Photo Credit : chatgpt AI

ಕಳೆದ ಒಂದು ವರ್ಷದಲ್ಲಿ ಆಹಾರದ ಬೆಲೆ ದುಪ್ಪಟ್ಟಾಗಿದೆ. ಆದರೆ ಜನರ ವೇತನ ಹೆಚ್ಚಾಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಕೈಗೆಟುಕುತ್ತಿಲ್ಲ. ಇದರ ಪರಿಣಾಮ ಶಿಕ್ಷಣ ಮತ್ತು ಆರೋಗ್ಯದ ವೆಚ್ಚದ ಮೇಲೂ ಆಗುತ್ತಿದೆ.

“ದಿನಸಿ ವಸ್ತುಗಳ ಬೆಲೆ ಜಾಸ್ತಿಯಾಗುತ್ತಲೇ ಇದೆ. ಆದರೆ, ಸಂಬಳ ಹೆಚ್ಚಾಗುತ್ತಿಲ್ಲ. ಇದರಿಂದ ಮನೆಯ ಆರ್ಥಿಕ ವ್ಯವಸ್ಥೆ ಅಸಮತೋಲನವಾಗಿದೆ. ಹಣ ಇಲ್ಲದವರಿಗೆ ಜೀವನ ಸಾಗಿಸಲು ಬಹಳ ಕಷ್ಟ. ಪತಿ ಮತ್ತು ಪತ್ನಿ ಇಬ್ಬರೂ ದುಡಿಯಲೇಬೇಕಾದ ಪರಿಸ್ಥಿತಿ ಇದೆ. ನಾವು ಚಿಕ್ಕವರಿದ್ದಾಗ ತಂದೆ ಮಾತ್ರ ದುಡಿದು ಒಂಭತ್ತು ಮಕ್ಕಳನ್ನು ಸಾಕಿದ್ದರು. ಇದೀಗ ನಾವಿಬ್ಬರೂ ದುಡಿದರೂ ಸಾಕಾಗುವುದಿಲ್ಲ. 500 ರೂ. ತೆಗೆದುಕೊಂಡು ಹೋದರೂ ದಿನಸಿಗೆ ಸಾಕಾಗುವುದಿಲ್ಲ” ಎನ್ನುತ್ತಾರೆ ಮಂಗಳೂರಿನ ನಿವಾಸಿ ಸುಜಾತ.

“ಬೆಲೆ ಏರಿಕೆಯು ಇಂದಿನ ದಿನಗಳಲ್ಲಿ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ದಿನದಿಂದ ದಿನಕ್ಕೆ ಅಕ್ಕಿ, ಬೇಳೆ, ತರಕಾರಿ, ಹಾಲು, ಪೆಟ್ರೋಲ್ ಮುಂತಾದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಕುಟುಂಬದ ಖರ್ಚು ಹೆಚ್ಚಾಗಿ ಉಳಿತಾಯ ಮಾಡುವುದು ಕಷ್ಟವಾಗುತ್ತಿದೆ. ಸರ್ಕಾರವು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ವಸ್ತುಗಳು ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತೆ ಮಾಡಬೇಕು. ಬೆಲೆ ಏರಿಕೆ ನಿಯಂತ್ರಣದಲ್ಲಿದ್ದರೆ ಜನರ ಜೀವನ ಸುಖಮಯವಾಗಿರುತ್ತದೆ” ಎಂದು ವಿಟ್ಲದ ನಿವಾಸಿ ಸಿಸಿಲಿಯಾ ಪಿಂಟೊ ಅಭಿಪ್ರಾಯಪಟ್ಟಿದ್ದಾರೆ.

ದಿನಸಿ ವಸ್ತುಗಳ ಬೆಲೆ ಏರಿಕೆಗೆ ಕಾರಣವೇನು?

ಕಳೆದ ಒಂದು ವರ್ಷದಲ್ಲಿ ಈರುಳ್ಳಿ, ಸಕ್ಕರೆ, ಅಕ್ಕಿ ಮತ್ತು ಅಡುಗೆ ಎಣ್ಣೆಯ ಬೆಲೆಗಳಲ್ಲಿನ ಭಾರಿ ಏರಿಕೆಯಿಂದಾಗಿ ಆಹಾರ ಪದಾರ್ಥಗಳ ಹಣದುಬ್ಬರ ತೀವ್ರಗೊಂಡಿದೆ. ಇದರ ಜೊತೆಗೆ ಮನೆಬಾಡಿಗೆ, ಶಾಲಾ ಶುಲ್ಕ ಮತ್ತು ಆರೋಗ್ಯ ವೆಚ್ಚಗಳು ಜನರಿಗೆ ಹೊರೆಯಾಗಿ ಪರಿಣಮಿಸಿವೆ.

