×
Ad

17ನೇ ವಯಸ್ಸಿಗೇ ಶಾಲೆಯ ನೇವಿ ಕಾರ್ಪ್ಸ್‌ಗೆ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಆದ ರಿಧಿ ಚೌಹಾಣ್

Update: 2026-07-15 23:20 IST

Photo Credit: ANI

ರಿಧಿ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಮತ್ತು ನಾಯಕತ್ವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ನೌಕಾ ಅಕಾಡೆಮಿ ಪ್ರಿಪರೇಟರಿ ಶಾಲೆಗೆ ಪ್ರವೇಶ ಪಡೆದಿದ್ದರು.

ಹದಿಹರೆಯದವರು ಹೈಸ್ಕೂಲ್ ಓದಿಗೆ ಸಿದ್ಧತೆಯಲ್ಲಿರುವಾಗ, 17ರ ಪ್ರಾಯದ ರಿಧಿ ಚೌಹಾಣ್ ಈಗಾಗಲೇ ಡ್ರಿಲ್ ಮೈದಾನದಲ್ಲಿ ಬೆಳಗಿನ ಅಭ್ಯಾಸಕ್ಕಾಗಿ ಸುಮಾರು 300 ಕೆಡೆಟ್‌ಗಳನ್ನು ಮುನ್ನಡೆಸುತ್ತಿದ್ದಾರೆ. ಕ್ವೀನ್ಸ್‌ ನ ಬೆಂಜಮಿನ್ ಎನ್. ಕಾರ್ಡೊಜೊ ಹೈಸ್ಕೂಲ್‌ನ ಭಾರತೀಯ ಸಂಜಾತೆ ಅಮೆರಿಕನ್ ವಿದ್ಯಾರ್ಥಿನಿಯಾಗಿರುವ ಅವರು ತಮ್ಮ ಶಾಲೆಯ ನೇವಿ ಜೂನಿಯರ್ ರಿಸರ್ವ್ ಆಫೀಸರ್ಸ್ ಟ್ರೈನಿಂಗ್ ಕಾರ್ಪ್ಸ್ (NJROTC) ಘಟಕದ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂದರೆ, ಒಟ್ಟು ಕಾರ್ಯಕ್ರಮದ ಅತ್ಯುನ್ನತ ವಿದ್ಯಾರ್ಥಿ ನಾಯಕತ್ವದ ಸ್ಥಾನದಲ್ಲಿದ್ದಾರೆ.

ರಿಧಿ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಮತ್ತು ನಾಯಕತ್ವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ನೌಕಾ ಅಕಾಡೆಮಿ ಪ್ರಿಪರೇಟರಿ ಶಾಲೆಗೆ ಪ್ರವೇಶ ಪಡೆದಿದ್ದರು. ಅಮೆರಿಕದ ನೌಕಾಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗುವ ತಮ್ಮ ಕನಸಿನತ್ತ ಅವರು ಮೊದಲ ಹೆಜ್ಜೆ ಇಟ್ಟಿದ್ದಾರೆ. ವರ್ಷಗಳ ಅವಧಿಯಲ್ಲಿ ಅವರು ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಆಗುವ ಮೊದಲು ಅಕಾಡೆಮಿಕ್ ಕಮಾಂಡರ್, ಸ್ಟೆಮ್ ಕಮಾಂಡರ್, ಪ್ಲಟೂನ್ ಲೀಡರ್ ಮತ್ತು ಇನ್‌ಸ್ಪೆಕ್ಷನ್ ಕಮಾಂಡರ್ ಸೇರಿದಂತೆ ಹಲವು ನಾಯಕತ್ವದ ಹೊಣೆಗಾರಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಇಂದು ಅವರು ಬೆಟಾಲಿಯನ್‌ನ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ತರಬೇತಿ ಅವಧಿಗಳ ಮೇಲ್ವಿಚಾರಣೆ ನಡೆಸುತ್ತಾರೆ. ಜೂನಿಯರ್ ಕೆಡೆಟ್‌ಗಳಿಗೆ ಮಾರ್ಗದರ್ಶನ ನೀಡುತ್ತಾರೆ. ವಾರದಲ್ಲಿ ನಾಲ್ಕು ದಿನ, ತರಗತಿಗಳು ಪ್ರಾರಂಭವಾಗುವ ಮೊದಲು ಡ್ರಿಲ್ ಅಭ್ಯಾಸ ನಡೆಸಲು ಅವರು ಬೆಳಿಗ್ಗೆ 7 ಗಂಟೆಗೆ ಮುನ್ನವೇ ಶಾಲೆಗೆ ತಲುಪುತ್ತಾರೆ.

ಅವರ ಸಾಧನೆಗಳು ನಾಯಕತ್ವವನ್ನು ಮೀರಿವೆ. ಅಕಾಡೆಮಿಕ್ ಕಮಾಂಡರ್ ಆಗಿ ಅವರು ತಮ್ಮ ಶಾಲೆಯ ತಂಡವು ಸತತ ಎರಡು ವರ್ಷಗಳ ಕಾಲ ನಾಯಕತ್ವ ಮತ್ತು ಅಕಾಡೆಮಿಕ್ ಬೌಲ್‌ ನ ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ಸಹಾಯ ಮಾಡಿದ್ದಾರೆ. ರಾಷ್ಟ್ರೀಯ ಶೈಕ್ಷಣಿಕ ಪರೀಕ್ಷೆಯಲ್ಲಿ ಅವರ ಘಟಕವು ಪ್ರಥಮ ಸ್ಥಾನ ಗಳಿಸುವಂತೆ ಮಾಡಿದ್ದಾರೆ. ಅವರು ಬೆಟಾಲಿಯನ್‌ನ ಮೊದಲ ಸೀಪರ್ಚ್ ಅಂಡರ್‌ವಾಟರ್ ರೋಬೋಟ್‌ ನ ಅಭಿವೃದ್ಧಿಯನ್ನೂ ಮುನ್ನಡೆಸಿದ್ದರು. ಕೆಡೆಟ್‌ಗಳಿಗೆ ರೊಬೋಟಿಕ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಪ್ರಾಯೋಗಿಕ ಅನುಭವವನ್ನೂ ನೀಡಿದ್ದಾರೆ.

ರಿಧಿ ಅವರ ಪ್ರಕಾರ, ನಾಯಕತ್ವವೆಂದರೆ ಇತರರಿಗೆ ಸೇವೆ ಸಲ್ಲಿಸುವುದು ಮತ್ತು ಆದರ್ಶಪ್ರಾಯವಾಗಿ ಬೆಳೆಯುವುದು. ರುಚಿಕಾ ಮತ್ತು ದಿಲೀಪ್ ಚೌಹಾಣ್ ಅವರ ಪುತ್ರಿಯಾಗಿರುವ ರಿಧಿ ಅವರ ಕುಟುಂಬವು ರಾಜಸ್ಥಾನದ ಮೂಲದವರು. ಭವಿಷ್ಯದಲ್ಲಿ ಅಮೆರಿಕದ ನೌಕಾಸೇನೆಯ ಅಕಾಡೆಮಿಗೆ ಸೇರಬೇಕು ಎಂಬುದು ರಿಧಿ ಅವರ ಆಶಯವಾಗಿದೆ. 17ನೇ ವಯಸ್ಸಿನಲ್ಲೇ ಅವರು ಈಗಾಗಲೇ ನೂರಾರು ಕೆಡೆಟ್‌ಗಳನ್ನು ಮುನ್ನಡೆಸಿದ್ದಾರೆ. ಅನೇಕ ಕಿರಿಯ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಸಮರ್ಪಣೆ, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಯುವಜನರು ಗಮನಾರ್ಹ ಗುರಿಗಳನ್ನು ಸಾಧಿಸಬಹುದು ಎನ್ನುವುದಕ್ಕೆ ರಿಧಿ ಸಾಕ್ಷಿಯಾಗಿದ್ದಾರೆ.

ಮಾಹಿತಿ ಕೃಪೆ: NDTV

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News