ನಿಮ್ಮ ಮೊಬೈಲ್ ಫೋನ್ ನಲ್ಲಿ ಶೌಚಾಲಯದ ಸೀಟಿನಲ್ಲಿ ಇರುವುದಕ್ಕಿಂತ ಹೆಚ್ಚಿನ ಬ್ಯಾಕ್ಟೀರಿಯ ಇರಬಹುದು!
ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮೈಕ್ರೋಬಯಾಲಜಿಸ್ಟ್ ನೀಡಿದ ಎಚ್ಚರಿಕೆಯೇನು?
ಸಾಂದರ್ಭಿಕ ಚಿತ್ರ | Photo Credit : magnific
ಇನ್ಸ್ಟಾಗ್ರಾಂ ವೀಡಿಯೋ ಒಂದರಲ್ಲಿ ದುಬೈನಲ್ಲಿ ಕಾರ್ಯನಿರತ ಮೈಕ್ರೋಬಯಾಲಜಿಸ್ಟ್ ನೀತು ಸುರೇಶ್ ಕುಮಾರ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಎಚ್ಚರಿಸಿದ್ದಾರೆ.
ಹೊಸದಾಗಿ ಖರೀದಿಸಿದ ಸ್ಮಾರ್ಟ್ ಫೋನ್ ಬಹಳ ಸ್ವಚ್ಛವಾಗಿ ಕಾಣಬಹುದು. ಆದರೆ ಇದು ಸೂಕ್ಷ್ಮ ಬ್ಯಾಕ್ಟೀರಿಯ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯಾಗಿರಬಹುದು. ಈ ಬಗ್ಗೆ ಇನ್ಸ್ಟಾಗ್ರಾಂ ವೀಡಿಯೋ ಒಂದರಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿರುವ ಮೈಕ್ರೋಬಯಾಲಜಿಸ್ಟ್ (ಸೂಕ್ಷ್ಮ ಜೀವಶಾಸ್ತ್ರಜ್ಞೆ) ನೀತು ಸುರೇಶ್ ಕುಮಾರ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಎಚ್ಚರಿಸಿದ್ದಾರೆ.
“ನಿಮ್ಮ ಮೊಬೈಲ್ ಫೋನ್ ನಲ್ಲಿ ಶೌಚಾಲಯದ ಸೀಟಿನಲ್ಲಿ ಇರುವುದಕ್ಕಿಂತ ಹೆಚ್ಚಿನ ಬ್ಯಾಕ್ಟೀರಿಯ ಇರಬಹುದು ಎಂದು ನಾನು ನಿಮಗೆ ಹೇಳಿದರೆ ಹೇಗಿರುತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ನೀತು ಅವರ ಪ್ರಕಾರ, “ನಮ್ಮ ಸಾಧನಗಳನ್ನು ಎಲ್ಲಾ ಸಮಯದಲ್ಲೂ ಜೊತೆಗೇ ಒಯ್ಯುವ ಆಧುನಿಕ ಅಭ್ಯಾಸದಿಂದ ಸಮಸ್ಯೆ ಉಂಟಾಗುತ್ತದೆ. ನಾವು ಪ್ರವೇಶಿಸುವ ಪ್ರತಿ ಪರಿಸರಕ್ಕೂ ಮೊಬೈಲ್ ಗಳನ್ನು ಒಯ್ಯುವುದರಿಂದ ಅವು ಸೂಕ್ಷ್ಮಜೀವಿಗಳಿಗೆ ಅಯಸ್ಕಾಂತವಾಗಿ ಕಾರ್ಯನಿರ್ವಹಿಸುತ್ತವೆ. ಅಧ್ಯಯನಗಳೂ ಮೊಬೈಲ್ ಫೋನ್ ಗಳು ಬ್ಯಾಕ್ಟೀರಿಯಗಳ ಆಶ್ರಯತಾಣಗಳಾಗಬಹುದು ಎಂದು ತೋರಿಸಿವೆ. ಏಕೆಂದರೆ ನಾವು ಅವುಗಳನ್ನು ಎಲ್ಲಾ ಕಡೆ ಕೊಂಡೊಯ್ಯುತ್ತೇವೆ!”
ನಿತ್ಯ ಬಳಕೆಯ ಸಂದರ್ಭದಲ್ಲಿ ಮೊಬೈಲ್ ಗೆ ರೋಗಕಾರಕ ಸೇರುವ ಸಾಧ್ಯತೆ ಇರುವ ಸ್ಥಳಗಳನ್ನು ಅವರು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ. ಅವುಗಳೆಂದರೆ,
► ಕಚೇರಿಯ ಮೇಜುಗಳ ಮೇಲೆ ಇರಿಸಿದಾಗ.
► ಮನೆಯಲ್ಲಿ ಅಡುಗೆ ಕೌಂಟರ್ಗಳಲ್ಲಿ ಅಡುಗೆ ಮಾಡುವಾಗ ಬಳಸಿದಾಗ.
► ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ
► ಬ್ಯಾಗ್ ಗಳು, ಪಾಕೆಟ್ ಗಳಲ್ಲಿಟ್ಟಾಗ.
► ಕೆಲವರು ಬಾತ್ರೂಂಗಳಲ್ಲೂ ಫೋನ್ ಬಳಸುತ್ತಾರೆ.