‘ದಿ ಹಿಂದೂ’ ವರದಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಈರುಳ್ಳಿಯ ಬೆಲೆ ದುಪ್ಪಟ್ಟಾಗಿದ್ದು, ಕಳೆದ ವರ್ಷಕ್ಕಿಂತ ಶೇ. 98ರಷ್ಟು ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ಸಕ್ಕರೆಯ ಬೆಲೆಯೂ ಶೇ. 30ರಷ್ಟು ಏರಿಕೆಯಾಗಿದೆ. ಇದು ದಾಸ್ತಾನುದಾರರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ. ಜನಪ್ರಿಯ ಅಡುಗೆ ಎಣ್ಣೆಗಳ ಬೆಲೆ ಶೇ. 14ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಅಕ್ಕಿಯ ಬೆಲೆ ಶೇ. 12ರಷ್ಟು ಮತ್ತು ಹಾಲಿನ ದರ ಶೇ. 5ರಷ್ಟು ಹೆಚ್ಚಾಗಿದೆ. ಮೊಟ್ಟೆ ಮತ್ತು ಲಿಂಬೆ ಹಣ್ಣಿನಂತಹ ವಸ್ತುಗಳ ಬೆಲೆಯೂ ಏರುತ್ತಿದೆ. ದೈನಂದಿನ ಅಗತ್ಯ ಪದಾರ್ಥಗಳ ಬೆಲೆಗಳೂ ಏರುತ್ತಿರುವ ಕಾರಣ ಕುಟುಂಬಗಳು ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

“ಜನಸಾಮಾನ್ಯರು ಹೆಚ್ಚು ಬೆಲೆ ತೆತ್ತು ವಸ್ತುಗಳನ್ನು ಖರೀದಿಸಬೇಕಾಗುತ್ತದೆ. ಆದರೆ, ಅವರು ತಮ್ಮ ಆರ್ಥಿಕ ಸಮತೋಲನಕ್ಕಾಗಿ ಆರೋಗ್ಯ ಅಥವಾ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡಬೇಕಾಗುತ್ತದೆ. ಕೆಲವೊಂದು ವಸ್ತುಗಳನ್ನು ಖರೀದಿಸಲು ಸಾಧ್ಯವಾಗದಿದ್ದಾಗ ಪೌಷ್ಟಿಕತೆಯ ಮೇಲೆ ಪರಿಣಾಮವಾಗುತ್ತದೆ. ಆಹಾರ ಧಾನ್ಯಗಳ ಬಳಕೆ ಕಡಿಮೆಯಾದರೆ ಮಹಿಳೆಯರು, ಮಕ್ಕಳು ಮತ್ತು ಬಡವರ ಮೇಲೆ ಪರಿಣಾಮವಾಗುತ್ತದೆ” ಎಂದು ಈ ಬಗ್ಗೆ ವಿಶ್ಲೇಷಿಸಿರುವ ಅಂಕಣಕಾರರು ಹಾಗೂ ಅರ್ಥಶಾಸ್ತ್ರ ಕುರಿತ ಡಿಜಿಟಲ್ ಪತ್ರಿಕೆ 'ಅರ್ಥ'ದ ಸಂಪಾದಕ ಟಿ.ಎಸ್. ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಕಾಳಸಂತೆಯ ಮಾರಾಟ ಹೆಚ್ಚಾಗುತ್ತಿದೆಯೇ?

ಆಗಸ್ಟ್ ನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ತನ್ನ ಬೆಲೆ ಮೇಲ್ವಿಚಾರಣಾ ವಿಭಾಗದ (Price Monitoring Division) ಮೂಲಕ ಅಗತ್ಯ ವಸ್ತುಗಳ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳಲು ಮಾಪನಾಂಕ ನಿರ್ಣಯಿಸಿದ ಮಾರುಕಟ್ಟೆ ಮಧ್ಯಸ್ಥಿಕೆಗಳ ಭರವಸೆ ನೀಡಿತ್ತು. ವಿಪಕ್ಷಗಳು, ಕಾರ್ಮಿಕ ಸಂಘಗಳು ಮತ್ತು ಅರ್ಥಶಾಸ್ತ್ರಜ್ಞರು ಈ ಸಮಸ್ಯೆಯನ್ನು ಪರಿಹರಿಸಲು ಬಲವಾದ ಸರ್ಕಾರದ ಮಧ್ಯಸ್ಥಿಕೆಗಳನ್ನು ಒತ್ತಾಯಿಸುತ್ತಿರುವುದರಿಂದ ಕೇಂದ್ರವು 2026-27ರ ಹಣಕಾಸು ವರ್ಷಕ್ಕೆ ಬೆಲೆ ಸ್ಥಿರೀಕರಣ ನಿಧಿಗೆ 4,100 ಕೋಟಿ ರೂ.ಗಳನ್ನು ನಿಗದಿಪಡಿಸಿದೆ ಎಂದು ಸಂಸತ್ತಿಗೆ ತಿಳಿಸಿದೆ.

