×
Ad

ಸೂಫಿ ಪರಂಪರೆಯ ಮಹಿಳಾ ಮಣಿಗಳು

Update: 2025-12-21 09:53 IST

ಕಲ್ಯಾಣ ಕರ್ನಾಟಕವು ಸಾಹಿತ್ಯ-ಸಾಂಸ್ಕೃತಿಕವಾಗಿ ಬಹುಫಲವತ್ತಾದ ನೆಲ. ಇಲ್ಲಿ ಅನೇಕ ಸೂಫಿ ಸಂತರು, ಶರಣರು, ದಾಸರು, ತತ್ವ ಪದಕಾರರು ಆಗಿ ಹೋಗಿದ್ದಾರೆ. ಹಲವು ಸೂಫಿಗಳು ಬದುಕಿ ಬಾಳಿದರು ಎಂಬುದಕ್ಕೆ ಅವರ ದರ್ಗಾಗಳೇ ಮೂರ್ತ ಸಾಕ್ಷಿಗಳಾಗಿವೆ. ಎಂದೋ ಸತ್ತು ಮರೆಯಾಗಿದ್ದರೂ ಈ ಸೂಫಿಗಳು ಜನಪದರ ಗಾಢವಾದ ನಂಬಿಕೆ, ಆಳವಾದ ವಿಶ್ವಾಸ ಹಾಗೂ ನಿಷ್ಠಾಪೂರ್ಣವಾದ ಆಚರಣೆಗಳಲ್ಲಿ ಇವತ್ತಿಗೂ ಜೀವಂತವಾಗಿರುವುದು ಗಮನಾರ್ಹ ಸಂಗತಿ.

ಮಾನವ ಪ್ರೀತಿಯನ್ನೇ ಮೂಲ ನೆಲೆಯನ್ನಾಗಿಟ್ಟುಕೊಂಡ ಸೂಫಿಗಳು ಯಾರಲ್ಲೂ ಭೇದಭಾವ ಎಣಿಸದೇ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ, ಸೌಹಾರ್ದದ ಬೋಧನೆಗಳನ್ನು ಬಿತ್ತಿದ್ದಾರೆ. ಜಗತ್ತಿನ ಜಂಜಡದಲ್ಲಿ ಸಿಲುಕಿ ನರಳುತ್ತಿದ್ದ ಜನತೆಯ ಹೃದಯಕ್ಕೆ ಧಾರ್ಮಿಕ ಬೋಧನೆಯ ಬೆಳಕು, ಸಾಂತ್ವನ ನೀಡುತ್ತಿದ್ದುದರಿಂದ ಎಲ್ಲ ವರ್ಗದ ಜನತೆಯ ಗೌರವಾದರಗಳಿಗೆ ಪಾತ್ರರಾಗಿದ್ದಾರೆ.

ಸೂಫಿಗಳು ಸ್ವಭಾವತಃ ನಾಡಾಡಿಗಳು. ನಿಜಾರ್ಥದಲ್ಲಿ ಜಂಗಮ ಸ್ವರೂಪಿಗಳು. ಕ್ರಿ.ಶ. 1347ರಿಂದ 1538ರವರೆಗಿನ ಬಹಮನಿ ಸಾಮ್ರಾಜ್ಯದ ಸಂದರ್ಭದಲ್ಲಿ ನಮ್ಮ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಫಿ ಸಂತರು ಕಂಡುಬರುತ್ತಾರೆ. ದೀರ್ಘವಾದ ಸೂಫಿ ಚಳವಳಿಯ ಪರಂಪರೆಯಲ್ಲಿ ಹಲವು ಸಿಲ್‌ಸಿಲಾದ ಸೂಫಿ ಪಂಥಗಳು ‘ಚೌದಾಹ್ ಖಾನ್ದಾನ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ. ಅವುಗಳಲ್ಲಿ ನಾಲ್ಕು ಪಂಥಗಳು ಮಾತ್ರ ಅತ್ಯಂತ ಪ್ರಸಿದ್ಧವಾಗಿವೆ. 1) ಖಾದ್ರಿಯಾ ಪಂಥ, 2) ಚಿಶ್ತಿಯಾ ಪಂಥ, 3) ಸುಹ್ರವರ್ದಿಯಾ ಪಂಥ, 4) ನಕ್ಶ್‌ಬಂದಿ ಪಂಥ. ಬಹಮನಿ ಸುಲ್ತಾನರು ಮತ್ತು ವಿಜಯಪುರದ ಆದಿಲ್ ಶಾಹಿಗಳ ಕಾಲದಲ್ಲಿ ದಖ್ಖನ್‌ನ ಮೂರು ಪ್ರಮುಖ ನಗರಗಳಾಗಿದ್ದ ಕಲಬುರಗಿ, ಬೀದರ್ ಹಾಗೂ ವಿಜಯಪು ಸೂಫಿಗಳ ಪ್ರಮುಖ ಕೇಂದ್ರಗಳಾಗಿದ್ದವು. ಕಲಬುರಗಿ ವಿಭಾಗದ ಸೂಫಿ ಪರಂಪರೆಗೆ ದೀರ್ಘವಾದ ಚರಿತ್ರೆಯಿದೆ. ದಖನಿ ಉರ್ದುವಿನ ಪ್ರಸ್ಥ ಭೂಮಿ ಎನಿಸಿಕೊಂಡಿರುವ ಕಲಬುರಗಿ ಜಿಲ್ಲೆಯು ಸಹಜವಾಗಿಯೇ ಸೂಫಿ ತತ್ವದ ತೊಟ್ಟಿಲಾಗಿದೆ.

ಕಲಬುರಗಿಯ ಸುಪ್ರಸಿದ್ಧ ಸೂಫಿ ಸಂತ ಹಝರತ್ ಖ್ವಾಜಾ ಬಂದೇ ನವಾಝರು ದಿಲ್ಲಿಯಿಂದ ಕಲಬುರಗಿಗೆ ಬರುವುದಕ್ಕಿಂತಲೂ ಪೂರ್ವದಲ್ಲಿಯೇ ಹಝರತ್ ಸೈಯದ್ ಶಾಹ್ ಹಿಸಾಮುದ್ದೀನ್ ಹುಸೇನಿ ಅಲ್‌ಮಾರೂಫ್ ತೇಗ್ ಬರಹಾನಾ, ಹಝರತ್ ಶೇಖ್ ಸಿರಾಜುದ್ದೀನ್ ಜುನೈದಿ, ಹಝರತ್ ಶೇಖ್ ಸಾದ್ ಮಖ್ದೂಮ್ ಪೀರ್ ಜಂಜಾನಿ, ಹಝರತ್ ಶೇಖ್ ಶಾಹ್ ರುಕ್ನುದ್ದೀನ್ ತೋಲಾ ಮುಂತಾದವರು ಬಂದು ಇಲ್ಲಿ ನೆಲೆಸಿದ್ದರು ಎಂಬ ಪ್ರತೀತಿ ಇದೆ. ಹಝರತ್ ಖ್ವಾಜಾ ಬಂದೇ ನವಾಝ್ ಗೇಸುದರಾಜ್ ಅವರ ಆಗಮನದ ನಂತರ ಇಲ್ಲಿಯ ಸೂಫಿ ಪರಂಪರೆಯು ಹರವಾಗಿ ಬೆಳೆದು ಪಸರಿಸಿತೆಂದು ಹೇಳಬಹುದು.

