ಕೆ.ಎನ್.ರಾಜಣ್ಣ ನಂತರ ಸತೀಶ್ ಜಾರಕಿಹೊಳಿ ಗುರಿ: ಕಾಂಗ್ರೆಸ್ ವಿರುದ್ಧ ರಾಜುಗೌಡ ವಾಗ್ದಾಳಿ
ರಾಜುಗೌಡ
ಸುರಪುರ: ಕೆ.ಎನ್ ರಾಜಣ್ಣ ಅವರ ರಾಜಿನಾಮೆ ಹಿಂದೆ ಮಹಾ ನಾಯಕ ಪಾತ್ರವಿದೆ. ಈಗ ರಾಜಣ್ಣ ನಂತರ ಸತೀಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ತೆಗೆಯಲು ಕೆಲಸ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಬೇಸರ ವ್ಯಕ್ತಪಡಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಕೆ.ಎನ್ ರಾಜಣ್ಣ ರಾಜಿನಾಮೆ ಕುರಿತು ಪ್ರತಿಕ್ರಿಯಿಸಿ, ಕೆ.ಎನ್ ರಾಜಣ್ಣ ಒಬ್ಬ ಉತ್ತಮ ವ್ಯಕ್ತಿತ್ವದ ರಾಜಕಾರಣಿ ಅವರ ವಿರುದ್ಧ ಹಿಂದಿನಿಂದಲೂ ಷಡ್ಯಂತ್ರ ನಡೆಸಲಾಗಿದೆ. ಅವರು ಮೊನ್ನೆಯ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊರಗೆ ಬಂದ ನಂತರ ಮಾಧ್ಯಮದವರು ಕೇಳಿದಾಗ, "ನಮ್ಮದೆ ಸರಕಾರ ಇದ್ದಾಗ ಮತದಾರರ ಪಟ್ಟಿಯಲ್ಲಿ ಹೀಗೆ ಆಗಿದೆ ಎನ್ನುವುದು ನಮಗೆ ಅವಮಾನ" ಎಂದು ಸತ್ಯವನ್ನು ಮಾತನಾಡಿದ್ದಾರೆ. ರಾಹುಲ್ ಗಾಂಧಿ ಯಾವಾಗಲು ಸಂವಿಧಾನ ಹಿಡಿದು ಮಾತನಾಡುತ್ತಾರೆ, ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ಇಲ್ಲವೇ ಎಂದು ತಿಳಿದುಕೊಳ್ಳಲಿ, ರಾಜಣ್ಣನವರ ರಾಜಿನಾಮೆ ಹಿಂದೆ ಮಹಾ ನಾಯಕನ ಪಾತ್ರವಿದೆ. ಅವರಿಗೆ ನಾಯಕ ಸಮುದಾಯದ ಬಗ್ಗೆ ಯಾಕೆ ಅಸಹನೆ ಏಕೆ ಎಂದು ತಿಳಿಯುತ್ತಿಲ್ಲ, ಹಿಂದೆ ರಮೇಶ್ ಜಾರಕಿಹೊಳಿಗೂ ಹೀಗೆ ಷಡ್ಯಂತ್ರ ಮಾಡಿದರು, ನಂತರ ಬಿ. ನಾಗೇಂದ್ರ, ಈಗ ಕೆ.ಎನ್.ರಾಜಣ್ಣ ಮುಂದೆ ಸತೀಶ್ ಜಾರಕಿಹೊಳಿ ಅವರೇ ಗುರಿ ಎಂದರು.