×
Ad

ಬೀದರ್‌ ಜಿಲ್ಲೆಯ ʼಬಿದ್ರಿ ಕಲೆʼ ಜಗತ್ತಿನಲ್ಲಿಯೇ ಪ್ರಸಿದ್ಧ

Update: 2025-12-21 10:09 IST

ʼಮನಸ್ಸಿನ ನೆಮ್ಮದಿಗಾಗಿ ಕರಕುಶಲ ಕಲೆ ಅಗತ್ಯʼ

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಪಟ್ಟಣಗಳಿಗೆ ಹೋಗುತ್ತಿದ್ದು, ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಮನಸಿಗೆ ನೆಮ್ಮದಿ ಎನ್ನುವುದೇ ಇರುವುದಿಲ್ಲ. ಬರೀ ಹಣ ಗಳಿಸುವ ಗುಂಗಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆದರೆ ಸಾಧ್ಯವಾದವರು ಬಿಡುವು ಸಿಕ್ಕಾಗ ಬಿದ್ರಿಯಂತಹ ಕರಕುಶಲ ಕಲೆಗಳ ಕಡೆಗೆ ಗಮನ ಹರಿಸಬೇಕು. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ.

ಬೀದರ್ ಜಿಲ್ಲೆಯ ಬಿದ್ರಿ ಕಲೆಯು ಜಗತ್‌ಪ್ರಸಿದ್ಧವಾಗಿದ್ದು, ಇದು ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. ಅದು ಕರ್ನಾಟಕದ ತುತ್ತ ತುದಿಯಲ್ಲಿರುವ ಬೀದರ್ ಜಿಲ್ಲೆಯ ಇತಿಹಾಸವಾಗಿದೆ. ಬಿದ್ರಿ ಕಲೆಯು ಸಂಸ್ಕೃತಿ ಹಾಗೂ ಅನನ್ಯ ಕಲಾತ್ಮಕ ಪರಂಪರೆಯ ಸಂಕೇತವಾಗಿದ್ದು, ಅದರಲ್ಲೂ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಬಿದ್ರಿ ಕಲಾಕೃತಿ ಮೇಲಿನ ಬೆಳ್ಳಿ ಚಿತ್ರಗಳು ಈ ಕಲೆಗೆ ವಿಶಿಷ್ಟ ಸೊಬಗು ನೀಡುತ್ತದೆ. ಭಾರತೀಯ ಹಸ್ತಕಲೆಗಳಲ್ಲಿ ಬಿದ್ರಿ ಕಲೆ ತನ್ನದೇ ಆದ ಸ್ಥಾನ ಪಡೆದಿದೆ.

ಬಿದ್ರಿ ಕಲೆಯ ಇತಿಹಾಸವನ್ನು ಕೆದಕಿದಾಗ ಇದು ಶಿಲಾಯುಗದಿಂದ ಬಂದಿರುವುದನ್ನು ಕಾಣಬಹುದು. ಅಲ್ಲಿ ಮಣ್ಣಿನ ಮಡಿಕೆಗಳ ಮೇಲೆ ಚಿತ್ತಾರಗಳನ್ನು ಬಿಡಿಸಿರುವದು ಕಂಡು ಬರುತ್ತದೆ. ಅನಂತರ 12ನೇ ಶತಮಾನದಲ್ಲಿ ಕಲ್ಯಾಣದ ಕಳಚೂರರ ಕಾಲದಲ್ಲಿ ಈ ಕಲೆಗೆ ರಾಜಾಶ್ರಯ ದೊರೆತು, ವಿವಿಧ ಪರಿಕರಗಳ ಮೇಲೆ ಲೋಹದ ವಸ್ತುಗಳ ಮೇಲೆ ಎಳೆ ಎಳೆಯಾಗಿ ಕುಸುರಿಗಳನ್ನು ಜೋಡಿಸುವ ಮೂಲಕ ಅಭಿವೃದ್ಧಿ ಹೊಂದಿರುವುದನ್ನು ನಾವು ಗಮನಿಸಬಹುದು. ಅನಂತರದಲ್ಲಿ ದಕ್ಷಿಣ ಬಹಮನಿ ವಂಶದೊಂದಿಗೆ ಬಿದ್ರಿ ಕಲೆ ಸಂಬಂಧವಿರುವುದು ಕಂಡು ಬರುತ್ತದೆ.

ಬಹಮನಿ ಸಾಮ್ರಾಜ್ಯದ ಸ್ಥಾಪಕ ಹಸನ್ ಗಂಗೂ ಬಹಮನಿಯಾಗಿದ್ದು, ಬಹುಮನಿಯವರ ಮೊದಲ ರಾಜಧಾನಿ ದೌಲತಾಬಾದ್ ಆಗಿತ್ತು. ಅನಂತರ ಅವರು ತಮ್ಮ ರಾಜಧಾನಿಯನ್ನು ಗುಲ್ಬರ್ಗಕ್ಕೆ ವರ್ಗಾವಣೆ ಮಾಡಿದರು. ಅಲ್ಲಿ ಒಟ್ಟು ಏಳು ಸುಲ್ತಾನರು ಆಳ್ವಿಕೆ ಮಾಡಿದರು. ಅನಂತರ ಅಹಮದ್ ಷಾ ವಲಿ ಎನ್ನುವ ಸುಲ್ತಾನ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್‌ಗೆ ವರ್ಗಾವಣೆ ಮಾಡಿದನು. ಬಳಿಕ ಕೋಟೆ ನಿರ್ಮಾಣಕ್ಕಾಗಿ ಕಲಾವಿದರ ಒಂದು ಗುಂಪನ್ನು ಬೀದರ್‌ಗೆ ಕರೆಸಲಾಯಿತು. ಅವರಲ್ಲಿ ಕೆಲವರು ಬಿದ್ರಿ ಕಲೆ ಬಲ್ಲವರಾಗಿದ್ದರು. ಇದೇ ಸಂದರ್ಭದಲ್ಲಿ ಬಿದ್ರಿ ಕಲೆ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ.

ಒಂದು ಸಂಪ್ರದಾಯದ ಪ್ರಕಾರ ಬಿದ್ರಿ ಕಲೆಯು ಇರಾನ್, ಇರಾಕ್ ಮತ್ತು ಪರ್ಷಿಯನ್ ದೇಶಗಳಿಂದ ಭಾರತಕ್ಕೆ ಬಂತು ಎಂದು ತಿಳಿದು ಬರುತ್ತದೆ. ಸೂಫಿ ಸಂತರಾದ ಖಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ಮತ್ತು ಅವರ ಅನುಯಾಯಿಗಳು ರಾಜಸ್ಥಾನದ ಅಜ್ಮೀರ್‌ಗೆ ಬಂದು ನೆಲೆಸಿದರು. ಅವರ ಮುಖಾಂತರ ಈ ಕುಸುರಿ ಕೆಲಸ ಭಾರತಕ್ಕೆ ಪ್ರವೇಶಿಸಿತ್ತು. ಮತ್ತೊಂದು ಮೂಲದ ಪ್ರಕಾರ ಇರಾಕಿನ ಕಲಾವಿದರು ಬೆಳ್ಳಿ ಬಂಗಾರದ ಕುಸುರಿ ಕೆಲಸಗಳಲ್ಲಿ ನಿಪುಣರಾಗಿದ್ದರು. ಅದರಲ್ಲಿ ಅಬ್ದುಲ್ಲಾ ಬಿನ್ ಕೈಸರ್ ಎಂಬವರು ಈ ಕಲೆಯನ್ನು ಬಿದರ್ ನಲ್ಲಿ ಅಭಿವೃದ್ಧಿಪಡಿಸಿದರು ಎಂದು ಹೇಳಲಾಗುತ್ತದೆ. ಈ ಕಲಾವಿದರು ಬಹಮನಿ ಸಾಮ್ರಾಜ್ಯದಲ್ಲಿ ರಾಜಾಶ್ರಯ ಪಡೆದು ಅಲ್ಲಿಯೇ ಕಲಾಕೃತಿಗಳನ್ನು ತಯಾರಿಸುತ್ತಿದ್ದರು. ಮೊದಲು ಕಲಾವಿದರು ಲೋಹದ ಪಾತ್ರೆಗಳ ಮೇಲೆ ಚಿತ್ತಾರಗಳನ್ನು ಬಿಡಿಸಿ ಅದಕ್ಕೆ ಕೆತ್ತನೆ ಮಾಡಿ ಅದರಲ್ಲಿ ಚಿನ್ನ ಮತ್ತು ಬೆಳ್ಳಿ ಜೋಡಿಸುವ ವಿಚಾರ ಹೊಳೆದು ಇವುಗಳ ತಯಾರಿಕೆಯಲ್ಲಿ ತೊಡಗಿದ್ದರು. ಅನಂತರ ವಿವಿಧ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಾವಿರಾರು ಸೂಕ್ಷ್ಮವಾದ ಚಿತ್ತಾರಗಳನ್ನು ಬಿಡಿಸಿ, ಕೆತ್ತನೆ ಮಾಡಿ ಅವುಗಳಲ್ಲಿ ಚಿನ್ನ ಬೆಳ್ಳಿಯ ಎಳೆಗಳನ್ನು ಜೋಡಿಸಿ ಅದಕ್ಕೆ ಫೈಲುಗಳಿಂದ ತಿಕ್ಕಿ ಕಲಾಕೃತಿಗೆ ಹೊಳಪು ಬರುವಂತೆ ಮಾಡುತ್ತಿದ್ದರು. ಆದರೆ ಹೊಳಪಾಗಿರುವ ಕಲಾಕೃತಿ ಬೆಳ್ಳಗೆ ಇರುವುದರಿಂದ ಅವರು ಮಾಡಿದ ಬೆಳ್ಳಿ ಬಂಗಾರದ ಚಿತ್ತಾರಗಳನ್ನು ಕಾಣಲು ಸಾಧ್ಯವಾಗದೆ ಕಲಾವಿದರು ಗೊಂದಲದಲ್ಲಿದ್ದಾಗ ಬೀದರ್ ಕೋಟೆಯ ಮಣ್ಣಿನಿಂದ ಕಲಾಕೃತಿಗೆ ಕಪ್ಪು ಬಣ್ಣ ಮಾಡುವ ಒಂದು ಹೊಸ ಆವಿಷ್ಕಾರ ಪಡೆದುಕೊಂಡರು. ಆದ್ದರಿಂದ ಈ ಕಲೆಗೆ ಬಿದ್ರಿ ಕಲೆ ಎಂಬ ಹೆಸರು ಬಂತು ಎಂದು ತಿಳಿದುಬರುತ್ತದೆ.

ಅಂದಿನಿಂದ ಇಂದಿನವರೆಗೆ ಬಿದ್ರಿ ಕಲೆಯನ್ನು ಉಳಿಸಿಕೊಂಡು ಬರಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬಿದ್ರಿ ಕಲೆಗೆ ತುಂಬಾ ಬೇಡಿಕೆ ಇತ್ತು. ಯಾವುದೇ ಒಂದು ಸಭೆ ಸಮಾರಂಭಗಳಲ್ಲಿ ಬಿದ್ರಿ ಕಲೆಯನ್ನು ಕಾಣಿಕೆಯಾಗಿ ಕೊಡುವುದು ಒಂದು ವಾಡಿಕೆಯಾಗಿತ್ತು. ಉಡುಗೊರೆಯಾಗಿ ಪಾನದನ, ಉಗುಲ್ದಾನ್, ಆಭರಣ ಪೆಟ್ಟಿಗೆ, ಕಿವಿ ಓಲೆ, ಅಲಂಕಾರಿಕ ಸಾಮಗ್ರಿಗಳು, ಹೂದಾನಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಅದರಲ್ಲೂ ಪ್ರಮುಖವಾಗಿ ಮದುವೆ ಸಮಾರಂಭಗಳಲ್ಲಿ ಕೊಡುವುದಂತೂ ಒಂದು ಮರ್ಯಾದೆಯ ಪ್ರಶ್ನೆಯಾಗಿತ್ತು. ಯಾರಾದರೂ ಕಲಾಕೃತಿಗಳನ್ನು ಮದುವೆಯಲ್ಲಿ ಉಡುಗೊರೆಯಾಗಿ ಕೊಡದಿದ್ದಲ್ಲಿ, ‘ಇವರು ಎಂತಾ ಮಂಡುಬೀಗರು, ಎಷ್ಟು ಜಿಪುಣ ಬೀಗರು, ತನ್ನ ಮಗಳ ಮದುವೆಯಲ್ಲಿ ಒಂದಾದರೂ ಬಿದ್ರಿ ಕಲೆ ವಸ್ತುವನ್ನು ಉಡುಗರೆಯಾಗಿ ಕೊಡಲೇ ಇಲ್ಲ’ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಬಿದ್ರಿ ಕಲೆ ಅಷ್ಟು ಪ್ರಖ್ಯಾತಿ ಪಡೆದಿತ್ತು. ಅಷ್ಟೇ ಅಲ್ಲದೆ ಬಿದ್ರಿ ಕಲಾಕೃತಿಗಳನ್ನು ಅರಸರು, ಮಂತ್ರಿಗಳು, ಜನರು ತಮ್ಮ ಮನೆಯಲ್ಲಿ ಬಳಸುವುದು ಮತ್ತು ಅಲಂಕಾರಿಕ ವಸ್ತುಗಳನ್ನು ಸಂಗ್ರಹಿಸುವುದು ಒಂದು ಸಂಪ್ರದಾಯವೇ ಆಗಿತ್ತು. ಆ ಸಂದರ್ಭದಲ್ಲಿ ಅನೇಕ ಬಿದ್ರಿ ಕಲಾಕೃತಿಗಳು ವಿದೇಶಗಳಿಗೆ ಕೊಂಡೊಯ್ಯಲಾಯಿತು. ಯೂರೋಪಿನ ಅನೇಕ ದೇಶಗಳ ವಸ್ತು ಸಂಗ್ರಹಾಲಯಗಳಲ್ಲಿ ಅಪರೂಪದ ಬಿದ್ರಿ ಕಲಾಕೃತಿಗಳು ಇಂದಿಗೂ ಕಾಣಬಹುದಾಗಿದೆ. ಹೈದರಾಬಾದಿನ ಸಾಲಾರಜಂಗ ಮ್ಯೂಸಿಯಂನಲ್ಲಿ ರಾಜ ಮಹಾರಾಜರು ಬಳಸುತ್ತಿದ್ದ ಅಪರೂಪದ ಬಿದ್ರಿ ಕಲಾಕೃತಿಗಳನ್ನು ಇಂದಿಗೂ ಕಾಣಬಹುದು.