ಕಲಬುರಗಿ ಜಿಲ್ಲೆಯದಾದ್ಯಂತ ಹಝರತ್ ಚಿತಾಶಾಹ್ ವಲಿ, ಹಝರತ್ ಸೂಫಿ ಸರಮಸ್ತ್, ಹಝರತ್ ಖಲೀಫತುರ‌್ರಹ್ಮಾನ್, ಹಝರತ್ ಬಾಬಾ ಫಕ್ರುದ್ದೀನ್ ಹುಸೇನಿ, ಹಝರತ್ ಲಾಡ್ಲೆ ಮಶಾಯಿಕ್ ಆನ್ಸಾರಿ, ಹಝರತ್ ಮಸ್ತಾನ ಶಾಹ್ ಖಾದ್ರಿ ಚೇಂಗಟಾ, ಹಝರತ್ ಚಂದಾ ಹುಸೇನಿ, ಖ್ವಾಜಾ ಅಮೀನುದ್ದೀನ್, ಸಾದೆಸಾಬ್, ಹೈದ್ರಾದ ಸೈಫನ್ ಮಲ್ಲಿಕ, ಹಝರತ್ ಖ್ವಾಜಾ ಸಯ್ಯದ್ ಮಹಮ್ಮದ್ ಬಾದಶಾಹ್ ಖಾದ್ರಿ ಮುಂತಾದ ಸೂಫಿ ಸಂತರು ನೆಲೆ ನಿಂತಿದ್ದರು.ಅಲ್ಲದೆ ಕಲ್ಯಾಣ ಕರ್ನಾಟಕದಲ್ಲಿ ಸುಮಾರು 60 ಮಹಿಳಾ ಸೂಫಿಗಳು ಕಾಣಸಿಗುತ್ತಾರೆ. ಅವರಲ್ಲಿ ಖುಂಜಾ ಮಾಂ ಸಾಹೇಬಾ, ಝಟಪಟ್ ಬೀಬಿ, ಸತಿ ಮಾಂ ಸಾಹೇಬಾ, ಆಳಂದದ ಬೀಬಿ ತಾರಾ, ಶಹಾಪೂರ ಬೀ, ಶಹಾಪೂರ ಹಿಪ್ಪರಗಾದ ಪಾಂಚ ಬೀಬಿ, ಯಕ್ಕಂಚಿಯ ಲಷ್ಕರ್‌ಬೀ, ಕೆಂಭಾವಿಯ ಮಾಸಾಬೀ, ಮಾಲಗತ್ತಿಯ ಸೈದಾನಿ ಮಾಂ, ಸೇಡಂನ ಮುಕ್ಕಿ ಬೀ, ಸಗರದ ಬೀಬಿ ಗೋಹರ್ ಮುಂತಾದ ಮಹಿಳಾ ಸೂಫಿಗಳು ಕಂಡುಬರುವುದು ಉಲ್ಲೇಖಾರ್ಹವಾಗಿದೆ.

ಹಝರತ್ ಬೀಬಿ ಕಮಾಲಾ ಸುಲ್ತಾನಾ ಖುಂಜಾ ಮಾಂ ಸಾಹೇಬಾ:

ಹಝರತ್ ಬೀಬಿ ಕಮಲಾ ಸುಲ್ತಾನಾ ಖುಂಜಾ ಮಾಂ ಸಾಹೇಬಾ ಅವರು ದಖ್ಖನ್ನಿನ ಪ್ರಸಿದ್ಧ ಸೂಫಿ ಮಹಿಳೆಯರಲ್ಲಿ ಒಬ್ಬರು. ಬೀಬಿ ಖುಂಜಾ ಮಾಂ ಸಾಹೇಬಾ ಅವರು ಸುಲ್ತಾನ್ ಮೆಹಮೂದ್ ಶಾಹ್ ಬಹಮನಿಯವರ ಏಕೈಕ ಅಕ್ಕರೆಯ ಪುತ್ರಿಯಾಗಿದ್ದರು. ಇವರ ಅಜ್ಜ ಸುಲ್ತಾನ್ ಅಲಾವುದ್ದೀನ್ ಹಸನ್ ಗಂಗೂ ಬಹಮನಿ. ಬೀಬಿ ಕಮಾಲಾ ಸುಲ್ತಾನಾ ಬಾಲ್ಯದಿಂದಲೇ ಅಧ್ಯಾತ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಇವರು ತಮ್ಮ ಐದನೆಯ ವಯಸ್ಸಿನಿಂದಲೇ ಖುರಾನ್-ಎ-ಮಜೀದನ್ನು ಪಠಿಸುತ್ತಿದ್ದರು. ಅವರ ಅಧ್ಯಾತ್ಮಿಕ ಜ್ಞಾನ ಮನಗಂಡ ತಂದೆ ಸುಲ್ತಾನ್ ಮೆಹಮೂದ್ ಬಹಮನಿ, ಮಗಳ ಪ್ರಾರ್ಥನೆ, ಪಠಣ, ಧ್ಯಾನದ ತಲ್ಲೀನತೆಯನ್ನು ಕಂಡು ನಿಬ್ಬೆರಗಾಗಿ ಅಸಾಮಾನ್ಯ ಅಥವಾ ಅಸಾಧಾರಣ ಎಂಬ ಅರ್ಥದಲ್ಲಿ ‘ಕಮಾಲಾ’ (ಕಮಾಲಾವಾಲಿ) ಎಂದು ಕರೆದರು. ಸುಲ್ತಾನಾ ಅಂದರೆ ರಾಜಕುಮಾರಿ. ಇವರು ಸುಲ್ತಾನ್ ಮೆಹಮೂದ್ ಬಹಮನಿ ಅವರ ಮಗಳಾಗಿದ್ದರಿಂದ ಇವರಿಗೆ ಬೀಬಿ ಸುಲ್ತಾನಾ ರಾಜಕುಮಾರಿ, ಎಂಬ ಅರ್ಥದಲ್ಲಿ ಕರೆಯಲಾಗಿದೆ. ‘ಖುಂಜಾ’ ಎಂಬ ಪದವು ಪರ್ಷಿಯನ್ ಭಾಷೆಯ ‘ಖುಂಜ್’ ಎಂಬ ಪದದಿಂದ ಬಂದಿದೆ. ಇದು ಜಾಣ, ದಿವ್ಯ, ಸೂಕ್ಷ್ಮಗ್ರಾಹಿ ಎಂಬ ನಾನಾ ಅರ್ಥಗಳನ್ನು ಸೂಚಿಸುತ್ತದೆ.