“ಕಾಳಸಂತೆ ಮಾರಾಟ, ಸಂಗ್ರಹಣೆ ಮತ್ತು ಲಾಭದ ಪ್ರಯತ್ನದಿಂದ ಈರುಳ್ಳಿ, ಸಕ್ಕರೆ ಮತ್ತು ಖಾದ್ಯ ತೈಲಗಳಂತಹ ಅಗತ್ಯ ವಸ್ತುಗಳ ಬೆಲೆ ಏರುತ್ತಿವೆ” ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಹೇಳಿರುವುದಾಗಿ ವರದಿಯಾಗಿದೆ. ಆದರೆ, ಸರ್ಕಾರ ಇಂತಹ ನೆಪಗಳ ಅಡಿಯಲ್ಲಿ ತನ್ನ ಅಸಾಮರ್ಥ್ಯವನ್ನು ಮರೆಮಾಚಿ ನುಣುಚಿಕೊಳ್ಳುತ್ತಿದೆಯೇ ಎನ್ನುವ ಪ್ರಶ್ನೆಯೂ ಮುಂದಾಗಿದೆ.

ಇತ್ತ ಕೇಂದ್ರ ಹಣಕಾಸು ಸಚಿವಾಲಯವು ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

“ದೇಶದಲ್ಲಿ ವ್ಯಾಪಾರ-ವಹಿವಾಟು, ಉತ್ಪಾದನೆ ಮತ್ತು ಸೇವಾ ವಲಯಗಳು ಉತ್ತಮವಾಗಿ ನಡೆಯುತ್ತಿವೆ. ಇದರಿಂದಾಗಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ದೇಶದ ಆರ್ಥಿಕತೆ ವೇಗವಾಗಿ ಬೆಳೆಯಬಹುದು. ಆದರೆ, ಎಲ್ ನಿನೊ, ಪಶ್ಚಿಮ ಏಷ್ಯಾದ ಯುದ್ಧ ಮತ್ತು ಮದುವೆ ಸೀಸನ್ ಗಳ ಕಾರಣದಿಂದ ಆರ್ಥಿಕತೆ ಬೆಳೆಯುತ್ತಿದ್ದರೂ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ” ಎಂದು ಹಣಕಾಸು ಸಚಿವಾಲಯ ಶನಿವಾರ ನ. ಮಾಸಿಕ ಆರ್ಥಿಕ ವಿಮರ್ಶೆಯಲ್ಲಿ ಹೇಳಿದೆ

►ಅಡುಗೆ ವಸ್ತುಗಳ ಬೆಲೆಯೇರಿಕೆಗೆ ಕಾರಣವೇನು?

ಟಿ.ಎಸ್. ವೇಣುಗೋಪಾಲ್ ಅವರು ಹೇಳಿರುವ ಪ್ರಕಾರ, “ಕೃಷಿ ಉತ್ಪನ್ನಗಳ ಬೆಲೆಗಳು ಕೆಲವು ಋತುಗಳಲ್ಲಿ ಇಳಿಯುತ್ತವೆ. ಇದಕ್ಕೆ ಎರಡು-ಮೂರು ಕಾರಣಗಳನ್ನು ನೀಡಬಹುದು. ಬೆಲೆ ಕಡಿಮೆಯಾದಾಗ ರಫ್ತಿಗೆ ಅವಕಾಶ ನೀಡುತ್ತಾರೆ. ಹೀಗಾಗಿ ಸರಬರಾಜು ಕಡಿಮೆಯಾಗಿ ಬೆಲೆ ಏರಿಕೆಯಾಗುತ್ತದೆ. ದೇಶದಲ್ಲಿ ನಿರ್ದಿಷ್ಟವಾದ ನೀತಿ ಎನ್ನುವುದಿಲ್ಲ. ತಕ್ಷಣದ ಗಮನದ ಆಧಾರದ ಮೇಲೆ ನೀತಿ ನಿರ್ಧಾರವಾಗುತ್ತದೆ. ಅಕ್ಕಿ, ಬೇಳೆ, ಎಣ್ಣೆ ಎಲ್ಲವನ್ನೂ ಇದೇ ರೀತಿಯ ನಿರ್ದಿಷ್ಟ ನೀತಿಗಳಿಲ್ಲದ ಪರಿಸರದಲ್ಲಿ ಬೆಳೆಯಲಾಗುತ್ತದೆ.

