ಯಾದಗಿರಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಸೋಮವಾರ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಸುಭಾಷ್‌ ಚಂದ್ರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಎಸ್‌ಐಆರ್‌ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಗೆ ವಿರೋಧ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಎಸ್‌ಐಆರ್‌ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡಿದ್ದು, ಅಮಾಯಕ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಪರವಾಗಿ ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ ಮಾತನಾಡಿ, ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದ್ದು, ಇದರಿಂದ ಕೋಟ್ಯಂತರ ಮತದಾರರಿಗೆ ತೊಂದರೆಯಾಗುವ ಆತಂಕವಿದೆ ಎಂದು ಹೇಳಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್‌ಐಆರ್‌ ಪ್ರಕ್ರಿಯೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಸರ್ಕಾರ ಹಾಗೂ ಚುನಾವಣಾ ಆಯೋಗ ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ವಕ್ತಾರ ಸ್ಯಾಮ್ಸನ್‌ ಮಾಳಿಕೇರಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಜಾ ಗೋಪಾಲ್ ರೆಡ್ಡಿ ಮುದೀರ್, ರಾಘವೇಂದ್ರ ಮಾನಸಗಲ್, ಚಿದಾನಂದಪ್ಪ ಕಾಳೆಬೆಳಗುಂದಿ, ಭೀಮಣ್ಣ ಮೇಟಿ, ಆರೀಫ್ ಕಾಡ್ಲೂರು, ಮಲ್ಲಣ್ಣ ದಾಸನಕೇರಿ, ಬಾಬುರಾವ್ ಕಾಡ್ಲೂರು, ರಾಜಾ ಕುಮಾರ್ ನಾಯಕ್, ಮಲ್ಲಮ್ಮ ಕೋಮಾರ, ಹೋನೇಶ್ ದೊಡ್ಡಮನಿ, ಮರಿಯಪ್ಪ ಬಿಳ್ಹಾರ್, ಸುದರ್ಶನ್ ನಾಯಕ್ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor