ಕೆ.ಎಸ್.ಈಶ್ವರಪ್ಪ ಬಹಿರಂಗ ಕ್ಷಮೆಯಾಚನೆಗೆ ಭೀಮಣ್ಣ ಮೇಟಿ ಆಗ್ರಹ
ಯಾದಗಿರಿ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಕುರಿತು ಹಗುರವಾಗಿ ಮಾತನಾಡುವ ಮೂಲಕ ತಮ್ಮ ಸಣ್ಣತನ ತೋರ್ಪಡಿಸಿದ್ದಾರೆ. ಕೂಡಲೇ ಅವರು ಖರ್ಗೆ ಅವರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಮಿತಿ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರೆಸೆಸ್ಸ್ ಇರುವುದಕ್ಕೆ ದೇಶದಲ್ಲಿ ಹಿಂದುತ್ವ ಉಳಿದಿದೆ. ಸಚಿವ ಪ್ರಿಯಾಂಕ್ ಖರ್ಗೆಗೆ ಹಿಡಿದ ಹುಚ್ಚು ವಾಸಿ ಮಾಡಲು ಪ್ರಪಂಚದಲ್ಲಿ ಯಾವ ಆಸ್ಪತ್ರೆ ಇಲ್ಲ ಎಂದಿರುವುದು ಸರಿಯಲ್ಲ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಶ್ವರಪ್ಪ ಅವರಿಗೆ ನಂಬಿಕೆಯೇ ಇಲ್ಲ. ಅವರಿಗೆ ಮನುಸ್ಮೃತಿ ಮೇಲೆ ನಂಬಿಕೆ ಇದೆ. ಹೀಗಾಗಿಯೇ ಅವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸ ಈಶ್ವರಪ್ಪ ಅವರು ಮೊದಲಿನಿಂದಲೂ ಮಾಡುತ್ತಿದ್ದಾರೆ. ಹೀಗಾಗಿಯೇ ಇವರಿಗೆ ಶಿವಮೊಗ್ಗದ ಜನತೆ ಸೋಲಿನ ರುಚಿ ತೋರಿಸಿದ್ದಾರೆ. ನಾಲಗೆಯ ಮೇಲೆ ಹಿಡಿತವಿಟ್ಟುಕೊಂಡು ಟೀಕೆ ಮಾಡಬೇಕು ಎಂದು ಆಗ್ರಹಿಸಿದರು.
ಮನಸ್ಸಿಗೆ ಬಂದಂತೆ ಹೀಗೆ ಮಾತನಾಡಿದರೆ ಮುಂದಿನ ದಿನಗಳಲ್ಲಿ ಈಶ್ವರಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.