ್ತೀರ್ಣಕ್ಕೆ ಪರಿವರ್ತಿಸಿದ್ದ ನಿವೇಶನ (ಸಂಖ್ಯೆ 1607/69 ಎ)ವನ್ನು ಪುಟ್ಟಲಕ್ಷ್ಮಮ್ಮ ಎಂಬವರಿಗೆ ಹಂಚಿಕೆ ಮಾಡಲಾಗಿತ್ತು. ಅದೇ ರೀತಿ 1607/67 ಎ ನಿವೇಶನವನ್ನು ಗಂಗಮ್ಮ ಎಂಬುವರಿಗೆ, 1607/66 ಎ ನಿವೇಶನವನ್ನು ಕೃಷ್ಣ ಎಂಬವರಿಗೆ, 1607/70 ಎ ನಿವೇಶನವನ್‌ಉ ನಾಗರತ್ನಮ್ಮ ಅವರಿಗೆ, ನಿವೇಶನ ಸಂಖ್ಯೆ 16073/71ನ್ನು ರಾಮಚಂದ್ರ ಪಣಿಕಲ್ ಅವರಿಗೆ ಹಂಚಿಕೆ ಮಾಡಲಾಗಿತ್ತು.

ಈ ರೀತಿ ಬಡಾವಣೆ ನಕ್ಷೆಯ ಮಾರ್ಪಾಡು ಮತ್ತು ನಿವೇಶನಗಳ ಅಳತೆಯ ಮಾರ್ಪಾಡಿಗೆ ಸಂಬಂಧಿಸಿದ ಪ್ರಸ್ತಾವವು ಬಿಡಿಎ ಎಕ್ಸಿಕ್ಯೂಟಿವ್ ಇಂಜಿನಿಯರ್ ಮೂಲಕ ಬಿಡಿಎ ಆಯುಕ್ತರಿಗೆ ಸಲ್ಲಿಕೆಯಾಗಿತ್ತು. ಮೂಲ ಬಡಾವಣೆ ನಕ್ಷೆಯಂತೆ 60x40 ಅಳತೆ ನಿವೇಶನಗಳು ಫಲಾನುಭವಿಗಳಿಗೆ ಹಂಚಿಕೆಯಾಗಿದ್ದರೂ ಅವರಿಗೆ ಬದಲಿ ನಿವೇಶನ ವ್ಯವಸ್ಥೆ ಮಾಡದೇ 30x40 ಅಳತೆ ನಿವೇಶನಗಳನ್ನಾಗಿ ಮಾರ್ಪಡಿಸಲಾಗಿತ್ತು ಎಂಬ ಅಂಶವು ಆದೇಶದಲ್ಲಿ ವಿವರಿಸಿತ್ತು.

30x40 ಅಳತೆಯ ನಿವೇಶನಗಳ ಖಚಿತ ಅಳತೆ ವರದಿ ಪಡೆದು ಬೇರೆ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿತ್ತು. ಇದರಿಂದ ಮೂಲ ಹಂಚಿಕೆದಾರರಿಗೆ ತೊಂದರೆಯುಂಟಾ

ಗಿತ್ತು. ಇದರಿಂದ ಸರಕಾರಿ ಅಧಿಕಾರಿಗಳು ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ’ ಎಂದು ಆದೇಶದಲ್ಲಿ ಹೇಳಿತ್ತು.

ಈ ಪ್ರಕರಣದಲ್ಲಿ ಬಿಡಿಎ ಅಂದಿನ ಅಯುಕ್ತ ಟಿ. ಶ್ಯಾಮ್ ಭಟ್, ಅಂದಿನ ಉಪ ಕಾರ್ಯದರ್ಶಿ ಐಎಎಸ್ ಅಧಿಕಾರಿ ರೂಪಾ ಮತ್ತು ಇತರ ಅಧಿಕಾರಿಗಳ ವಿರುದ್ಧ ವಿಚಾರಣೆ ಹಾಗೂ ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂಕ 17(ಎ) ಅನ್ವಯ ಪೂರ್ವಾನುಮತಿ ನೀಡಬೇಕು ಎಂದು ಎಸಿಬಿಯು 2021ರ ಡಿಸೆಂಬರ್ 3ರಂದು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ ಹಿಂದಿನ ಬಿಜೆಪಿ ಸರಕಾರವು ಪೂರ್ವಾನುಮತಿ ನೀಡಿರಲಿಲ್ಲ.

ಈ ಪ್ರಕರಣದಲ್ಲಿ ತನಿಖೆ ನಡೆಸಲು ಪೂರ್ವಾನುಮತಿ ನೀಡಬೇಕು ಎಂದು 2021ರ ಡಿಸೆಂಬರ್ 3ರಂದು ಭ್ರಷ್ಟಾಚಾರ ನಿಗ್ರ ದಳದ ಪ್ರಸ್ತಾವ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬಿಡಿಎನ ಅಂದಿನ ಆಯುಕ್ತ ಟಿ.ಶ್ಯಾಮ್ ಭಟ್, ಅಂದಿನ ಉಪ ಕಾರ್ಯದರ್ಶಿ ಐಎಎಸ್ ಅಧಿಕಾರಿ ರೂಪಾ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮಗಳನ್ನೆಸಗಿ ಸರಕಾರಕ್ಕೆ ನಷ್ಟವನ್ನುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯುವ ನಿಟ್ಟಿನಲ್ಲಿ ತನಿಖೆ ನಡೆಸಲು ಪೂರ್ವಾನುಮತಿ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News