ಜನಸಾಮಾನ್ಯರು ಬೀಬಿ ಕಮಾಲಾ ಅವರ ದಯೆ, ಕರುಣೆಯನ್ನು ಕಂಡು ಆಧ್ಯಾತ್ಮಿಕ ತಾಯಿಯ ದರ್ಜೆಯನ್ನು ಕೊಟ್ಟಿದ್ದಾರೆ. ಮಾಂ ಸಾಹೇಬಾ ಎಂದು ಕರೆಯಲು ಇನ್ನೊಂದು ಕಾರಣ ಇವರಿಗೆ ಇಬ್ಬರು ಮಕ್ಕಳು. ಇವರು ಪ್ರವಾದಿಯವರ ಮನೆತನದ ಮೊಮ್ಮಕ್ಕಳು. ಇವರನ್ನು ಎಲ್ಲಾ ಸೂಫಿಗಳ ತಾಯಿ ಎಂಬ ಅರ್ಥದಲ್ಲಿ ಇವರನ್ನು ಮಾಂ ಸಾಹೇಬಾ ಎಂದು ಕರೆಯಲಾಯಿತು.

ಹಝರತ್ ಬೀಬಿ ಕಮಾಲಾ ಸುಲ್ತಾನಾ ಬೀಬಿ ಸಾಹೇಬಾ ಅವರ ವಿವಾಹವು ಹಝರತ್ ಖ್ವಾಜಾ ಸೈಯ್ಯದ್ ಮಹಮ್ಮದ್ ಮೀರಾಂ ಹುಸೇನಿ ಅವರೊಂದಿಗೆ ನಡೆಯಿತು. ವಿವಾಹವಾದ ನಂತರ ಹಝರತ್ ಖುಂಜಾ ಮಾಂ ಸಾಹೇಬಾ ತಮ್ಮ ತಂದೆ ಸುಲ್ತಾನ್ ಮೆಹಮೂದ್ ಬಹಮನಿಯವರ ರಾಜವೈಭವವನ್ನು ತ್ಯಜಿಸಿದರು. ಬಳಿಕ ತನ್ನ ಪತಿ ಹಝರತ್ ಖ್ವಾಜಾ ಮುಹಮ್ಮದ್ ಮೀರಾಂ ಅವರೊಂದಿಗೆ ಅಧ್ಯಾತ್ಮಿಕ ಪ್ರಚಾರದಲ್ಲಿ ತೊಡಗಿದರು. ಅನಂತರ ಯಾತ್ರೆ ನಡೆಸಿದ ಅವರು ಕರ್ನಾಟಕ ರಾಜ್ಯದ ಗಡಿಭಾಗದ ಕೃಷ್ಣಾ ನದಿ ತೀರದ ಅಥನಿಯ ಸಮೀಪ ಇರುವ ಜುಗುಲ್‌ಗೆ ಬಂದರು. ಅಲ್ಲಿ ಇವತ್ತಿಗೂ ಅವರು ವಾಸಿಸಿದ ಮನೆಯನ್ನು ಕಾಣಬಹುದು. ಅವರು ಮಾನವೀಯ ಸಂದೇಶಗಳನ್ನು ಪ್ರಚುರಪಡಿಸಿದ ಖಾನ್‌ಖಾಹ್ ಇದೆ. ಅವರು ಬಳಸಿದ ಕೆಲ ಸಾಮಗ್ರಿಗಳು ಇಂದಿಗೂ ಕಾಣಸಿಗುತ್ತವೆ. ಆ ಖಾನ್‌ಖಾಹ್‌ದ ವಿಶೇಷತೆಯೆಂದರೆ ಹಝರತ್ ಖುಂಜಾ ಮಾಂ ಸಾಹೇಬಾ ಅವರು ಮಹಿಳೆಯರಿಗೆ ದೈವ ಮಾರ್ಗ ತೋರುವ ಶೈಕ್ಷಣಿಕ ಕಾರ್ಯ ಕೈಗೊಳ್ಳುತ್ತಿದ್ದರು.