“ಕೃಷಿ ಉತ್ಪನ್ನಗಳಿಗೆ ಬೆಲೆ ಏರಿದಾಗ ಹೆಚ್ಚು ಬೆಳೆಯಲಾಗುತ್ತದೆ. ಆದರೆ, ಫಸಲು ಸಿಗಲು ನಾಲ್ಕೈದು ತಿಂಗಳು ಬೇಕು. ಅಷ್ಟರಲ್ಲಿ ಸರಬರಾಜು ಜಾಸ್ತಿಯಾಗುತ್ತದೆ. ಉಳಿಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ಇಲ್ಲದಿದ್ದಾಗ ಬೆಲೆ ಬಿದ್ದುಹೋಗುತ್ತದೆ. ಮತ್ತೆ ಬೆಳೆಯುವುದಿಲ್ಲ. ಹೀಗೆ ಸರಬರಾಜು ಕಡಿಮೆಯಾಗುತ್ತದೆ. ಕಾಳಸಂತೆಕೋರರು ಸಂಗ್ರಹಣೆ ಮಾಡಿ ಇಡುತ್ತಾರೆ. ಇದೂ ಬೆಲೆಯೇರಿಕೆಗೆ ಕಾರಣವಾಗುತ್ತದೆ. ಹೀಗೆ ಮಾರುಕಟ್ಟೆ ಮತ್ತು ಸರ್ಕಾರದ ನೀತಿ ಎಲ್ಲವೂ ಕಾರಣವಾಗುತ್ತದೆ.

“ಉಳಿದಂತೆ, ಎಣ್ಣೆ ಮತ್ತು ಅನಿಲಗಳಿಗೆ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುತ್ತೇವೆ. ರೂಪಾಯಿ ಮೌಲ್ಯ ಕುಸಿದರೆ ಆಮದಿಗೆ ಹೆಚ್ಚು ಬೆಲೆ ತೆರಬೇಕು. ಅಲ್ಲಿಯೂ ಬೆಲೆಯೇರಿಕೆಗೆ ಸರ್ಕಾರದ ನೀತಿಯೂ ಕಾರಣವಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿದಾಗ ಅನಿಲ ಬೆಲೆ ಕಡಿಮೆ ಮಾಡುವುದಿಲ್ಲ. ಆದಾಯದ ಮೂಲವೆಂದು ಅದೇ ದರದಲ್ಲಿ ಮುಂದುವರಿಯುತ್ತದೆ. ಆ ಸಂದರ್ಭದಲ್ಲಿ ಸರ್ಕಾರ ದರ ಕಡಿಮೆ ಮಾಡಿದ್ದರೆ ಈಗಿನ ಪರಿಣಾಮ ಹೆಚ್ಚಾಗುತ್ತಿರಲಿಲ್ಲ. ಸರ್ಕಾರಕ್ಕೆ ನೀತಿಗಳನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ.”

►ಮುಂಬರುವ ದಿನಗಳಲ್ಲಿ ಹಣದುಬ್ಬರದ ಸ್ಥಿತಿ ಹೇಗಿರಲಿದೆ?

ಭಾರತದಲ್ಲಿ ನ. ತಿಂಗಳ ಆರಂಭದಲ್ಲಿ ಬಿಡುಗಡೆಯಾದ ದತ್ತಾಂಶದ ಪ್ರಕಾರ, ಅಕ್ಟೋಬನ್‌ ಮೆಂಲ್ಲಿ ಭಾರತದ ಪ್ರಮುಖ ಚಿಲ್ಲರೆ ಹಣದುಬ್ಬರ ದರವು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಶೇ. 6 ದಾಟಿದೆ ಎಂದು ತೋರಿಸಿದೆ. ಪರಿಣಾಮವಾಗಿ ಮುಂಬರುವ ತಿಂಗಳಲ್ಲಿ ಮತ್ತಷ್ಟು ಬಡ್ಡಿದರ ಏರಿಕೆಗೆ ಅರ್ಥಶಾಸ್ತ್ರಜ್ಞರು ಮುಂದಾಗಿದ್ದಾರೆ. ಡಿ. 4ರಂದು ಸತತ ಎರಡನೇ ಬಾರಿಗೆ 25 ಬೇಸಿಸ್ ಪಾಯಿಂಟ್ ಗಳಷ್ಟು ಬಡ್ಡಿದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