ಬಿದ್ರಿ ಕಲೆ ಎಂದ ತಕ್ಷಣ ಮೊದಲು ನೆನಪಿಗೆ ಬರುವುದೇ ಕರ್ನಾಟಕದ ಬೀದರ್ ಜಿಲ್ಲೆ. ಇದೊಂದು ಅದ್ಭುತವಾದ ಕಲೆಯಾಗಿದೆ. ಬಿದ್ರಿ ಕಲಾವಿದರು ಕಲಾಕೃತಿಗಳ ಮೇಲೆ ಚಿತ್ತಾರಗಳನ್ನು ಬಿಡಿಸಿ ಕೆತ್ತನೆ ಮಾಡಿ ಅವುಗಳಲ್ಲಿ ಬೆಳ್ಳಿ ತಂತಿ ಕೂಡಿಸುವುದನ್ನು ನೋಡುವುದು ತುಂಬಾ ರೋಚಕವಾಗಿದೆ. ಬೀದರ್ ಕೋಟೆಯಲ್ಲಿನ ಮಣ್ಣನ್ನು ನೀರಿಗೆ ಹಾಕಿ ಕುದಿಸಿ ಬೆಳ್ಳಿ ತುಂಬಿರುವ ಬಿಳಿಯಾಗಿರುವ ಝಿಂಕ್ ಮತ್ತು ತಾಮ್ರ ಮಿಶ್ರಿತ ಧಾತುವಿನ ಕಲಾಕೃತಿಯನ್ನು ಕುದಿಯುವ ಮಣ್ಣಿನಲ್ಲಿ ಹಾಕಿದಾಗಲಂತೂ ಇಂದ್ರಜಾಲದಂತೆ ಭಾಸವಾಗುತ್ತದೆ. ಕೇವಲ ಕುದಿಯುವ ಮಣ್ಣಿನಲ್ಲಿ ಕಲಾಕೃತಿ ಹಾಕಿದಾಗ ಅದು ಹೇಗೆ ಕಪ್ಪಾಗುತ್ತದೆ, ಬೆಳ್ಳಿ ಯಾಕೆ ಕಪ್ಪಾಗುವುದಿಲ್ಲ ಎಂಬ ದಟ್ಟ ಅನುಮಾನ ನೋಡುಗರಲ್ಲಿ ಮೂಡುತ್ತದೆ. ಬಿದ್ರಿ ಕಲಾಕೃತಿಗಳಿಗೆ ಬಣ್ಣ ಹಾಕುವುದನ್ನು ನೋಡುವುದೇ ಪ್ರವಾಸಿಗರಿಗೆ ಅಪರೂಪದ ಘಳಿಗೆಯಾಗಿದೆ. ಈ ಕಲೆಯನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನ ಬೀದರ್ ಜಿಲ್ಲೆಗೆ ಬರುತ್ತಾರೆ. ಬಂದ ಪ್ರವಾಸಿಗರು ಕಲಾಕೃತಿಗಳನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಾರೆ. ಕಪ್ಪು ಬಣ್ಣದ ಹಿನ್ನೆಲೆಯ ಮೇಲಿನ ಬಿಳಿಯಾದ, ಅತಿ ಸೂಕ್ಷ್ಮವಾದ ಬೆಳ್ಳಿಯ ಚಿತ್ರಗಳನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಈ ಕಲೆ ಪೂರ್ತಿ ಕೈಯಿಂದಲೇ ಮಾಡಲಾಗಿದೆ ಎಂದು ಹೇಳಿದರೆ ನಂಬಲಾಗದೆ ದಿಟ್ಟಿಸಿ ನೋಡುತ್ತಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಯಾವುದೇ ಯಂತ್ರಗಳಿಂದ ಈ ಚಿತ್ರಗಳನ್ನು ಬಿಡಿಸಿ ಕೆತ್ತನೆ ಮಾಡಿ ಬೆಳ್ಳಿ ತುಂಬಲು ಸಾಧ್ಯವೇ ಇಲ್ಲ. ಇಷ್ಟು ಸೂಕ್ಷ್ಮವಾಗಿ ಕೆಲಸ ಮಾಡಲು ಕೇವಲ ಬಿದ್ರಿ ಕಲಾವಿದರಿಂದಲೇ ಸಾಧ್ಯ ಎಂದು ಅರಿತ ಭಾರತ ಸರಕಾರವು 2006ರ ಜನವರಿ 3ರಂದು ಬಿದ್ರಿ ಕಲೆಗೆ ‘ಜಿಐ ಟ್ಯಾಗ್’ಅನ್ನು ‘ಬಿದ್ರಿವೇರ್’ ಎಂಬ ಹೆಸರಿನಲ್ಲಿ ನೀಡಿದೆ. ಇದು ಕರ್ನಾಟಕದ ಬೀದರ್ ಜಿಲ್ಲೆಯ ಪರಂಪರೆಯ ಲೋಹಕಲೆಯಾಗಿದೆ ಎಂದು ಅಧಿಕೃತವಾಗಿ ಗುರುತಿಸಲಾಗಿದೆ.

