×
Ad

ವಡಿಗೇರಾ ತಾಲೂಕಿನ ವಿವಿಧೆಡೆ ಬೆಳೆನಷ್ಟ | ಸರಕಾರ ಕೂಡಲೇ ಹೆಚ್ಚಿನ ಪರಿಹಾರ ಘೋಷಿಸಲಿ : ಮಹೇಶರಡ್ಡಿ ಮುದ್ನಾಳ್

Update: 2025-09-26 19:50 IST


ಯಾದಗಿರಿ : ಮಹಾರಾಷ್ಟ್ರದಿಂದ ಭೀಮಾ ನದಿಗೆ ಅಧಿಕ ಪ್ರಮಾಣದ ನೀರು ಹರಿಬಿಟ್ಟಿರುವುದು ಹಾಗೂ ನಿರಂತರ ಭಾರಿ ಮಳೆಯಿಂದಾಗಿ ರೈತರಿಗೆ ಭಾರೀ ಬೆಳೆ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಶುಕ್ರವಾರ ವಡಿಗೇರಾ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ರೈತರ ಅಳಲು ಆಲಿಸಿದರು.

ಹಾಲಗೇರಾ, ಗೋಡಿಹಾಳ ಮತ್ತು ಕುಮನೂರು ಗ್ರಾಮಗಳಿಗೆ ಭೇಟಿ ನೀಡಿದ ಅವರು, ಹತ್ತಿ ಬೆಳೆ ನಾಶವಾದ ಸ್ಥಿತಿಯನ್ನು ವೀಕ್ಷಿಸಿದರು. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆ ನೀರು ಪಾಲಾಗಿದೆ ಎಂದು ರೈತರು ಕಣ್ಣೀರಿಟ್ಟರು. “ಪ್ರತಿ ಎಕರೆಗೆ ಸುಮಾರು 40 ಸಾವಿರ ರೂ. ಖರ್ಚು ಮಾಡಿದ್ದೇವೆ, ಈಗ ವಿಷ ಕುಡಿಯುವುದು ಒಂದೇ ದಾರಿ ಉಳಿದಿದೆ” ಎಂದು ರೈತರು ತಿಳಿಸಿದರು.

ಮಳೆಯಿಂದಾಗಿ ಬೂದನಾಳ ಸೇತುವೆ ಜಲಾವೃತಗೊಂಡಿದ್ದು, ಮಾಚನೂರ ಮತ್ತು ಶಿವನೂರ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿರುವುದನ್ನೂ ಅವರು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹೇಶರಡ್ಡಿ ಮುದ್ನಾಳ್, “ಮಳೆಯಿಂದ ಗ್ರಾಮೀಣ ಭಾಗದಲ್ಲಿ ಬೆಳೆ ನಷ್ಟವಾದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜಾತಿ ಸಮೀಕ್ಷೆ ಮಾಡುವುದು ಬಿಟ್ಟು ಮೊದಲು ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದರು.

“ಗ್ಯಾರಂಟಿ ಯೋಜನೆಗಳಲ್ಲಿ ಕಾಲ ಕಳೆಯುತ್ತಿರುವ ಸರ್ಕಾರ ರೈತರ ಸಂಕಷ್ಟವನ್ನು ಕಡೆಗಣಿಸುತ್ತಿದೆ. ಈ ಭಾಗದಲ್ಲಿ ವಾಣಿಜ್ಯ ಬೆಳೆ ಹತ್ತಿ ಹೆಚ್ಚು ಬೆಳೆಯಲಾಗುತ್ತದೆ. ಆದರೆ ಮಳೆಯಿಂದ ಇಡೀ ಬೆಳೆ ಸರ್ವನಾಶವಾಗಿ ಕೋಟ್ಯಾಂತರ ರೂ. ನಷ್ಟವಾಗಿದೆ” ಎಂದು ಕಿಡಿಕಾರಿದರು.

ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೊನ್ನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರುಕುಂದ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ ಸೇರಿದಂತೆ ವೀರೋಪಾಕ್ಷಪ್ಪಗೌಡ ಮಾಚನೂರ, ಗೌರೀಶಂಕರ ಹೀರೆಮಠ, ಸಂಗರಡ್ಡಿಗೌಡ ಗೋಡಿಹಾಳ, ಶಿವಣ್ಣಗೌಡ ಕಂದಳ್ಳಿ, ಮಲ್ಲುಗೌಡ ಪೋ ಪಾಟೀಲ್ ಹಾಗೂ ಹಲವಾರು ಕಾರ್ಯಕರ್ತರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News