ಯಾದಗಿರಿ | ರಾಷ್ಟ್ರೀಯ ಸ್ವಚ್ಛತಾ ದಿನದ ಅಂಗವಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶ್ರಮದಾನ
ಯಾದಗಿರಿ : ರಾಷ್ಟ್ರೀಯ ಸ್ವಚ್ಛತಾ ದಿನದ ಅಂಗವಾಗಿ ಶುಕ್ರವಾರ (ಜ.30) ಬೆಳಿಗ್ಗೆ 8 ಗಂಟೆಗೆ ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ಧಾರಾಧ್ಯ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆ ಮತ್ತು ಆರೋಗ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡುವ ಉದ್ದೇಶದಿಂದ ಈ ಶ್ರಮದಾನ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ನಡೆಯಲಿದೆ ಎಂದರು.
ಈ ಶ್ರಮದಾನವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯೀಮ್ಸ್, ನ್ಯಾಯವಾದಿಗಳ ಸಂಘ, ಗೃಹರಕ್ಷಕ ದಳ ಹಾಗೂ ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿವಿಧ ಇಲಾಖೆ ಸಿಬ್ಬಂದಿಗಳು ಶ್ರಮದಾನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
2026ನೇ ಸಾಲಿನ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಮಾ.14ರಂದು ಆಯೋಜಿಸಲಾಗುವುದು. ಈ ಲೋಕ್ ಅದಾಲತ್‌ನಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು. ಸಾರ್ವಜನಿಕರು ಮತ್ತು ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇ- ಸಮನ್ಸ್ ಜಾರಿಯಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ :
ಜಿಲ್ಲಾ ಪೊಲೀಸ್ ಇಲಾಖೆಯ ಸಹಕಾರವನ್ನು ಶ್ಲಾಘಿಸಿದ ಮರುಳಸಿದ್ಧಾರಾಧ್ಯ ಅವರು, ಇ-ಸಮನ್ಸ್, ನೋಟಿಸ್ ಹಾಗೂ ವಾರೆಂಟ್ ಜಾರಿಯಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳಿದರು. ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಶೇ.41 ರಷ್ಟು ಸಮನ್ಸ್ ಜಾರಿಯಾಗಿದ್ದು, ಶೇ.90 ರಷ್ಟು ವಿಸ್ತರಣೆ ಸಾಧಿಸಲಾಗಿದೆ. ಹಿಂದಿನ ಲೋಕ್ ಅದಾಲತ್ ಯಶಸ್ವಿಗೆ ಪೊಲೀಸ್ ಇಲಾಖೆಯ ಸಹಕಾರ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಬಿರಾದಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.