ನೀತು ಅವರ ಪ್ರಕಾರ ಫೋನ್ ಸ್ವಚ್ಛವಾಗಿದ್ದು, ಉತ್ತಮ ನೈರ್ಮಲ್ಯದ ಸಾಧನವಾಗಿರಬೇಕು.
ಆದರೆ ವಾಸ್ತವದಲ್ಲಿ ಫೋನ್ ಇಡುವಾಗ ಬ್ಯಾಕ್ಟೀರಿಯ ಸೇರಿಕೊಳ್ಳುವುದಕ್ಕಿಂತ ಹೆಚ್ಚಾಗಿ ಫೋನಿನಲ್ಲಿ ಮಾತನಾಡುವಾಗ ದೊಡ್ಡ ಅಪಾಯ ಎದುರಾಗುತ್ತದೆ. ತಿನ್ನುವಾಗ, ಅಡುಗೆ ಮಾಡುವಾಗ ಕರೆಗಳು ಬಂದಾಗ ಮುಖದ ಹತ್ತಿರ ಫೋನ್ ತರುತ್ತೇವೆ, ಅದೇ ಫೋನ್ ಅನ್ನು ಸ್ಪರ್ಶಿಸುತ್ತೇವೆ ಎಂದು ಅಭ್ಯಾಸಗಳ ಬಗ್ಗೆ ನೀತು ಎಚ್ಚರಿಸಿದ್ದಾರೆ.
ನಿರಂತರ ಬಳಕೆಯಿಂದ ಒಂದು ಮೇಲ್ಮೈಯಲ್ಲಿರುವ ಬ್ಯಾಕ್ಟೀರಿಯ ಇನ್ನೊಂದು ಮೇಲ್ಮೈಗೆ ವರ್ಗಾವಣೆಯಾಗಬಹುದು. ಹೀಗೆ ಮಾಲಿನ್ಯ ಹರಡಲು ಕಾರಣವಾಗುತ್ತದೆ. ಹೀಗಾಗಿ ನಿಮ್ಮ ಫೋನ್ ನೀವು ಯೋಚಿಸಿದ್ದಕ್ಕಿಂತಲೂ ಕೊಳಕಾಗಿರಬಹುದು.
ಫೋನ್ ಅನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವುದು ಹೇಗೆ?
ಜೀವಶಾಸ್ತ್ರಜ್ಞರಾಗಿ ಜನರಿಗೆ ಆತಂಕ ಒಡ್ಡುವುದು ತಮ್ಮ ಉದ್ದೇಶವಲ್ಲ ಎಂದು ಅವರು ಹೇಳಿದ್ದಾರೆ. ಬದಲಾಗಿ ಫೋನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಅಭ್ಯಾಸವಿರಬೇಕು ಎಂದು ಹೇಳಿದ್ದಾರೆ.
ದೈನಂದಿನ ಆರೋಗ್ಯ ಅಪಾಯ ಎದುರಿಸಲು ಮನೆಯಲ್ಲಿ ಅಥವಾ ಪ್ರಯಾಣದಲ್ಲಿರುವಾಗ ಯಾರಾದರೂ ಮಾಡಬಹುದಾದ ತ್ವರಿತ ಮತ್ತು ಸುಲಭ ನಿರ್ವಹಣಾ ತಂತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
► ಫೋನ್- ಸುರಕ್ಷಿತ ಸೋಂಕು ನಿವಾರಕ ವೈಪ್ ಬಳಸಿ ನಿಮ್ಮ ಸಾಧನವನ್ನು ನಿಯಮಿತವಾಗಿ ಒರೆಸಿ.
► ಮೃದುವಾದ ಬಟ್ಟೆ ಮೇಲೆ ಸ್ವಲ್ಪ ಹ್ಯಾಂಡ್ ಸ್ಯಾನಿಟೈಸರ್ ಹಚ್ಚಿ ಫೋನ್ನ ಮೇಲ್ಮೈಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ.
ಫೋನ್ ಬಳಕೆಯ ಸಂದರ್ಭ ಈ ದಿನಚರಿಯನ್ನು ಸೇರಿಸಿಕೊಳ್ಳುವ ಮೂಲಕ ನಿಮ್ಮ ಕೈಗಳು, ಮುಖ ಮತ್ತು ಆಹಾರಕ್ಕೆ ಸೂಕ್ಷ್ಮಜೀವಿ ವರ್ಗಾವಣೆ ಕಡಿಮೆ ಮಾಡಬಹುದು. ಫೋನ್ ಸ್ವಚ್ಛಗೊಳಿಸುವ ಮೂಲಕ ಉತ್ತಮ ನೈರ್ಮಲ್ಯ ಸಾಧಿಸಬಹುದು.
ಸೂಚನೆ: ಈ ಲೇಖನವನ್ನು ಸಾಮಾಜಿಕ ಮಾಧ್ಯಮಗಳ ಮೂಲದಿಂದ ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಯಾವುದೇ ಆರೋಗ್ಯ ಸಲಹೆಗಳಿಗೆ ಪರ್ಯಾಯವಲ್ಲ. ನಿಮ್ಮ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವಿಶ್ವಾಸಾರ್ಹ ವೃತ್ತಿಪರ ವೈದ್ಯರನ್ನು ಸಂಪರ್ಕಿಸಿ.
ಕೃಪೆ: hindustantimes.com