ಜೋಗುಲ್ ಎಂಬ ಪದವು ‘ದೋಗುಲ್’ ಎಂಬ ಪದದಿಂದ ಬಂದಿದೆ. ಏಕೆಂದರೆ, ಕಮಾಲಾ ಸುಲ್ತಾನಾ ಅವರಿಗೆ ಇಬ್ಬರು ಅಸಾಧಾರಣ ಮಕ್ಕಳಿದ್ದರು. ಇವರ ಹಿರಿಯ ಮಗ ಹಝರತ್ ಖ್ವಾಜಾ ಶಮಶೋದ್ದೀನ್ ಮೀರಾಂ ಹುಸೇನಿ ಜೈದಿ ಚಿಶ್ತಿ ಅಲ್‌ಮಾರೂಫ್ ಖ್ವಾಜಾ ಶಮನಾ ಮೀರಾಂ ದಖ್ಖನ್ನಿನ ಪ್ರಸಿದ್ಧ ಸೂಫಿಗಳಲ್ಲಿ ಒಬ್ಬರಾಗಿದ್ದು, ಇವರ ಅನೇಕ ಪವಾಡಗಳು ಜನಜನಿತವಾಗಿವೆ.

ಕಿರಿಯ ಪುತ್ರ ಹಝರತ್ ಸೈಯ್ಯದ್ ಖ್ವಾಜಾ ಖಮರುದ್ದೀನ್ ಮೀರಾಂ ಹುಸೈನಿ ಜೈದಿ ಚಿಶ್ತಿ (ರ) ಇವರು ಖುಂಜಾ ಮಾಂ ಸಾಹೆಬಾ ಅವರ ಪ್ರಿಯ ಪುತ್ರರಾಗಿದ್ದರು. ಇವರು ತಮ್ಮ ತಂದೆ ಮುಹಮ್ಮದ್ ಮೀರಾಂ ಹಾಗೂ ಸಹೋದರ ಖ್ವಾಜಾ ಶಮನಾ ಮೀರಾಂ ಅವರ ನಿಧನಾನಂತರ ತನ್ನ ತಾಯಿಯೊಂದಿಗೆ ಗುಲ್ಬರ್ಗಕ್ಕೆ ಬಂದರು. ಇವರು ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ಇವರ ಮಝಾರ ಖುಂಜಾ ಮಾಂ ಸಾಹೇಬಾ ಅವರ ಎಡಗಡೆ ಇದೆ.

ಹಝರತ್ ಕಮಾಲಾ ಸುಲ್ತಾನಾ ಖುಂಜಾ ಮಾಂ ಸಾಹೇಬಾ ಅವರು ಕ್ರಿ.ಶ. 1372 ಫೆಬ್ರುವರಿ 2 (ಹಿಜರಿ ಶಕೆ 26 ರಜಬ್ 773 ಸೋಮವಾರ) ರಂದು ಗುಲಬರ್ಗಾದಲ್ಲೇ ಇಹಲೋಕ ತ್ಯಜಿಸಿದರು. ಇವರ ಮಝಾರ್ ಶರೀಫ್ ಗುಲಬರ್ಗಾ ಜಿಲ್ಲೆಯ ಚಿಕ್ಕ ಗ್ರಾಮವಾದ ಕಪನೂರ ಸಮೀಪ ಬೀದರ ರಸ್ತೆಯಲ್ಲಿದೆ. ಇವರ ಮಝಾರಿನ ಮೇಲೆ ಬೃಹದಾಕಾರದ ಮತ್ತು ಸುಂದರವಾದ ಗುಂಬಜನ್ನು ಕಟ್ಟಲಾಗಿದೆ. ಅದು ಇಸ್ಲಾಮಿಕ್ ನಿರ್ಮಾಣ ಶೈಲಿಯ ಪ್ರತೀಕವಾಗಿದೆ. ಹಝರತ್ ಖ್ವಾಜಾ ಬಂದೇ ನವಾಜರು ಇವರ ಮಝಾರಿಗೆ ಸತತವಾಗಿ 11 ವರ್ಷಗಳವರೆಗೆ ಸಂದರ್ಶನ ಮಾಡಿದ್ದಾರೆಂದು ಹೇಳಲಾಗುತ್ತದೆ. ಹಝರತ್ ಖ್ವಾಜಾ ಬಂದೇ ನವಾಜರು ಮತ್ತು ಹಝರತ್ ಕಮಾಲಾ ಸುಲ್ತಾನಾ ಖುಂಜಾ ಮಾಂ ಸಾಹೇಬಾ ಇವರಿಬ್ಬರೂ ಒಂದೇ ಗುರುವಿನ (ಹಝರತ್ ಖ್ವಾಜಾ ನಾಸಿರುದ್ದೀನ್ ಚಿರಾಗ್ ದೆಹಲ್ವಿ) ಅನುಯಾಯಿಗಳಾಗಿದ್ದರು. ಹೀಗಾಗಿ ಇವರಿಬ್ಬರ ನಡುವೆ ತುಂಬಾ ಅನೋನ್ಯತೆ ಇತ್ತು.

