ಯಾದಗಿರಿ | ಪರಿಶಿಷ್ಟ ಪಂಗಡ ಹಕ್ಕುಗಳ ರಕ್ಷಣೆಗೆ ಫೆ.2ರಿಂದ ಶಾಸಕರ ಮನೆ ಮುಂದೆ ಸಾಂಕೇತಿಕ ಧರಣಿ : ಮರೆಪ್ಪ ನಾಯಕ
ಯಾದಗಿರಿ : ಪರಿಶಿಷ್ಟ ಪಂಗಡದ ಸಾಂವಿಧಾನಿಕ ಹಕ್ಕುಗಳು, ಮೀಸಲಾತಿ ಹಾಗೂ ಅಭಿವೃದ್ಧಿ ಯೋಜನೆಗಳ ರಕ್ಷಣೆಗೆ ಆಗ್ರಹಿಸಿ ಫೆ.2ರಿಂದ 6ರವರೆಗೆ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರ ಮನೆಗಳ ಮುಂದೆ ಸಾಂಕೇತಿಕ ಪ್ರತಿಭಟನೆ ಮತ್ತು ಧರಣಿ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ವಾಲ್ಮೀಕಿ ಸಂಘದ ಅಧ್ಯಕ್ಷ ಮರೆಪ್ಪ ನಾಯಕ ಮಗದಂಪೂರ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಬೇಡ, ವಾಲ್ಮೀಕಿ, ನಾಯಕ ಸೇರಿದಂತೆ 51 ಪರಿಶಿಷ್ಟ ಪಂಗಡ ಜನಾಂಗಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಸುಮಾರು 11,000 ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು ಸಮಾಜದ ಮೇಲಿನ ಸರ್ಕಾರದ ದ್ರೋಹವಾಗಿದೆ ಎಂದು ಅವರು ಕಿಡಿಕಾರಿದರು. ಜೊತೆಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಶಾಲೆ–ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಪ್ರೋತ್ಸಾಹ ಧನ ಮತ್ತು ಸಹಾಯಧನಗಳನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳ ಸಹಾಯಧನವನ್ನೂ ತಡೆಹಿಡಿಯಲಾಗಿದೆ. ಇದರಿಂದ ಸಮಾಜದ ಶಿಕ್ಷಣ ಮತ್ತು ಅಭಿವೃದ್ಧಿ ಕನಿಷ್ಠ 20 ವರ್ಷ ಹಿಂದಕ್ಕೆ ಸರಿದಿದೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಲಿ/ಕಬ್ಬಲಿಗ ಜನಾಂಗಕ್ಕೆ ಸಂಬಂಧಿಸಿದ ಹೇಳಿಕೆಗಳು ಜಾತಿ ವೈಷಮ್ಯ ಉಂಟುಮಾಡಿ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಕಾರಣವಾಗಿವೆ. ಇದರ ಪರಿಣಾಮವಾಗಿ 15 ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಸೋಲು ಕಂಡಿದೆ. ಇದು ಸಮಾಜ ನೀಡಿದ ಪಾಠವಾಗಿದೆ ಎಂದು ಮರೆಪ್ಪ ನಾಯಕ ಹೇಳಿದರು.
ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರು ಹಾಗೂ ಸಮಾಜದ ಸಚಿವರು ವಿಧಾನಸಭೆಗಳಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತದಿರುವುದು ಅವರ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಫೆ.2ರಿಂದ 6ರವರೆಗೆ ಪ್ರತಿದಿನ ಒಂದೊಂದು ಶಾಸಕರ ಮನೆ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ದಪ್ಪಚರ್ಮದ ರಾಜಕಾರಣಿಗಳಿಗೆ ಸಮಾಜದ ನೋವು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.
ಈ ಧರಣಿಯಲ್ಲಿ ಹೋರಾಟಗಾರರು, ವಿಚಾರವಾದಿಗಳು, ವಿದ್ಯಾರ್ಥಿಗಳು ಹಾಗೂ ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪ ದೊರೆ, ಸಾಬುಗೌಡ ಗೌಡಗೇರಾ, ದೊಡ್ಡಯ್ಯ ನಾಯಕ, ಶರಣಪ್ಪ ಜಾಕನಳ್ಳಿ, ಮರೆಪ್ಪ ಪ್ಯಾಟಿ, ನಿಂಗಣ್ಣ ಜೇವರ್ಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.