×
Ad

ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾನತೆಯ ಪರಿಕಲ್ಪನೆ ಬಿತ್ತಿದ್ದ ಯುಗಪುರುಷರು : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

Update: 2025-09-07 19:34 IST

ಯಾದಗಿರಿ: ಜಾತಿ ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭ್ರಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಆದರ್ಶವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದ ಸರ್ಕಾರಿ ಪದವಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1856ರಲ್ಲಿ ತಿರುವನಂತಪುರದ ಚೆಂಬಲಾಂತಿ ಎಂಬ ಹಳ್ಳಿಯಲ್ಲಿ ಕೆಳವರ್ಗದ ಮಧ್ಯಮ ಕುಟುಂಬದ ಈಳವ ಜಾತಿಯಲ್ಲಿ, ವಯಲ್ ವರಂ ಮನೆಯ ಮಾದನ್ ಆಶಾನ್ ಮತ್ತು ಕುಟ್ಟಿಯಮ್ಮ ಎಂಬ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು. ಸಂಸ್ಕೃತ, ತಮಿಳು, ಮಲಯಾಳಂ ಭಾಷಾ ಜ್ಞಾನವನ್ನುಗಳಿಸಿ ವಾರಣ ಪಳ್ಳಿಯಲ್ಲಿ ರಾಮನ್ ಪಿಳ್ಳೆ ಆಶಾನ್ ರವರ ಶಿಷ್ಯತ್ವ ಸ್ವೀಕರಿಸಿ ಹೆಚ್ಚಿನ ಪಾಂಡಿತ್ಯವನ್ನು ಗಳಿಸಿದರೆಂದು ಶಾಸಕರು ವಿವರಿಸಿದರು.

ನಾರಾಯಣ ಗುರು ಅವರು, ಎಲ್ಲ ಜಾತಿ ಧರ್ಮದ ನಾಯಕರಾಗಿದ್ದರು. ಎಲ್ಲರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುವ ಮೂಲಕ ಅವರೊಬ್ಬ ಆದರ್ಶ ಪುರುಷರಾಗಿದ್ದಾರೆಂದು ಶಾಸಕ ತುನ್ನೂರು ಬಣ್ಣಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಮತನಾಡಿ, ನಾರಾಯಣಗುರುಗಳು ಮನುಕುಲದ ಉದ್ಧಾರಕರಾಗಿದ್ದರು. ಶತ, ಶತಮಾನಗಳ ಹಿಂದೆಯೇ ಮೌಢ್ಯಗಳನ್ನು ವಿರೋಧಿಸಿ, ಜಾತಿ ಬೇರುಗಳನ್ನು‌ ಕಿತ್ತೆಸೆದು, ಸಮ ಸಮಾಜ ನಿರ್ಮಾಣ ಮಾಡಿದ್ದರೆಂದರು.

ಡಾ.ಗುರುಪ್ರಸಾದ ವೈದ್ಯ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

54 ಬಾರಿ ರಕ್ತದಾನ ಮಾಡಿದ ರಾಘವೇಂದ್ರ ಕಲಾಲ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಯುವ ಕಲಾವಿದ ಭೀಮರಾಯ ಮುಂಡರಗಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭೀಮಾಶಂಕರ ಸ್ವಾಮೀಜಿ, ಶಂಕಲಿಂಗ ತಾತಾ, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಆರ್ಯ ಇಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಅನಪೂರ್, ನಗರಸಭೆ ಸದಸ್ಯರಾದ ಪ್ರಭಾವತಿ ಮಾರುತಿ ಕಲಾಲ್, ರಾಜಶೇಖರಗೌಡ ವಡಗೇರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉತ್ತರಾದೇವಿ ಮಠಪತಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಇದ್ದರು.

ಬಾಲಯೋಗಿ ರಾಜೇಂದ್ರ ಮಹಾಸ್ವಾಮಿಗಳ ಮಠದ ಆವರಣದಿಂದ ನಾರಾಯಣ ಗುರುಗಳ ಭಾವಚಿತ್ರ ಜಾಗೃತಿ ಜಾಥಾಕ್ಕೆ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ್ ಹಾಗೂ ಬಾಲರಾಜ ಗುತ್ತೆದಾರ ಚಾಲನೆ ನೀಡಿದರು.

ಮೈಲಾಪುರ ಬೇಸ್, ಗಾಂಧಿ ವೃತ್ತ, ಬಾಬು ಜಗಜೀವನ ರಾಂ ವೃತ್ತ, ಕನಕ ವೃತ, ಅಂಬೇಡ್ಕರ್ ವೃತ್ತ, ಶಾಸ್ತ್ರೀಯ ವೃತ್ತ, ಸುಭಾಶ್ಚಂದ್ರ ಬೋಸ್ ವೃತ್ತದ ಮೂಲಕ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಆಗಮಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News