ಹಝರತ್ ಝಟ್-ಪಟ್ ಬೀಬಿ: ಇವರು ಕಲಬುರಗಿಯ ಮಹಿಳಾ ಸೂಫಿಗಳಲ್ಲಿಯೇ ತುಂಬಾ ಜನಪ್ರಿಯರಾಗಿದ್ದಾರೆ. ಇವರ ದರ್ಗಾ ಕಲಬುರಗಿಯ ಸಂಗತರಾಷವಾಡಿಯಲ್ಲಿದೆ. ಒಂದು ಪ್ರತೀತಿಯ ಪ್ರಕಾರ ಬಿಜಾಪೂರದ ಆದಿಲ್ ಶಾಹಿ ಬಾದಶಾಹನ ಅರಮನೆಯಲ್ಲಿ ಏಳು ಜನ ಸಹೋದರಿಯರಿದ್ದರು. ಅವರಲ್ಲಿ ಝಟ್-ಪಟ್ ಬೀಬಿ ಒಬ್ಬರು. ಅವರಿಗೆ ಏನೇ ಕೆಲಸ ಕೊಟ್ಟರೂ ತಕ್ಷಣ ಮಾಡಿ ಮುಗಿಸುತ್ತಿದ್ದರು. ಇದರಿಂದಾಗಿ ಅವರಿಗೆ ಝಟ್-ಪಟ್ ಎಂಬ ಬಿರುದು ಬಂದಿದೆ ಎಂದು ಹೇಳಲಾಗುತ್ತದೆ.

ಮಾಸಾ ಬೀ- ಕೆಂಭಾವಿ: ಮಾಸಾ ಬೀ ದರ್ಗಾವು ಯಾದರಿಯ ಶೋರಾಪುರ ತಾಲೂಕಿನಲ್ಲಿದೆ. ಇದು ಈ ಭಾಗದ ತುಂಬಾ ಪ್ರಸಿದ್ಧ ಮಹಿಳಾ ಸೂಫಿಯ ದರ್ಗಾವಾಗಿದ್ದು, ದೂರ ಪ್ರದೇಶದ ಜನರು ಇಲ್ಲಿ ಬಂದು ಸಂದರ್ಶನ ಮಾಡುತ್ತಾರೆ. ಈ ದರ್ಗಾ ಸುಮಾರು ಏಳು ನೂರು ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ಹೇಳಲಾಗುತ್ತದೆ. ಒಂದು ಎತ್ತರವಾದ ಪ್ರದೇಶದಲ್ಲಿ ಮಾಸಾಬೀಯವರ ದರ್ಗಾವಿದೆ. ಇನ್ನೊಂದು ಕಡೆ ಎತ್ತರ ಭಾಗದಲ್ಲಿ ಆಯಿ ಮುನ್ನವರ್ ಬಾಬಾ ಅವರ ಮಝಾರ ಇದೆ. ಅಲ್ಲದೆ ದರ್ಗಾದ ಹೊರ ಆವರಣದಲ್ಲಿ ಬಯಲಿನಲ್ಲಿ ನಾಲ್ಕು ಮಝಾರಗಳಿವೆ.