ಬಿದ್ರಿ ಕಲಾವಿದರ ಕಲ್ಪನೆಗೆ ತಕ್ಕಂತೆ ಸಂಪೂರ್ಣವಾಗಿ ಕೈಯಿಂದ ಮೂಡಿಬರುವ ಸೌಂದರ್ಯದ ಕಲೆಯಾಗಿದೆ. ಈ ಸೌಂದರ್ಯದ ಕಲೆಯಲ್ಲಿ ತಮ್ಮ ಕೈಚಳಕವನ್ನು ತೋರಿಸಿ ಕಲಾವಿದರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಲ್ಲದೆ, 2023ರಲ್ಲಿ ಶಾ ರಶೀದ್ ಅಹ್ಮದ್ ಖಾದ್ರಿ ಅವರು ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಕಲಾವಿದರು ಹೊರ ದೇಶಗಳಲ್ಲಿ ಹೋಗಿ ಬಿದ್ರಿ ಕಲೆ ಪ್ರದರ್ಶನ ಮಾಡಿದ್ದು ಹೆಮ್ಮೆಯ ವಿಷಯಾವಾಗಿದೆ.

ಇಷ್ಟೆಲ್ಲಾ ಹೆಸರುವಾಸಿಯಾದ, ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ ಬಿದ್ರಿ ಕಲೆ ಈಗ ಅಳಿವಿನಂಚಿನಲ್ಲಿದೆ. ಬೀದರ್‌ನಲ್ಲಿ ನೂರಾರು ಕುಟುಂಬಗಳಿಗೆ ಈ ಕಲೆಯೇ ಒಂದು ಉದ್ಯೋಗ ಮತ್ತು ಜೀವನೋಪಾಯದ ಮೂಲವಾಗಿದೆ. ಆದರೆ ಬಿದ್ರಿ ಕಲಾವಿದರು ಇತ್ತೀಚಿನ ದಿನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ವರ್ಷಗಳಿಂದ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗುತ್ತಲೇ ಇದೆ. ಅದರಲ್ಲಂತೂ ಬೆಳ್ಳಿಯ ಬೆಲೆ ಮೂರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಸಬ್ಸಿಡಿ ದರದಲ್ಲಿ ಕಚ್ಚಾವಸ್ತುಗಳನ್ನು ನೀಡುತ್ತಿದ್ದ ‘ಕರ್ನಾಟಕ ರಾಜ್ಯ ಹಸ್ತ ಶಿಲ್ಪ ಅಭಿವೃದ್ಧಿ ನಿಗಮ’ ಕೂಡ ಬಿದ್ರಿ ಕಲಾವಿದರಿಂದ ದೂರ ಸರಿಯುತ್ತಿದೆ. ಇದರಿಂದಾಗಿ ಅನೇಕ ಕಲಾವಿದರು ಈ ಕಲೆಯನ್ನು ತೊರೆದು ಗಾರೆ ಕೆಲಸ, ಆಟೋ ಚಾಲನೆ, ಹೊಟೇಲ್, ಕೂಲಿ ಕೆಲಸದಲ್ಲಿ ತೊಡಗಿಸಿ

ಕೊಂಡಿದ್ದಾರೆ. ಅನೇಕ ಹಂತಗಳಲ್ಲಿ ಬಿದ್ರಿ ಕಲಾವಿದರಿಗೆ ಸಿಗುವ ಲಾಭ ಮಧ್ಯವರ್ತಿಗಳ ಕೈ ಸೇರುತ್ತಿದೆ. ಅಳಿವಿನಂಚಿನಲ್ಲಿರುವ ಬಿದ್ರಿ ಕಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕಲಾವಿದರು

ಮತ್ತು ಅವರ ಕುಟುಂಬಗಳು ಮಾತ್ರ ಈ ಕಲೆಯನ್ನು ಬೆಳೆಸಿಕೊಂಡು ಹೋಗುತ್ತಿವೆ. ಸದ್ಯದಲ್ಲಿ ಬಿದ್ರಿ ಕಲೆಗೆ ಸರಕಾರ ಹಾಗೂ ಖಾಸಗಿ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ. ಬಿದ್ರಿ ಕಲೆ ಮತ್ತು ಕಲಾವಿದರನ್ನು ಬೆಳೆಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ನವ ಕಲಾವಿದರಿಗೆ ತರಬೇತಿ ನೀಡುವುದು, ಸ್ವ ಸಹಾಯ ಸಂಘದ ಮಹಿಳೆಯರಿಗೆ ತರಬೇತಿ ನೀಡುವುದು, ಸರಕಾರದಿಂದ ಸವಲತ್ತುಗಳನ್ನು ನೀಡುವುದು, ವಸ್ತು ಪ್ರದರ್ಶನ ಮೇಳಗಳಲ್ಲಿ ಬಿದ್ರಿ ಕಲೆಯ ಪ್ರದರ್ಶನಕ್ಕೆ ಹೆಚ್ಚು ಆದ್ಯತೆ ನೀಡುವುದು, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದು, ಅಳಿವಿನಂಚಿನಲ್ಲಿರುವ ಬಿದ್ರಿ ಕಲೆಯ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸುವುದು ತುಂಬಾ ಮುಖ್ಯವಾಗಿದೆ. ಇಲ್ಲದಿದ್ದಲ್ಲಿ ಈ ಕಲೆ ಕೇವಲ ವಸ್ತು ಸಂಗ್ರಹಾಲಯಕ್ಕೆ ಸೀಮಿತವಾಗಿ ಉಳಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News