ಹಣದುಬ್ಬರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವೇಣುಗೋಪಾಲ್ ಅವರು, “ಹಣದುಬ್ಬರ ಎಂದರೆ ಆಸ್ತಿ ಬಡವರಿಂದ ಶ್ರೀಮಂತರಿಗೆ ಹಂಚಿಕೆಯಾಗುವುದು. ಬಡವರು ಹೆಚ್ಚು ದುಡ್ಡು ತೆರುವುದು ಶ್ರೀಮಂತರ ಮಡಿಲಿಗೇ ಹೋಗುತ್ತದೆ. ಇದರಿಂದ ಬಡತನ ಇನ್ನಷ್ಟು ಹೆಚ್ಚಾಗುತ್ತದೆ. ನಮ್ಮಲ್ಲಿ ಕೃಷಿ ಸರಕುಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ. ಅಂತಹ ಸಂಗ್ರಹಣಾ ವ್ಯವಸ್ಥೆಯೇ ಇಲ್ಲ. ಪ್ರತಿ ವರ್ಷ ಟೊಮ್ಯಾಟೊ ಕೆಟ್ಟುಹೋಗುವುದು ತಿಳಿದಿದ್ದರೂ ಸಂಸ್ಕರಣಾಗಾರಗಳಿಗೆ ಮಹತ್ವ ಕೊಡುತ್ತಿಲ್ಲ.

“ಸರ್ಕಾರದ ಪಾತ್ರ ಅತಿ ಮುಖ್ಯವಾದುದು. ಜನರ ಆದಾಯ ಕಡಿಮೆಯಾದಾಗ ಕೊಳ್ಳುವ ಸಾಮರ್ಥ್ಯ ನೀಡಲು ಮನ್ರೇಗಾದಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಜನರಿಗೆ ಖರೀದಿ ಶಕ್ತಿ ಹೆಚ್ಚಿಸಬೇಕಾಗುತ್ತದೆ. ಹೀಗಾಗಿ ಹಲವು ನಿಟ್ಟಿನಲ್ಲಿ ಯೋಚಿಸಬೇಕಾಗುತ್ತದೆ. ಹಣದುಬ್ಬರ ಜಾಸ್ತಿ ಇದೆ ಎಂದರೆ ಜನರಿಗೆ ಬರುತ್ತಿರುವ ಆದಾಯ ಸಾಲುತ್ತಿಲ್ಲ ಎನ್ನುವುದೇ ಅರ್ಥ. ಕಳೆದ 10-12 ವರ್ಷಗಳಿಂದ ನಿಜವಾದ ಆದಾಯ ಕಡಿಮೆಯಾಗುತ್ತಿದೆ. ಉದಾಹರಣೆಗೆ, ಆದಾಯ ಶೇ. 5ರಷ್ಟು ಹೆಚ್ಚಾಗಿ ಹಣದುಬ್ಬರ ಶೇ. 6ರಷ್ಟು ಹೆಚ್ಚಾದರೆ ನಿಜವಾದ ಆದಾಯ ಶೇ. 1ರಷ್ಟು ಕಡಿಮೆಯಾಗಿರುತ್ತದೆ. ಹೀಗಾಗಿ ನೈಜ ಆದಾಯವನ್ನು ಹೆಚ್ಚಿಸಬೇಕಾಗುತ್ತದೆ.

“ಬೆಂಬಲ ಕೊಡಬೇಕು. ಸಬ್ಸಿಡಿ ಕೊಡಬೇಕು ಅಥವಾ ಪಡಿತರ ವ್ಯವಸ್ಥೆಯಿಂದ ಆಹಾರ ಹಂಚಬೇಕು. ಹೆಚ್ಚುವರಿ ಉದ್ಯೋಗ ಸೃಷ್ಟಿಸಬೇಕು. ಜೊತೆಗೆ, ಶಿಕ್ಷಣ ಮತ್ತು ಆರೋಗ್ಯ ಖಾಸಗಿಯವರ ಬಳಿ ಇರಬಾರದು. ಸರ್ಕಾರದ ನೇತೃತ್ವದಲ್ಲಿರಬೇಕು. ಸರ್ಕಾರದ ಮಧ್ಯಪ್ರವೇಶವಿಲ್ಲದೆ ಇದ್ದರೆ ಖಾಸಗಿಯವರು ಲಾಭವನ್ನೇ ಬಯಸುತ್ತಾರೆ. ಹೀಗಾಗಿ ಇವು ಸರ್ಕಾರದ ನೀತಿ ನಿರೂಪಣೆಯ ಭಾಗವಾಗಿರಬೇಕು” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.