ಹಝರತ್ ಸೈಯ್ಯದಾ ಬೀಬಿ ಗೋಹರ್ ಸಗರ: ಇವರು ಹಝರತ್ ಸೈಯ್ಯದ್ ಮೆಹಮೂದ್ ಸೂಫಿ ಸರಮಸ್ತ ಅವರ ಪತ್ನಿಯಾಗಿದ್ದರು. ಇವರು ಬಲಗ್ (ಇಂದಿನ ಅಫಘಾನಿಸ್ಥಾನ) ಸುಲ್ತಾನನ ಮಗಳು, ಬಲಗ್‌ನ ರಾಜಕುಮಾರಿಯಾಗಿದ್ದರು. ಇವರ ವಿವಾಹವು ಹಝರತ್ ಸೂಫಿ ಸರಮಸ್ತ ಅವರೊಂದಿಗೆ ಇರಾಕಿನ ಸಾಮರಾ ಪಟ್ಟಣದಲ್ಲಿ ನಡೆಯಿತು. ಇವರು ಸರಳ ವ್ಯಕ್ತಿತ್ವದ ಅಧ್ಯಾತ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಸೈಯ್ಯದಾ ಬೀಬಿ ಗೋಹರ್ ಮತ್ತು ಅವರ ಪತಿ ಹಝರತ್ ಸೂಫಿ ಸರಮಸ್ತ್ ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳಿದ್ದರು.

ಬೀಬಿ ಗೋಹರ್ ಅವರಿಗೆ ಜನಿಸಿದ ಈ ನಾಲ್ಕು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳು ಸುಪ್ರಸಿದ್ಧ ಸೂಫಿಗಳಾಗಿ ಹೊರಹೊಮ್ಮಿದ್ದಾರೆ. ಹಝರತ್ ಗೋಹರ್ ಬೀಬಿ ರಹ ಅವರ ವಂಶವು ಪೀಳಿಗೆಯಿಂದ ಪೀಳಿಗೆಗೆ ಸೂಫಿಗಳನ್ನು. ಕೊಡುಗೆಯಾಗಿ ಕೊಟ್ಟಿದೆ. ಆದ್ದರಿಂದಲೇ ಗೋಹರ್ ಬೀಬಿಯವರಿಗೆ ‘ಉಮ್ಮುಲ್ ಔಲಿಯಾ’ (ಸಿದ್ಧರ ತಾಯಿ) ಎಂದು ಕರೆಯಲಾಗುತ್ತದೆ. ಇವರ ಸಮಾಧಿಯು ಹಝರತ್ ಸೂಫಿ ಸರಮಸ್ತ್ ಅವರ ಕಟ್ಟೆಯ ಮೇಲೆಯೇ ಇದೆ. ಶರಣರ ವಿಶಾಲ ದೃಷ್ಟಿಗೂ, ಸರ್ವಧರ್ಮ ಸಮಭಾವವನ್ನು ತಮ್ಮ ಪ್ರಧಾನ ಗುರಿಯಾಗಿಸಿಕೊಂಡಿದ್ದ ಸೂಫಿ ಸಂತರ ನಿಲುವಿಗೂ ತೀರಾ ಹತ್ತಿರದ ಸಂಬಂಧ ಇರುವುದನ್ನು ಗಮನಿಸಬಹುದು.

ಪ್ರಸ್ತುತ ಕಾಲಘಟ್ಟದಲ್ಲಿ ಧರ್ಮ ಧರ್ಮಗಳ ಮಧ್ಯೆ ಹಿಂದೆಂದೂ ಕಂಡರಿಯದಂಥ ಬಿರುಕು ಕಾಣಿಸಿಕೊಂಡಿದೆ. ಇಂತಹ ದುರ್ಭರ ಸನ್ನಿವೇಶದಲ್ಲಿ ಎಲ್ಲ ಧರ್ಮಾನುಯಾಯಿಗಳ ಹೃದಯಗಳಲ್ಲಿ ಪರಸ್ಪರ ಮೈತ್ರಿ ಬೆಳೆಸಲು ಕಲ್ಯಾಣ ಕರ್ನಾಟಕದ ಶರಣರು ಬಿಟ್ಟು ಹೋಗಿರುವ ವಚನ ಪರಂಪರೆಯ ಜೊತೆಗೆ ಸೂಫಿ ಸಂತರ ಸೌಹಾರ್ದದ ಪರಂಪರೆಯ ಅರಿವು ಅವಶ್ಯಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News