ಯಾದಗಿರಿ: ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್ ರಸ್ತೆಯ ರೈಲ್ವೆ ಮೇಲ್ ಸೇತುವೆ ಹಾಗೂ ಭೀಮಾ ನದಿ ಬ್ರಿಡ್ಜ್-ಕಂ-ಬ್ಯಾರೇಜ್ ಮೇಲಿನ ರಸ್ತೆ ಸಂಪೂರ್ಣ ಹದಗೆಟ್ಟಿರುವುದನ್ನು ಖಂಡಿಸಿ, ರಸ್ತೆ ಗುಂಡಿಗಳನ್ನು ಕೂಡಲೇ ದುರಸ್ತಿಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಮಾತನಾಡಿ, ಸೇತುವೆಗಳ ಮೇಲಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಮಳೆಯ ಸಂದರ್ಭದಲ್ಲಿ ಅವುಗಳಲ್ಲಿ ನೀರು ನಿಂತು ಗುಂಡಿಗಳು ಕಾಣದಂತಾಗುತ್ತವೆ. ಇದರಿಂದ ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ನಿರ್ಮಾಣದ ವೇಳೆ ಬಳಸಿದ ಕಬ್ಬಿಣದ ರಾಡ್‌ಗಳು ಕೂಡ ಹೊರಬಂದಿದ್ದು, ಅಪಘಾತದ ಅಪಾಯ ಮತ್ತಷ್ಟು ಹೆಚ್ಚಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಈ ಪ್ರಮುಖ ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ದುರಸ್ತಿ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಉಮೇಶ ಕೆ. ಮುದ್ನಾಳ ಒತ್ತಾಯಿಸಿದರು.

ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ರಸ್ತೆಯಲ್ಲಿ ಯಾವುದೇ ಅಪಘಾತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪವನ್, ಮಲ್ಲೇಶ, ಭೀಮಶಂಕರ, ರಾಜು, ವೆಂಕಟೇಶ, ಸಾಬಣ್ಣ, ಮಲ್ಲಪ್ಪ ಅಳ್ಳೆಪ್ಪ ಮುದ್ನಾಳ್, ಗಣೇಶ್ ಯಾದಗಿರಿ, ಅಯ್ಯಣ್ಣ ನಾಯ್ಕಲ್, ನರಸಿಂಹ ಯಾದಗಿರಿ, ಕೃಷ್ಣ ಕಾನಾಪುರ, ಸಲೀಂ ಯಾದಗಿರಿ, ಶರಣು ನಾರಣಪೇಟ್, ಶರಣಪ್ಪ ಗೋಡ್ಯಾಳ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor