ಚಾರಣಿಗರ ನೆಚ್ಚಿನ ತಾಣ ಬಸರಿಕಟ್ಟೆಯ ಮೇರುತಿ ಗುಡ್ಡ
ರಾಜ್ಯದ 5ನೇ ಅತೀ ಎತ್ತರದ ಗಿರಿಶ್ರೇಣಿ
ಚಿಕ್ಕಮಗಳೂರು: ಕಾಫಿನಾಡಿನ ನೂರಾರು ಪ್ರವಾಸಿ ಕೇಂದ್ರಗಳ ಪೈಕಿ ಹಲವಾರು ಟ್ರಕ್ಕಿಂಗ್ ತಾಣಗಳು ಚಾರಣಿಗರ ಹಾಟ್‌ಸ್ಪಾಟ್ ಆಗಿವೆ. ಇಂತಹ ಸುಂದರ ಟ್ರಕ್ಕಿಂಗ್ ತಾಣಗಳಲ್ಲಿ ಮೇರುತಿ ಗುಡ್ಡವೂ ಒಂದಾಗಿದ್ದು, ಸಾವಿರಾರು ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ.
ಕಾಫಿನಾಡಿನ ಮಲೆನಾಡು ಭಾಗದ ತಾಲೂಕುಗಳಾದ ಕೊಪ್ಪಹಾಗೂ ಕಳಸ ತಾಲೂಕಿನ ಗಡಿಯಲ್ಲಿರುವ ಬಸರಿಕಟ್ಟೆ ಗ್ರಾಮದಿಂದ ಸುಮಾರು 8ಕಿಮೀ ದೂರದಲ್ಲಿದೆ ಮೇರುತಿ ಗುಡ್ಡ. ಮಲೆನಾಡಿಗೆ ಬರುವ ಚಾರಣಪ್ರಿಯರು ಯಾವುದೇ ಕಾರಣಕ್ಕೂ ಮೇರುತಿ ಗುಡ್ಡಕ್ಕೆ ಟ್ರಕ್ಕಿಂಗ್ ಹೋಗುವುದನ್ನು ತಪ್ಪಿಸಿಕೊಳ್ಳುವುದಿಲ್ಲ, ಕಾರಣ ಮೇರುತಿ ಗುಡ್ಡ ರಾಜ್ಯದ 5ನೇ ಅತೀ ಎತ್ತರದ ಗಿರಿಶ್ರೇಣಿಯಾಗಿದ್ದು, ಗಿರಿಶ್ರೇಣಿಯ ವೀವ್ ಪಾಯಿಂಟ್‌ನಿಂದ ಸುಂದರ ಮಲೆನಾಡಿನ ಪ್ರಾಕೃತಿಕ ಸೊಬಗು ಸವಿಯಲು ಎರಡು ಕಣ್ಣು ಸಾಲದು.
ಕಳಸ, ಕೊಪ್ಪ, ಶೃಂಗೇರಿ, ಜಯಪುರ, ಬಾಳೆಹೊನ್ನೂರು ಪಟ್ಟಣಗಳಿಗೆ ಹತ್ತಿರದಲ್ಲಿರುವ ಬಸರಿಕಟ್ಟೆ ಗ್ರಾಮದಿಂದ ಸುಮಾರು 8ಕಿ.ಮೀ. ದೂರ, ಕಾಫಿ ತೋಟದ ಮಧ್ಯೆ ಹಾದು ಹೋಗಿರುವ ಕಚ್ಛಾ ರಸ್ತೆಯ ಮೂಲಕ ಮೇರುತಿ ಗುಡ್ಡ ತಲುಪಬೇಕಿದೆ. ಮೇರ್ತಿಖಾನ್ ಕಾಫಿ ಎಸ್ಟೇಟ್ ಸಮೀಪದಲ್ಲಿರುವ ಮೇರುತಿ ಗುಡ್ಡ ಏರಲು ಕಡಿದಾದ ಕಾಲು ದಾರಿ ಬಿಟ್ಟರೆ ಅನ್ಯಮಾರ್ಗವಿಲ್ಲ. ಕಾಲು ದಾರಿಯ ಮೂಲಕ ಮುಗಿಲೆತ್ತರದ ಮೇರುತಿ ಗುಡ್ಡ ಏರಲು ಹರಸಾಹಸ ಮಾಡಬೇಕೆಂದೆನಿಸಿದರೂ ಸುಂದರ ಹಸಿರು ಪರಿಸರ ಗುಡ್ಡ ಏರುವ ಆಯಾಸವನ್ನು ಮರೆಸುತ್ತದೆ.
ಮೇರುತಿ ಗುಡ್ಡ ಏರುವ ಚಾರಣಿಗರ ಮುಂದೆ ಹೊಸದೊಂದು ಸುಂದರ ಪ್ರಾಕೃತಿಕ ಸೊಬಗಿನ ಪ್ರಪಂಚ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುವ ಹಸಿರ ಗಿರಿಗಳ ಸಾಲು, ಹಾವಿನಂತೆ ಭಾಸವಾಗುವ ಭದ್ರಾ ನದಿ, ದಟ್ಟ ಕಾನನದ ನಡುವೆ ಅಲ್ಲಲ್ಲಿ ಕಾಣಸಿಗುವ ಕಾಫಿ, ಅಡಿಕೆ ತೋಟಗಳು ನೋಡುಗರ ಮನಸೂರೆಗೊಳ್ಳುತ್ತವೆ. ಕೈಗೆಟಕುವಷ್ಟು ಸಮೀಪದಲ್ಲೇ ಹಾದು ಹೋಗುವ ಮೋಡಗಳ ಸಾಲು, ಸದಾ ಗುಡ್ಡಕ್ಕೆ ಮುತ್ತಿಕ್ಕುತ್ತಿರುವಂತೆ ಕಾಣುವ ಮಂಜಿನ ವಾತಾವರಣ ಮೈಮನವನ್ನು ಪುಳಕಗೊಳಿಸುತ್ತದೆ.
ರಾಜ್ಯದ 5ನೇ ಎತ್ತರದ ಗಿರಿಶ್ರೇಣಿಯಾಗಿರುವ ಮೇರುತಿ ಗುಡ್ಡದ ಮೇಲೆ ನಿಂತು ಕಣ್ಣು ಹಾಯಿಸಿದರೆ ಕಳಸ, ಹೊರನಾಡು, ಜಯಪುರದಂತಹ ದೂರದ ಪಟ್ಟಣಗಳನ್ನು ನೋಡಬಹುದು. ದಟ್ಟ ಕಾಡು, ನುಣುಪಾದ ಬೆಟ್ಟಗಳ ಸಾಲು, ಹಸಿರ ಹೊದಿಕೆಯಂತೆ ಕಾಣುವ ಹುಲ್ಲು ಗಾವಲು ಪ್ರದೇಶ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಕಾರಣಕ್ಕೆ ಟ್ರಕ್ಕಿಂಗ್ ಪ್ರಿಯರು ಮೇರುತಿ ಗುಡ್ಡಕ್ಕೆ ಪ್ರತಿದಿನ ಚಾರಣಕ್ಕೆ ಬರುತ್ತಿದ್ದಾರೆ.
ಬಸರೀಕಟ್ಟೆ ಗ್ರಾಮದಿಂದ ಮೇರುತಿಗುಡ್ಡದ ತಪ್ಪಲಿನವರೆಗೆ ಹೋಗಲು ಸ್ಥಳೀಯವಾಗಿ ಬಾಡಿಗೆ ವಾಹನಗಳು ಲಭ್ಯ ಇವೆ. ಗುಡ್ಡ ಏರಿ ಹಿಂದಿರುಗಲು ಒಂದು ದಿನ ಮೀಸಲಿಡ ಬೇಕಾಗಿರುವುದು ಅನಿವಾರ್ಯವಾದರೂ ಮೇರುತಿಗುಡ್ಡದ ಸುಂದರ ಸೊಬಗು, ಅಲ್ಲಿಂದ ಕಾಣಸಿಗುವ ಮಲೆನಾಡಿನ ಪ್ರಾಕೃತಿಕ ಸೌಂದರ್ಯದ ರಾಶಿ ಇಡೀ ದಿನದ ಆಯಾಸ, ಪ್ರಯಾಸವನ್ನು ಮರೆಸುತ್ತದೆ. ಈ ಟ್ರಕ್ಕಿಂಗ್ ತಾಣ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿಲ್ಲದಿದ್ದರೂ ಪ್ರತಿದಿನ ನೂರಾರು ಚಾರಣಿಗರು ಮೇರುತಿ ಗುಡ್ಡ ಏರುತ್ತಾ ಸುಂದರ ಪರಿಸರದ ಸೊಬಗು ಸವಿಯುತ್ತಿದ್ದಾರೆ.
ತಲುಪುವುದು ಹೇಗೆ? :
ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ ಜಿಲ್ಲಾ ಕೇಂದ್ರಗಳಿಂದ ಮೇರುತಿಗುಡ್ಡ ಅಂದಾಜು 100-130ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ 320ಕಿ.ಮೀ. ದೂರದಲ್ಲಿದ್ದು, ದೂರದ ಪ್ರವಾಸಿಗರು ಮೇರುತಿ ಗುಡ್ಡ ತಲುಪಲು ಕಳಸ, ಹೊರನಾಡು, ಕೊಪ್ಪ, ಶೃಂಗೇರಿ, ಜಯಪುರ ಮೂಲಕ ಬಸರಿಕಟ್ಟೆಗೆ ಬಂದು ಅಲ್ಲಿಂದ ಬಾಡಿಗೆ ವಾಹನಗಳ ಮೂಲಕ ಮೇರುತಿ ಗುಡ್ಡದ ತಪ್ಪಲಿನವರೆಗೆ ಬರಬೇಕು. ಅಲ್ಲಿಂದ ಕಾಲ್ನಡಿಗೆಯಲ್ಲಿ ಗುಡ್ಡ ಏರಬೇಕಿದೆ.